“ಕುಡ್ಲ ನಮ್ದು ಊರು” ಚಿತ್ರದ ಟ್ರೇಲರ್ ಹಾಗೂ ಹಾಡುಗಳು ರಿಲೀಸ್
ಚಂದನವನಕ್ಕೆ ಮತ್ತೊಂದು ಯುವ ಪಡೆಗಳ ಬಳಗ ಕಡಲ ಕಿನಾರೆಯಿಂದ ಬಂದು ಬೆಳ್ಳಿ ಪರದೆ ಮೇಲೆ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ.”ಕುಡ್ಲ ನಮ್ದು ಊರು” ಎಂಬ ಶೀರ್ಷಿಕೆಯೊಂದಿಗೆ ಸಿದ್ಧವಾಗಿರುವ ಈ ಚಿತ್ರ ಕರಾವಳಿ ಸೊಗಡಿನ ಕಥೆ ಒಳಗೊಂಡಿದ್ದು , ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ.
ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್. ಕೆ. ವಿಶ್ವನಾಥ್ ಹಾಗೂ ನಟ ಚೇತನ್ ರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿ ‘ಕುಡ್ಲ ನಮ್ದು ಊರು’ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಯುವ ಪ್ರತಿಭೆ ನಟ , ನಿರ್ದೇಶಕ ದುರ್ಗಾ ಪ್ರಸಾದ್ (ಅಲೋಕ್)ಗೆ ಬಾಲ್ಯದಿಂದಲೂ ಸಿನಿಮಾ ಬಗ್ಗೆ ಅಪಾರ ಆಸಕ್ತಿ, ಹಾಗೆಯೇ ಕಿಚ್ಚ ಸುದೀಪ್ ರವರ ಅಪ್ಪಟ ಅಭಿಮಾನಿ. ಇನ್ನು ಇವರ ತಾಯಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿ. ಮನೆಯಲ್ಲಿ ಈ ಸ್ಟಾರ್ ನಟರ ಪೋಸ್ಟರ್ ಗಳೇ ಗೋಡೆ ಮೇಲೆ ರಾರಾಜಿಸುತ್ತಿತ್ತು ಎನ್ನುವ ಈ ಪ್ರತಿಭೆ ಸ್ವತಂತ್ರವಾಗಿ ಒಂದು ಚಿತ್ರವನ್ನು ನಿರ್ಮಿಸಬೇಕೆಂಬ ಮಹಾದಾಸೆ ಜೊತೆಗೆ ನಟಿಸಿ ನಿರ್ದೇಶನ ಮಾಡಿರುವ ಚಿತ್ರ ‘ಕುಡ್ಲ ನಮ್ದು ಊರು’.
ಇನ್ನು ನಿರ್ದೇಶಕ ದುರ್ಗಾಪ್ರಸಾದ್ ಮಾತನಾಡುತ್ತಾ ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಅಪ್ಪಟ ದಕ್ಷಿಣ ಕನ್ನಡದ ಕರಾವಳಿ ಸೊಗಡಿನ ಸಿನಿಮಾ. ಇಡೀ ಕರಾವಳಿ ಮತ್ತು ಅಲ್ಲಿನ ಜನ – ಜೀವನವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು, ಕರಾವಳಿ ಭಾಗದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುತ್ತಿದ್ದೇವೆ.
1990ರ ದಶಕದ ಹುಡುಗರ ಬಾಲ್ಯ , ಅವರ ಅನುಭವವನ್ನು ಈ ಸಿನಿಮಾ ನೆನಪಿಸುತ್ತದೆ. ಬಹುತೇಕ ಕರಾವಳಿ ಭಾಗದ ಸ್ಥಳೀಯ ಕಲಾವಿದರೇ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಕರಾವಳಿಯ ಕಥೆಯಾದರೂ, ಕರ್ನಾಟಕದ ಎಲ್ಲಾ ಭಾಗದ ಜನರಿಗೂ ತಲುಪುವಂತಿದೆ. ಹಾಗಾಗಿ ಈ ಸಿನಿಮಾವನ್ನು ಕನ್ನಡ ಭಾಷೆಯಲ್ಲೇ ನಿರ್ಮಿಸಿದ್ದೇವೆ. ಪ್ರೀತಿ, ಸ್ನೇಹ, ಆಕ್ಷನ್, ಕಾಮಿಡಿ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳು ಒಳಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು , ಜನವರಿ ಯಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದು ಮಾಹಿತಿಯನ್ನು ಹಂಚಿಕೊಂಡರು.
ಇನ್ನೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಮತ್ತೊಬ್ಬ ನಟ ರಮೇಶ್ , ನಟಿ ಶ್ರೇಯಾ ಶೆಟ್ಟಿ ಸೇರಿದಂತೆ ಚಿತ್ರದ ತಾಂತ್ರಿಕ ವರ್ಗದವರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೃತಾರ್ಥ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಯುವ ಪ್ರತಿಭೆ ದುರ್ಗಾಪ್ರಸಾದ್ (ಅಲೋಕ್) ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಉಳಿದಂತೆ ಪ್ರಕಾಶ್ ತುಮ್ಮಿನಾಡು , ಸ್ವರಾಜ್ ಶೆಟ್ಟಿ , ಅನಿಕಾ ಶೆಟ್ಟಿ , ನಯನ ಸಾಲಿಯಾನ್, ನಿರೀಕ್ಷಾ ಶೆಟ್ಟಿ , ದಿಲೀಪ್ ಕಾರ್ಕಳ, ಪ್ರಜ್ವಲ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಮೂರು ಹಾಡುಗಳಿದ್ದು , ನಿತಿನ್ ಶಿವರಾಮ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾಕ್ಕೆ ಶ್ರೀಶಾಸ್ತ ಹಿನ್ನೆಲೆ ಸಂಗೀತ , ಮಯೂರ್ ಆರ್. ಶೆಟ್ಟಿ ಛಾಯಾಗ್ರಹಣ , ನಿಶಿತ್ ಪೂಜಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಕ್ಷಿತ್ ಎಸ್. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ಸಂಯೋಜಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಮಾಡುವ ಮೂಲಕ ‘ಕುಡ್ಲ ನಮ್ದು ಊರು’ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ಚಿತ್ರ ತಂಡ ಅಂದುಕೊಂಡಂತೆ ಎಲ್ಲಾ ನಡೆಯುತ್ತಿದ್ದು , ಸದ್ಯದಲ್ಲೇ ಚಿತ್ರವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿಕೊಳ್ಳುತ್ತಿದೆ.