ಜಾತಿ , ಧರ್ಮ, ನಂಬಿಕೆಯ ಸುಳಿಯಲ್ಲಿ ಲವ್ (ಚಿತ್ರವಿಮರ್ಶೆ-ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಲವ್
ನಿರ್ದೇಶಕ : ಮಹೇಶ.ಸಿ. ಅಮ್ಮಳ್ಳಿದೊಡ್ಡಿ
ನಿರ್ಮಾಪಕ : ದಿವಾಕರ್. ಎಸ್
ಸಂಗೀತ : ಸಾಯಿ ಕಿರಣ್
ಛಾಯಾಗ್ರಹಕ : ಸಿದ್ದಾರ್ಥ್
ತಾರಾಗಣ : ಪ್ರಜಯ್ ಜಯರಾಮ್, ವೃಷ ಪಾಟೀಲ, ಪ್ರಭಾಕರ್ ಕುಂದರ್, ಸತೀಶ್ ಕಾಂತಾರ, ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ರಜತ್ ಶೆಟ್ಟಿ ಹಾಗೂ ಮುಂತಾದವರು…
ಸಾಮಾನ್ಯವಾಗಿ ಬಹುತೇಕರ ಬದುಕಿನಲ್ಲಿ ಪ್ರೀತಿ , ಪ್ರೇಮ , ಜಾತಿ , ಧರ್ಮ, ಸಂಬಂಧಗಳ ವಿಚಾರವಾಗಿ ಒಂದಷ್ಟು ಘಟನೆಗಳು ನಡೆದೇ ಇರುತ್ತದೆ. ಅಂತಹದ್ದೇ ಒಂದಿಷ್ಟು ವಿಚಾರಗಳನ್ನು ಒಳಗೊಂಡಂತಹ ಹಿಂದೂ ಹಾಗೂ ಮುಸ್ಲಿಂ ಹುಡುಗ ಹುಡುಗಿಯ ಪ್ರೇಮ ಪ್ರಕರಣ, ಜಾತಿ, ಧರ್ಮಗಳ ಕಿಚ್ಚು , ವೈಮನಸ್ಯ , ಸಂಬಂಧಗಳಲ್ಲಿ ಎದುರಾಗುವ ನಂಬಿಕೆ ದ್ರೋಹ , ಕೊಲೆಗೈಯುವ ಮನಸ್ಥಿತಿ , ಅಪಹರಣದ ಹಿಂದೆ ಬೀಳುವ ಪೊಲೀಸರ ಹುಡುಕಾಟ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗಿ ಈ ವಾರ ಬೆಳ್ಳಿ ಪರದೆ ಮೇಲೆ ಬಂದಿರುವಂತಹ ಚಿತ್ರ “ಲವ್”.
ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿರುವ ನಾಯಕ ಸ್ವಸ್ತಿಕ್ ( ಪ್ರಜಯ್ ಜಯರಾಮ್ ) ಪರ್ಸನಲ್ ಕೆಲಸದ ನಿಮಿತ್ತ ಊರಿಗೆ ಬಂದಿರುತ್ತಾನೆ. ಮನೆಯಲ್ಲೂ ಕೂಡ ಸ್ವಸ್ತಿಕ್ ಗೆ ಹುಡುಗಿಯನ್ನ ಹುಡುಕುತ್ತಿರುತ್ತಾರೆ. ಮಾರ್ಗ ಮಧ್ಯ ಸುಂದರ ಹುಡುಗಿ ಜೋಯಾ( ವೃಷ ಪಾಟೀಲ)ಗೆ ಒಂದು ಸಹಾಯವನ್ನು ಮಾಡುತ್ತಾನೆ. ಆಗಾಗ ನಾನಾ ಕಾರಣಕ್ಕೆ ಇಬ್ಬರ ಭೇಟಿಯಾಗುತ್ತದೆ.
