Cini NewsSandalwood

“ಕಣ್ಣಾ ಮುಚ್ಚೆ ಕಾಡೇ ಗೂಡೇ” ಚಿತ್ರದ ಟೀಸರ್ ರಿಲೀಸ್

ಮಕ್ಕಳು ಇಷ್ಟಪಡುವ ’ಕಣ್ಣಾ ಮುಚ್ಚೆ ಕಾಡೇ ಗೂಡೇ’ ಹಾಡು ಈಗ ಸಿನಿಮಾದ ಶೀರ್ಷಿಕೆಯಾಗಿ ಹೊರಬಂದಿದೆ. ಪ್ರಚಾರದ ಎರಡನೇ ಹಂತವಾಗಿ ಟೀಸರ್ ಹಾಗೂ ಪುನೀತ್ ಆರ್ಯ ಸಾಹಿತ್ಯ, ವಾಸುಕಿವೈಭವ್-ಸುರಭಿ ಭಾರದ್ವಾಜ್ ಗಾಯನ, ಸಂತೋಷ್ ಜೋಶ್ವಾ ಸಂಗೀತದ ’ನಿನ್ನ ನೋಡಿದಾಗಲೇ ಪ್ರೀತಿಯಲಿ ಬಿದ್ದಾಗಿದೆ’ ಹಾಡು ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ತಂಡಕ್ಕೆ ಶುಭ ಹಾರೈಸಲು ನಟ ನಾಗೇಂದ್ರ ಅರಸ್, ನಿರ್ಮಾಪಕ ಪ್ರಶಾಂತ್‌ನಾಯಕ್ ಆಗಮಿಸಿದ್ದರು.

ಕಣ್ಣಾ ಮುಚ್ಚೆ ಹಾಡು ಸಾವಿನ ಗೀತೆಯಾಗಿದೆ. ಪ್ರತಿಯೊಂದು ಪದಗಳು ಮರಣದ ಹಾದಿಗೆ ಹೋಗುವ ಸಂಕೇತ ಕೊಡಲಿದೆ. ಕಲಾವಿದರ ಸನ್ನಿವೇಶಗಳು ಸಾಂಗ್‌ಗೆ ಸಂಬಂದಿಸಿದಂತೆ ಇರುವುದರಿಂದ ಇದೇ ಟೈಟಲ್ ಸೂಕ್ತವೆಂದು ಇಡಲಾಗಿದೆ. ಸೆನ್ಸಾರ್‌ನವರು ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣ ಪತ್ರ ನೀಡಿದ್ದಾರೆಂದು ಖಳನಾಗಿ ಕಾಣಿಸಿಕೊಂಡಿರುವ ನಿರ್ಮಾಪಕಿಯ ಪತಿ ವೀರೇಶ್‌ಕುಮಾರ್ ಹೇಳಿದರು.
ವೀರೇಶ್‌ಗೆ ಅಭಿನಯದ ಆಸಕ್ತಿ ಇರುವುದರನ್ನು ಕಂಡು ಅವರಿಗೆ ಪ್ರೋತ್ಸಾಹ ಕೊಡುವ ಸಲುವಾಗಿ ಡಾರ್ಲಿಂಗ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದೇನೆ ಅಂತಾರೆ ಅನಿತಾವೀರೇಶ್‌ಕುಮಾರ್.

ಹದಿನೈದು ವರ್ಷದಲ್ಲಿ ತುಳು ಮತ್ತು ಕನ್ನಡ ಚಿತ್ರ ನಿರ್ದೇಶಿಸಿದ್ದು, ಇದು ನನಗೆ ಎರಡನೇ ಅವಕಾಶ. ಪ್ರಸಕ್ತ ಟ್ರೆಂಡ್‌ಗೆ ತಕ್ಕಂತೆ ಮರ್ಡರ್ ಮಿಸ್ಟ್ರಿ ಕಥೆಯನ್ನು ಏಣೆಯಲಾಗಿದೆ. ಸಿನಿಮಾವು ಒಂದು ಕೊಲೆಯ ಸುತ್ತ ನಡೆಯುತ್ತದೆ. ಅದನ್ನು ಕಂಡು ಹಿಡಿಯಲು ಖಾಸಗಿ, ಸರ್ಕಾರಿ ಪಡೆ ಮುಂದೆ ಬರುತ್ತದೆ.

