20 ವರ್ಷ ಜರ್ನಿ… “ಕ್ಲಾಂತ” ನಿರ್ದೇಶಕನ ಮಾತು
ಬಣ್ಣದ ಪ್ರಪಂಚ ಎಲ್ಲರನ್ನ ಆಕರ್ಷಿಸುತ್ತದೆ. ಆದರೆ ಕೆಲವರನ್ನ ಮಾತ್ರ ತನ್ನತ್ತ ಸೆಳೆಯುತ್ತದೆ. ಅದರಲ್ಲೂ ಶ್ರಮ , ಆಸಕ್ತಿ , ಅದೃಷ್ಟ ಎಲ್ಲವೂ ಇದ್ದರೆ ಮಾತ್ರ ಇಲ್ಲಿ ನೆಲೆ ಉರಲು ಸಾಧ್ಯ ಎಂಬುದಕ್ಕೆ ಮತ್ತೊಂದು ಉದಾಹರಣೆ ನಿರ್ದೇಶಕ ಪ್ರಶಾಂತ್ ವೈಭವ್. ತನ್ನ 20 ವರ್ಷಗಳ ಸುದೀರ್ಘ ಚಿತ್ರರಂಗದ ಅನುಭವಗಳ ಬಗ್ಗೆ ಮಾತನಾಡುತ್ತಾ ಹೋದ ನಿರ್ದೇಶಕ ಮೂಲತಃ ಕಡಲ ಕಿನಾರೆಯ ಹುಡುಗ , ಬಾಲ್ಯದಿಂದಲೂ ಡ್ಯಾನ್ಸ್ ಎಂದರೆ ಅಪಾರ ಆಸಕ್ತಿ , ಶಾಲಾ ದಿನಗಳಲ್ಲೂ ನೃತ್ಯದ ಮೂಲಕ ಗಮನ ಸೆಳೆದ ಪ್ರತಿಭೆ.
ತಂದೆ ಜ್ಯುವೆಲರಿ ಶಾಪ್ ನಡೆಸುತ್ತಿದ್ದರು , ಮಗನ ಶ್ರಮ ಹಾಗೂ ಆಸಕ್ತಿಗೆ ಬೆನ್ನೆಲುಬಾಗಿ ಇಂದಿಗೂ ನಿಂತಿದ್ದಾರೆ. ಪಿಯುಸಿ ಮುಗಿದ ನಂತರ ವಿಜಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಹಿರಿಯ ನಿರ್ದೇಶಕ ನಾಗಾಭರಣ ಪ್ರಾಂಶುಪಾಲರ ಸಾರಥ್ಯದಲ್ಲಿ ಡಿಪ್ಲೋಮೋ ಇನ್ ಫಿಲಂ ಟ್ರೈನಿಂಗ್ ತರಬೇತಿ ಪಡೆದು , ಚಿತ್ರ ಚಟುವಟಿಕೆಯ ಬಗ್ಗೆ ಒಂದಷ್ಟು ವಿಚಾರವನ್ನು ಕಲಿತು , ತದನಂತರ 2004ರಲ್ಲಿ ಸಿಹಿ ಚಂದ್ರು ಅವರ ಗರಡಿಯಲ್ಲಿ ಪಾಪ ಪಾಂಡು , ಸಿಲ್ಲಿ ಲಲ್ಲಿ ದಾರವಾಹಿಗಳಿಗೆ ಸಹಾಯಕನಾಗಿ ಕೆಲಸ ಮಾಡ್ತಾ ಕಿರುತೆರೆಯ ಕಾರ್ಯವೈಕರಿಯ ಬಗ್ಗೆ ತಿಳಿದುಕೊಂಡರು.
