ಈ ವಾರ “ನಾ ಕೋಳಿಕೆ ರಂಗ” ಚಿತ್ರ ಬಿಡುಗಡೆ
ಬೆಳ್ಳಿ ಪರದೆ ಮೇಲೆ ಗ್ರಾಮೀಣ ಸಗೂಡಿನ ಹಾಸ್ಯಮಿಶ್ರಿತ “ನಾ ಕೋಳಿಕೆ ರಂಗ” ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಎಸ್.ಟಿ. ಸೋಮಶೇಖರ್ ನಿರ್ಮಿಸಿ ಗೊರವಾಲೆ ಮಹೇಶ್ ನಿರ್ದೇಶನ ಮಾಡಿರುವ ಗ್ರಾಮೀಣ ಭಾಗದ ಸೊಗಡಿನ ಈ ಚಿತ್ರದಲ್ಲಿ ಮಾಸ್ಟರ್ ಆನಂದ್ ಹಾಗೂ ರಾಜೇಶ್ವರಿ ಮುಖ್ಯ ಪಾತ್ರದಲ್ಲಿ ಅಭಿನಯಸಿದ್ದಾರೆ. ಈ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯ ಕಾಮಿಡಿ ಕಿಲಾಡಿ ಕಲಾವಿದರು ನಟಿಸಿರುವುದು ವಿಶೇಷ. ಇತ್ತೀಚೆಗೆ ನಡೆದ ಚಿತ್ರದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಅತ್ಯುತ್ಸಾಹದಿಂದ ಪಾಲ್ಗೊಂಡು ವಿವರಗಳನ್ನು ನೀಡಿತು.
ಇದು ಕೊರೊನಾ ಸಂಕಷ್ಟಗಳನ್ನು ಎದುರಿಸಿ ನಿಂತಿರುವ ಚಿತ್ರ. ಹಾಗಾಗಿ ಬಿಡುಗಡೆ ಕಾಣುವುದು ತಡವಾಗಿದೆ. ಆದರೂ ಚಿತ್ರ ಗೆಲುವು ಕಾಣುವ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ. ಏಕೆಂದರೆ ಚಿತ್ರ ಎಲ್ಲಿಯೂ ಕೂಡ ಬೋರ್ ಎನಿಸುವುದಿಲ್ಲ. ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಅತೀವವಾದ ಗೌರವವಿತ್ತು. ಹಾಗಾಗಿ ಅವರ ಬಗ್ಗೆ ಹಠ ತೊಟ್ಟು ಹಾಡು ಮಾಡಿದೆವು. ಕೈಲಾಸ್ ಖೇರ್ ಹಾಡಿರುವ ಆ ಹಾಡು ಅತ್ಯುತ್ತಮ ವಾಗಿ ಮೂಡಿ ಬಂದಿದೆ ಮಾತ್ರವಲ್ಲ ಈಗಾಗಲೇ ಜನಮನ ಗೆದ್ದಿದೆ.
ಇನ್ನು ವರನಟ ಡಾ.ರಾಜ್ ಕುಮಾರ್ ಅವರ ಮೇಲೆ ಅತೀವವಾದ ಅಭಿಮಾನ ಹಾಗಾಗಿ ಪುನೀತ್ ಸರ್ ಅವರಿಂದ ಒಂದು ಹಾಡು ಹಾಡಿಸಬೇಕೆಂದು ಮಾಡಿದ ಪ್ರಯತ್ನ ಕೂಡ ಯಶಸ್ಸು ಕಂಡಿತು. ದೇವರ ಮಗ ಅವರು ಮಾಸ್ಟರ್ ಆನಂದ್ ಅವರಿಗೆ ನೀವು ಹಾಡಬೇಕು ಎಂದ ತಕ್ಷಣವೇ ಒಪ್ಪಿ ಹಾಡಿದರು. ಅದು ನನ್ನ ಪುಣ್ಯ ಎಂದರು ನಿರ್ಮಾಪಕ ಸೋಮಶೇಖರ್.
ಇದೊಂದು ಹಳ್ಳಿ ಸೊಗಡಿನ ಪ್ರೀತಿ, ಸ್ನೇಹ, ಬಾಂಧವ್ಯದ ಚಿತ್ರವಾದರೂ ಎಲ್ಲರೂ ನೋಡುವಂತ ಚಿತ್ರವಾಗಿ ಹೊರಬಂದಿದೆ. ಬಹಳಷ್ಟು ಶ್ರಮಪಟ್ಟು ಪ್ರೀತಿಯಿಂದ ಈ ಚಿತ್ರವನ್ನು ಮಾಡಿದ್ದೇನೆ. ನಿರ್ಮಾಪಕರು ಕೂಡ ಬೆನ್ನೆಲುಬಾಗಿ ನಿಂತು ಈ ಚಿತ್ರವನ್ನು ಉತ್ತಮವಾಗಿ ಮೂಡಿಬರಲು ಸಹಕಾರಿಯಾಗಿದ್ದಾರೆ. ಅದೇ ರೀತಿ ಎಲ್ಲಾ ಕಲಾವಿದರ ಸಹಕಾರದೊಂದಿಗೆ ಚಿತ್ರ ಸಿದ್ದವಾಗಿ ಈ ವಾರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು ನಿರ್ದೇಶಕ ಗೊರವಾಲೆ ಮಹೇಶ್.