ಮುಸಲ್ಮಾನ್ ಹುಡುಗಿಯಾದ ಜೋಯಾ ಹಿಂದೂ ಹುಡುಗ ಸ್ವಸ್ತಿಕ್ ನನ್ನ ಇಷ್ಟಪಡುತ್ತಾಳೆ. ಇದು ಜಾತಿ ಸಂಘರ್ಷ ವಾಗುತ್ತದೆ ಬೇಡ ಎನ್ನುವ ಸ್ವಸ್ತಿಕ್ ಕ್ರಮೇಣ ಅವಳ ಮಾತಿಗೆ ಮನಸೋತು ಮದುವೆಯಾಗಲು ನಿರ್ಧರಿಸುತ್ತಾನೆ. ಎರಡು ಕುಟುಂಬಗಳು ಜಾತಿ , ಧರ್ಮಗಳ ವಿಚಾರವಾಗಿ ಗಲಾಟೆ , ಸಂಘರ್ಷಕ್ಕೆ ಮುಂದಾಗುತ್ತಾರೆ.
ಇದರ ನಡುವೆ ಪೊಲೀಸರ ಮುಂದಾಳತ್ವದಲ್ಲಿ ಇಬ್ಬರು ಪ್ರೇಮಿಗಳು ದೂರ ಉಳಿಯಲು ನಿರ್ಧರಿಸುತ್ತಾರೆ. ಈತ ಜೋಯಾ ಕುಟುಂಬದಲ್ಲಿ ಹುಡುಗನೊಬ್ಬ ನನ್ನ ನೋಡಿ ಮದುವೆ ನಿಶ್ಚಿತಾರ್ಥಕ್ಕೆ ಮುಂದಾಗುತ್ತಾರೆ. ಆದರೆ ಇಬ್ಬರು ಪ್ರೇಮಿಗಳ ಪ್ಲಾನ್ ಬೇರೆಯಾಗಿದ್ದು , ಕುಟುಂಬಗಳಿಂದ ದೂರ ಉಳಿದು ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ನೆಲೆಸುತ್ತಾರೆ.
ಇದೇ ಅಪಾರ್ಟ್ಮೆಂಟ್ ನಲ್ಲಿ ಸ್ವಸ್ತಿಕ್ ತನ್ನ ಆತ್ಮೀಯ ಮುಸ್ಲಿಂ ಗೆಳೆಯನ ಸಹಾಯ ಕೂಡ ಪಡೆದುಕೊಂಡಿರುತ್ತಾರೆ. ಆದರೆ ಮುಸಲ್ಮಾನ್ ತಂದೆ ತನ್ನ ಮಗಳ ತಲೆಕೆಡಿಸಿರುವ ಹುಡುಗನನ್ನು ಕೊಲ್ಲಲು ಸಂಚು ಹಾಕುತ್ತಾನೆ. ಈ ಸುಂದರ ಮುಸ್ಲಿಂ ಹುಡುಗಿಯ ಮೇಲೆ ಹಲವರ ಕಣ್ಣು ಕೂಡ ಬಿದ್ದಿರುತ್ತೆ. ನಾನಾ ಕಾರಣಗಳು ಎದುರಾಗಿ ಒಂದು ದಿನ ಜೋಯಾ ನಾಪತ್ತೆ ಆಗುತ್ತಾಳೆ.
ಮತ್ತೊಂದು ಟ್ರ್ಯಾಕ್ ನಲ್ಲಿ ವ್ಯಕ್ತಿ ಒಬ್ಬ ತನ್ನ ಪ್ರೀತಿಯ ಮಡದಿಯ ಅನೈತಿಕ ಸಂಬಂಧದಿಂದ ನೊಂದು ಕೊಲೆ ಮಾಡಿ ತಪ್ಪಿಸಿಕೊಂಡಿರುತ್ತಾನೆ. ಈ ಎರಡು ಟ್ರ್ಯಾಕಿಗೂ ಒಂದು ರೋಚಕ ತಿರುವು ಎದುರಾಗುತ್ತದೆ.
