ಅಬ್ಬರ , ಬಿಲ್ಡಪ್ ನಡುವೆ ಮೆಡಿಕಲ್ ಮಾಫಿಯಾದ ಮಾರ್ಟಿನ್(ಚಿತ್ರವಿಮರ್ಶೆ-ರೇಟಿಂಗ್ : 3 /5)
ರೇಟಿಂಗ್ : 3 /5
ಚಿತ್ರ : ಮಾರ್ಟಿನ್
ನಿರ್ದೇಶಕ : ಎ.ಪಿ. ಅರ್ಜುನ್
ನಿರ್ಮಾಪಕ : ಉದಯ್. ಕೆ. ಮೆಹ್ತಾ
ಛಾಯಾಗ್ರಹಣ : ಸತ್ಯ ಹೆಗಡೆ
ಸಂಗೀತ : ಮಣಿ ಶರ್ಮ, ರವಿ ಬಸ್ರೂರ್
ತಾರಾಗಣ : ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ , ಅನ್ವೇಷಿ ಜೈನ್, ಚಿಕ್ಕಣ್ಣ , ನಿಕಿತಿನ್ ಧೀರ್ , ಕಾವ್ಯಾ ಶಾಸ್ತ್ರಿ , ಅಚ್ಯುತ್ ಕುಮಾರ್, ನವಾಬ್ ಷಾ, ರೋಹಿತ್ ಪಾಠಕ್ ಹಾಗೂ ಮುಂತಾದವರು…
ಮಾಸ್ , ಆಕ್ಷನ್ , ಗ್ಯಾಂಗ್ ಸ್ಟಾರ್ ಹಾವಳಿ , ಬುಲೆಟ್ ಗಳ ಸುರಿಮಳೆ, ಅಬ್ಬರ ಡೈಲಾಗ್, ಮೆಡಿಕಲ್ ಮಾಫಿಯಾ , ಪ್ರೀತಿಯ ಸೆಳೆತದ ನಡುವೆ ದೇಶಪ್ರೇಮದ ಸಾರದ ಬಗ್ಗೆ ಸೂಕ್ಷ್ಮವಾಗಿ ತಿಳಿಸುತ್ತಾ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಮಾರ್ಟಿನ್”. ಬಲಿಷ್ಠವಾದ ವ್ಯಕ್ತಿ , ಹತ್ತು ಆನೆಗಳ ಬಲವನ್ನು ಹೊಂದಿರುವವನ ಎದೆಗೆ ಗುಂಡು ಹಾರಿಸಲಾಗುತ್ತದೆ. ಆತನಿಗೆ ಚಿಕಿತ್ಸೆಯ ನಂತರ ಪಾಕಿಸ್ತಾನದ ಪೋಲಿಸ್ ಅಧಿಕಾರಿಗಳ ಕೈವಶವಾಗುವ ವ್ಯಕ್ತಿಯ ಆರ್ಭಟ , ವರ್ಚಸ್ಸು , ತೋಳಿನ ಮೇಲೆ ಇಂಡಿಯನ್ ಎಂಬ ಟ್ಯಾಟೂವನ್ನು ಗಮನಿಸಿ ಇವನ ಹಿನ್ನೆಲೆ ಪತ್ತೆಹಚ್ಚಲು ಮುಂದಾದಾಗ ಆತನಿಗೆ ನೆನಪಿನ ಶಕ್ತಿ ವಿಚಲಿತವಾಗುವಂತಹ ಡ್ರಗ್ಸ್ ದೇಹವನ್ನ ಸೇರಿರುವ ವಿಚಾರ ತಿಳಿಯುತ್ತದೆ.
