ಕುತೂಹಲ ಮೂಡಿಸಿದ್ದ “ಕೆಂಡ” ಚಿತ್ರದ ಟ್ರೈಲರ್ ರಿಲೀಸ್
ಸಮಾಜದಲ್ಲಿ ನಡೆಯುವ ಒಂದಷ್ಟು ರೋಚಕ ಘಟನೆಗಳ ಸುತ್ತ ಬೆಸೆದುಕೊಂಡಿರುವ ಕಥನಕ ಎನ್ನಿಸುವ ಹಾಗೆ ಬಿಡುಗಡೆಗೊಂಡಿರುವಂತಹ “ಕೆಂಡ” ಚಿತ್ರದ ಟ್ರೈಲರ್ ಗಮನ ಸೆಳೆಯುವಂತೆ ಹೊರ ಬಂದಿದೆ. ಸಹದೇವ್ ಕೆಲವಡಿ ನಿರ್ದೇಶನದ ಈ ಕೆಂಡ ಚಿತ್ರ ಇದೇ ತಿಂಗಳ 26ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಚಿತ್ರ ಅಂತಾರಾಷ್ಟ್ರೀಯ ಸಿನಿಮಾ ಫೆಸ್ಟಿವಲ್‍ಗಳಲ್ಲಿ ಬಿಡುಗಡೆಗೊಂಡು ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ.
ಈ ಚಿತ್ರವನ್ನು ವೀಕ್ಷಿಸಿದ ಒಂದಷ್ಟು ವಿದೇಶಿಗರು ಕೂಡ ಈ ರೀತಿಯೂ ನಡೆಯುತ್ತಾ , ಇದೊಂದು ವಿಭಿನ್ನ ಸಿನಿಮಾ ಬೆರಗಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರಂತೆ. ಈ ಖುಷಿಯ ಪುಳಕಗಳೊಂದಿಗೆ ಚಿತ್ರತಂಡವೀಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲು ಸಿದ್ದರಾಗಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಜೊತೆಗೆ ಟ್ರೈಲರ್ ಬಿಡುಗಡೆಯನ್ನು ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್ ಮೂಲಕ ಲೋಕಾರ್ಪಣೆ ಗೊಳಿಸಿದೆ ಚಿತ್ರತಂಡ.
ಗಂಟು ಮೂಟೆ , ಅಸ್ಮಿನ್ ಚಿತ್ರಗಳನ್ನು ನಿರ್ದೇಶನ ಮಾಡಿದಂತಹ ರೂಪಾ ರಾವ್ ಈಗ ಕೆಂಡ ಚಿತ್ರದ ಮೂಲಕ ನಿರ್ಮಾಪಕಯಾಗಿದ್ದು , ಚಿತ್ರದ ಕುರಿತು ಮಾತನಾಡುತ್ತಾ ಈಗಾಗಲೇ ಈ ಚಿತ್ರವು ಹಲವು ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡಿದೆ. ಯುಎಸ್ , ಜರ್ಮನಿಯಲ್ಲೂ ಕೂಡ ಪ್ರೀಮಿಯರ್ ಶೋ ನೋಡಿದವರು ಉತ್ತಮ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ.
ಇದೊಂದು ಪುಡಿ ರೌಡಿಗಳ ಕಥಾನಕವಿದೆ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಯುವಕನೋರ್ವ, ಪರಿಸ್ಥಿತಿಗಳ ಸುಳಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥಾದ್ದಲ್ಲ. ಎಲ್ಲಾ ವರ್ಗದ ಜನರು ನೋಡುವಂತಹ ಚಿತ್ರ ಇದಾಗಿದೆ.
ಖಂಡಿತ ಇದನ್ನ ಪ್ರೇಕ್ಷಕರು ಇಷ್ಟಪಡುತ್ತಾರೆ. ನಾವೇ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದೇವೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಸುಮಾರು 50 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇದೆ. ಪ್ರೇಕ್ಷಕರು ಇಷ್ಟಪಟ್ಟಂತೆ ಮುಂದೆ ಹೆಚ್ಚಿನ ಚಿತ್ರಮಂದಿರಗಳನ್ನ ಸೇರಿಸುವ ಯೋಜನೆ ಇದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಬೇಕಾದಂತ ಪ್ಲಾನ್ ಮಾಡಿಕೊಂಡಿದ್ದೇವೆ ನಿಮ್ಮೆಲ್ಲರ ಸಹಕಾರ ಬೆಂಬಲ ಇರಲಿ ಎಂದು ಕೇಳಿಕೊಂಡರು.
ಇನ್ನೂ ನಿರ್ದೇಶಕ ಸಹದೇವ ಕೆಲವಡಿ ಮಾತನಾಡುತ್ತಾ ನಾನು ಹಾಗೂ ನಿರ್ಮಾಪಕಿ ಸೇರಿ ಸುಮಾರು 10 ವರ್ಷಗಳಿಂದ ಬರೆದಿದ್ದಂತ ಕಥೆ ಇದಾಗಿದ್ದು, ಪ್ರಸ್ತುತ ಸಂದರ್ಭಕ್ಕೂಇದು ಬಹಳ ಒಪ್ಪುವಂತಹ ಚಿತ್ರವಾಗಲಿದೆ. ನಮಗೆ ಫೆಸ್ಟಿವಲ್ ಗಳಲ್ಲೂ ಕೂಡ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಳ್ಳಿ ಪರದೆ ಮೇಲೆ ನಮ್ಮ ಚಿತ್ರವನ್ನು ತರಲು ಸಕಲ ರೀತಿಯ ಯೋಜನೆ ಹಾಕಿಕೊಂಡಿದ್ದೇವೆ.
ಇದು ಸಿನಿಮಾ ಪ್ರೇಮಿಗಳನ್ನು ಕಾಡುವಂತ ಚಿತ್ರವಾಗಿದ್ದು, ಟ್ರೈಲರ್ ನಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಇನ್ನು ಉಳಿದಂತೆ ವೇದಿಕೆ ಮೇಲಿದ್ದಂತ ಕಲಾವಿದರು, ತಂತ್ರಜ್ಞರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬಹುತೇಕ ರಂಗಭೂಮಿ ಪ್ರತಿಭೆಗಳ ಅಭಿನಯಿಸಿದ್ದು, ರಂಗಭೂಮಿ ಪ್ರತಿಭೆ ಬಿ. ವಿ. ಭರತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು , ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ, ಪ್ರಭಾಕರ್ ಜೋಶಿ ಮುಂತಾದವರ ತಾರಾಗಣವಿದೆ.
ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿದೆ. ಸದ್ಯ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು , ಇದೇ 26ರಂದು ರಾಜ್ಯಾದ್ಯಂತ ಕೆಂಡ ಚಿತ್ರದ ದರ್ಶನ ಸಿಗಲಿದೆ.