ನಾಯಕಿ ನಾಪತ್ತೆಯಾಗಿದ್ದು ಹೇಗೆ…
ನಾಯಕ ಕೊಲೆ ಆಗುತ್ತಾನ…
ಜಾತಿ ಸಂಘರ್ಷ ಎದುರಾಗುತ್ತಾ…
ಕೊಲೆಗಾರ ವ್ಯಕ್ತಿ ಯಾರು…
ಇಂತಹ ಹಲವು ಪ್ರಶ್ನೆಗೆ ಕ್ಲೈಮಾಕ್ಸ್ ಹೇಳುವ ಉತ್ತರ ಏನು ಎಂಬುದನ್ನು ಚಿತ್ರ ನೋಡಬೇಕು.
ಇನ್ನು ಈ ಚಿತ್ರವನ್ನು ನಿರ್ದೇಶನ ಮಾಡಿರುವ ಮಹೇಶ್. ಸಿ. ಅಮ್ಮಳ್ಳಿದೊಡ್ಡಿ ಬಹಳ ಸೂಕ್ಷ್ಮವಾಗಿ ಜಾತಿ, ಧರ್ಮದ ವಿಚಾರಗಳ ತಾರತಮ್ಯ , ಪ್ರೀತಿಗಿರುವ ಶಕ್ತಿ , ಬದುಕಿಗೆ ಯಾವುದು ಮುಖ್ಯ ಎಂಬುದನ್ನು ಅರ್ಥಪೂರ್ಣವಾಗಿ ತೆರೆಯ ಮೇಲೆ ತರುವುದರಲ್ಲಿ ಯಶಸ್ವಿಯಾಗಿದ್ದಾರೆ. ಗೆಳೆತನ , ಪ್ರೀತಿ , ಸಂಬಂಧಗಳ ಮೌಲ್ಯದ ಬಗ್ಗೆ ಕೂಡ ಬೆಳಕು ಚೆಲ್ಲಿದ್ದಾರೆ. ಆದರೆ ಚಿತ್ರದ ಓಟ ಇನ್ನಷ್ಟು ವೇಗ ಮಾಡಬಹುದಿತ್ತು. ಪ್ರೀತಿಯ ಸುತ್ತ ಹೆಚ್ಚು ಗಿರಿಕಿ ಹೊಡೆದಂತಿದೆ.
ಇನ್ನಷ್ಟು ಕಲರ್ ಫುಲ್ ಆಗಿ ಚಿತ್ರ ಮಾಡಬಹುದಿತ್ತು. ಆದರೆ ಆಯ್ಕೆ ಮಾಡಿಕೊಂಡಿರುವ ಕಥಾ ಸಾರಾಂಶ ಉತ್ತಮವಾಗಿದೆ. ಒಂದು ಉತ್ತಮ ಚಿತ್ರಕ್ಕಾಗಿ ನಿರ್ಮಾಪಕರು ಶ್ರಮ ಪಟ್ಟಿದ್ದಾರೆ. ಸಂಗೀತ ಕೂಡ ಗಮನ ಸೆಳೆದಿದ್ದು , ಛಾಯಾಗ್ರಹಾಕರ ಕೈಚಳಕವು ಕೂಡ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ನಾಯಕನಾಗಿ ಅಭಿನಯಿಸಿರುವ ಪ್ರಜಯ್ ಜಯರಾಮ್ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಶ್ರಮ ಪಟ್ಟಿದ್ದಾರೆ.
ಅದೇ ರೀತಿ ಮುಸ್ಲಿಂ ಹುಡುಗಿಯಾಗಿ ಅಭಿನಯಿಸಿರುವ ವೃಷ ಪಾಟೀಲ ಬಹಳ ಅಚ್ಚುಕಟ್ಟಾಗಿ ತನ್ನ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆಯುತ್ತಾರೆ. ಮುಂದೆ ಇನ್ನಷ್ಟು ಉತ್ತಮ ಅವಕಾಶ ಸಿಗುವ ಸಾಧ್ಯತೆ ಇದೆ. ಅದೇ ರೀತಿ ಉಳಿದ ಪಾತ್ರಗಳು ಕೂಡ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಯಾವುದೇ ಗೊಂದಲವಿಲ್ಲದೆ ಎಲ್ಲರೂ ಒಮ್ಮೆ ಲವ್ ಚಿತ್ರವನ್ನು ನೋಡಬಹುದು