ತದನಂತರ ಬೆಳ್ಳಿ ಪರದೆಯತ್ತ ಆಸಕ್ತಿಯನ್ನು ಮೂಡಿಸಿ ಕೊಂಡು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಚೆಲ್ಲಾಟ” ಚಿತ್ರದ ನಿರ್ದೇಶಕ ಎಂ. ಡಿ. ಶ್ರೀಧರ್ ಗರಡಿಯಲ್ಲಿ ಸೇರಿಕೊಂಡು ಸಹಾಯಕ ನಿರ್ದೇಶಕನಾಗಿ ಮುಂದುವರಿಯುತ್ತಾ ಕೃಷ್ಣ , ಜಾಲಿ ಡೇಸ್ , ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೊರ್ಕಿ , ಬುಲ್ ಬುಲ್ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೂಡ ಕೆಲಸ ಮಾಡಿ ಚಿತ್ರರಂಗದ ಹಲವು ವಿಭಾಗಗಳ ಕಾರ್ಯವೈಖರಿಯನ್ನು ಹಂತ ಹಂತವಾಗಿ ಕಲಿತು ಸ್ವತಂತ್ರ ನಿರ್ದೇಶನ ಮಾಡುವ ಹಂತಕ್ಕೆ ಬೆಳೆದ ಈ ಪ್ರತಿಭೆ ಚಿತ್ರರಂಗದಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾ ಹೋದರು.
ಸಮಾನಮನಸ್ಕಾರ ಗೆಳೆಯರು ಒಗ್ಗೂಡಿಕೊಂಡು ಕಥೆ , ಚಿತ್ರಕಥೆ , ನಿರ್ಮಾಣದ ಬಗ್ಗೆ ಚರ್ಚೆಯನ್ನು ಮಾಡುತ್ತಾ 2014ರಲ್ಲಿ ಯುವ ಪ್ರತಿಭೆ ಪ್ರದೀಪ್ ಅಭಿನಯದ “ರಂಗನ್ ಸ್ಟೈಲ್” ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ವೈಭವ್ ಪ್ರಶಾಂತ್ ಬೆಳ್ಳಿ ಪರದೆಯ ಮೇಲೆ ಗುರುತಿಸಿಕೊಂಡರು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೊಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದರು.
ಈ ಚಿತ್ರವು ಕೂಡ ಬಹಳಷ್ಟು ಪ್ರಶಂಸೆಯನ್ನು ಪಡೆದು ನಿರ್ದೇಶಕರಿಗೆ ಉತ್ತಮ ಭವಿಷ್ಯವಿದೆ ಎಂಬ ಮಾತು ಕೂಡ ಹೊರಬಂದಿತ್ತು. ತದನಂತರ ತುಳು ಭಾಷೆಯಲ್ಲಿ “ದಗಲ್ ಬಾಜಿಲು” ಚಿತ್ರ ಯಶಸ್ವಿ ನೂರು ದಿನವನ್ನ ಪ್ರದರ್ಶನ ಕಂಡಿತ್ತು. ಪೃಥ್ವಿ ಅಂಬರ ಅಭಿನಯದ “ಆಟಿ ದೊಂಜೀ ದಿನ” ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು.
ಈಗ ನಿರ್ದೇಶಕ ವೈಭವ್ ಪ್ರಶಾಂತ್ ಕಥೆ , ಚಿತ್ರಕಥೆ , ಸಾಹಿತ್ಯ , ನಿರ್ದೇಶನದ ನಾಲ್ಕನೇ ಚಿತ್ರ “ಕ್ಲಾಂತ” ಬಿಡುಗಡೆಗೆ ಸಿದ್ಧವಿದೆ. ನಿರ್ದೇಶಕರ ಪ್ರಕಾರ ಮೂರು ವರ್ಷಗಳ ನಂತರ ಮತ್ತೆ ನನ್ನ ನಿರ್ದೇಶನದ ಚಿತ್ರ ಇದಾಗಿದ್ದು , ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇನೆ.
