ಶ್ರೇಯಾ ಘೋಷಾಲ್, ಶಂಕರ್ ಮಹದೇವನ್ ಧ್ವನಿಯಲ್ಲಿ “ಕೊರಗಜ್ಜ” ಚಿತ್ರದ ಹಾಡು.
ಭಾರೀ ಕುತೂಹಲ ಮೂಡಿಸಿರುವ ಸುಧೀರ್ ಅತ್ತಾವರ್ ನಿರ್ದೇಶನದ “ಕೊರಗಜ್ಜ” ಚಿತ್ರಕ್ಕೆ ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್ ಸೇರಿ ದೇಶದ ಘಟಾನುಘಟಿ ಗಾಯಕರುಗಳು ಹಾಡುಗಳನ್ನು ಹಾಡಿದ್ದಾರೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ “ಕೊರಗಜ್ಜ” ಚಿತ್ರಕ್ಕೆ ಕಳೆದವಾರವಷ್ಟೇ ಶ್ರೇಯಾ ಘೋಷಾಲ್ ರವರು ಎರಡು ಹಾಡುಗಳ ರೆಕಾರ್ಡಿಂಗ್ ಮುಗಿಸಿದ್ದಾರೆ.
ಚಿತ್ರದ ಹಾಡಿನ ಸಾಹಿತ್ಯಕ್ಕೆ ಮಾರುಹೋಗಿ, ಈ ಹಿಂದೆ ಸುಧೀರ್ ರಚಿಸಿದ್ದ ಶ್ರೇಯಾ ಘೋಷಾಲ್ ಕಂಠಸಿರಿಯ ಸೂಪರ್ ಹಿಟ್ “ಎಲ್ಲೋಜಿನುಗಿರುವ ನೀರು…” ಹಾಡನ್ನು ನಿರ್ಮಾಪಕ ತ್ರಿವಿಕ್ರಮ ಸಫಲ್ಯ ರವರ ಸಮ್ಮುಖದಲ್ಲಿ ನಿರ್ದೇಶಕ ಸುಧೀರ್ ಮತ್ತು ಶ್ರೇಯಾ ಅವರು ಹಾಡಿ, ಸಿಹಿ ನೆನಪನ್ನು ಮೆಲುಕು ಹಾಕಿ, ಕನ್ನಡ ಹಾಡುಗಳ ಸೊಬಗನ್ನು ಸಂಭ್ರಮಿಸಿದರು. ಕನ್ನಡ ಚಿತ್ರಗಳ ಸಾಹಿತ್ಯ ಉತ್ಕ್ರಷ್ಟ ಮಟ್ಟದಲಿರುತ್ತದೆ . ಹಾಗಾಗಿಯೇ ಕನ್ನಡ ಚಿತ್ರಗಳ ಹಾಡುಗಳಿಗೆ ಹೆಚ್ಚು ಆಧ್ಯತೆ ನೀಡುತ್ತೇನೆ ಎಂದರು.
“ಕೊರಗಜ್ಜ” ಸಿನಿಮಾದ “ಗಾಳಿಗಂಧ” ಹಾಡನ್ನು ಶ್ರೇಯಾ ರವರ ಜೊತೆ ಅದರ ‘ಮೇಲ್ ವರ್ಷನ್’ ನನ್ನು ಸೋನು ನಿಗಮ್ ಮತ್ತು ಶಾನ್ ಹಾಡಲಿದ್ದಾರೆ. ಉಳಿದಂತೆ “ಪೋರ್ಕುಳಿ ಪೆರತದಲಿ” ಎನ್ನುವ ಹಾಡನ್ನು ಸುನಿಧಿ ಚೌಹಾನ್ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿದ್ದಾರೆ.
“ವಾಜೀ ಸವಾರಿಯಲಿ” ಮತ್ತು “ಜಾವಂದ ಕುಲದ.” ಎನ್ನುವ ಹಾಡುಗಳನ್ನು ಜಾವೆದ್ ಆಲಿ ಹಾಡಿದ್ದಾರೆ. “ತೌಳವ ದೇಶೇ…” ಎನ್ನುವ ಏಳು ನಿಮಿಷಗಳ ವಿಶೇಷವಾದ ಸಂಸ್ಕ್ರತ ಹಾಡು ಶಂಕರ್ ಮಹದೇವನ್ ಧ್ವನಿಯಲ್ಲಿ ಮೂಡಿಬರಲಿದೆ. ಮತ್ತೊಂದು ವಿಶಿಷ್ಟ ಹಾಡು “ತೆಲ್ಲಂಟಿ…ತೆಲ್ಲಂಟಿ…” ಹಾಡನ್ನು “ಪಿಕೆ”, “ಪದ್ಮಾವತ್” ಚಿತ್ರಗಳ ಉದಯೋನ್ಮುಖ ಹಿನ್ನೆಲೆ ಗಾಯಕ ಸ್ವರೂಪ್ ಖಾನ್ ಜೊತೆ ಮೈಕಲ್ ಜಾಕ್ಸನ್ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದ ದೇಶದ ಪ್ರಪ್ರಥಮ ಪಾಪ್ ಗಾಯಕಿ ಶರೋನ್ ಪ್ರಭಾಕರ್ ಹಾಡಿದ್ದಾರೆ.
ಇದರ ಜೊತೆ ಕನ್ನಡದ ಪ್ರತಿಭೆಗಳಾದ ರಮೇಶ್ ಚಂದ್ರ , ಪ್ರತಿಮಾ ಭಟ್ ಹಾಗೂ ಮಲಯಾಳಂ ಮತ್ತು ತಮಿಳಿನ ಖ್ಯಾತ ಗಾಯಕರಾದ ಸನ್ನಿಧಾನಂದನ್, ಅನಿಲ ರಾಜಿವ, ಕಾಂಜನ ಶ್ರೀರಾಂ, ವಿಜೇಶ್ ಗೋಪಾಲ್, ಸೌಮ್ಯ ರಾಮಕೃಷ್ಣನ್ ಕೂಡಾ ಹಾಡುಗಳನ್ನು ಹಾಡಿದ್ದಾರೆ. ದಕ್ಷಿಣದ ಖ್ಯಾತ ಗೋಪಿ ಸುಂದರ್ ರವರ ಕಂಪೋಸಿಂಗ್ ಗೆ ಸುಧೀರ್ ಅತ್ತಾವರ್ ಎಲ್ಲಾ ಹಾಡುಗಳನ್ನು ರಚಿಸಿರುತ್ತಾರೆ. ಚಿತ್ರದ ಆಡಿಯೋ ಲಾಂಚ್, ಫಸ್ಟ್ ಲುಕ್ ಹಾಗೂ ಟ್ರೇಲರ್ ಬಿಡುಗಡೆಯನ್ನು ವಿಭಿನ್ನ ರೀತಿಯಲ್ಲಿ ಮುಂದಿನ ತಿಂಗಳು ಅನಾವರಣ ಗೊಳಿಸಲು ಚಿತ್ರತಂಡ ಯೋಜನೆ ರೂಪಿಸಿತ್ತಿದೆ.