“ಲೇಡಿಸ್ ಬಾರ್” ಚಿತ್ರದ ಟ್ರೇಲರ್ ಬಿಡುಗಡೆ.
ಡಿ.ಎಂ.ಸಿ. ಪ್ರೊಡಕ್ಷನ್ಸ್ ಮೂಲಕ ಟಿ.ಎಂ.ಸೋಮರಾಜು ಅವರು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಲೇಡಿಸ್‌ಬಾರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಟ ಧರ್ಮ ಕೀರ್ತಿರಾಜ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಟ್ರೇಲರ್ ಬಿಡುಗಡೆ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಾಗೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಧರ್ಮ ಕೀರ್ತಿರಾಜ್, ಟ್ರೇಲರ್ ಚೆನ್ನಾಗಿದೆ. ನಿರ್ದೇಶಕ ಮುತ್ತು, ನಮ್ಮ “ರೋನಿ” ಸಿನಿಮಾಗೆ ಅಸೋಸಿಯೇಟ್ ಆಗಿದ್ದರು, ಈಗ ಸಮಾಜಕ್ಕೆ ಸಂದೇಶ ಕೊಡುವ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಎಂದರು.
ನಿರ್ದೇಶಕ ಮುತ್ತು.ಎ.ಎನ್ ಮಾತನಾಡಿ, ಚಿತ್ರದಲ್ಲಿ ಅದ್ಭುತವಾದ ಕಥೆಯಿದೆ, ಕಥೆಯೇ ನಮ್ಮ ಚಿತ್ರದ ಹೀರೋ. ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಈಗಾಗಲೇ ಜನಪ್ರಿಯವಾಗಿದೆ. ಮನೋರಂಜನೆಯ ಮಹಾಪೂರವೇ ನಮ್ಮ ಚಿತ್ರದಲ್ಲಿದೆ. ಹೆಣ್ಣುಮಕ್ಕಳು ಬಾರ್‌ಗೆ ಹೋದರೆ ಏನೇನಾಗುತ್ತದೆ? ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಹಾಗಂತ “ಲೇಡಿಸ್‌ಬಾರ್” ಚಿತ್ರದಲ್ಲಿ ಬರೀ ಕುಡಿತವನ್ನಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವಿದೆ ಎಂದರು.
ಹೊಸಬರು ಸಿನಿಮಾ ಮಾಡಿದಾಗ ನಾವೆಲ್ಲ ಸಪೋರ್ಟ್ ಮಾಡಬೇಕು. ಈ ಟ್ರೇಲರ್ ನೋಡಿದಾಗ ಏನೋ ವಿಶೇಷತೆಯಿದೆ ಎನ್ನುವುದು ಕಾಣುತ್ತದೆ. ನಿಮ್ಮ ಕೆಲಸದಲ್ಲಿ ಶ್ರದ್ದೆ ಪ್ರಾಮಾಣಿಕತೆ ಇದ್ದರೆ ಖಂಡಿತ ಗೆಲುವು ಸಿಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹೇಳಿದರು.
ನಂತರ ನಿರ್ಮಾಪಕ ಸೋಮರಾಜ್ ಮಾತನಾಡಿ ನಮ್ಮ ಚಿತ್ರದ ಕಥೆ ತುಂಬಾ ವಿಭಿನ್ನವಾಗಿದೆ. ನಮ್ಮ ಸಮಾಜದಲ್ಲಿ ಈಗ ಯಾವ ವ್ಯವಸ್ಥೆ ಇದೆ ಎನ್ನುವುದನ್ನು ಸಿನಿಮಾ ಮೂಲಕ ತೋರಿಸಿದಾಗ ಜನರಿಗದು ಸುಲಭವಾಗಿ ಅರ್ಥವಾಗುತ್ತದೆ ಎಂದರು.
ನಟ ಗಣೇಶ್‌ರಾವ್ ಕೇಸರಕರ್ ಮಾತನಾಡಿ ಬಾರ್‌ನಿಂದಾಗುವ ಅನುಕೂಲ, ಅನಾನುಕೂಲ ಏನೆಂದು ಈ ಚಿತ್ರದಲ್ಲಿ ತೋರಿಸಿದ್ದಾರೆ, ನಾನು ಪೊಲೀಸ್ ಆಗಿ ಕಾಣಿಸಿಕೊಂಡಿದ್ದೇನೆ ಎಂದರು. ನಾನು ಶಿಳ್ಳೆ ಎಂಬ ಪಾತ್ರ ಮಾಡಿದ್ದೇನೆ ಎಂದು ನಟ ಹರೀಶ್ ರಾಜ್ ತಿಳಿಸಿದರು. ನಾನು ಈವರೆಗೂ ಹೆಚ್ಚು ಚಿತ್ರಗಳಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ ಎಂದು ನಟಿ ಮೀನಾಕ್ಷಿ ಹೇಳಿದರು.
ನಿರ್ಮಾಪಕ ಟಿ.ಎಂ.ಸೋಮರಾಜು, ಹರೀಶ್‌ರಾಜ್, ಶಿವಾನಿ, ಮೀನಾಕ್ಷಿ, ಡಾ||ರಾಜಶೇಖರ್ ಎಸ್ ಎನ್, ಗಣೇಶ್‌ರಾವ್, ಆರಾಧ್ಯ, ಪ್ರೇರಣಾ, ಚೈತ್ರ, ಎಸ್ಕಾರ್ಟ್ ಶ್ರೀನಿವಾಸ್, ಕೆಂಪೇಗೌಡ ಮುಂತಾದವರು “ಲೇಡೀಸ್ ಬಾರ್” ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಹರ್ಷ ಕಾಗೋಡ್ ಅವರ ಸಂಗೀತ ನಿರ್ದೇಶನ, ವೀನಸ್‌ಮೂರ್ತಿ ಅವರ ಛಾಯಾಗ್ರಹಣ ಹಾಗೂ ಜಗ್ಗು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಡಾ||ಸುಭಾಷಿಣಿ ಆರ್.ಎಸ್ ಈ ಚಿತ್ರದ ಸಹ ನಿರ್ಮಾಪಕರು.