ಮುಗ್ಧ ಹುಡುಗನ ಸಾಧನೆಯ ಹಾದಿ..”ಮೂಕ ಜೀವ” (ಚಿತ್ರವಿಮರ್ಶೆ- ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಮೂಕ ಜೀವ
ನಿರ್ದೇಶಕ : ಶ್ರೀನಾಥ್ ವಸಿಷ್ಠ
ನಿರ್ಮಾಪಕ: ವೆಂಕಟೇಶ್. ಎಂ
ಸಂಗೀತ : ವಿ. ಮನೋಹರ್
ಛಾಯಾಗ್ರಹಣ : ಪವನ್ ಕುಮಾರ್
ತಾರಾಗಣ : ಕಾರ್ತಿಕ್ ಮಹೇಶ್ (ಬಿಗ್ ಬಾಸ್ ಖ್ಯಾತಿ) , ಶ್ರೀ ಹರ್ಷ, ಅಪೂರ್ವ ಶ್ರೀ, ಮೇಘಶ್ರೀ, ರಮೇಶ್ ಪಂಡಿತ್, ಗಿರೀಶ್ ವೈದ್ಯನಾಥನ್ , ವೆಂಕಟಾಚಲ, ಶ್ರೀನಾಥ್ ವಸಿಷ್ಠ ಹಾಗೂ ಮುಂತಾದವರು…
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದರಲ್ಲೂ ವಿಶೇಷ ಚೇತನರ ಬಗ್ಗೆ ಅಸಡ್ಡೆ , ಅಪಹಸ್ಯ ಮಾಡುವ ಬದಲು ಪ್ರೀತಿ , ಪ್ರೋತ್ಸಾಹ ಕೊಟ್ಟರೆ ಖಂಡಿತ ಒಂದು ಯಶಸ್ವಿ ಗುರಿಯನ್ನು ಮುಟ್ಟಬಹುದು ಎಂಬ ಅಂಶವನ್ನು ತೆರೆದಿಡುವ ಪ್ರಯತ್ನವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ಮೂಕ ಜೀವ”.
ಸುಂದರ ಪರಿಸರದ ನಡುವೆ ಕರಿಗಟ್ಟ ವೆಂಬ ಗ್ರಾಮ. ಸಾಕವ್ವ (ಅಪೂರ್ವ) ಅನಾರೋಗ್ಯವಿದ್ದರೂ ಕಿವಿ ಕೇಳದ , ಮಾತುಬರದ ಮಗ ಶ್ರೀಕಂಠ ( ಶ್ರೀಹರ್ಷ ), ವಯಸ್ಸಿಗೆ ಬಂದ ಮಗಳು ಕಮಲಿ (ಮೇಘಶ್ರೀ) ಜೊತೆ ವಾಸ ಮಾಡುತ್ತಾ ಅಡ್ಡು , ಮೇಕೆ ಮೇಯಿಸಿಕೊಂಡು ಬದುಕು ನಡೆಸುತ್ತಿರುತ್ತಾಳೆ. ಇನ್ನು ತಾನಾಯಿತು ತನ್ನ ಪಾಡಾಯಿತು ಎನ್ನುವ ಶ್ರೀಕಂಠನ ನೇರ ಹಾಗೂ ಪ್ರಾಮಾಣಿಕತೆಗೆ ಇಲ್ಲಸಲ್ಲದ ಆರೋಪ ಆಗಾಗ ಎದುರಾಗುತ್ತಲ್ಲೇ ಇರುತ್ತದೆ.
ಇದರಿಂದ ಗ್ರಾಮದ ಪಟೇಲ (ರಮೇಶ್ ಪಂಡಿತ್) ಹಾಗೂ ಅವನೊಟ್ಟಿಗಿರುವ ಪೂಜಾರಿ , ಸಹಚಾರರ , ಊರ ಜನರ ಕೀಟಲೆಯಿಂದ ಮುಗ್ದ ಹುಡುಗ ಊರು ಬಿಡುವಂತ ಪರಿಸ್ಥಿತಿ ಎದುರಾಗುತ್ತದೆ. ಇದರ ನಡುವೆ ಕಮಲಿ ತನ್ನ ಪ್ರಿಯಕರ ಕಾರ್ತಿಕ್ (ಕಾರ್ತಿಕ್ ಮಹೇಶ್) ನನ್ನ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗುತ್ತಾಳೆ.
