“ಲುಡೋ” ಹಾಡುಗಳ ಬಿಡುಗಡೆ ಮಾಡಿದ ಸಚಿವ ದಿನೇಶ್‌ಗುಂಡುರಾವ್
ಪ್ಯಾನ್ ಇಂಡಿಯಾ ’ಲುಡೋ’ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ನೀಲಕಂಠ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಮಹೇಂದ್ರನ್.ಎಂ. ಬಂಡವಾಳ ಹೂಡಿದ್ದಾರೆ. ಕನ್ನಡಿಗ ಡಿ.ಯೋಗರಾಜ್ ಸಿನಿಮಾಕ್ಕೆ ರಚನೆ, ಛಾಯಾಗ್ರಹಣ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವುದು ನಾಲ್ಕನೇ ಅನುಭವ. ಸಚಿವ ದಿನೇಶ್‌ಗುಂಡುರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಸಚಿವರು ಕನ್ನಡ ಸಿನಿಮಾರಂಗದಲ್ಲಿ ಒಳ್ಳೆಯ ಚಿತ್ರಗಳು ಬರುವ ಅಗತ್ಯತೆ ಬಹಳವಾಗಿದೆ. ಹೊಸ ಯುವ ಪ್ರತಿಭಗಳು ಬರಬೇಕು. ಅವರ ಆಲೋಚನೆಗಳು ವಿನೂತನ ರೀತಿಯಲ್ಲಿ ಪ್ರಯತ್ನ ಮಾಡುವ ಧೈರ್ಯ ಇರುತ್ತದೆ. ಸೃಜನಾತ್ಮಕ ಕ್ಷೇತ್ರದಲ್ಲಿ ಸಿನಿಮಾ ಮುಖಾಂತರ ಜನರ ಮುಂದೆ ಕಾರ್ಯಗತ ಮಾಡಬಹುದು. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆಯ್ಕೆ ಮಂದಿಗೆ ಮಾತ್ರ ಸಿಗುತ್ತದೆ. ಅಂತಿಮವಾಗಿ ಅವಲಂಬಿತವಾಗಿರುವುದು ಪ್ರೇಕ್ಷಕ, ಜನರ ಮೇಲೆ. ಯಾವ ಒತ್ತಡವು ನಡೆಯುವುದಿಲ್ಲ. ಇಚ್ಚಾನುಸಾರ ಯಾರ ಮೇಲೆ ಪ್ರೀತಿ, ಆಕರ್ಷಣೆ ಬರುತ್ತದೋ ಅವರು ಮೇಲೆ ಬರುತ್ತಾರೆ. ಆದರೂ ನಮ್ಮ ಪ್ರಾಮಾಣಿಕ ಪ್ರಯತ್ನಗಳು ನಿಲ್ಲಬಾರದು. ನಿಮ್ಮಗಳ ಶ್ರಮ ತೆರೆ ಮೇಲೆ ಕಾಣಿಸುತ್ತದೆ. ಒಳ್ಳೆಯದಾಗಲಿ ಎಂದರು.
ನಿರ್ದೇಶಕರು ಹೇಳುವಂತೆ ಇದೊಂದು ಹೈಪರ್ ಲಿಂಕ್ ಕಥೆ ಎನ್ನಬಹುದು. ನಾಲ್ಕು ಭಿನ್ನ ಮನಸ್ಸುಗಳ ಪಾತ್ರಗಳು ಬೇರೆ ರೀತಿಯಲ್ಲಿ ಇದ್ದರೂ ಒಬ್ಬರಿಗೊಬ್ಬರು ಭೇಟಿಯಾಗುವುದಿಲ್ಲ. ಅಷ್ಟು ಜನರು ಕ್ಲೈಮಾಕ್ಸ್‌ದಲ್ಲಿ ಒಟ್ಟಿಗೆ ಸಂದಿಸುತ್ತಾರೆ. ಊಹಿಸಲಾಗದಂತ ತಿರುವುಗಳು ಇರುವುದು ವಿಶೇಷ. ಜತೆಗೆ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಅಂಶಗಳು ಇರಲಿದೆ.
ನಾಯಕರುಗಳಾಗಿ ಶರಣ್‌ರಾಜ್ ಕಾಸರಗೂಡು ಮತ್ತು ಆರ್ಯನ್. ನಾಯಕಿ ಜೀವಿತ ಪ್ರಭಾಕರ್. ಉಳಿದಂತೆ ಬೋಜರಾಜ್ ವಾಮನ್‌ಜೂರು, ಹರಿಣಿ ಕುಲಾಲ್, ಲಕ್ಷೀಶ್ ಸುವರ್ಣ, ಇಸ್ಮೈಲ್ ಮೂಡುಶೆಡ್ಡ, ಮೊಹಿದ್ದೀನ್ ಬಾವ, ವೀರೇಂದ್ರ ಸುವರ್ಣ ಕಟೀಲು, ದೀಕ್ಷಿತ್ ಪೂಜಾರಿ, ರಾಜಿಯೋಗಿ, ರಮೇಶ್ ರೈ ಕುಕ್ಕುವಲ್ಲಿ, ಪವನ್ ಬಂಗೇರ ಮುಂತಾದವರು ಅಭಿನಯಿಸಿದ್ದಾರೆ.
ಸಂಗೀತ ರಾಜ್‌ಭಾಸ್ಕರ್, ಸಾಹಸ ಸ್ಟಂಟ್‌ವೇಲು, ಕಾಸ್ಟ್ಯೂಮ್ ಸುಶೀಲಾಯೋಗರಾಜ್, ನೃತ್ಯ ಶ್ವೇತಾ-ಇಸಾಕ್ ಅವರದಾಗಿದೆ. ಮಂಗಳೂರು ಸುಂದರ ತಾಣಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಸೇರಿದಂತೆ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಸಿದ್ದಗೊಂಡಿರುವ ’ಲುಡೋ’ ಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.