Cini NewsSandalwood

“ಮುರುಗ ಸನ್ ಆಫ್ ಕಾನೂನು” ಚಿತ್ರದ ಟ್ರೇಲರ್ ಬಿಡುಗಡೆ.

ಕಿರುತೆರೆಯ ಮುರುಗ ಖ್ಯಾತಿಯ ನಟ ಮುನಿಕೃಷ್ಣ ನಾಯಕನಾಗಿ ನಟಿಸಿದ್ದ ಕೊಡೆಮುರುಗ ಚಿತ್ರ ಅದ್ಭುತ ಯಶಸ್ಸು ಕಂಡಿತ್ತು. ಆ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಮುನಿಕೃಷ್ಣ ಅವರೀಗ ತಮ್ಮ ಎರಡನೇ ಚಿತ್ರವನ್ನು ತೆರೆಗೆ ತರಲು ಹೊರಟಿದ್ದಾರೆ.

ಆ ಚಿತ್ರದ ಹೆಸರು ‘ಮುರುಗ ಸನ್ ಆಫ್ ಕಾನೂನು’. ಚಿತ್ರದಲ್ಲಿ ಮುನಿಕೃಷ್ಣ ಅವರು ನಾಯಕನಾಗಿ ನಟಿಸುವ ಜೊತೆಗೆ ತಮ್ಮ ಎ.ಎಸ್.ಎ. ಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣ ಕೂಡ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್‌ನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೆಗೌಡರು ಬಿಡುಗಡೆ ಮಾಡಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹೂವಿನ ಹಡಗಲಿ ಶಾಸಕ ಕೃಷ್ಣನಾಯಕ್, ಹಿರಿಯ ನಟಿ ಪ್ರೇಮಾ ಹಾಗೂ ಟಾಲಿವುಡ್ ನಟಿ ಮಿಸ್ ಎಡಿನ್ ರೋಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಚಿತ್ರವನ್ನು ವಿಜಯ್ ಪ್ರವೀಣ್ ನಿರ್ದೇಶನ ಮಾಡಿದ್ದಾರೆ.

ಜಾಗ ಕೇಳಿಕೊಂಡು ಊರಿಗೆ ಬರುವ ಖಳನಾಯಕ ನಂತರ ಇಡೀ ಊರನ್ನೇ ತನ್ನ ಕಬ್ಜ ಮಾಡಿಕೊಳ್ಳುತ್ತಾನೆ. ಮುರುಗನ ತಂದೆಯನ್ನೂ ಕೊಲೆ ಮಾಡಿಸುತ್ತಾನೆ. ನಂತರ ಎಲ್.ಎಲ್.ಬಿ.ಓದಿಕೊಂಡಿದ್ದ ಮುರುಗ ಹೇಗೆ ಕಾನೂನಾತ್ಮಕವಾಗಿ ತನ್ನ ಜಾಗದ ಜೊತೆಗೆ ಊರನ್ನೂ ಉಳಿಸಿಕೊಳ್ಳುತ್ತಾನೆ ಎಂಬುದೇ ಮುರುಗ ಸನ್ ಆಫ್ ಕಾನೂನು ಚಿತ್ರದ ಕಥಾಹಂದರ. ಆನೇಕಲ್, ಮಲ್ಪೆ, ಬೆಂಗಳೂರು ಸುತ್ತಮುತ್ತ 62 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ವೇದಿಕೆಯಲ್ಲಿ ನಿರ್ದೇಶಕ‌ ವಿಜಯ್ ಮಾತನಾಡಿ ನನ್ನ ನಿರ್ದೇಶನದ 5ನೇ ಚಿತ್ರವಿದು. ಪುನೀತ್ ರಾಜಕುಮಾರ ಅವರು ನಮ್ಮ ಚಿತ್ರದ ಟೈಟಲ್ ಲಾಂಚ್ ಮಾಡಿಕೊಟ್ಟಿದ್ದರು. ಇದೊಂದು ಔಟ್ ಆಂಡ್ ಔಟ್ ಕಾಮಿಡಿ ಸಿನಿಮಾ ಎಂದು ಹೇಳಿದರು.

ನಂತರ ಮಾತನಾಡಿದ ಮುನಿಕೃಷ್ಣ ಶೀರ್ಷಿಕೆ ಗೀತೆಯನ್ನು ಅಪ್ಪು ಸರ್ ಹಾಡಬೇಕಿತ್ತು. 10 ದಿನ ಶೂಟ್ ಆದಮೇಲೆ ಸಿನಿಮಾ ನಿಂತುಹೋಗಿತ್ತು. ಪುನೀತ್ ಅವರು ಹರಸಿದ ಸಿನಿಮಾ ನಿಲ್ಲಬಾರದೆಂದು ಸ್ವಂತ ಮನೆ ಮಾರಿ ಕಷ್ಟಪಟ್ಟು ಸಿನಿಮಾ ಮುಗಿಸಿದ್ದೇನೆ.

ಮುಂದಿನ ತಿಂಗಳು ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ ಎಂದರು. ನಟಿ ಪ್ರೇಮಾ ಮಾತನಾಡಿ ಟ್ರೇಲರ್ ನೋಡಿ ತುಂಬಾ ಖುಷಿ ಆಯ್ತು. ಈ ಚಿತ್ರದಿಂದ ನಿರ್ಮಾಪಕರಿಗೆ 10 ಮನೆ ಕೊಳ್ಳುವ ಶಕ್ತಿ ಬರಲಿ’ ಎಂದು ಶುಭ ಹಾರೈಸಿದರು. ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೆಗೌಡ ಮಾತನಾಡಿ, ‘ಅಪ್ಪು ಹಾರೈಸಿದ ಸಿನಿಮಾ ಆಗಿದ್ದರಿಂದ ನಿರ್ಮಾಪಕರು ಹಟದಿಂದ ಸಿನಿಮಾ ಮಾಡಿದ್ದಾರೆ. ಟ್ರೇಲರ್ ಚನ್ನಾಗಿದೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

ನಾಯಕಿ ಮಮತಾ ರಾವುತ್ ಮಾತನಾಡಿ ‘ನಾನು ಮದುವೆಯಾದ 15 ದಿನಗಳಲ್ಲಿ ಈ ಚಿತ್ರದ ಆಫರ್ ಬಂತು. ತುಂಬಾ ವರ್ಷಗಳಿಂದ ಹಳ್ಳಿ ಹುಡುಗಿಯ ಪಾತ್ರ ಮಾಡುವ ಆಸೆ ಇತ್ತು. ಅದು ಈ ಚಿತ್ರದಿಂದ ಈಡೇರಿದೆ’ ಎಂದರು. ಮತ್ತೋರ್ವ ನಾಯಕಿ ಕಿರಣ್ ಯೋಗೇಶ್ವರ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಈ ಹಿಂದೆ ನಾಯಕನಾಗಿ ನಟಿಸಿದ್ದ ಧನ್‌ವೀರ್ ಈ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದು ತನ್ನ ಪಾತ್ರದ ಕುರಿತಂತೆ ಹೇಳಿದರು. ಉಳಿದಂತೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್, ಸಾಹಸ ನಿರ್ದೇಶಕ ಕೌರವ್ ವೆಂಕಟೇಶ್ ಮಾತನಾಡಿದರು. ಶೋಭ ರಾಜ್, ಥ್ರಿಲ್ಲರ್ ಮಂಜು, ರಮೇಶ್ ಭಟ್ ಉಳಿದ ತಾರಾಗಣದಲ್ಲಿದ್ದಾರೆ.

error: Content is protected !!