Cini NewsMovie ReviewSandalwood

ಬಣ್ಣದ ರಾಣಿಯ ಆಟ..ಮಿಸ್ಟರ್ ರಾಣಿ (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಮಿಸ್ಟರ್ ರಾಣಿ
ನಿರ್ದೇಶಕ : ಮಧು ಚಂದ್ರ
ಸಂಗೀತ: ಜೂಡಾ ಸ್ಯಾಂಡಿ
ಛಾಯಾಗ್ರಹಣ: ರವೀಂದ್ರನಾಥ್. ಟಿ
ತಾರಾಗಣ: ದೀಪಕ್ ಸುಬ್ರಹ್ಮಣ್ಯ , ಪಾರ್ವತಿ ನಾಯರ್, ಶ್ರೀವತ್ಸ ಶ್ಯಾಮ್, ಮಧು ಚಂದ್ರ , ಲಕ್ಷ್ಮೀ ಕಾರಂತ್, ಆನಂದ್ ನೀನಾಸಂ ಹಾಗೂ ಮುಂತಾದವರು…

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಸೆ , ಕನಸು ಇದ್ದೇ ಇರುತ್ತೆ. ಆದರೆ ಅದನ್ನ ಈಡೇರಿಸಿಕೊಳ್ಳುವ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ಆದರೆ ಕೆಲವರಿಗೆ ಮನೆಯವರ ಒತ್ತಡ , ಸಮಸ್ಯೆಗಳ ಸುರಿಮಳೆಯಿಂದ ಬದುಕಿನ ಧಕ್ಕೆ ಬದಲಾಗುತ್ತಾ ಹೋಗುತ್ತದೆ.

ಒಳ್ಳೆ ಉದ್ಯೋಗ ಸಿಕ್ಕಿ ಜೀವನ ನಡೆಸಲಿ ಎಂಬ ತಂದೆ ತಾಯಿ ಆಸೆ ಆದರೆ , ಬಣ್ಣದ ಬದುಕಿನಲ್ಲಿ ನಟನಾಗಿ ಮಿಂಚಬೇಕೆಂಬ ಕನಸು ಮಗನಿಗೆ. ಈ ಒಂದು ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಸಿನಿಮಾ ಹಾಗೂ ಬದುಕು ಏನು ಎಂಬುವುದನ್ನು ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮಿಸ್ಟರ್ ರಾಣಿ”.

ಬಾಲ್ಯದಿಂದಲೂ ನಾಟಕ ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇರುವ ರಾಜ (ದೀಪಕ್ ಸುಬ್ರಮಣ್ಯ) , ಆದರೆ ಅವನ ತಂದೆ ಪೊಲೀಸ್ ಪೆದೆ (ಆನಂದ್ ನೀನಾಸಂ) ಗೆ ಸಿನಿಮಾ ಬಿಟ್ಟು ಕೆಲಸ ಹುಡುಕು ಎನ್ನುತ್ತಾರೆ. ಆದರೆ ಗೆಳೆಯ ಮಂಜ ( ಶ್ರೀವತ್ಸ ಶಾಮ್) ಮೂಲಕ ತನ್ನ ಆಸಕ್ತಿಯ ಕ್ಷೇತ್ರದಲ್ಲೇ ಮುನ್ನಡೆಯಬೇಕೆಂಬ ಬಯಕೆಯಿಂದ ಸಿನಿಮಾದಲ್ಲಿ ನಾನಾ ರೀತಿಯ ಪಾತ್ರಗಳನ್ನು ಮಾಡುತ್ತಾ, ಸಿಕ್ಕ ಸಣ್ಣಪುಟ್ಟ ಅವಕಾಶಗಳಿಂದ ಅಸಮಾಧಾನಗೊಂಡಿರುವಾಗ
ನಿರೀಕ್ಷಿಸಲಾಗದ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವ ಅವಕಾಶ ರಾಜನಿಗೆ ಎದುರಾಗುತ್ತದೆ.