ಜೈಲಿನ ಅಧಿಕಾರಿಗಳು , ಕೈದಿಗಳನ್ನ ಹೊಡೆದು ಉರುಳಿಸುವ ಈ ವ್ಯಕ್ತಿಗೆ , ತಾನು ಯಾರೆಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಅಲ್ಲಿಂದ ಆತ ತಪ್ಪಿಸಿಕೊಂಡು ತನ್ನಗೆ ಗುಂಡು ಹಾರಿಸಿದವನನ್ನು ಹುಡುಕಲು ಮುಂದಾಗುವ ಕೆಲವು ವ್ಯಕ್ತಿಗಳ ನೆಟ್ವರ್ಕ್ ಮೂಲಕ ಭಾರತಕ್ಕೆ ಬರುತ್ತಾನೆ. ಆಗಾಗ ನೆನಪಿನ ಶಕ್ತಿಯ ಕಸಿವಿಸಿಯ ನಡುವೆ ಕೆಲವು ವ್ಯಕ್ತಿಗಳು ಗುಂಡೇಟಿಗೆ ಸಾಯುತ್ತಾರೆ.
ಇದರ ನಡುವೆ ಪ್ರೀತಿ ಕುಮಾರ್ ತನ್ನ ಪ್ರಿಯಕರ ಅರ್ಜುನ್ ನೌಕಾಪಡೆಯ ಕಸ್ಟಮ್ ಅಧಿಕಾರಿ ಪಾಕಿಸ್ತಾನದಿಂದ ಹಿಂದಿರುಗದ ವಿಚಾರವಾಗಿ ಕಂಗಲಾಗಿರುತ್ತಾಳೆ. ಇದರ ನಡುವೆ ಮಾರ್ಟಿನ್ ಎಂಬ ಹೆಸರು ಆಗಾಗ ಕೇಳಿ ಬರುತ್ತದೆ. ಇದೆಲ್ಲದಕ್ಕೂ ಮತ್ತೊಂದು ಪ್ರಮುಖ ಕಾರಣ ಮೆಡಿಕಲ್ ಮಾಫಿಯಾ , ಹಡಗುಗಳ ಮೂಲಕ ಬರುವ ಎಕ್ಸ್ಪೈರಿ ಮೆಡಿಸನ್ , ಮುದ್ದು ಗುಂಡುಗಳ ದಂಧೆಯ ವಿರುದ್ಧ ಸಿಡಿದೆಳುವ ಅರ್ಜುನ್ ಗೆ ಎದುರಾಗುವ ಮಾಫಿಯಾ ದೊರೆಗೆ ಮಾರ್ಟಿನ್ ಹೇಳುವ ಡೀಲ್ ರೋಚಕ ತಿರುವುಗಳ ಮೂಲಕ ಮತ್ತೊಂದು ಅಧ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ.
ಇಬ್ಬರಲ್ಲಿ ಮಾರ್ಟಿನ್ ಯಾರು…
ಪಾಕಿಸ್ತಾನದಲ್ಲಿ ಸಿಲುಕಿದ್ದು ಹೇಗೆ…
ಪ್ರೀತಿಗೆ ಪ್ರಿಯಕರ ಸಿಕ್ತಾನಾ..
ಮಾಫಿಯಾ ಏನಾಗುತ್ತೆ…
ಕ್ಲೈಮಾಕ್ಸ್ ಉತ್ತರ ಏನು…
ಎಲ್ಲದಕ್ಕೂ ಉತ್ತರ ಚಿತ್ರ ನೋಡಬೇಕು.
ಇಡೀ ಚಿತ್ರದ ಹೈಲೈಟ್ ಅಂದರೆ ನಾಯಕ ನಟ ದ್ರುವ ಸರ್ಜಾ. ಎರಡು ಶೇಡ್ ಗಳಲ್ಲಿ ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ. ನೌಕಾಪಡೆಯ ಅಧಿಕಾರಿಯಾಗಿ ಹಾಗೂ ಗ್ಯಾಂಗ್ ಸ್ಟಾರ್ ನ ಖದರ್ ಮೂಲಕ ಬಲಿಷ್ಟ ದೇಹ ಪ್ರದರ್ಶನದೊಂದಿಗೆ ಎಂದಿನಂತೆ ಅಬ್ಬರ ಡೈಲಾಗ್ ಹೊಡೆಯುತ್ತಾ ಮಿಂಚಿದ್ದಾರೆ. ಒಂದೆರಡು ಡೈಲಾಗ್ ಅನವಶ್ಯಕ ಅನಿಸುವಂತ್ತಿದೆ. ಡ್ಯಾನ್ಸ್ , ಫೈಟ್ , ಚಿತ್ರಕ್ಕಾಗಿ ವರ್ಷಗಟ್ಟಲೆ ದೇಹವನ್ನು ದಂಡಿಸಿರುವ ಪರಿ ಅವರ ಶ್ರದ್ದೆಯನ್ನು ತೋರಿಸುತ್ತದೆ.
