ಗೋವಾ ಫೆಸ್ಟಿವಲ್ ಪನೋರಮಾ ಫೀಚರ್ ಫಿಲ್ಮ್ ನಲ್ಲಿ ಕನ್ನಡದ “ಕೆರೆಬೇಟೆ” ಸಿನಿಮಾ ಆಯ್ಕೆ.
ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿದೆ. ಗೋವಾ ಫೆಸ್ಟಿವಲ್ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿದೆ. ಇದು ಕನ್ನಡ ಸಿನಿಮಾರಂಗಕ್ಕೆ ಹೆಮ್ಮೆಯ ವಿಚಾರವಾಗಿದೆ.
ಗೋವಾದಲ್ಲಿ ನಡೆಯುವ 55ನೇ ‘ಭಾರತದ ಅಂತಾರಾಷ್ಟ್ರೀಯಾ ಚನಲಚಿತ್ರೋತ್ಸವ’ ನವೆಂಬರ್ 20ರಿಂದ 28ರ ವರೆಗೆ ನಡೆಯಲಿದೆ. ಗೋವಾದ ಪಣಜಿಯಲ್ಲಿ ನಡೆಯುವ ಚಿತ್ರೋತ್ಸವಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಾ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗೋವಾ ಚಿತ್ರೋತ್ಸವದಲ್ಲಿ ಕನ್ನಡದ ಸಿನಿಮಾ ಪ್ರದರ್ಶನ ಕಾಣುತ್ತಿರುವುದು ನಿಜಕ್ಕೂ ಸ್ಯಾಂಡಲ್ವುಡ್ಗೆ, ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಭಾರತೀಯ ಪನೋರಮಾ ಭಾರತದ ಅಂತಾರಾಷ್ಟ್ರೀಯಾ ಚನಲಚಿತ್ರೋತ್ಸವದ ಪ್ರಮುಖ ವಿಭಾಗವಾಗಿದೆ. ಇದರಲ್ಲಿ 25 ಫೀಚರ್ ಫಿಲ್ಮ್ ಮತ್ತು 20 ನಾನ್-ಫೀಚರ್ ಫಿಲ್ಮ್ಗಳನ್ನು ಆಯ್ಕೆ ಮಾಡಲಾಗಿದೆ. ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಹಿಂದಿ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಇನ್ನು 2ನೇ ಸಿನಿಮಾವಾಗಿ ಕನ್ನಡದ ಕೆರೆಬೇಟೆ ಚಿತ್ರವನ್ನು ಆಯ್ಕೆ ಮಾಡಲಾಗಿದೆ. ಒಟ್ಟು 384 ಫೀಚರ್ ಫಿಲ್ಮ್ ವಿಭಾಗದಲ್ಲಿ 25 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. 262 ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ 20 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.
384 ಸಿನಿಮಾಗಳಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ. ಅಂದಹಾಗೆ ಕೆರೆಬೇಟೆ ರಾಜ್ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾ. ಗೌರಿ ಶಂಕರ್ ನಾಯಕನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ನಟನೆ ಜೊತೆಗೆ ಗೌರಿ ಶಂಕರ್ ನಿರ್ಮಾಣದ ಜವಾಬ್ದಾರಿಯಮನ್ನು ವಹಿಸಿಕೊಂಡಿದ್ದರು. ತುಂಬಾ ಕಷ್ಟಪಟ್ಟು ಇಷ್ಟ ಪಟ್ಟು ಮಾಡಿದ ಸಿನಿಮಾವಿದು.
ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಈ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು.