“ಕೊಲೆಯಾದವನೆ ಕೊಲೆಗಾರ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಶಾಸಕರು.
ಚಂದನವನದಲ್ಲಿ ನೆಲೆ ಕಾಣಬೇಕು , ಸದಭಿರುಚಿಯ ಚಿತ್ರಗಳನ್ನು ನೀಡುವ ಮೂಲಕ ಎಲ್ಲರ ಗಮನ ಸೆಳೆಯಬೇಕೆಂಬ ನಿಟ್ಟಿನಲ್ಲಿ ಯುವ ಪಡೆಗಳ ಬಳಗ ಸೇರಿಕೊಂಡು ನಿರ್ಮಿಸಿರುವಂತಹ ಚಿತ್ರವೇ “ಕೊಲೆಯಾದವನೆ ಕೊಲೆಗಾರ” ಈ ಚಿತ್ರದ ಶೀರ್ಷಿಕೆ ಬಹಳ ಕುತೂಹಲವನ್ನು ಮೂಡಿಸಿದ್ದು , ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಎಸ್. ಆರ್. ವಿ ಥಿಯೇಟರ್ ನಲ್ಲಿ ಆಯೋಜಿಸಿದ್ದು , ಗುಲ್ಬರ್ಗ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡುತ್ತಾ ನಮ್ಮ ಕ್ಷೇತ್ರದ ಹುಡುಗ ಸಿದ್ದು ಹಿರೇತನದ್ , ನಿರ್ದೇಶಕ ಮಲ್ಲಿಕಾರ್ಜುನ ಹಿರೇತನದ್ ಹಾಗೂ ಬಹಳಷ್ಟು ಯುವಕರು ಸೇರಿ ಈ ಒಂದು ಚಿತ್ರವನ್ನ ಸಿದ್ಧಪಡಿಸಿದ್ದಾರೆ. ಚಿತ್ರದ ಟ್ರೈಲರ್ ವಿಭಿನ್ನವಾಗಿದೆ, ಇವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ , ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಈ ಚಿತ್ರದ ಕುರಿತು ನಿರ್ದೇಶಕ ಮಲ್ಲಿಕಾರ್ಜುನ ಹೀರೇತನದ್ ಮಾತನಾಡಿ, ನಾನು ಹುಟ್ಟಿದ್ದು ಹಾವೇರಿಯಲ್ಲಿ ಬೆಳೆದಿದ್ದೆಲ್ಲಾ ತುಮಕೂರಿನಲ್ಲಿ ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ನಾನೇ ಮಾಡಿದ್ದೇನೆ. ನಾನು ಈ ಹಿಂದೆ ಒಂದಷ್ಟು ಸೀರಿಯಲ್ ನಲ್ಲಿ ಅಭಿನಯಿಸಿದ್ದೇನೆ. ಒಂದು ಸದಭಿರುಚಿಯ ಚಿತ್ರವನ್ನು ನೀಡಬೇಕೆಂಬ ಆಸೆಯೊಂದಿಗೆ ತುಂಬಾ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೀವಿ. ಈ ಒಂದು ಚಿತ್ರದಲ್ಲಿ ನಾಲ್ಕು ಕ್ಯಾರೆಕ್ಟರ್ಗಳು ಬರುತ್ತೆ , ಒಂದೊಂದು ವಿಭಿನ್ನ ಕಥೆಗಳು ಹೇಳುತ್ತಾ ಹೋಗುತ್ತದೆ.
ಬಡವರ ಮನೆ ಮಗ ಬೆಂಗಳೂರಿಗೆ ಬಂದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎಂದು ತೋರಿಸಿದ್ದೀವಿ. ತಂದೆ-ಮಗಳ ಬಾಂಧವ್ಯವೂ ಇದರಲ್ಲಿದೆ. ಒಬ್ಬ ವಿದ್ಯಾರ್ಥಿ ಸ್ನೇಹಿತರೊಂದಿಗೆ ಸೇರಿ ದುಷ್ಚಟಗಳಿಗೆ ದಾಸನಾಗಿ , ಓದನ್ನು ಬಿಟ್ಟು ಜೀವನವನ್ನೇ ಹಾಳು ಮಾಡಿಕೊಂಡು ಅಪ್ಪ- ಅಮ್ಮನನ್ನು ಕಳೆದುಕೊಂಡು ಹೇಗಪ್ಪ ಜೀವನ ಮಾಡುವುದು ಎಂಬ ಸ್ಥಿತಿಗೆ ತಲುಪುವುದೆ “ಕೊಲೆಯಾದವನೆ ಕೊಲೆಗಾರ” ಸಿನಿಮಾದ ಒನ್ ಲೈನ್ ಸ್ಟೋರಿ. ನಾನು ಕೂಡ ಈ ಚಿತ್ರದಲ್ಲಿ ಒಂದು ಊರ ಮುಖ್ಯಸ್ಥನ ಪಾತ್ರ ಮಾಡಿದ್ದೇನೆ. ಈಗ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಮಾರ್ಚ್ ತಿಂಗಳಲ್ಲಿ ಚಿತ್ರವನ್ನು ತೆರೆಯ ಮೇಲೆ ತರುತ್ತೇವೆ ಎಂದು ಹೇಳಿದರು.
ಇನ್ನೂ ಈ ಚಿತ್ರದ ನಟ ಸಿದ್ದು ಎನ್ .ಆರ್ ಮಾತನಾಡುತ್ತಾ ನಮ್ಮ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಶಾಸಕರಿಗೆ ತುಂಬಾ ಧನ್ಯವಾದಗಳು , ನಮ್ಮಂತ ಯುವಕರಿಗೆ ಅವರ ಆಶೀರ್ವಾದ ಇರಬೇಕು , ನಮಗೆ ಸದಾ ಸಹಕಾರ ನೀಡುತ್ತಾರೆ. ಇನ್ನು ಈ ಚಿತ್ರದ ವಿಚಾರವಾಗಿ ಹೆಚ್ಚು ಹೇಳುವುದಕ್ಕಿಂತ ನೀವು ನೋಡಬೇಕು , ಆದರೂ ನಮ್ಮ ಸಿನಿಮಾದಲ್ಲಿ ಒಂದೊಂದು ಸೀನ್ ಕೂಡ ಸಸ್ಪೆನ್ಸ್ ಆಗಿದೆ.
ಒಂದೊಂದು ಫೋಟೋ ಕೂಡ ಒಂದೊಂದು ಕಥೆ ಹೇಳುತ್ತದೆ. ಎಲ್ಲರಿಗೂ ಒಂದಲ್ಲ ಒಂದು ಕಥೆ ಇಷ್ಟವಾಗುತ್ತದೆ. ಇಂಡಸ್ಟ್ರಿಗೆ ಬರಬೇಕೆಂದು ನಾನು ಇಷ್ಟಪಡುತ್ತಿದ್ದೆ. ಅಷ್ಟರಲ್ಲಿ ನಿರ್ದೇಶಕರು ಕೂಡ ಪರಿಚಯವಾಗಿದ್ದರು. ಹೀಗಾಗಿ ಈ ಸಿನಿಮಾ ಮಾಡಿದ್ದೀವಿ ನಮ್ಮಂತ ಯುವ ಪ್ರತಿಭೆಗಳಿಗೆ ನಿಮ್ಮ ಸಹಕಾರ ವಿರಲಿ ಎಂದು ಕೇಳಿಕೊಂಡರು.
ಇನ್ನು ಮತ್ತೊಬ್ಬ ಯುವ ಪ್ರತಿಭೆ ಕಿರಣ್ ಸೋಮಣ್ಣ ಮಾತನಾಡುತ್ತಾ ಈ ಸಿನಿಮಾದಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದೀನಿ. ಅದು ಪಾಸಿಟಿವ ಅಥವಾ ನೆಗೆಟಿವ ಎಂಬುದನ್ನ ನೀವು ತೆರೆಯ ಮೇಲೆ ನೋಡಬೇಕು. ನನಗೆ ವೆಬ್ ಸೀರಿಸ್ ಮಾಡುವಾಗ ನಿರ್ದೇಶಕರ ಪರಿಚಯ ವಾಯಿತು. ಅಲ್ಲಿಂದ ನಮ್ಮೆಲ್ಲರ ಜರ್ನಿ ಹಾಗೇ ಸಾಗುತ್ತಾ ಇದೆ. ಈ ಚಿತ್ರದಲ್ಲಿ ನಾಲ್ಕು ಟ್ರ್ಯಾಕುಗಳು ಬಹಳ ವಿಭಿನ್ನವಾಗಿದೆ. ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಈ ಒಂದು “ಕೊಲೆಯಾದವನೆ ಕೊಲೆಗಾರ” ಚಿತ್ರವನ್ನು ಬಹುತೇಕ ಎಲ್ಲಾ ಹೊ ಸಬರು ಸೇರಿಕೊಂಡು ಮಾಡಿದ್ದು , ಈ ಸಿನಿಮಾವನ್ನು ಅಭಯ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ಅತಿಶಯ ಜೈನ್ ಎಂ ಕೆ – ಸಂಗೀತ, ಅರವಿಂದ ರಾಜ್ – ಸಂಕಲನ, ಅಜಯ್ – ಫೈಟ್ ಮಾಸ್ಟರ್ ಆಗಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಕಿರಣ್ ಸೋಮಣ್ಣ, ಸಿದ್ದು ಎನ್ ಆರ್, ಚಂದ್ರಿಕಾ, ಅಜಯ್ ಅಭಿನಯಿಸಿದ್ದಾರೆ. ಸದ್ಯ ಟ್ರೈಲರ್ ಬಿಡುಗಡೆಯಾಗಿದ್ದು , ಎಲ್ಲಾ ಅಂದುಕೊಂಡಂತೆ ನಡೆದರೆ ಮಾರ್ಚ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.