ನನಗೊಂದು ಸಕ್ಸಸ್ ಚಿತ್ರ ಅಗತ್ಯವಿದೆ. ಇದೊಂದು ಯೂತ್ ಓರಿಯೆಂಟೆಡ್ ಸಬ್ಜೆಕ್ಟ್ ಆಗಿದ್ದು , ಕುಟುಂಬ ಸಮೇತ ನೋಡುವಂತ ಚಿತ್ರವಾಗಿದೆ ಯಂತೆ. ತಂದೆ ತಾಯಿಗೆ ಸುಳ್ಳು ಹೇಳಿ ಓಡಾಡುವ ಮಕ್ಕಳು ಎದುರಿಸುವ ಸಂಕಷ್ಟಗಳು, ಅದರಿಂದ ಏನೆಲ್ಲಾ ಏರುಪೇರುಗಳು ಆಗುತ್ತದೆ ಎಂಬುದನ್ನ ತೆರೆಯ ಮೇಲೆ ತರುವ ಪ್ರಯತ್ನವಾಗಿದ್ದು, ಮಿಸ್ಟರಿಯಸ್ ಜರ್ನಿಯ ಕಥೆಯಲ್ಲಿ ದೈವತ್ವದ ಶಕ್ತಿಯು ಕಾಣಸಿಗಲ್ಲಿದೆಯಂತೆ.
ವಿಶೇಷ ಎಂದರೆ ಕೊರಗಜ್ಜನ ಬಗ್ಗೆ ಗಾಯಕ ರಾಜೇಶ್ ಕೃಷ್ಣನ್ ಹಾಡಿರುವ ಹಾಡು ಮತ್ತೆ ಮತ್ತೆ ಕೇಳುವಂತೆ ಮೂಡಿ ಬಂದಿದೆ. ಈ ಚಿತ್ರದ ಚಿತ್ರೀಕರಣಕ್ಕೆ ಹಲುವು ಅಡೆತಡೆಗಳು ಆದವು , ಅವೆಲ್ಲವೂ ದೈವದ ಕೃಪೆಯಿಂದ ಪರಿಹಾರಗೊಂಡು ಈಗ ಬಿಡುಗಡೆ ಹಂತವನ್ನು ತಲುಪಿದೆ. ಈ ಚಿತ್ರದಲ್ಲಿ ನಾಲ್ಕು ಫೈಟ್ ಗಳಿದ್ದು , ವಿನೋದ್ ಮಾಸ್ಟರ್ ಸಾಹಸ ಸಂಯೋಜನೆಯಲ್ಲಿ ನಾಯಕಿಗೂ ಒಂದು ಫೈಟ್ ಇದ್ದು ಅದು ಚಿತ್ರದ ಹೈಲೈಟ್ ನಲ್ಲಿ ಒಂದಾಗಲಿದೆಯಂತೆ.
ಮೋಹನ್ ಲೋಕನಾಥನ್ ಛಾಯಾಗ್ರಾಹಣವಿರುವ ಈ ಚಿತ್ರಕ್ಕೆ ಎಸ್. ಪಿ. ಚಂದ್ರಕಾಂತ್ ಮೂರು ಹಾಡುಗಳಿಗೆ ಸಂಗೀತವನ್ನು ನೀಡಿದ್ದಾರೆ. ಯುವ ಪ್ರತಿಭೆ ಎಂ . ವಿಜ್ಞೇಶ್ ಹಾಗೂ ಸಂಗೀತ ಭಟ್ ನಾಯಕ , ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಒಂದು ಚಿತ್ರವನ್ನು ಉದಯ ಅಮ್ಮಣ್ಣಾಯ .ಕೆ ನಿರ್ಮಾಣ ಮಾಡಿದ್ದು , ಇವರೊಟ್ಟಿಗೆ ಅರುಣ್ ಕುಮಾರ್ , ಪ್ರದೀಪ್ ಗೌಡ , ಹೇಮಂತ್ ರೈ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಬಹಳಷ್ಟು ನಿರೀಕ್ಷೆ ಇರುವ ಈ ಚಿತ್ರ ಇದೆ 19 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.