ಪ್ರೀತಿ, ಜಾತಿ, ಕೊಲೆಯ ಸುಳಿಯಲ್ಲಿ “ಕೆರೆಬೇಟೆ”(ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಕೆರೆಬೇಟೆ
ನಿರ್ದೇಶಕ : ರಾಜಗುರು
ನಿರ್ಮಾಪಕ : ಜೈಶಂಕರ್ ಪಾಟೀಲ್
ಸಂಗೀತ : ಗಗನ್ ಬಡೇರಿಯ
ಛಾಯಾಗ್ರಹಕ : ಕೀರ್ತನ್
ತಾರಾಗಣ : ಗೌರಿಶಂಕರ್ , ಬಿಂದು ಶಿವರಾಂ, ಗೋಪಾಲ್ ದೇಶಪಾಂಡೆ, ಹರಣಿ ಶ್ರೀಕಾಂತ್, ಸಂಪತ್ತು ಮೈತ್ರಿಯ, ವರ್ಧನ್, ಶೇಖರ್ ಕರಡಿಮನೆ ಹಾಗೂ ಮುಂತಾದವರು…
ಈ ಹಿಂದೆ ಬಂದು ಭರ್ಜರಿ ಯಶಸ್ವಿ ಕಂಡ ಕಾಂತಾರ ಚಿತ್ರ ಹೇಗೆ ಒಂದು ಪ್ರಾಂತ್ಯದ ಭಾಷೆ, ಸೊಗಡು , ಆಚಾರ , ವಿಚಾರ , ಪದ್ದತಿ, ಒಂದು ಪ್ರೇಮ ಕಥೆ ಇತ್ತೋ , ಅಂತಹದ್ದೇ ಮಲೆನಾಡು ಭಾಗದ ಸುಂದರ ಪರಿಸರದ ಜನರ ಬದುಕು , ಬವಣೆ , ಮೀನು ಹಿಡಿಯುವ ಕಲೆ, ಜಾತಿ , ಧರ್ಮ , ಪ್ರೀತಿಯ ಸುಳಿಯಲ್ಲಿ ಕರಾಳ ಮುಖಗಳ ದರ್ಶನ , ನಿಗೂಢ ಕೊಲೆಯ ಸುತ್ತ ಎಣಿದಿರುವ ವಿಭಿನ್ನ ಕಥಾಹಂದರವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಕೆರೆಬೇಟೆ”.
ವರ್ಷಕ್ಕೊಮ್ಮೆ ಊರಿನ ಕೆರೆಯಲ್ಲಿ ಮೀನು ಹಿಡಿಯುವ ಪದ್ಧತಿ. ಅದಕ್ಕೊಂದು ರೀತಿ , ರಿವಾಜು , ಶೈಲಿ. ಇಡೀ ಊರಿನಲ್ಲಿ ಮೀನು ಹಿಡಿಯುವುದರಲ್ಲಿ ನಿಸೀಮಾ ಹುಲಿ ಮನೆ ನಾಗ (ಗೌರಿ ಶಂಕರ್). ತಾಯಿ ಶಾರದಮ್ಮ (ಹರಣಿ ಶ್ರೀಕಾಂತ್). ಅನ್ಯಜಾತಿ ಅನಾಥೆಗೆ ಬಾಳು ಕೊಟ್ಟ ಇವನ ತಂದೆ ಸತ್ತರು , ಆಸ್ತಿ ವಿಚಾರವಾಗಿ ಸಂಬಂಧಿಕರ ಕಾಟ ತಪ್ಪಿರುವುದಿಲ್ಲ. ಹೊಟ್ಟೆ ಪಾಡಿಗಾಗಿ ಕಾಡಿನಲ್ಲಿ ಮರ ಕಡಿಯುವ ಕಾಯಕ , ಇನ್ನು ಇದೇ ಊರಿನ ಕಾಲೇಜು ವಿದ್ಯಾರ್ಥಿನಿ ಮೀನಾ (ಬಿಂದು ಶಿವರಾಂ). ಗೆಳತಿಯರೊಂದಿಗೆ ಕಾಲೇಜು , ಮನೆ, ತಂದೆ, ತಾಯಿ ಅಷ್ಟೇ ಅವಳ ಬದುಕು.