ಇನ್ನು ನಾಯಕಿಯಾಗಿ ಅಭಿನಯಿಸಿರುವ ವೈಭವಿ ಶಾಂಡಿಲ್ಯ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದಾರೆ. ಇನ್ನು ಖಳನಾಯಕ ನಿಕಿತಿನ್ ಧೀರ್, ಲೇಡಿ ವಿಲನ್ ಅನ್ವೇಷಿ ಜೈನ್ ಜೋಡಿ ಗಮನ ಸೆಳೆಯುತ್ತದೆ. ಚಿಕ್ಕಣ್ಣ ಪಾತ್ರ ನಿರಸವಾಗಿದೆ. ನವಾಬ್ ಷಾ , ರೋಹಿತ್ ಪಾಠಕ್, ಮಾಳವಿಕಾ ಅವಿನಾಶ್, ಕಾವ್ಯಾ ಶಾಸ್ತ್ರಿ , ಅಚ್ಚುತ್ ಕುಮಾರ್ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.
ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮಾಮೂಲಿಯಾಗಿದ್ದರು ಚಿತ್ರಕಥೆ ಶೈಲಿ ಗಮನ ಸೆಳೆಯುವಂತೆ ಮಾಡಿದ್ದಾರೆ. ಮೊದಲ ಭಾಗ ಕುತೂಹಲವಾಗಿ ಸಾಗಿದರೆ. ದ್ವಿತೀಯ ಭಾಗ ಗೊಂದಲದ ಜೊತೆ ಆಯಾಸವಾಗುವಂತೆ ಸಾಗುತ್ತದೆ. ಜಮ್ಮು ಕಾಶ್ಮೀರದ ಎಲ್.ಓ.ಸಿ ದಾಟಿ ಭಾರತದ ಧ್ವಜ ಹಾರಿಸುವ ದೃಶ್ಯ ದೇಶಅಭಿಮಾನ ಹಿಮ್ಮಡಿಗೊಳಿಸುತ್ತದೆ. ಮೆಡಿಕಲ್ ಮಾಫಿಯಾ , ಮದ್ದು , ಗುಂಡಿನ ದಂಧೆಯ ಕರಾಳ ಸತ್ಯವನ್ನು ಹೊರ ಹಾಕಿರುವುದು ಮೆಚ್ಚುವಂತಿದೆ.
ನಿರ್ಮಾಪಕರು ಮಾಡಿರುವ ಖರ್ಚು, ಪರದೆಯ ಮೇಲೆ ಕಾಣುತ್ತದೆ. ಚಿತ್ರದ ಹೈಲೈಟ್ ಎಂದರೆ ಭರ್ಜರಿ ಆಕ್ಷನ್ , ಛಾಯಾಗ್ರಾಹಕರ ಕೈ ಚಳಕ , ಲೊಕೇಶನ್ ಗಳು ಗಮನ ಸೆಳೆಯುತ್ತದೆ. ಇನ್ನು ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಆರ್ಭಟಿಸಿದ್ದು , ಗ್ರಾಫಿಕ್ ಕೆಲಸ ಅಷ್ಟಕ್ಕಷ್ಟೇ ಎನ್ನುವಂತಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ. ಕೆಲವೊಂದು ದೃಶ್ಯಗಳು ಬೇರೆ ಚಿತ್ರಗಳ ಛಾಯೆ ಮೂಡಿಸುವಂತೆ ಕಂಡರೂ ಅಬ್ಬರದ ನಡುವೆ ಬೆರೆತುಕೊಂಡು ಹೋದಂತಿದೆ. ಒಟ್ಟಾರೆ ಆಕ್ಷನ್ ಪ್ರಿಯರಿಗೆ ಇಷ್ಟವಾಗುವ ಈ ಚಿತ್ರ ಒಮ್ಮೆ ನೋಡುವಂತಿದೆ.