ಹೊಸ ಚಿತ್ರಕ್ಕೆ ಸಹಿ ಮಾಡಿದ ಮಂಗಳೂರು ಬೆಡಗಿ ನಿಮಿಕಾ ರತ್ನಾಕರ್
ಕ್ರಾಂತಿ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕವೇ ಭಾರೀ ಕ್ರೇಜ್ ಹುಟ್ಟು ಹಾಕಿದ್ದವರು ಮಂಗಳೂರು ಹುಡುಗಿ ನಿಮಿಕಾ ರತ್ನಾಕರ್. ಇದೊಂದು ಹಾಡಿನ ಮೂಲಕವೇ ಕರ್ನಾಟಕದ ಕ್ರಶ್ ಆಗಿ ಮಿಂಚಿದ್ದ ನಿಮಿಕಾ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಬ್ಯುಸಿಯಾಗಿದ್ದಾರೆ. ವಿಶೇಷವೆಂದರೆ, ಮಹಿಳಾ ಪ್ರಧಾನ ಸಿನಿಮಾ ಅವಕಾಶ ಕೂಡಾ ಅವರ ಪಾಲಿಗೆ ಒಲಿದು ಬಂದಿದೆ. ಹೀಗೆ ಒಂದಷ್ಟು ಸಿನಿಮಾಗಳು ಚಿತ್ರೀಕರಣದ ಅಂತಿಮ ಘಟ್ಟದಲ್ಲಿರುವಾಗಲೇ, ಅವರು ನಾಯಕಿಯಾಗಿ ನಟಿಸಿರುವ ಮತ್ತೊಂದು ಸಿನಿಮಾಕ್ಕೆ ತಯಾರಿ ಆರಂಭವಾಗಿದೆ. ಆ ಚಿತ್ರಕ್ಕೆ `ವೈಲ್ಡ್ ಟೈಗರ್ ಸಫಾರಿ’ ಎಂಬ ಶೀರ್ಷಿಕೆ ನಿಕ್ಕಿಯಾಗಿದೆ. ಇದರ ಮುಹೂರ್ತ ಸಮಾರಂಭ ಮಾರ್ಚ್ 7ನೇ ತಾರೀಖು, ಶುಕ್ರವಾರದಂದು ಮಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಲಿದೆ.
`ವೈಲ್ಡ್ ಟೈಗರ್ ಸಫಾರಿ’ ಚಿತ್ರವನ್ನು ಚಂದ್ರಮೌಳಿ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ ಸರಣಿಯ ರೈಟರ್ ಆಗಿ ಗಮನ ಸೆಳೆದಿದ್ದವರು ಚಂದ್ರಮೌಳಿ. ಸದರಿ ಸಿನಿಮಾದ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಶಿವಕುಮಾರ್ ನಿಭಾಯಿಸಲಿದ್ದಾರೆ. ಇವರೂ ಕೂಡಾ ಕೆಜಿಎಫ್ ಸರಣಿಯ ಕಲಾ ನಿರ್ದೇಶಕರಾಗಿದ್ದವರು. ಇನ್ನುಳಿದಂತೆ ಎ.ಜೆ ಶೆಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ. ಈ ಸಿನಿಮಾದ ಮೂಲಕ ಶಿಥಿಲ್ ಪೂಜಾರಿ ನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಬಾಲಿವುಡ್ಡಿನಲ್ಲಿ ಹೆಸರುವಾಸಿಯಾಗಿರುವ ಡ್ಯಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಿಮಿಕಾ ರತ್ನಾಕರ್ ಚೆಂದದ ಪಾತ್ರವೊಂದರ ಮೂಲಕ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಸದ್ಯದ ಮಟ್ಟಿಗೆ ಈ ಸಿನಿಮಾದ ಬಗ್ಗೆ ಇಷ್ಟು ಮಾಹಿತಿಗಳು ಜಾಹೀರಾಗಿವೆ.
ಒಟ್ಟಾರೆಯಾಗಿ, ಕೆಜಿಎಫ್ ಭಾಗವಾಗಿದ್ದ ಪ್ರತಿಭಾನ್ವಿತರ, ಕಟ್ಟುಮಸ್ತಾದ ತಂಡ `ವೈಲ್ಡ್ ಟೈಗರ್ ಸಫಾರಿ’ಯ ಹಿಂದಿರೋದು ಖಾತರಿಯಾಗಿದೆ. ಶೇಕ್ ಇಟ್ ಪುಷ್ಪವತಿ ಹಾಡಿನ ಪ್ರಭೆಯಲ್ಲಿಯೇ ಒಂದಷ್ಟು ಉತ್ತಮ ಅವಕಾಶಗಳು ನಿಮಿಕಾರನ್ನು ಅರಸಿ ಬರುತ್ತಿದೆ. ಅವರು ಈಗಾಗಲೇ ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಅದರ ಚಿತ್ರೀಕರಣವೀಗ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಫ್ಲರ್ಟ್ ಅಂತೊಂದು ಚಿತ್ರದಲ್ಲಿ ನಟಿಸಿರೋ ನಿಮಿಕಾರ ಪಾಲಿಗೆ ಫೀನಿಕ್ಸ್ ಎಂಬ ಚಿತ್ರದಲ್ಲಿಯೂ ನಾಯಕಿಯಾಗೋ ಅವಕಾಶ ಕೂಡಿ ಬಂದಿದೆ.
ಫೀನಿಕ್ಸ್ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಕಥಾ ಹಂದರ ಹಗೊಂದಿರುವ ಚಿತ್ರ. ಇದರಲ್ಲಿ ನಿಮಿಕಾ ಎಲ್ಲರನ್ನೂ ಅಚ್ಚರಿಗೀಡು ಮಾಡುವಂಥಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾ ರಂತೆ. ಹೀಗೆ ಒಂದೇ ಸಲಕ್ಕೆ ಎರಡ್ಮೂರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಿಮಿಕಾ ಪಾಲಿಗೆ `ವೈಲ್ಡ್ ಟೈಗರ್ ಸಫಾರಿ’ ಮೂಲಕ ಮತ್ತೊಂದು ಸುವರ್ಣಾವಕಾಶ ಒಲಿದು ಬಂದಂತಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ನಾಳೆ ಮಂಗಳೂರಿನಲ್ಲಿ ನಡೆಯಲಿದೆ. ಆ ಭೂಮಿಕೆಯಲ್ಲಿ ಸದರಿ ಚಿತ್ರದ ಬಗ್ಗೆ ಮತ್ತೊಂದಷ್ಟು ವಿಚಾರಗಳು ಜಾಹೀರಾಗಲಿವೆ.