ಒಮ್ಮೆ ಕಬ್ಬಡಿ ಪಂದ್ಯದಲ್ಲಿ ತನ್ನೂರಿನ ಹುಡುಗರು ಗೆದ್ದ ಖುಷಿಯಲ್ಲಿ ನಾಗ ನನ್ನ ನೋಡಿ ಇಷ್ಟ ಪಡುತ್ತಾಳೆ. ಮೀನಳಾ ನೋಟಕ್ಕೆ ಮನಸೋತು ಮದುವೆಯಾಗಲು ನಿರ್ಧಾರ ಮಾಡುತ್ತಾನೆ. ಆದರೆ ಮೀನಾ ಹಾಗೂ ನಾಗ ಪ್ರೀತಿ ಕಳ್ಳಾಟ ಮನೆಯವರಿಗೆ ತಿಳಿದು ದೂರ ಮಾಡಲು ಹೊಡೆದಾಟವಾಗಿ ಗಲಾಟೆಗಳು ಎದುರಾಗುತ್ತದೆ. ತಂದೆ (ಗೋಪಾಲ್ ದೇಶಪಾಂಡೆ ) ಜಾತಿ ಅಲ್ಲದವ, ಬೆರಕೆಗೆ ಹುಟ್ಟಿದವನಿಗೆ ಮಗಳು ಕೊಡಬಾರದು ಎಂಬ ನಿರ್ಧಾರಕ್ಕೆ ಹಾಗೂ ಒತ್ತಡಕ್ಕೆ ಮಣಿದು ಮಾತು ಕೇಳುವ ಮೀನಾ , ಇದರಿಂದ ಕೋಪಗೊಳ್ಳುವ ನಾಗ ಸಮಯ ಕಾದು ಮೀನಾಳನ್ನ ಕಿಡ್ನ್ಯಾಪ್ ಮಾಡುತ್ತಾನೆ.
ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಡುತ್ತಾರೆ. ಇನ್ನು ಆಕೆಗೆ ಕೊಡಬಾರದ ಹಿಂಸೆ ಕೊಡುವ ನಾಗ. ಕೆಲವು ತಿಂಗಳ ನಂತರ ಆಕೆ ಗರ್ಭಿಣಿಯಾಗಿ ಮತ್ತೆ ತನ್ನ ಮನೆಯನ್ನು ಸೇರುತ್ತಾಳೆ. ಅಲ್ಲಿಂದ ಅನುಮಾನಗಳು ಬೆಳೆಯುತ್ತದೆ. ಇನ್ನು ಮುಂದೆ ಒಂದಕ್ಕೊಂದು ತಾಳೆ ಹಾಕುವಂತೆ ಬೇರೆ ಬೇರೆ ದೃಷ್ಟಿಕೋನದ ಕಥೆಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.
ಕೆರೆಬೇಟೆ ಅಂದರೇನು..?
ನಾಗ ಹಾಗೂ ಮೀನ ಬದುಕು ಏನಾಗುತ್ತೆ…
ಕೊಲೆಯಾದವರು ಯಾರು… ಕ್ಲೈಮಾಕ್ಸ್ ಉತ್ತರ ಏನು… ಈ ಎಲ್ಲಾ ಅಂಶ ತಿಳಿಯಬೇಕಾದರೆ “ಕೆರೆಬೇಟೆ”ಯ ಚಿತ್ರ ನೋಡಬೇಕು.