ಇದರ ಮಧ್ಯೆ ಹುಡುಗಿಯೊಬ್ಬಳು ಸಮಸ್ಯೆಯಲ್ಲಿ ಸಿಲುಕುತ್ತಾಳೆ. ಅಂತಿಮವಾಗಿ ಅಪರಾಧಿ ಸಿಗುತ್ತಾನಾ? ಆಕೆಯು ಕಷ್ಟದಿಂದ ಹೊರ ಬರುತ್ತಾಳಾ? ಎಂಬುದನ್ನು ಸೆಸ್ಪೆನ್ಸ್ ಥ್ರಿಲ್ಲರ್‌ನೊಂದಿಗೆ ತೋರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ನಟರಾಜ್ ಕೃಷ್ಣೆಗೌಡ.

ತುಳು ಭಾಷೆಯಲ್ಲಿ 8, ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ನಟಿಸಿರುವ ಅಥರ್ವಪ್ರಕಾಶ್ ನಾಯಕ. ತುಳು ರಂಗಭೂಮಿ ನಟಿ ಪ್ರಾರ್ಥನಾ ನಾಯಕಿಯಾಗಿ ಬುಲೆಟ್ ಓಡಿಸಿರುವುದು ವಿಶೇಷ. ಇಬ್ಬರು ಪಾತ್ರದ ಗುಟ್ಟನ್ನು ಬಿಟ್ಟುಕೊಡದೆ ಗೌಪ್ಯತೆಯನ್ನು ಕಾಪಾಡಿಕೊಂಡರು. ಮತ್ತೋಂದು ಪ್ರಮುಖ ಪಾತ್ರದಲ್ಲಿ ನಿವೃತ್ತ ವೈದ್ಯರಾಗಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ಉಳಿದಂತೆ ’ಕಾಂತಾರ’ ದಲ್ಲಿ ನಟಿಸಿದ್ದ ಜ್ಯೋತಿಷ್‌ಶೆಟ್ಟಿ, ದೀಪಕ್‌ರೈ, ಅರವಿಂದ ಬೋಳಾರ್. ಅಮ್ಮನಾಗಿ ಚಂದ್ರಕಲಾ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಜನವರಿ ತಿಂಗಳಲ್ಲಿ ಸುಮಾರು 60 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿತರಕ ವೆಂಕಟ್‌ಗೌಡ ಬಿಡುಗಡೆಯ ವಿವರ ನೀಡಿದರು. ಹಿನ್ನಲೆ ಶಬ್ದ ಕೆಲಸವನ್ನು ಶ್ರೀಸಾಸ್ತ ನಿರ್ವಹಿಸಿದ್ದಾರೆ. ಛಾಯಾಗ್ರಹಣ ದೀಪಕ್‌ಕುಮಾರ್.ಜೆ.ಕೆ, ನೃತ್ಯ ರಘು ಅವರದಾಗಿದೆ.

ಬಹುತೇಕ ಚಿತ್ರೀಕರಣ ಮಂಗಳೂರು ಸುಂದರ ತಾಣಗಳಲ್ಲಿ ನಡೆಸಿ, ಉಳಿದುದನ್ನು ಬೆಂಗಳೂರುನಲ್ಲಿ ಸೆರೆಹಿಡಿಯಲಾಗಿದೆ. ಸಂಕಲನ ಮತ್ತು ಡಿಐ ಅಲೆಕ್ಸ್ ಹೆನ್ಸನ್, ಡಿಸೈನರ್ ನಂದಕುಮಾರ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದು ನಿರ್ಮಾಪಕರ ದೊಡ್ಡ ಗುಣವಾಗಿತ್ತು.

error: Content is protected !!