ಕಾದಂಬರಿ ಆಧಾರಿತ ‘ಮಗ್ಗಿ ಪುಸ್ತಕ’ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿದ ಯದುವೀರ ಒಡೆಯರ್
ಅದೊಂದು ಕಾಲವಿತ್ತು..ಕಾದಂಬರಿ ಆಧಾರಿತ ಸಿನಿಮಾ ಎನ್ನುವಾಗಲೇ ಆ ಚಿತ್ರಕ್ಕೊಂದು ತೂಕ ಬಂದು ಬಿಡುತ್ತಿತ್ತು . ಅಷ್ಟೇ ಅಲ್ಲ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಸಂದೇಶಗಳಿರುತ್ತಿದ್ದವಲ್ಲದೆ, ಜೀವನಕ್ಕೆ ಹತ್ತಿರವಾಗಿದ್ದವು. ಈ ಮೂಲಕ ಓದುವ ಅಭ್ಯಾಸವಿಲ್ಲದವನನ್ನೂ ಕಾದಂಬರಿಗಳು ಮುಟ್ಟುತ್ತಿದ್ದವು. ಹೊಡೆಬಡಿ, ಪ್ರೀತಿಗೀತಿ ಇತ್ಯಾದಿ ವಿಚಾರಗಳು ಬಂದ ಮೇಲೆ ಕತೆಯೇ ಬೇಡ ಎನ್ನುವಂತಾಗಿದೆ. ಇಂತಹ ಕಾಲ ಘಟ್ಟದಲ್ಲಿ ಅಲ್ಲೊಂದು ಇಲ್ಲೊಂದು ಕಾದಂಬರಿ ಆಧಾರಿತ ಸಿನಿಮಾಗಳ ಬರ್ತಿವೆ. ಅಂತಹದ್ದೇ ಒಂದು ಪ್ರಯತ್ನ ಮಗ್ಗಿ ಪುಸ್ತಕ.
ಎಚ್.ಸಿ.ಹರೀಶ್ ಅವರ ಅವನಿ ಕಾದಂಬರಿ ಆಧರಿಸಿ ಮಗ್ಗಿ ಪುಸ್ತಕ ಎಂಬ ಸಿನಿಮಾವನ್ನು ದೃಶ್ಯ ರೂಪಕ್ಕಿಳಿಸಲಾಗಿದೆ. ದಸರಾ ಮಹೋತ್ಸವದ ಅಂಗವಾಗಿ ಈ ಚಿತ್ರದ ಫಸ್ಟ್ ಲುಕ್ ನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿನ್ನಾಸ್ವಾಮಿ ಫಿಲ್ಮಂ ಸಂಸ್ಥೆಯಡಿ ಚಿನ್ನಾಸ್ವಾಮಿ ಯತಿರಾಜ್ ತಮ್ಮ ಸ್ನೇಹಿತರ ಜೊತೆಗೂಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಅವನಿ ಕಾದಂಬರಿಕಾರರು ಆಗಿರುವ ಎಚ್ ಸಿ ಹರೀಶ್ ಅವರೇ ಮಗ್ಗಿ ಪುಸ್ತಕ ಸಿನಿಮಾಗೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಮಗ್ಗಿ ಪುಸ್ತಕ ಸಿನಿಮಾದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಸಜ್ಜು, ಶ್ರೀರಕ್ಷಾ,ಹಿರಿಯ ಕಲಾವಿದರಾದ ಮೈಸೂರು ರಮಾನಂದ, ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಬಿರಾದಾರ, ಮಿಮಿಕ್ರಿ ಗೋಪಿ, ಚಂದ್ರಪ್ರಭಾ, ವಾಣಿ, ರಾನ್ವಿ ಶೇಖರ್, ಕೃಷ್ಣ ಮಹೇಶ್, ವರದ, ಶ್ರೀನಿವಾಸ್ ಗೌಡ, ಮೂಗು ಸುರೇಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.
ಮೈಸೂರು, ಮಂಗಳೂರು, ಎಚ್ ಡಿ ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಂದಕುಮಾರ್ ಛಾಯಾಗ್ರಹಣ, ಯಶಸ್ ನಾಚಪ್ಪ ಸಂಗೀತ, ಶರಣ್ ಕುಮಾರ್ ಗಜೇಂದ್ರಗಡ, ಗುರುನಾಥ ಬೋರಗಿ ಸಾಹಿತ್ಯ, ಶಿವಕುಮಾರ್ ಎಂ.ಸಂಕಲನ, ರಸೂಲ್ ನದಾಫ್ ಕಲಾ ನಿರ್ದೇಶನ ಮಗ್ಗಿ ಪುಸ್ತಕ ಸಿನಿಮಾಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