ಇನ್ನು ನಟ ಮಾಸ್ಟರ್ ಆನಂದ್ ಮಾತನಾಡುತ್ತಾ ಇದು ನನಗೆ ಸಿಕ್ಕ ಒಂದು ಉತ್ತಮ ಚಿತ್ರವಾಗಿದೆ. ಯಾಕೆಂದರೆ ನಿರ್ಮಾಪಕ ಸೋಮಣ್ಣ ಬಂದು ನಮ್ಮ ಈ “ನಾ ಕೋಳಿಕೆ ರಂಗ” ಚಿತ್ರಕ್ಕೆ ಕೈಲಾಶ್ ಕೇರ್ ಹಾಗೂ ಪುನೀತ್ ರಾಜಕುಮಾರ್ ಹಾಡ್ತಿದ್ದಾರೆ. ನೀವು ಮುಖ್ಯ ಪಾತ್ರದಲ್ಲಿ ಅಭಿನಯಿಸಬೇಕು ಎಂದು ಕೇಳಿಕೊಂಡರು. ಆಗ ನಾನು ಎಲ್ಲೋ ಸುಮ್ಮನೆ ಹೇಳುತ್ತಿದ್ದಾರೆ ಎಂದು ಮೊದಲು ಸಾಂಗ್ ಹಾಡಿಸಿಕೊಂಡು ಬನ್ನಿ ಎಂದು ಹೇಳಿದೆ.
ಅದರಂತೆ ಅವರು ಅಪ್ಪು ರವರು ಹಾಡುವ ದಿನ ನನ್ನನ್ನು ಕರೆದಿದ್ದರು , ನಾನು ನೋಡಿ ತುಂಬಾ ಖುಷಿ ಪಟ್ಟೆ ಅದೇ ದಿನ ನಿರ್ಮಾಪಕ ಸೋಮಣ್ಣನಿಗೆ ನಾನು ಚಿತ್ರದಲ್ಲಿ ಅಭಿನಯಿಸುತ್ತೇನೆ ಎಂದು ಒಪ್ಪಿಕೊಂಡೆ. ಏನೇ ಆಗಲಿ ಧೈರ್ಯವಾಗಿ ಮುಂದೇ ನಗುವ ನಿರ್ಮಾಪಕರ ಸಾಹಸ ನನಗೆ ಬಹಳ ಇಷ್ಟ. ಅದೇ ರೀತಿ ನಿರ್ದೇಶಕರು ಕೂಡ ಚಿತ್ರ ಉತ್ತಮವಾಗಿ ಬರಲು ಬಹಳಷ್ಟು ಶ್ರಮ ಪಟ್ಟಿದ್ದಾರೆ.
ಭವ್ಯ ಮೇಡಂ ನನ್ನ ತಾಯಿಯ ಪಾತ್ರವನ್ನು ಮಾಡಿದ್ದಾರೆ. ಅದೇ ರೀತಿ ನಿರ್ಮಾಪಕರ ಪುತ್ರಿ ರಾಜೇಶ್ವರಿ ಕೂಡ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿ ತಂಡವು ನನ್ನ ಜೊತೆ ಸಾತ್ ಕೊಟ್ಟಿದೆ. ಇದೇ ವಾರ ಚಿತ್ರ ತೆರೆಗೆ ಬರ್ತಿದೆ ನೀವೆಲ್ಲರೂ ನೋಡಿ ಆನಂದಿಸಿ ಎಂದರು.
ಈ ಚಿತ್ರದಲ್ಲಿ ಹಿರಿಯ ನಟಿ ಭವ್ಯ ತಾಯಿ ಪಾತ್ರವನ್ನು ನಿರ್ವಹಿಸಿದ್ದು, ಅವರು ಚಿತ್ರತಂಡದ ಜೊತೆಗಿನ ಅನುಭವಗಳನ್ನು ಹೇಳಿಕೊಂಡರು. ಹಾಗೆಯೇ ಈ ಚಿತ್ರ ನನ್ನ ವೃತ್ತಿ ಬದುಕಿನ ಮೊದಲ ಚಿತ್ರವಾಗಿರುವುದು ನನ್ನ ಪುಣ್ಯ ಎನ್ನುತ್ತಾ , ಚಿತ್ರದ ಕುರಿತು ಹಾಗೂ ಹಾಡಿನ ವಿಚಾರವನ್ನು ಬಹಳ ಸುದೀರ್ಘವಾಗಿ ಮಾತನಾಡಿದರು ಸಂಗೀತ ನಿರ್ದೇಶಕ ರಾಜು ಎಮ್ಮಿಗನೂರು. ನಿರ್ಮಾಪಕ ಸೋಮಶೇಖರ್ ಅವರ ಪುತ್ರಿ ರಾಜೇಶ್ವರಿ ಮಾತನಾಡುತ್ತಾ ನಾನು ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದೇನೆ.
ಈ ಒಂದು ಚಿತ್ರವನ್ನು ಬಹಳ ಶ್ರಮಪಟ್ಟು ಮಾಡಿದ್ದೇವೆ. ಈ ಚಿತ್ರ ಬಿಡುಗಡೆ ಆಗೋದಿಲ್ಲವೇನೋ ಎಂಬ ಭಯವಿತ್ತು , ಹೇಗೋ ಈ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನಮ್ಮ ತಂದೆ ಬಹಳಷ್ಟು ಶ್ರಮ ಪಟ್ಟಿದ್ದಾರೆ. ನೀವೆಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದರು. ನಿರ್ಮಾಪಕರ ಸಹೋದರ ತಮ್ಮನ ಶ್ರಮ ನೆನೆದು ಭಾವುಕರಾದರು, ಚಿತ್ರತಂಡಕ್ಕೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ಒಟ್ಟಾರೆ ಬಹಳಷ್ಟು ನಿರೀಕ್ಷಿಯೊಂದಿಗೆ ನಿರ್ಮಾಣಗೊಂಡಿರುವ “ನಾ ಕೋಳಿಕೆ ರಂಗ” ಚಿತ್ರ ಈ ವಾರ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.