Cini NewsMovie ReviewSandalwood

ಸಂಪ್ರದಾಯ , ಆಚಾರದ ಸುಳಿಯಲ್ಲಿ ಲಂಗೋಟಿ ಪರದಾಟ..(ಚಿತ್ರವಿಮರ್ಶೆ -ರೇಟಿಂಗ್ : 2.5/5)

ರೇಟಿಂಗ್ : 2.5/5

ಚಿತ್ರ : ಲಂಗೋಟಿ ಮ್ಯಾನ್
ನಿರ್ದೇಶಕಿ : ಸಂಜೋತಾ
ನಿರ್ಮಾಪಕಿ : ಗೀತಾ ಪಿ.ಬಿ
ಸಂಗೀತ : ಕೆ .ಸುಮೇದ್
ಛಾಯಾಗ್ರಹಣ : ರವಿವರ್ಮ
ತಾರಾಗಣ : ಆಕಾಶ್ ರಾಂಬೋ, ಸ್ನೇಹ ಖುಷಿ, ಧೀರೇಂದ್ರ , ಸಂಹಿತ ವಿನ್ಯಾ, ಹುಲಿ ಕಾರ್ತಿಕ್, ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್, ಗಿಲ್ಲಿ ನಟ, ಹಾಗೂ ಮುಂತಾದವರು…

ಪೂರ್ವಿಕರು ನಡೆಸಿಕೊಂಡು ಬಂದ ಆಚಾರ , ವಿಚಾರ ಸಂಪ್ರದಾಯಗಳು ನಿರಂತರವಾಗಿ ಸಾಗುತ್ತಾ ಬರ್ತಾನೆ ಇದೆ. ಆದರೆ ಕಾಲಕ್ಕೆ ತಕ್ಕಂತೆ ವೇಷ , ಭೂಷಣ ಹಾಕೋದು ಸರ್ವೇಸಾಮಾನ್ಯ ವಾಗಿದೆ. ಇದರ ಹೊರತಾಗಿಯೂ ಗಂಡಸು ಧರಿಸುವ (ಕೌಪೀನ) ಲಂಗೋಟಿಯ ಕಟ್ಟುಪಾಡುಗಳಿಗೆ ಜೋತುಬಿದ್ದವರ ಬದುಕಿನಲ್ಲಿ ಎದುರಾಗುವ ಒಂದಷ್ಟು ಗೊಂದಲ , ಸಮಸ್ಯೆ , ನೋವು, ಅಪಮಾನ ಜೊತೆಗೆ ತನ್ನದಲ್ಲದ ತಪ್ಪಿನ ಇಕ್ಕಟ್ಟಿಗೆ ಸಿಲುಕಿ , ಹೇಗೆ ಪರದಾಡುತ್ತಾನೆ ಎಂಬುವ ವಿಚಾರವನ್ನು ತೋರಿಸುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಲಂಗೋಟಿ ಮ್ಯಾನ್”.

ಮಡಿಯೇ ಜೀವನ , ಆಚಾರವೇ ನಮ್ಮ ಪದ್ಧತಿ ಎನ್ನುತ್ತಾ ಬದುಕುವ ಮನೆಯ ಹಿರಿಯ ಜೀವ ತಾತ ( ಧೀರೇಂದ್ರ). ಪುರೋಹಿತ್ಯ ಕೆಲಸದಲ್ಲೇ ಬದುಕು ನಡೆಸುತ್ತಾ , ಮನೆಯವರನ್ನೆಲ್ಲಾ ಶಿಸ್ತು ಬದ್ಧದಲ್ಲಿ ಸಾಕುತ್ತಾರೆ. ಇದೇ ಸಮಯದಲ್ಲಿ ಮನೆಯಲ್ಲಿ ಮುದ್ದಾದ ಮೊಮ್ಮಗುವಿನ ನಾಮಕರಣದ ಶುಭ ಸಂಭ್ರಮ. ಚಿನ್ನ , ಬೆಳ್ಳಿ ಉಡುಗೊರೆ ನಡುವೆ ಮಗುವಿಗೆ ಡೈಪರ್ ಹಾಕಲು ಮುಂದಾಗುತ್ತಿದ್ದಂತೆ ಗದ್ದಲ ಶುರುವಾಗುತ್ತದೆ.