ಇಂತಹ ಒಂದು ವಿಭಿನ್ನ ಕತೆಯನ್ನು ಆಯ್ಕೆ ಮಾಡಿರುವ ನಿರ್ಮಾಪಕರ ಆಲೋಚನೆ ಮೆಚ್ಚುವಂತದ್ದು , ಅದಕ್ಕೆ ಪೂರಕವಾಗಿ ಕಥೆಯ , ಚಿತ್ರಕಥೆ , ಸಂಭಾಷಣೆ ಬೆಸೆದಿರುವ ನಿರ್ದೇಶಕರ ಕೆಲಸ ಗಮನ ಸೆಳೆಯುತ್ತದೆ. ಮಲೆನಾಡು ಪ್ರಾಂತ್ಯದ ಭಾಷೆಯ ಸೊಗಡು , ಅಲ್ಲಿನ ಜನರ ಬದುಕು , ಬವಣೆ , ಅಲ್ಲೊಂದು ನಿಷ್ಕಲ್ಮಶ ಪ್ರೀತಿ , ಜಾತಿ ತಾರತಮ್ಯ , ಒಳಸಂಚಿನ ಮರ್ಮ , ರೋಚಕ ತಿರುವುಗಳು ಅಚ್ಚರಿ ಅನಿಸುತ್ತದೆ. ಆದರೆ ಸಾಗುವ ಪಯಣ ನೋಡಲು ಕೊಂಚ ಕಠಿಣ , ದೂರ ಎನಿಸುತ್ತದೆ. ಹಾಗೆಯೇ ಸಂಭಾಷಣೆಯಲ್ಲಿ ಬರುವ ಮುಕ್ಲಿ , ಬೆರೆಕೆ ಸೇರಿದಂತೆ ಒಂದಷ್ಟು ಸಂಭಾಷಣೆ ಬಹಳ ಇರ್ಸು ಮುರ್ಸು ಎನಿಸುತ್ತದೆ. ಇನ್ನು ಸಂಗೀತ ಉತ್ತಮವಾಗಿದ್ದು , ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಅದೇ ರೀತಿ ಛಾಯಾಗ್ರಾಹಕರ ಕೈಚಳಕ ಕೂಡ ಸೊಗಸಾಗಿದೆ. ತಾಂತ್ರಿಕವಾಗಿ ಬಹಳ ಶ್ರಮಪಟ್ಟಿರೋದು ಕಾಣುತ್ತದೆ.
ನಾಯಕನಾಗಿರುವ ಗೌರಿಶಂಕರ್ ತನ್ನ ಪಾತ್ರಕ್ಕೆ ಸಂಪೂರ್ಣ ನ್ಯಾಯ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಹವಾ , ಭಾವದ ಜೊತೆಗೆ ಮಾತಿನ ಶೈಲಿ , ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಅದೇ ರೀತಿ ನಾಯಕಿಯಾಗಿ ಕಾಣಿಸಿಕೊಂಡಿರುವ ಬಿಂದು ಶಿವರಾಂ ಕೂಡ ಮಾತಿನ ವರಸೆಯಲ್ಲಿ ಅದ್ಭುತವಾಗಿ ನಟಿಸಿದ್ದು , ಕನ್ನಡಕ್ಕೆ ಮುದ್ದಾದ ಭರವಸೆ ನಟಿ ಸಿಕ್ಕಂತಾಗಿದೆ. ಇನ್ನು ಗೋಪಾಲ್ ದೇಶಪಾಂಡೆ ಕೂಡ ನಾಯಕಿಯ ತಂದೆಯಾಗಿ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಅದೇ ರೀತಿ ನಾಯಕನ ತಾಯಿಯಾಗಿ ಹರಿಣಿ ಶ್ರೀಕಾಂತ್ ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಇನ್ಸ್ಪೆಕ್ಟರ್ ಪಾತ್ರದಲ್ಲಿ ಸಂಪತ್ತು ಮೈತ್ರಿಯ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ವಿಭಿನ್ನ ಚಿತ್ರಗಳನ್ನು ನೋಡುವ ಚಿತ್ರ ಪ್ರೇಮಿಗಳಿಗೆ ಈ ಚಿತ್ರ ಖಂಡಿತ ಇಷ್ಟವಾಗುತ್ತದೆ. ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ.