“ಕೋಟಿ” ಮನರಂಜನೆಗೆ ಕಿಚ್ಚ ಸುದೀಪ್ ಸಾಥ್.
ಕೋಟಿ ಸಿನಿಮಾದ ಪ್ರೀರಿಲೀಸ್ ವಿಶೇಷ ಟೀವಿ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ‘ಕೋಟಿ ಮನರಂಜನೆ’ ಎಂದು ಕರೆಯಲಾಗಿದ್ದು, ಕಾರ್ಯಕ್ರಮದಲ್ಲಿ ಸಿನಿಮಾದ ತಾರಾಬಳಗವೇ ತುಂಬಿತ್ತು. ಕೋಟಿಯ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ ಕುಶಾಲ್ ಮತ್ತು ಹಿರಿಯ ತಾರೆಗಳಾದ ತಾರಾ ಅನುರಾಧ, ರಂಗಾಯಣ ರಘು, ರಮೇಶ್ ಇಂದಿರಾ, ಸರ್ದಾರ್ ಸತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅದ್ಭುತ ಲೈಟಿಂಗ್ ಮತ್ತು ಕೋರಿಯಾಗ್ರಫಿಯ ಮೂಲಕ ಆದ ಕಿಚ್ಚನ ಎಂಟ್ರಿಯ ನೋಡಿ ಜನರ ಕೇಕೆ ಮತ್ತು ಶಿಳ್ಳೆಗಳ ಸದ್ದು ಮುಗಿಲ ಮುಟ್ಟಿತ್ತು. ಸುದೀಪ್ ಅವರು ಸುಮಾರು ಒಂದು ತಾಸಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು ನೆರೆದಿದ್ದ ಜನರನ್ನು ಹಾಸ್ಯಭರಿತ ಮಾತುಗಳಿಂದ ರಂಜಿಸಿದರು. ನಿರೂಪಕ ಅಕುಲ್ ಬಾಲಾಜಿ ಮತ್ತು ಸುದೀಪ್ ಮಾತುಕತೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುವಂತಿತ್ತು. ಸುದೀಪ್ ಕೋಟಿ ಚಿತ್ರದ ಹೊಸ ಪೋಸ್ಟರನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.
ಕೋಟಿಯ ನಾಯಕಿ ‘ಮೋಕ್ಷಾ’ ಅವರ ಡಾನ್ಸ್ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಕೋಟಿಯ ಇತರ ನಟ ನಟಿಯರಿಂದ ವಿಶೇಷ ಡಾನ್ಸ್ ಕಾರ್ಯಕ್ರಮಗಳು ಮತ್ತು ಗಿಚ್ಚಿ ಗಿಲಿಗಿಲಿ ತಂಡದಿಂದ ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಕಾರ್ಯಕ್ರಮ ನಡೆದವು.
ಧನಂಜಯ ಅವರಿಗಾಗಿ ಮಕ್ಕಳು ಮಾಡಿದ ವಿಶೇಷ ಡಾನ್ಸ್ ಕಾರ್ಯಕ್ರಮ ‘ಕೋಟಿ ಮನರಂಜನೆ’ಯ ಪ್ರಮುಖ ಆಕರ್ಷಣೆಗಳಲ್ಲೊಂದಾಗಿತ್ತು. ಧನಂಜಯ ಅವರು ಮಕ್ಕಳ ನೃತ್ಯವನ್ನು ಮೆಚ್ಚಿ ವೇದಿಕೆಯ ಮೇಲೆ ಬಂದು ಮಕ್ಕಳ ಜತೆ ಸೆಲ್ಫಿ ತೆಗೆದುಕೊಂಡರು.
ಈ ಚಿತ್ರದ ರಾಗ ಸಂಯೋಜಕರಾದ ವಾಸುಕಿ ವೈಭವ್ ‘ಕೋಟಿ’ ಸಿನಿಮಾದ ಹಾಡುಗಳನ್ನು ಹಾಡಿದರು. ಕೋಟಿಯ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ “ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ” ಎಂದು ಹೇಳಿದರು.
ದಶಕಗಳ ಕಾಲ ಕಲರ್ಸ್ ಕನ್ನಡ ಚಾನೆಲನ್ನು ಮುನ್ನಡೆಸಿದ್ದ ಪರಮ್ ಅವರಿಗೆ ಚಾನೆಲ್ಲಿನ ಸಿಬ್ಬಂದಿ ವಿಶೇಷ ವಿಡಿಯೋ ಮೂಲಕ ಶುಭ ಕೋರಿದರು. ವಿಡಿಯೋದಲ್ಲಿ ತಮ್ಮ ಹಳ್ಳಿಮನೆಯ ಚಿತ್ರ ನೋಡಿದ ಪರಮ್ ಭಾವುಕರಾದರು. ಕಲರ್ಸ್ ಕನ್ನಡ ಮೂಲಕ ಯಶಸ್ಸು ಪಡೆದ ಚಂದನ್ ಶೆಟ್ಟಿ, ನಿವೇದಿತಾ ಗೌಡ, ವಿಜಯ್ ಸೂರ್ಯ, ರಕ್ಷಿತ್, ಶೈನ್ ಶೆಟ್ಟಿ, ಮಯೂರಿ, ಅಂಕಿತಾ ಅಮರ್, ನೇಹಾ ಗೌಡ ಹಾಗೂ ಅಕುಲ್ ಬಾಲಾಜಿ ತಮ್ಮ ಮೆಂಟರ್ ‘ಪರಮ್’ ಅವರ ಹೊಸ ಪಯಣಕ್ಕೆ ಶುಭ ಹಾರೈಸಿದರು.
ಈಗಾಗಲೇ ಪೋಸ್ಟರ್, ಟೀಸರ್, ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ‘ಕೋಟಿ’ ಕನ್ನಡ ಇಂಡಸ್ಟ್ರಿಯ ದ್ವಿತೀಯಾರ್ಧದ ಯಶಸ್ಸಿಗೆ ಮೊದಲ ಗೆಲುವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ‘ಕೋಟಿ ಮನರಂಜನೆ’ ಕಾರ್ಯಕ್ರಮವು ಇದೇ ಜೂನ್ 2ರಂದು ಸಂಜೆ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜಿಯೋ ಸ್ಟುಡಿಯೋಸ್ ನಿರ್ಮಾಣದ ‘ಕೋಟಿ’ ಸಿನಿಮಾ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.