Cini NewsSandalwood

“ನಾಗವಲ್ಲಿ ಬಂಗಲೆ” ಚಿತ್ರದ ಹಾಡುಗಳು ಬಿಡುಗಡೆ ಮಾಡಿದ ಶಾಸಕ ಅಶ್ವಥ್ ನಾರಾಯಣ್.

ವಿಭಿನ್ನ ಕಥಾಹಂದರ ಹೊಂದಿರುವ “ನಾಗವಲ್ಲಿ ಬಂಗಲೆ” ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಅಶ್ವಥ್ ನಾರಾಯಣ್ ಧ್ವನಿಸುರುಳಿ ಅನಾವರಣ ಮಾಡಿದರು. ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಅವರು ಸಹ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಾನು ಸಿನಿಮಾ‌ ನೋಡಿಕೊಂಡು ಬೆಳೆದವನು. ನಾವು ಕಂಡ ಕನಸನ್ನು ಸಿನಿಮಾದಲ್ಲಿ ನೋಡುತ್ತೇವೆ ಹಾಗೂ ಸಿನಿಮಾದಲ್ಲಿ ನೋಡಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಂತಹ ಶಕ್ತಿ ಸಿನಿಮಾಗೆ ಮಾತ್ರ ಇರುವುದು. ಆತ್ಮೀಯರಾದ ನೆ.ಲ.ನರೇಂದ್ರ ಬಾಬು ಅವರ ಸಹೋದರ ನೆ.ಲ.ಮಹೇಶ್ ಮತ್ತು ತಮ್ಮ ಸ್ನೇಹಿತರಾದ ನೇವಿ ಮಂಜು ರವರು ನಿರ್ಮಾಣ ಮಾಡಿರುವ “ನಾಗವಲ್ಲಿ ಬಂಗಲೆ” ಚಿತ್ರ ಯಶಸ್ವಿಯಾಗಲಿ ಎಂದು ಅಶ್ವಥ್ ನಾರಾಯಣ್ ಹಾರೈಸಿದರು. ಹಿರಿಯ ನಿರ್ಮಾಪಕ ಎಸ್ ಎ ಚಿನ್ನೇಗೌಡ ಸಹ ಚಿತ್ರತಂಡಕ್ಕೆ ಶುಭ ಕೋರಿದರು.

ನಮ್ಮ ಜನಪ್ರಿಯ ಶಾಸಕರಾದ ಅಶ್ವಥ್ ನಾರಾಯಣ್ ಅವರು ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದ್ದು ಹಾಗೂ ಹಿರಿಯರಾದ ಚಿನ್ನೇಗೌಡ ಅವರು ಸಮಾರಂಭಕ್ಕೆ ಬಂದಿರುವುದು ಬಹಳ ಖುಷಿಯಾಗಿದೆ. ನನ್ನ ಸಹೋದರ ನೆ.ಲ.ಮಹೇಶ್ ಹಂಸ ಕ್ರಿಯೇಷನ್ಸ್ ಲಾಂಛನದಲ್ಲಿ ನೇವಿ ಮಂಜು ಅವರೊಡಗೂಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾನು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ ಎಂದರು ನೆ.ಲ.ನರೇಂದ್ರ ಬಾಬು.

ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು‌ ಈ ಕಥೆಯಲ್ಲಿದೆ. ಇದಲ್ಲದೆ ಅರಿಷಡ್ವರ್ಗಗಳನ್ನು ಜಯಿಸಿದ ಮನುಷ್ಯ ಹೇಗಿರುತ್ತಾನೆ ಎಂದು ತಿಳಿಸುವ ಏಳನೇ ಪಾತ್ರ ಕೂಡ ಇದೆ. ಈವರೆಗೂ ನಾನು ಸಾಕಷ್ಟು ಚಿತ್ರಗಳಿಗೆ ಕಥೆ ಬರೆದಿದ್ದೇನೆ. ಇದು ನಾನು ಕಥೆ ಬರೆದಿರುವ 35 ನೇ ಚಿತ್ರ ಎಂದು ಕಥಾ ಲೇಖಕ ಜೆ.ಎಂ.ಪ್ರಹ್ಲಾದ್ ತಿಳಿಸಿದರು.

ಜೆ.ಎಂ.ಪ್ರಹ್ಲಾದ್ ಅವರು ಹೇಳಿದ ಕಥೆ ಕೇಳಿದ ನೆ.ಲ ಮಹೇಶ್ ಹಾಗೂ ನೇವಿ ಮಂಜು ಅವರು ಕಥೆ ಇಷ್ಟವಾಗಿ ಸಿನಿಮಾ ರೂಪಕ್ಕೆ ತಂದಿದ್ದಾರೆ. ಟೀಜರ್ ಹಾಗೂ ಹಾಡುಗಳು ಎಲ್ಲರಿಗೂ ಇಷ್ಟವಾಗಿದೆ. ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಇದು ನನ್ನ ನಿರ್ದೇಶನದ 20ನೇ ಚಿತ್ರ ಎಂದು ನಿರ್ದೇಶಕರು ಕವಿ ರಾಜೇಶ್ ಹೇಳಿದರು.

ಹಂಸ ವಿಷನ್ಸ್ ಲಾಂಛನದಲ್ಲಿ ನಾನು ಹಾಗೂ ನೇವಿ ಮಂಜು ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಧ್ವನಿಸುರುಳಿ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕ ನೆ.ಲ.ಮಹೇಶ್. ಚಿತ್ರದಲ್ಲಿ ನಟಿಸಿರುವ ರೂಪ, ಯಶ್ ಮುಂತಾದ ಕಲಾವಿದರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಗಾಯಕಿಯರಾದ ಆಗಮ ಶಾಸ್ತ್ರಿ ಹಾಗೂ ಅಮೋಘ ಶಾಸ್ತ್ರಿ ಚಿತ್ರದ ಎರಡು ಹಾಡುಗಳ ಪಲ್ಲವಿ ಹಾಡಿದರು.

error: Content is protected !!