“ಮೆಜೆಸ್ಟಿಕ್-2” ಚಿತ್ರದ ಚಿತ್ರೀಕರಣ ಮುಕ್ತಾಯ.
ಬೆಳ್ಳಿ ಪರದೆಯಗೆ ಮತ್ತೊಂದು ಮಾಸ್ , ಆಕ್ಷನ್, ಸಬ್ಜೆಕ್ಟ್ “ಮೆಜೆಸ್ಟಿಕ್ 2” ಚಿತ್ರ ಬರಲು ಸಿದ್ಧವಾಗುತ್ತಿದೆ. ನಗರದ ಹಲವೆಡೆ ನಿರಂತರ ಚಿತ್ರೀಕರಣ ಮಾಡುವ ಮೂಲಕ ಕುಂಬಳಕಾಯಿ ಹೊಡೆದಿದೆ. ಇಡೀ ಚಿತ್ರತಂಡ ಈ ಚಿತ್ರೀಕರಣದ ಕುರಿತು ಮಾಹಿತಿ ನೀಡಲು ನಗರದ ಕನಿಷ್ಕ ಹೋಟೆಲ್ ಹಾಲ್ ಒಂದರಲ್ಲಿ ಪತ್ರಿಕಾಗೋಷ್ಠಿ ಯನ್ನು ಆಯೋಜನೆ ಮಾಡಿದ್ದು , ಚಿತ್ರತಂಡ ಮಾತನಾಡುವ ಮೊದಲು ಸಿನಿಮಾದ ಮೇಕಿಂಗ್ ವಿಡಿಯೋವನ್ನು ಪ್ರದರ್ಶನ ಮಾಡಿದರು.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮೊದಲಿಗೆ ಚಿತ್ರದ ನಿರ್ಮಾಪಕರಾದ ಹೆಚ್. ಆನಂದಪ್ಪ ಮಾತನಾಡುತ್ತ ಈ ಒಂದು ಕಾರ್ಯಕ್ರಮಕ್ಕೆ ನನ್ನ ಆತ್ಮೀಯ , ಸ್ನೇಹಿತರು ಎಲ್ಲರೂ ಬಂದಿದ್ದಾರೆ. ನಿರ್ದೇಶಕ ಹೇಳಿದ ಕಥೆ ಇಷ್ಟವಾಯಿತು. ಯುವ ಪ್ರತಿಭೆಗಳು ಚಿತ್ರರಂಗಕ್ಕೆ ಬರಬೇಕು. ಯಾವುದೇ ಕೊರತೆ ಇಲ್ಲದೆ ನಿರ್ಮಾಣ ಮಾಡಿದ್ದೇನೆ. ಚಿತ್ರೀಕರಣದ ಸ್ಥಳಕ್ಕೆ ನಾನು ಹೋಗುತ್ತಿದ್ದೆ, ತಂಡ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ. ನಮಗೆ ಮಾಧ್ಯಮದವರು ಹಾಗೂ ಜನರ ಆಶೀರ್ವಾದ ಬೇಕು ಎಂದು ಕೇಳಿಕೊಂಡರು.
ಚಿತ್ರದ ನಿರ್ದೇಶಕ ರಾಮು ಮಾತನಾಡುತ್ತ ಮೆಜೆಸ್ಟಿಕ್ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ , ಆದರೆ ಇದು 2024ರ ಮೆಜೆಸ್ಟಿಕ್ ನ ಲೋಕಲ್ ಲೈಫ್ ಯಾವ ರೀತಿ ಇದೆ ಎಂಬುದನ್ನಕಲಾಸಿಪಾಳ್ಯ , ಶಿವಾಜಿನಗರ ಸೇರಿದಂತೆ ನಗರದ ಬಹುತೇಕ ಸ್ಥಳಗಳಲ್ಲಿ ಸುಮಾರು 176 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ.
ನಮ್ಮ ನಿರ್ಮಾಪಕರು ನಮಗೆ ಏನು ಬೇಕೋ ಎಲ್ಲವನ್ನ ನೀಡಿದ್ದಾರೆ. ನಮ್ಮ ಹೀರೋ ಭರತ್ ಗೆ ಮೊದಲ ಚಿತ್ರ , ಈ ಚಿತ್ರಕ್ಕೆ ಬಹಳ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ನಾಯಕಿಯಾಗಿ ಸಂಹಿತಾ ವಿನ್ಯ , ತಮಿಳಿನ ವಿಲನ್ ರಘುರಾಜ್, ಕೋಟೆ ಪ್ರಭಾಕರ್ , ಹಿರಿಯ ನಟಿ ಶ್ರುತಿ ಹಾಗೂ ವಿಶೇಷ ಪಾತ್ರದಲ್ಲಿ ಮಾಲಾಶ್ರೀ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ನಮ್ಮ ಚಿತ್ರದಲ್ಲಿ ನಾಲ್ಕು ಆಕ್ಷನ್, ಚೇಸಿಂಗ್ ಸೀನುಗಳು ಅದ್ಭುತವಾಗಿ ಮೂಡಿ ಬಂದಿದೆ.
ಹಾಗೆಯೇ ನಾಲ್ಕು ಸಾಂಗ್ ಸೊಗಸಾಗಿ ಮೂಡಿ ಬಂದಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು , ಅತಿ ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎನ್ನುತ್ತಾ , ನಮ್ಮ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಹಾಗಾಗಿ ನಮ್ಮ ಚಿತ್ರ ಬಿಡುಗಡೆ ಸಮಯಕ್ಕೆ ಥಿಯೇಟರ್ ಮುಂದೆ ಡಿ ಬಾಸ್ ರವರ 101 ಅಡಿ ಕಟೌಟ್ ಹಾಗೆಯೇ 101 ಸ್ಟಾರ್ ಮೂಲಕ ಮೈಸೂರಿನಿಂದ ಬೆಂಗಳೂರಿನವರೆಗೂ ಮೆರವಣಿಗೆ ಮಾಡುವ ಪ್ಲಾನ್ ಮಾಡಿಕೊಂಡಿದ್ದೇನೆ. ಇದೇ ವರ್ಷ ನಮ್ಮ ಚಿತ್ರವನ್ನು ಅದ್ದೂರಿಯಾಗಿ ತೆರೆಯ ಮೇಲೆ ತರುತ್ತೇವೆ ಎಲ್ಲರ ಪ್ರೋತ್ಸಾಹ ಸಹಕಾರ ಇರಲಿ ಎಂದು ಕೇಳಿಕೊಂಡರು.
ಯುವ ನಟ ಭರತ್ ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ. ನನ್ನ ತಂದೆ ಶಿಲ್ಪಾ ಶ್ರೀನಿವಾಸ್ ಕೂಡ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಮೊದಲಿಗೆ ನನ್ನನ್ನ ನಾಯಕನಾಗಿ ಪರಿಚಯ ಮಾಡುತ್ತಿರುವ ನಿರ್ಮಾಪಕ ಆನಂದಪ್ಪ ಹಾಗೂ ನಿರ್ದೇಶಕ ರಾಮು ರವರಿಗೆ ಧನ್ಯವಾದಗಳು ತಿಳಿಸುತ್ತೇನೆ.
ನಾನು 107 ಕೆಜಿ ಇದೆ ಈ ಚಿತ್ರಕ್ಕಾಗಿ ವರ್ಕೌಟ್ ಮಾಡಿ, 20 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಈ ಚಿತ್ರ 2024 ಮೆಜೆಸ್ಟಿಕ್ , ಕಲಾಸಿಪಾಳ್ಯ , ಶಿವಾಜಿನಗರ ಸೇರಿದಂತೆ ನಗರದ ಲೋಕಲ್ ಬದುಕು ಹಾಗೂ ಹಲವು ಕರಾಳ ದಂಧೆಯ ಮುಖಗಳನ್ನು ತೋರಿಸ್ಥೀವಿ. ಚಿತ್ರೀಕರಣಕ್ಕೂ ಮುನ್ನ ಮೆಜೆಸ್ಟಿಕ್, ಕಲಾಸಿಪಾಳ್ಯದಲ್ಲಿ ಓಡಾಡಿ ನೈಜ ಬದುಕನ್ನು ಕಣ್ಣಾರೆ ನೋಡಿದ್ದೆ. ನಾನು ಈ ಚಿತ್ರದಿಂದ ಬಹಳಷ್ಟು ಕಲ್ತಿದ್ದೇನೆ. ಇದರಿಂದ ಮತ್ತೊಂದು ಚಿತ್ರದಲ್ಲೂ ಅವಕಾಶವು ಸಿಕ್ಕಿದೆ.
