ಯುವ ಪ್ರತಿಭೆಗಳ “ಕಾವೇರಿ ತೀರದಲ್ಲಿ ಮುಂಗಾರಿದೆ” ಚಿತ್ರೀಕರಣ ಆರಂಭ.
ಮನುಷ್ಯನ ಜೀವನ ಅನ್ನೋದು ಒಂದು ಸಮುದ್ರದ ತೀರದಂತೆ. ಅದು ಕೆಲವೊಮ್ಮೆ ಪ್ರಶಾಂತವಾಗಿ ಸಾಗುತ್ತಿದ್ದರೆ, ಮತ್ತೆ ಕೆಲವೊಮ್ಮೆ ಬೋರ್ಗೆರೆಯುವ ಅಲೆಗಳಿಂದ ಬದುಕನ್ನು ಎದುರಿಸಬೇಕಾಗುತ್ತದೆ. ಯಾವಾಗ ಪ್ರಶಾಂತವಾಗಿ ಸಾಗುತ್ತದೆ, ಯಾವಾಗ ತನ್ನ ದಿಕ್ಕನ್ನು ವಿರುದ್ಧವಾಗಿ ಬದಲಿಸಿಕೊಂಡುಬಿಡುತ್ತೆ ಅನ್ನೋದನ್ನು ಯಾರಿಂದಲೂ ಸಹ ಊಹಿಸಲು ಸಾಧ್ಯವಾಗುವುದಿಲ್ಲ ಎಂಬ ಎಳೆ ಇಟ್ಟುಕೊಂಡು ಕಾವೇರಿ ತೀರದಲ್ಲಿ ಮುಂಗಾರಿದೆ ಎಂಬ ಚಿತ್ರವನ್ನು ಆರ್. ಕೆ. ಗಾಂಧಿ ಅವರು ನಿರ್ದೇಶಿಸುತ್ತಿದ್ದಾರೆ.
ಈಗಾಗಲೇ ತೆಲುಗಿನ ರುದ್ರಾಕ್ಷ ಪುರಂ, ಪ್ರೇಮ ಭಿಕ್ಷ ಹಾಗು ಕನ್ನಡದಲ್ಲಿ ಬಿಡುಗಡೆಗೆ ಸಿದ್ದವಾಗಿರುವ “ಮುಗಿಲ ಮಲ್ಲಿಗೆ” ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ “ಕಾವೇರಿ ತೀರದಲ್ಲಿ” ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಮೂಲದ ಉದಯ್ ಹಾಗೂ ಕನ್ನಡದಲ್ಲಿ ಮಗಳೇ ,ಅಸುರರು, ಚಿತ್ರಗಳಲ್ಲಿ ನಟಿಸಿದ್ದ ಸುಪ್ರಿತಾ ರಾಜ್ ಈ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ . ನವೀನ್ ಕುಮಾರ್ ಗೌಡ, ಗೋಪಾಲ್ ಸ್ವಾಮಿ, ಹಾಗು ವಸಂತ ನಾಯಕ್ ಆವರುಗಳು ಈ ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಉದಯ್, ಸುಪ್ರಿತಾ ರಾಜ್, ಮಮತ, ಹೊಸಪೇಟೆ ರಾಘವೇಂದ್ರ, ಆಂಜಿನಪ್ಪ, ಅನ್ನಪೂರ್ಣ, ಸಿದ್ದಯ್ಯ ಎಸ್. ಹೀರೇಮಠ್, ಶೋಭರಾಜ್, ಪುಷ್ಪಾಗೌಡ ಮುಂತಾದವರಿದ್ದು ಉಳಿದ ತಾರಾಗಣ ಆಯ್ಕೆ ನಡೆಯುತ್ತಿದೆ.
ಗಂಧರ್ವ ರಾಯ್ ರಾವುತ ರ ಸಾಹಿತ್ಯ ಸಂಗೀತ, ನಾಗೇಂದ್ರ ಕುಮಾರ್ ಎಂ ಅವರ ಛಾಯಾಗ್ರಹಣ, ವಿನಯ್ ಜಿ. ಆಲೂರು ಸಂಕಲನ, ಮೋಹನ್ ಕುಮಾರ್ ಪ್ರಸಾಧನ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ಏಪ್ರಿಲ್ 25 ರಿಂದ ಆರಂಭಿಸಿ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ , ಹೊಸಪೇಟೆ ,ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಯ ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.