ಇನ್ನು ಆ ಡಾರ್ಲಿಂಗ್ ಡಯಾನ ಚಿತ್ರದ ನಾಯಕಿ ದೀಪಿಕಾ (ಪಾರ್ವತಿ ನಾಯರ್) ಜೊತೆ ಗೆಳತಿಯ ಪಾತ್ರದಲ್ಲಿ ಬೇರೆ ದಾರಿ ಕಾಣದೆ ಮಂಜನ ಮಾತಿಗೆ ಒಪ್ಪಿ ಇಷ್ಟವಿಲ್ಲದಿದ್ದರೂ ರಾಣಿ ಎಂದು ಗುರುತಿಸಿಕೊಳ್ಳುತ್ತಾ ಆ ಸಿನಿಮಾದಲ್ಲಿ ನಟಿಸುತ್ತಾನೆ ರಾಜ. ತನ್ನ ಹವಾ , ಭಾವ , ನೋಟ , ಮಾತು ವರ್ಚಸನಿಂದ ಮುಂದೆ ನಂಬರ್ 1 ನಟಿ ಎಂಬ ಪಟ್ಟ ಪಡೆದುಕೊಳ್ಳುತ್ತಾನೆ. ಇನ್ನು ರಾಣಿ ಅಭಿಮಾನಿಗಳು ಹೆಚ್ಚಾಗಿ ರಾಜನ ಬದುಕು ಗೊಂದಲದ ಗೂಡಾಗುತ್ತದೆ.
ಇದರ ನಡುವೆ ರಾಜ ಕೂಡ ನಟಿ ದೀಪಿಕಾಳ ನೆಚ್ಚಿನ ಅಭಿಮಾನಿ ಎಂದು ಹೇಳಿಕೊಳ್ಳುತ್ತಾ ಆಕೆಯನ್ನು ಇಷ್ಟಪಡುತ್ತಾನೆ.

ಇನ್ನು ನಟಿ ರಾಣಿಯನ್ನ ಸ್ಟಾರ್ ಪಟಕ್ಕೆ ಏರಿಸಿದಂತಹ ನಿರ್ದೇಶಕ ಕಾಕಾ (ಮಧುಚಂದ್ರ) ಕೂಡ ರಾಣಿಯ ಹಿಂದೆ ಬೀಳುತ್ತಾನೆ. ಒಂದರ ಹಿಂದೆ ಒಂದು ಅವಾಂತರ ಸೃಷ್ಟಿಯಾದಾಗ ರಾಜ ಎಲ್ಲ ಸತ್ಯ ಹೇಳಲು ಮುಂದಾಗುವ ಹಂತಕ್ಕೆ ಬಂದು ತಲುಪುತ್ತಾನೆ.
ರಾಜ ಸಮಸ್ಯೆಯಿಂದ ಪಾರಾಗುತ್ತಾನಾ…
ಇಬ್ಬರೂ ಒಬ್ಬರೇ ಎಂಬ ಸತ್ಯ ತಿಳಿಯುತ್ತಾ…
ರಾಣಿ ಏನಾಗುತ್ತಾಳೆ…
ಇನ್ನು ಹಲವು ವಿಚಾರಗಳು ತಿಳಿದುಕೊಳ್ಳಲು ಒಮ್ಮೆ ಈ ಚಿತ್ರವನ್ನು ನೋಡಬೇಕು.