ಖಂಡಿತ ನಿಮ್ಮ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತೆ. ನಾನು ಡಿ ಬಾಸ್ ಅಭಿಮಾನಿ, ಅವರು ಆದಷ್ಟು ಬೇಗ ಸಮಸ್ಯೆಯಿಂದ ಹೊರ ಬರುತ್ತಾರೆ ಎಂಬ ನಂಬಿಕೆ ಇದೆ. ನಮ್ಮ ಚಿತ್ರ ಬಿಡುಗಡೆ ದಿನ ದರ್ಶನ್ ಸರ್ ಬೃಹತ್ ಕಟೌಟ್ ಹಾಕಿ ಸಂಭ್ರಮಿಸುತ್ತೇವೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೇಳಿಕೊಂಡರು.
ಇನ್ನು ನಾಯಕಿಯಾಗಿ ಅಭಿನಯಿಸಿರುವ ಸಂಹಿತಾ ವಿನ್ಯ ಮಾತನಾಡುತ್ತ ನನ್ನದು ಮಿಡಿಲ್ ಕ್ಲಾಸ್ ಹುಡುಗಿಯ ಪಾತ್ರದ ಜೊತೆಗೆ ಹೀರೋ ಗೆ ಸಾತ್ ನೀಡುತ್ತೇನೆ ಎಂದರು. ಮತ್ತೊಬ್ಬ ಕಲಾವಿದ ಕೋಟೆ ಪ್ರಭಾಕರ್ ಮಾತನಾಡುತ್ತಾ ಹತ್ತು ದಿನ ಡೇಟ್ಸ್ ಕೇಳಿದ್ರು, ನಂತರ ನನಗೆ ನಮ್ಮ ನಿರ್ಮಾಪಕ ಶಿಲ್ಪ ಶ್ರೀನಿವಾಸ್ ಮಗ ಹೀರೋ ಎಂದು ತಿಳಿಯಿತು, ಯುವ ಪ್ರತಿಭೆಗಳ ಜೊತೆಗೆ ಕೆಲಸ ಮಾಡಿದ್ದು ಖುಷಿ ಇದೆ. ಒಟ್ಟಾರೆ ಚಿತ್ರ ಚೆನ್ನಾಗಿ ಬಂದಿದೆ ಎಂದರು.
ಇನ್ನು ಈ ಚಿತ್ರದ ಛಾಯಾಗ್ರಹಕ ವೀನಸ್ ಮೂರ್ತಿ , ಫೈಟ್ ಮಾಸ್ಟರ್ ಚೆನ್ನಯ್ಯ, ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್, ಅಣಜಿ ನಾಗರಾಜ್, ಸಹ ನಿರ್ದೇಶಕ ವಿಜಯ್ ಕುಮಾರ್ ರೈತ ಮುಖಂಡ ಚಂದ್ರಶೇಖರ್ , ದಾವಣಗೆರೆ ಲಕ್ಷ್ಮಣ್ , ಉದ್ಯಮಿ ರವಿ ಮಾಕಲಿ , ಹಾಗೂ ವೇದಿಕೆ ಮೇಲಿದ್ದ ಹಲವರು ಚಿತ್ರದ ಕುರಿತು ಹಾಗೂ ಚಿತ್ರ ತಂಡದವರ ಬಗ್ಗೆ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದೊಂದು ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾನಕವಿರುವ ಚಿತ್ರವಂತೆ. ಎಲ್ಲವೂ ಅಂದುಕೊಂಡಂತೆ “ಮೆಜೆಸ್ಟಿಕ್ 2” ಚಿತ್ರದ ಚಿತ್ರೀಕರಣ ನಡೆಸಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದೆಯಂತೆ.