“ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ” ಟೀಸರ್ ಬಿಡುಗಡೆ ಮಾಡಿದ ಸಚಿವ ಹೆಚ್.ಕೆ.ಪಾಟೀಲ.
ಸೇವಾ ಮನೋಭಾವದ ಹಳ್ಳಿಯ ಯುವಕನೊಬ್ಬನ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’. ಈಹಿಂದೆ ಯಶ್ ನಟನೆಯ ರಾಜಾಹುಲಿ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಹೊನ್ನರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಇದೇ ಮೊದಲಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಮೂಲಕ ಚಿತ್ರ ನಿರ್ಮಾಣ ಸಹ ಮಾಡಿದ್ದಾರೆ.
ಹೊನ್ನರಾಜ್ ಅವರೇ ನಾಯಕನಾಗಿಯೂ ನಟಿಸಿರುವ ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ ಬಿಡುಗಡೆಗೆ ಸಿದ್ದವಾಗಿದ್ದು, ಹೊನ್ನರಾಜ್ ರ ಹುಟ್ಟುಹಬ್ಬದಂದು ಚಿತ್ರದ ಟೀಸರನ್ನು ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಸಚಿವರು ಹೊನ್ನರಾಜ್ ಸಿನಿಮಾ ಬಗ್ಗೆ ಸಾಕಷ್ಟು ಕನಸುಗಳನ್ಬು ಕಟ್ಟಿಕೊಂಡಿದ್ದಾರೆ. ಈ ಚಿತ್ರ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಬೆವರು, ರಕ್ತ ಸುರಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ಪ್ರಶಸ್ತಿ ಬರುವಂತಾಗಲಿ, ಎನ್ನುತ್ತಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಾಯಕ ಹೊನ್ನರಾಜ್ ಮಾತನಾಡುತ್ತ ನಾನು ಪಾಟೀಲರ ಮನೆಯ ಮುಂದೆ ಆಡಿ ಬೆಳೆದ ಹುಡುಗ. ಈ ಕಥೆ ರೆಡಿ ಮಾಡಿಕೊಂಡು ಅವರಿಗೆ ಹೇಳಿದೆ. ನಂತರ ಅವರು ತಮ್ಮ ಸ್ನೇಹಿತರಿಗೆ ಹೇಳಿ ನನ್ನನ್ನು ಪರಿಚಯಿಸಿದರು. ಅವರು ನೀಡಿದ ಸಹಕಾರದಿಂದ ಚಿತ್ರವೀಗ ಬಿಡುಗಡೆ ಹಂತ ತಲುಪಿದೆ. ನೈಜ ಘಟನೆಯನ್ನು ಆಧರಿಸಿದ ಫ್ಯಾಮಿಲಿ ಎಂಟರ್ ಟೈನರ್ ಇದಾಗಿದ್ದು ಸೆನ್ಸಾರ್ ನಿಂದ ಯು/ಎ ಸಿಕ್ಕಿದೆ. ಚಿತ್ರದಲ್ಲಿ ನಾಯಕ ಯಶ್ ಅಭಿಮಾನಿ, ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ನಾಯಕ ಮದುವೆ ಆಗ್ತಾನೋ ಇಲ್ಲವೋ, ಎನ್ನುವುದೇ ಚಿತ್ರದ ಕಥೆ. ಯಶ್ ಅವರಿಗೂ ಚಿತ್ರದ ಬಗ್ಗೆ ಹೇಳಿದೆ, ಒಳ್ಳೆದಾಗಲಿ ಎಂದು ಹಾರೈಸಿದರು. ಇಲ್ಲಿ ನಾನೊಬ್ಬನೇ ಪ್ರೊಡ್ಯೂಸರ್ ಅಲ್ಲ. ನನ್ನ ಹಿಂದೆ ನೂರಾರು ಜನ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ 4 ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ.
ವೇದಿಕಯಲ್ಲಿ ಚಿತ್ರದ ನಿರ್ಮಾಪಕಿ ಮಂಜುಳಾ ರಾಘವೇಂದ್ರ, ಕಾರ್ಯಕಾರಿ ನಿರ್ಮಾಪಕ ಸಂಜಯ್ ಶ್ರೀನಿವಾಸ್ ಅಲ್ಲದೆ ಮಾಜಿ ಮಹಾಪೌರರಾದ ಹುಚ್ಚಪ್ಪ, ನಿರ್ಮಾಪಕರಾದ ಕಲ್ಕೆರೆ ಸುನಿಲ್, ಎಂ. ಮುನಿರಾಜು ಇತರರಿದ್ದರು. ವಿನು ಮನಸು ಅವರ ಸಂಗೀತ, ಶಿವಪುತ್ರ ಅವರ ಛಾಯಾಗ್ರಹಣ, ಗಿರೀಶ್ ಅವರ ನೃತ್ಯ ನಿರ್ದೇಶನಈ ಚಿತ್ರಕ್ಕಿದೆ. ಮೈಸೂರು ಮಂಜುಳ , ರೇಖಾದಾಸ್ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ.