ಎಲೆಕ್ಷನ್ ಸುಳಿಯಲ್ಲಿ “ಮೂರನೇ ಕೃಷ್ಣಪ್ಪ”ನ ಪರದಾಟ(ಚಿತ್ರವಿಮರ್ಶೆ -ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಮೂರನೇ ಕೃಷ್ಣಪ್ಪ
ನಿರ್ದೇಶಕ : ನವೀನ್ ರೆಡ್ಡಿ
ನಿರ್ಮಾಪಕರು : ಮೋಹನ್ ರೆಡ್ಡಿ , ಜಿ. ರವಿಶಂಕರ್
ಸಂಗೀತ : ಆನಂದ್ ರಾಜವಿಕ್ರಮ್
ಛಾಯಾಗ್ರಹಕ : ಯೋಗಿ
ತಾರಾಗಣ : ರಂಗಾಯಣ ರಘು , ಸಂಪತ್ ಮೈತ್ರಿಯಾ , ಶ್ರೀಪ್ರಿಯಾ , ಮುನಿಯಪ್ಪ ಆನೇಕಲ್ , ತುಕಾಲಿ ಸಂತೋಷ್, ಉಗ್ರಂ ಮಂಜು , ಆನಂದ್ ಹಾಗೂ ಮುಂತಾದವರು…
ಅಪರೂಪ ಎನ್ನುವಂತೆ ಆಗಾಗ ನಮ್ಮ ನೆಲದ ಕಥೆಗಳು ಪ್ರೇಕ್ಷಕರನ್ನ ಸೆಳೆಯುತ್ತವೆ. ಅದರಲ್ಲೂ ಪ್ರಾಂತ್ಯ ಭಾಷೆಯನ್ನ ಇಟ್ಕೊಂಡು ಕೋಲಾರ , ಆನೇಕಲ್ ಭಾಗದ ಸೊಗಡನ್ನು ಬೆಸೆದುಕೊಂಡು ನಡೆ , ನುಡಿ , ಆಚಾರ , ವಿಚಾರಗಳ ಜೊತೆಗೆ ಗ್ರಾಮದ ಮುಖಂಡನ ಎಲೆಕ್ಷನ್ ತಂತ್ರಗಾರಿಕೆ , ಹಿಂಬಾಲಿಕರ ಎಡವಟ್ಟು , ವಿರೋಧಿ ಕಾಟ ,
ಶಿಕ್ಷಕನ ಪರದಾಟ , ಪ್ರೀತಿಯ ಸೆಳೆತ ಹೀಗೆ ಒಂದಕ್ಕೊಂದು ಕೊಂಡಿಯಂತೆ ಕನ್ನಡ ಹಾಗೂ ತೆಲುಗು ಭಾಷೆಯ ಮಿಶ್ರಣದೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಈ ವಾರ ಬೆಳ್ಳಿ ಪರದೆಯ ಮೇಲೆ ಬಂದಿರುವಂತಹ ಚಿತ್ರ “ಮೂರನೇ ಕೃಷ್ಣಪ್ಪ”.
ಗ್ರಾಮದ ಹಿರಿಯ ಮುಖಂಡ ವೀರಣ್ಣ (ರಂಗಾಯಣ ರಘು) ತನ್ನೂರಿನಲ್ಲಿ ಅವನದೇ ಆದ ಗತ್ತು , ಗ್ರಾಮದ ಅಧ್ಯಕ್ಷ ಸ್ಥಾನಕ್ಕೆ ಕಸರತ್ತು , ಜನರೊಟ್ಟಿಗೆ ಪ್ರೀತಿಯ ನಾಟಕ ಮಾಡುತ್ತಾ ಊರಿನಲ್ಲಿ ವಿನಾಯಕನ ಪ್ರತಿಷ್ಠಾಪನೆ ಮಾಡುವುದರ ಜೊತೆಗೆ ಊರುದ್ದಾರ ಮಾಡುವೆ ಎನ್ನುತ್ತಾ ಎಲೆಕ್ಷನ್ ಗೆಲ್ಲಲು ತಂತ್ರಗಾರಿಕೆಗಾಗಿ ಖ್ಯಾತ ಹಾಸ್ಯ ನಟ ಮೈಕಲ್ ಮಧು ರನ್ನ ವಿನಾಯಕನ ಉದ್ಘಾಟನೆಗೆ ಗ್ರಾಮಕ್ಕೆ ಕರೆಸಿ ಜನರ ಪ್ರೀತಿ , ನಂಬಿಕೆ ಗಳಿಸಿ ವೋಟ್ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶ ಹೊಂದಿರುತ್ತಾನೆ. ಆದರೆ ಅದು ಕೈಗೂಡುವುದಿಲ್ಲ.