ಇನ್ನು ದಿನಗಳು ಕಳೆದಂತೆ ಗಾಯದ ಮೇಲೆ ಬರೆ ಎನ್ನುವ ಹಾಗೆ , ಬರೀ ನೋವನ್ನೇ ಅನುಭವಿಸುವ ಸಾಕಮ್ಮ ಸಾಯುವ ಸ್ಥಿತಿಗೆ ಬಂದು ತನ್ನ ಮಗನನ್ನ ಮಗಳ ಬಳಿ ಕಳಿಸುವಂತೆ ಊರ ಪಟೇಲರ ಬಳಿ ಮನವಿ ಮಾಡುತ್ತಾಳೆ. ದಿಕ್ಕು ದೆಸೆ ಇಲ್ಲದೆ ಅಕ್ಕನ ಮನೆ ಸೇರುವ ಆಸೆಯೊಂದಿಗೆ ಬೆಂಗಳೂರಿಗೆ ಬರುವ ಶ್ರೀಕಂಠನ ಬದುಕಲ್ಲಿ ಎದುರಾಗುವ ಒಂದೊಂದು ಸಂದರ್ಭಗಳು ಸುಂದರ ಶಿಲೆಗೆ ಉಳಿ ಪೆಟ್ಟು ಕೊಟ್ಟಂತ ಆಗಿರುತ್ತದೆ. ಅದು ಏನು… ಯಾಕೆ… ಹೇಗೆ… ಕ್ಲೈಮ್ಯಾಕ್ಸ್ ಹೇಳುವ ಸಂದೇಶ ಏನು… ಎಂಬುದನ್ನು ನೋಡಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಿ.
ನಿರ್ದೇಶಕ ಶ್ರೀನಾಥ್ ವಸಿಷ್ಠ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವಾಗಿ ಸುಧೀರ್ಘವಾಗಿ ಈ ಚಿತ್ರವನ್ನು ಮಾಡಿದಂತಿದೆ. ವಿಶೇಷ ಚೇತನರಿಗೆ ಭಗವಂತನೇ ಒಂದು ವಿಶೇಷ ಶಕ್ತಿ ಕೊಟ್ಟಿರುತ್ತಾನೆ ಎಂಬುವುದನ್ನು ಹೇಳುವುದರ ಜೊತೆಗೆ ಅನುಕಂಪ , ತಾತ್ಸರ ಮಾಡುವುದಕ್ಕಿಂತ ಪ್ರೀತಿ , ಧೈರ್ಯ , ಪ್ರೋತ್ಸಾಹ ಕೊಟ್ಟರೆ
ಬದುಕಿಗೆ ಉತ್ತಮ ದಾರಿಗೆ ಸಿಗುತ್ತದೆ ಎಂಬುದನ್ನು ತೋರಿಸಿದ್ದು , ತಾಯಿ ಮಗನ ಪ್ರೀತಿ, ಮಮಕಾರ.
ಅಕ್ಕ , ತಮ್ಮನ ಒಡನಾಟ , ಕೆಟ್ಟ ಹಾಗೂ ಒಳ್ಳೆ ಮನಸ್ಸಿನ ಲೆಕ್ಕಾಚಾರಕ್ಕೆ ತೆರೆದಿಟ್ಟಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಗೊಳಿಸಿದ್ದರೆ ಚೆನ್ನಾಗಿರುತ್ತಿತ್ತು. ಎ.ವಿ.ಎಂ ಎಂಟರ್ಟೈನ್ರ್ಸ್ ಮೂಲಕ ನಿರ್ಮಾಪಕರು ಒಂದು ಉತ್ತಮ ಚಿತ್ರವನ್ನು ನೀಡಿದ್ದಾರೆ. ಸಂಗೀತ ಹಿಂದೆ ಸರಿದಂತಿದೆ. ಛಾಯಾಗ್ರಾಹಕರ ಕೈಚಳಕ ತಕ್ಕಮಟ್ಟಿಗಿದೆ.
ಈ ಚಿತ್ರದ ಮೂಲಕ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಶ್ರೀಹರ್ಷ ವೆಂಕಟೇಶ್ ಮೂಕನಾಗಿ , ಕಿವುಡನ್ನಾಗಿ ಪಾತ್ರಕ್ಕೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿ ಗಮನ ಸೆಳೆದಿದ್ದಾರೆ. ಇನ್ನು ಈತನ ತಾಯಿಯ ಪಾತ್ರವನ್ನು ಅಪೂರ್ವ ಅದ್ಬುತವಾಗಿ ನಿಭಾಯಿಸಿದ್ದಾರೆ. ಅಕ್ಕನಾಗಿ ಮೇಘಶ್ರೀ ಸಿಕ್ಕ ಅವಕಾಶವನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಭಾವನಾಗಿ ಕಾರ್ತಿಕ್ ಮಹೇಶ್ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಊರ ಪಟೇಲನಾಗಿ ರಮೇಶ್ ಪಂಡಿತ್ , ಪೂಜಾರಿಯಾಗಿ , ಪೊಲೀಸ್ ಇನ್ಸ್ಪೆಕ್ಟರ್ ಆಗಿ ಸೇರಿದಂತೆ ಉಳಿದ ಪಾತ್ರಗಳೆಲ್ಲವೂ ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇದು ಜೆ .ಎಮ್. ಪ್ರಹ್ಲಾದ್ ರವರ ಕಾದಂಬರಿ ಆಧಾರಿತ ಚಿತ್ರವಾಗಿದ್ದು , ಕುಟುಂಬ ಸಮೇತ ಎಲ್ಲರೂ ಈ ಚಿತ್ರವನ್ನ ಒಮ್ಮೆ ನೋಡಬಹುದು.