ವಿಯೆಟ್ನಾಂನಲ್ಲಿ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್ ಮುಕ್ತಾಯ
ಕನ್ನಡದ ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಚಿತ್ರೀಕರಣ ವಿಯೆಟ್ನಾಂ ನಲ್ಲಿ ಮುಕ್ತಾಯವಾಗಿದೆ. ಅಲ್ಲಿ ಚಿತ್ರದ ಎರಡು ಹಾಡುಗಳು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ನಡೆದಿದೆ. ಇದರೊಂದಿಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ.
ಚಿತ್ರದಲ್ಲಿ ಐದು ಸುಮಧುರ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಕೃಷ್ಣಂ ಪ್ರಣಯ ಸಖಿ” ಚಿತ್ರಕ್ಕಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು.
“ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