ಬಣ್ಣದ ಬದುಕಿನ ಜೀವನ ಏನು, ಅದರ ಹಿಂದಿರುವ ಅನುಭವಗಳು ಹೇಗಿರುತ್ತದೆ. ಕಹಿ ಸತ್ಯವನ್ನ ಹಾಸ್ಯದ ಮೂಲಕ ಮನಸ್ಸಿನ ಒದ್ದಾಟವನ್ನ ತೆರೆದಿಟ್ಟಿರುವ ನಿರ್ದೇಶಕರ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಗುರಿ ಹೊಂದಿದ್ದರೆ ಪ್ರತಿಫಲ ಸಿಗುತ್ತೆ, ಆದರೆ ಅದರ ಹಿಂದಿರುವ ಕಷ್ಟಗಳನ್ನ ಎದುರಿಸುವ ಶಕ್ತಿ ಇರಬೇಕು ಎಂಬುದರ ಜೊತೆಗೆ ಮಕ್ಕಳ ಭವಿಷ್ಯದ ಕಾಳಜಿ, ಆಸೆ ಪಟ್ಟವನ ಕನಸು , ಪ್ರೀತಿಯ ಸೆಳೆತ , ಗೆಳೆತನದ ಸಹಕಾರ ಹೀಗೆ ಎಲ್ಲಾ ಅಂಶಗಳ ಮೂಲಕ ಕಥೆ ಹೇಳುವ ಪ್ರಯತ್ನ ಅಚ್ಚುಕಟ್ಟಾಗಿದ್ದು, ಗ್ರಾಫಿಕ್ಸ್ ಮೂಲಕ ಹೇಳಿರುವ ಕಥೆ ಅಗತ್ಯಾನ ಅನ್ಸುತ್ತೆ.

ಇನ್ನು ಚಿತ್ರಕಥೆಯಲ್ಲಿ ಮತ್ತಷ್ಟು ಸೂಕ್ಷ್ಮತೆಯನ್ನು ತರಬಹುದಿತ್ತು. ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಚಿತ್ರ ನಿರ್ಮಾಣದ ಜೊತೆ ಚಿತ್ರದಲ್ಲಿ ನಿರ್ದೇಶಕನ ಪಾತ್ರ ವಹಿಸಿಕೊಂಡಿರುವ ಮಧುಚಂದ್ರ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ಇಡೀ ಚಿತ್ರವನ್ನ ಆವರಿಸಿಕೊಂಡಿರುವ ನಟ ದೀಪಕ್ ಅದ್ಭುತವಾಗಿ ನಟಿಸಿದ್ದು , ರಾಜ ಹಾಗೂ ರಾಣಿಯಾಗಿ ಮಿಂಚಿದ್ದು, ತನ್ನ ವೇಷ , ಭೂಷಣದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.

ಹೀರೋ ಆಗಬೇಕೆಂದು ಕನಸು ಹೊತ್ತ ಇಂಜಿನಿಯರ್ ಒಬ್ಬ ತನ್ನ ಜೀವನದಲ್ಲಿ ಏನೆಲ್ಲ ಕಷ್ಟಪಡುತ್ತಾನೆ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಅಷ್ಟೇ ಅದ್ಭುತವಾಗಿ ಗೆಳೆಯನ ಪಾತ್ರ ಮಾಡಿರುವ ಪ್ರತಿಭೆ ಶ್ರೀವತ್ಸ ಶಾಮ್ ಕೂಡ ಮಿಂಚಿದ್ದಾರೆ. ಇನ್ನು ನಾಯಕಿ ಪಾರ್ವತಿ ನಾಯರ್ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದು, ಮೇಕಪ್ ಕಲಾವಿದೆಯಾಗಿ ಲಕ್ಷ್ಮಿ ಕಾರಂತ್ ಹಾಗೂ ನಾಯಕನ ತಂದೆಯ ಪಾತ್ರದಲ್ಲಿ ಆನಂದ್ ನೀನಾಸಂ ಕೂಡ ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಹಾಗೆಯೇ ಚಿತ್ರದ ಸಂಗೀತ ಹಾಗೂ ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ. ಒಟ್ಟಾರೆ ಮನೋರಂಜನೆ ದೃಷ್ಟಿಯಿಂದ ಒಮ್ಮೆ ಈ ಚಿತ್ರವನ್ನು ಎಲ್ಲರೂ ನೋಡಬಹುದು.

error: Content is protected !!