ಮುಂದೇನು ಅನ್ನುವಷ್ಟರಲ್ಲಿ ವೀರಣ್ಣನ ಬಂಟರು ನೀಡುವ ಐಡಿಯಾದಂತೆ ಬುದ್ಧಿವಂತ ಶಾಲಾ ಶಿಕ್ಷಕನಾದ ಮೂರನೇ ಕೃಷ್ಣಪ್ಪ (ಸಂಪತ್ ಮೈತ್ರೀಯಾ) ನನ್ನ ಕರೆಸಿ ಸಲಹೆ ಕೇಳುತ್ತಾರೆ.ಬೆಂಗಳೂರಿನಲ್ಲಿರುವ ಕೃಷ್ಣಪ್ಪನ ಗೆಳೆಯ ( ಆನಂದ್ ) ಸಹಾಯದ ಮೂಲಕ ಸಿಎಂ ರನ್ನ ಗ್ರಾಮಕ್ಕೆ ಕರೆಸಲು ನಿರ್ಧಾರ ಮಾಡುತ್ತಾನೆ. ಇದು ಮುಖಂಡ ವೀರಣ್ಣ ಸೇರಿದಂತೆ ಗ್ರಾಮಸ್ಥರಿಗೂ ಖುಷಿ ನೀಡುತ್ತದೆ.
ಇದೇ ಸಂದರ್ಭದಲ್ಲಿ ವೀರಣ್ಣನ ಮಗಳು ಶಶಿ (ಸಿರಿಪ್ರಿಯಾ) ಕೃಷ್ಣಪ್ಪನ ನೋಟಕ್ಕೆ ಮನಸೋಲುತ್ತಾಳೆ. ಇನ್ನು ಗ್ರಾಮಕ್ಕೆ ಸಿಎಂ ಕರಿಸುವ ವಿಚಾರವಾಗಿ ವೀರಣ್ಣ ಶಿಕ್ಷಕ ಕೃಷ್ಣಪ್ಪ ಗೆಳೆಯ (ಆನಂದ್) ನಿಗೆ ಮೂರು ಲಕ್ಷ ಅಡ್ವಾನ್ಸ್ ಕೂಡ ನೀಡುತ್ತಾನೆ. ಸಿ.ಎಂ. ಬರುವಿಕೆಗೆ ಸಕಲ ಸಿದ್ಧತೆ ಕೂಡ ನಡೆದಿರುತ್ತದೆ. ಆದರೆ ಅಲ್ಲಿ ಆಗುವ ಎಡವಟ್ಟು ಕೃಷ್ಣಪ್ಪನ ಬದುಕಿಗೆ ದೊಡ್ಡ ತಿರುವು ನೀಡುತ್ತದೆ.
ಸಿ.ಎಂ. ಬರ್ತಾರಾ…
ಕೃಷ್ಣಪ್ಪ ಎದುರಿಸುವ ಸಮಸ್ಯೆ ಏನು…
ಗ್ರಾಮ ಅಧ್ಯಕ್ಷನ ಪಾಡೇನು…
ಶಶಿಗೆ ಪ್ರೀತಿ ಸಿಗುತ್ತಾ…
ಕ್ಲೈಮ್ಯಾಕ್ಸ್ ಉತ್ತರ ಏನು…
ಇದೆಲ್ಲದಕ್ಕೂ ನೀವು ಮೂರನೇ ಕೃಷ್ಣಪ್ಪ ಚಿತ್ರ ನೋಡಬೇಕು.
ಇನ್ನು ಈ ಚಿತ್ರದ ನಿರ್ದೇಶಕ ನವೀನ್ ರೆಡ್ಡಿ ಒಂದು ಪ್ರಾಂತ್ಯವಾರು ಭಾಷೆಯ ಹಳ್ಳಿ ಸೊಗಡಿನ ಕಥೆಯನ್ನು ಕಟ್ಟಿಕೊಂಡಿರುವ ರೀತಿಯೇ ವಿಭಿನ್ನವಾಗಿದೆ. ಗ್ರಾಮದಲ್ಲಿ ನಡೆಯುವ ದಿನನಿತ್ಯದ ಚಟುವಟಿಕೆಗಳು, ಜಟಾಪಟಿ , ತರ್ಲೆ , ಪಡ್ಡೆಗಳ ಆರ್ಭಟ, ಎಲೆಕ್ಷನ್ ತಂತ್ರಗಾರಿಕೆ , ಪ್ರೇಮಿಗಳ ಪೀಕಲಾಟ ಸೇರಿದಂತೆ ಒಂದಷ್ಟು ಅರ್ಥಪೂರ್ಣ ವಿಚಾರವನ್ನ ಕೂಡ ಜನರ ಗಮನಕ್ಕೆ ತಂದಿರುವ ರೀತಿ ಮೆಚ್ಚುವಂಥದ್ದು , ಅದರಲ್ಲೂ ಲಾಜಿಕ್ ನೋಡುವುದಕ್ಕಿಂತ ಸಂಭಾಷಣೆ ಮೂಲಕ ಹಾಸ್ಯಮಯವಾಗಿ ಒಂದಷ್ಟು ಘಟನೆಗಳು ಗಮನ ಸೆಳೆಯುತ್ತದೆ. ಇಂತಹ ವಿಭಿನ್ನ ಬಗೆಯ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಹಾಗೆಯೇ ಸಂಗೀತ , ಛಾಯಾಗ್ರಹಣ , ಸಂಕಲನಾದ ಕೈಚಳಕ ಗಮನ ಸೆಳೆಯುತ್ತದೆ.
ಇಡೀ ಚಿತ್ರವನ್ನು ಆವರಿಸಿಕೊಂಡಿರುವುದೇ ರಂಗಾಯಣ ರಘು ಹಾಗೂ ಸಂಪತ್ ಮೈತ್ರಿಯ. ವಿಶೇಷವಾಗಿ ರಂಗಾಯಣ ರಘು ವೀರಣ್ಣ ಪಾತ್ರದ ಮೂಲಕ ಗ್ರಾಮ ಅಧ್ಯಕ್ಷ ಸ್ಥಾನದ ಚುನಾವಣೆಗಾಗಿ ಪರದಾಡುವ ಸ್ಥಿತಿಯನ್ನು ಪ್ರಾಂತ್ಯವಾರು ಭಾಷೆಯ ಮೂಲಕ ಸೊಗಡನ್ನ ಜೀವಿಸಿ ಅದ್ಭುತವಾಗಿ ಅಭಿನಯಿಸಿದ್ದಾರೆ.ಹಾವ , ಭಾವ , ಮಾತಿನ ಶೈಲಿ ಗಮನ ಸೆಳೆಯುವಂತೆ ಮಾಡಿದ್ದಾರೆ.
ಅದೇ ರೀತಿ ಸಂಪತ್ ಮೈತ್ರಿಯ ಕೂಡ ಒಬ್ಬ ಶಾಲಾ ಶಿಕ್ಷಕನಾಗಿ , ಊರಿಗೆ ಉಪಕಾರ ಮಾಡುವ ವ್ಯಕ್ತಿಯಾಗಿ , ಪ್ರೇಯಸಿಯ ಪ್ರಿಯಕರನಾಗಿ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಸಿರಿಪ್ರಿಯಾ ಕೂಡ ಮುದ್ದಾಗಿ ಕಾಣಿಸುತ್ತಾ ಭಾಷೆಗೆ ಸೂಕ್ತ ಬೆಡಗಿ ಎನ್ನುವಂತೆ ಕಂಗೊಳಿಸುತ್ತಾರೆ. ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.
ಇನ್ನು ಉಗ್ರಂ ಮಂಜು ನೆಗೆಟಿವ್ ಪಾತ್ರವಾದರೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದು , ಸಂಭಾಷಣೆಯ ಸೊಗಡಿನಲ್ಲಿ ಏನಪ್ಪಾ ಇದು ಅನ್ನುವಂತಿದೆ. ಇನ್ನು ರಂಗಾಯಣ ರಘು ಬಂಟನಾಗಿ ಮುನಿಯಪ್ಪ ಆನೇಕಲ್ ಅದ್ಭುತವಾಗಿ ಅಭಿನಯಿಸಿದ್ದು , ಸಂಪತ್ ಗೆಳೆಯನಾಗಿ ತುಕಾಲಿ ಸಂತು, ಆನಂದ್, ಸಿಎಂ ಪಾತ್ರಧಾರಿ ಅನಂತ್ ವೇಲ್ , ಕೆಜಿಎಫ್ ತಾತ ಸೇರಿದಂತೆ ಬಹಳಷ್ಟು ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಮನೋರಂಜನೆಗಾಗಿ ಈ ಚಿತ್ರವು ಒಮ್ಮೆ ನೋಡುವಂತಿದೆ