ಕೌಪೀನ (ಲಂಗೋಟಿಯ) ಮಹತ್ವ , ಅದರ ಹಿಂದಿರುವ ವಿಚಾರಗಳ ಕುರಿತು ವಾದ ವಿವಾದ ನಡೆಯುತ್ತದೆ. ತಾತ ನಾನು ಹೇಳಿದ್ದೆ ಸರಿ ಎನ್ನುತ್ತಲೇ , ಜೀವನ ಸಾಗಿ ಮೊಮ್ಮಗ ಬೆಳೆದು ದೊಡ್ಡವನಾಗುತ್ತಾನೆ. ತೀರ್ಥ (ಆಕಾಶ್ ರಾಂಬೊ) ತಾಯಿಯ ಬಳಿಯೂ ತನ್ನ ಕಷ್ಟವನ್ನು ಹೇಳಲಾಗದೆ, ತಾತನ ವಿರುದ್ಧವು ವಾದಿಸಲಾಗದೆ ಬಾಲ್ಯದಿಂದಲೂ ಲಂಗೋಟಿಯಿಂದ ಅನುಭವಿಸಿದ ನೋವು , ಅಪಮಾನವನ್ನ ಸಹಿಸುತ್ತಾ ಜೀವನ ಸಾಗಿಸುತ್ತಾನೆ.

ಗೆಳೆಯರ ಜೊತೆಗೂ ಸೇರಲಾಗದೆ, ಸ್ವತಂತ್ರವಾಗಿ ಬದುಕಲು ಆಗದೆ, ತನ್ನ ಆಸೆ , ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಪರದಾಡುತ್ತಿರುತ್ತಾನೆ. ಜೀವನದಲ್ಲಿ ಒಮ್ಮೆಯಾದರೂ ಬ್ರಾಂಡೆಡ್ ಅಂಡರ್ವೇರ್ ಧರಿಸುವ ಆಸೆ ತೀರ್ಥನದು. ಇದರ ನಡುವೆ ಮುದ್ದಾದ ಹುಡುಗಿ ನಭ (ಸ್ನೇಹ ಖುಷಿ) ಳನ್ನ ನೋಡುತ್ತಾನೆ. ತಾತನ ಜೊತೆ ಪೂಜೆ , ಹೋಮ ಕಾರ್ಯಕ್ರಮಕ್ಕೆ ಹೋಗುವ ನೆಪದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪುತ್ರಿ ನಭ ಪ್ರೀತಿ ಪಡೆಯಲು ಮುಂದಾಗುತ್ತಾನೆ.

ಇವರಿಬ್ಬರ ಪ್ರೀತಿ , ಪ್ರಣಯ ಕದ್ದು ಮುಚ್ಚಿ ಸಾಗುತ್ತಿರುತ್ತದೆ. ಒಮ್ಮೆ ಸ್ಟಾರ್ ಹೋಟೆಲ್ ಪೂಜಾ ಕಾರ್ಯಕ್ರಮಕ್ಕೆ ತಾತನ ಜೊತೆ ಹೋಗುವ ತೀರ್ಥ ಅರ್ಜೆಂಟಾಗಿ ಟಾಯ್ಲೆಟ್ ಗೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ. ಅಲ್ಲಿ ತನ್ನ ಇಷ್ಟವಾದ ಬ್ರಾಂಡೆಡ್ ಅಂಡರ್ವೇರ್ ಕಂಡು ಅದನ್ನು ಧರಿಸುವ ಸಂದರ್ಭದಲ್ಲಿ ಮತ್ತೊಂದು ರೋಚಕ ದೃಶ್ಯ ನಡೆಯುತ್ತಿರುತ್ತದೆ.

ಇದೆಲ್ಲದರ ನಡುವೆ ಹೇಗೋ ಹೊರಬಂದು ಮನೆ ಸೇರುತ್ತಾನೆ. ಮರುದಿನ ಹೋಟೆಲ್ ಮಾಲೀಕನ ಅಳಿಯ ನಾಪತ್ತೆ , ಮಗಳ ಬದುಕು ಎಡವಟ್ಟು , ಇದೆಲ್ಲವನ್ನ ಕಂಡುಹಿಡಿಯಲು ಬರುವ ಪೊಲೀಸ್ ಇನ್ಸ್ಪೆಕ್ಟರ್ ಸಮುದ್ರ (ಸಂಹಿತಾ ವಿನ್ಯಾ) ಹಾಗೂ ಅವರ ತಂಡಕ್ಕೆ ಸಿಗುವ ಒಂದು ಸುಳಿವು ಅಂಡರ್ವೇರ್. ಈ ಸಾಕ್ಷಿ ಹಿಡಿದು ಮುಂದೆ ಸಾಗುವ ಕಳ್ಳ ಪೊಲೀಸ ಆಟ ರೋಚಕ ತಿರುವನ ಪಡೆಯುತ್ತಾ ಸಾಗುತ್ತದೆ.

ಕಿಡ್ನಾಪ್ ಮಾಡಿದ್ದು ಯಾರು…
ಅಂಡರ್ವೇರ್ ಯಾರದ್ದು…
ತೀರ್ಥನ ಪಾಡು ಏನು..
ಲಂಗೋಟಿ ಬೇಕಾ.. ಬೇಡ್ವಾ..
ಕ್ಲೈಮಾಕ್ಸ್ ಉತ್ತರ ಏನು…
ಇದೆಲ್ಲದಕ್ಕೂ ಉತ್ತರ ಲಂಗೋಟಿ ಮ್ಯಾನ್ ಚಿತ್ರ ನೋಡಬೇಕು.

ನಿರ್ದೇಶಕಿ ಸಂಜೋತಾ ಆಯ್ಕೆ ಮಾಡಿಕೊಂಡಿರುವ ಕಥ ವಸ್ತು ಭಿನ್ನವಾಗಿದೆ. ಲಂಗೋಟಿಯ ಮಹತ್ವದ ಜೊತೆಗೆ ಪ್ರಸ್ತುತ ಕಾಲಘಟ್ಟಕ್ಕೆ ಒಳ ಉಡುಪುಗಳ ವಿಚಾರವಾಗಿ ಬಹಳ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಸಂಪ್ರದಾಯಸ್ಥ ಆಚಾರ , ವಿಚಾರ ವಿಷಯವಾಗಿ ಕೆಲವೊಂದಷ್ಟು ಮನೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ನೋವಿನ ಜೊತೆಗೆ ಬದುಕಿಗೆ ಏನು ಅಗತ್ಯ ಎಂಬುದನ್ನು ತೆರೆದಿಟ್ಟಿದ್ದಾರೆ.

ಅದೇ ರೀತಿ ಕೆಮಿಕಲ್ಸ್ ಬಟ್ಟೆ ಎಷ್ಟು ದೇಹಕ್ಕೆ ಹಾನಿಕರ ಎಂಬುದನ್ನ ಹೇಳಿರುವುದು ಕೂಡ ವಿಶೇಷ. ಆದರೆ ಚಿತ್ರ ಇದ್ದಲ್ಲೇ ಗಿರಿಕಿ ಹೊಡೆದಂತಿದೆ. ಇನ್ನು ಚಿತ್ರದ ಓಟಕ್ಕೆ ಬಹಳಷ್ಟು ಟ್ರಿಮ್ ಅಗತ್ಯ ಅನಿಸುತ್ತದೆ. ಇಂತಹ ಚಿತ್ರವನ್ನು ಮಹಿಳಾ ನಿರ್ದೇಶಕಿ ಜೊತೆ ಮಹಿಳಾ ನಿರ್ಮಾಪಕಿ ಚಿತ್ರವನ್ನ ನಿರ್ಮಿಸಿರುವುದು ವಿಶೇಷ. ಇನ್ನು ತಾಂತ್ರಿಕವಾಗಿ ಸಂಗೀತ , ಛಾಯಾಗ್ರಹಣ , ಸಂಕಲನ ಕೆಲಸಗಳು ಗಮನ ಸೆಳೆಯುವಂತೆ ಮೂಡಿಬಂದಿದೆ.

ಇನ್ನು ನಾಯಕನಾಗಿ ಅಭಿನಯಿಸಿರುವ ಆಕಾಶ್ ರಾಂಬೊ ಲಂಗೋಟಿ ಧರಿಸಿಕೊಳ್ಳುವುದರ ಜೊತೆಗೂ ಬಹಳ ಲವಲವಿಕೆಯಿಂದ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉತ್ತಮ ಪ್ರತಿಭೆ ಕನ್ನಡಕ್ಕೆ ಸಿಕ್ಕಂತಾಗಿದೆ. ಇನ್ನು ತಾತನಾಗಿ ಧೀರೇಂದ್ರ ಕೂಡ ಅದ್ಭುತವಾಗಿ ನಟಿಸಿದ್ದಾರೆ. ನಾಯಕಿಯಾಗಿ ಸ್ನೇಹ ಖುಷಿ ಕೂಡ ಮುದ್ದು ಮುದ್ದಾಗಿ ತಮಗೆ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಸಂಹಿತಾ ವಿನ್ಯಾ, ನಾಯಕನ ತಾಯಿಯ ಪಾತ್ರಧಾರಿ ಸೇರಿದಂತೆ ಸಾಯಿ ಪವನ್ ಕುಮಾರ್ , ಹುಲಿ ಕಾರ್ತಿಕ್ , ಗಿಲ್ಲಿ ನಟ ತಮ್ಮ ತಮ್ಮ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ಒಮ್ಮೆ ನೋಡಬಹುದು.

error: Content is protected !!