ಈ ವಾರ ತೆರೆಕಂಡ ‘ನಮೋ ಭಾರತ್’ ಚಿತ್ರ ಹೇಗಿದೆ..? (ಚಿತ್ರವಿಮರ್ಶೆ)
ಚಿತ್ರ : ನಮೋ ಭಾರತ್
ನಿರ್ದೇಶಕ, ನಿರ್ಮಾಪಕ : ರಮೇಶ್.ಎಸ್. ಪರವಿನಾಯ್ಕರ್
ಸಂಗೀತ : ಎ.ಟಿ. ರವೀಶ್
ಛಾಯಾಗ್ರಹಕ : ವೀರೇಶ್
ತಾರಾಗಣ : ರಮೇಶ್. ಎಸ್. ಪರವಿನಾಯ್ಕರ್, ಸೋನಾಲಿ ಪಂಡಿತ್, ಸುಷ್ಮಾ ರಾಜ್, ಭವ್ಯ , ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ನವನೀತ, ಶ್ರವಣ ಪಂಡಿತ್, ರವೀಂದ್ರ ಸಿಂಗ್ ಶರ್ಮಾ, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ಹಾಗೂ ಮುಂತಾದವರು…
ದೇಶ ಕಾಯೋ ಯೋಧ… ಭೂಮಿ ಕಾಯೋ ರೈತ… ಇಬ್ಬರು ನಮ್ಮ ದೇಶದ ಬೆನ್ನೆಲುಬು. ಅಂತಹದ್ದೇ ಒಬ್ಬ ದೇಶಭಕ್ತ ಪ್ರೇಮಿ ಗಡಿ ಕಾಯೋ ಯೋಧನಾಗಿ ದೇಶ ರಕ್ಷಣೆ ಮಾಡುತ್ತಾ, ತನ್ನೂರಿನ ಜನರ ರಕ್ಷಣೆಗೂ ಮುಂದಾಗುವ , ಜನ ಸಾಮಾನ್ಯರಿಗೆ ಸಿಗಬೇಕಾದ ಯೋಜನೆ , ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಹಾದಿಯಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ನಮೋ ಭಾರತ್”.
ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಿ ಹಿಂತಿಸುವ ಭಯೋತ್ಪಾದಕರನ್ನು ಬಗ್ಗು ಬಡೆಯುವ ವೀರಯೋಧ ಕಮಾಂಡೋ ಭರತ್ (ರಮೇಶ್. ಎಸ್.ಪರವಿನಾಯ್ಕರ್) ಹಾಗೂ ಅವನ ತಂಡದವರು. ನೋಟ್ ಬ್ಯಾನ್ , ಆರ್ಟಿಕಲ್ 370 ರದ್ದು , ತ್ರಿವಳಿ ತಲಾಕ್ ಹೀಗೆ ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಕ್ಕೆ ಭಯೋತ್ಪಾದಕರು ಇನ್ನಿಲ್ಲದ ಕಸರತ್ತು ಸಂಚನ ರೂಪಿಸುತ್ತಾರೆ.
ಅದನ್ನು ಸದಾ ಎದುರಿಸಲು ಸಿದ್ಧ ಎಂಬ ಸೈನಿಕರು. ಒಮ್ಮೆ ಆಚಾನಕ್ಕಾಗಿ ಕಾಶ್ಮೀರಿ ಪಂಡಿತನ ಮಗಳು(ಸೋನಾಲಿ ಪಂಡಿತ್) ಭೇಟಿಯಾಗುವ ಭಾರತ್ ಆಕೆಯ ಸ್ನೇಹ , ಸಂಪರ್ಕ ಇಟ್ಟುಕೊಳ್ಳುತ್ತಾನೆ. ಇತ್ತ ತನ್ನ ಹುಟ್ಟೂರಿನಲ್ಲಿ ತಂದೆ ,ತಾಯಿ ಬಂದು ಬಳಗ ಊರಿನ ಜನರು ಭರತ್ ಸೇವೆ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸುತ್ತಿರುತ್ತಾರೆ.
ಇದರ ನಡುವೆ ಭರತ್ ಅತ್ತೆಯ ಮಗಳು ಪಾರ್ವತಿ (ಸುಷ್ಮಾ ರಾಜ್) ಮಾವನನ್ನು ಮದುವೆಯಾಗಲು ತುದಿಗಳಲ್ಲಿ ನಿಂತಿರುತ್ತಾಳೆ. ಇನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಊರ ಗೌಡ ಹಳ್ಳಿ ಜನರನ್ನ ಆಸ್ತಿಯನ್ನ ಕಬಳಿಸುವುದರ ಜೊತೆಗೆ ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳ ಮೇಲು ಕಣ್ಣು ಹಾಕಿ ಅಧಿಕಾರಿಗಳ ಜೊತೆ ಕೈಜೋಡಿಸಿ ವಂಚಿಸುತ್ತಿರುತ್ತಾನೆ. ಇದರ ನಡುವೆ ಒಂದು ದುರಂತ ಸುದ್ದಿ ಕೇಳಿ ಊರಿಗೆ ಬರುವ ಭರತ್, ಇಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತ , ಕೇಂದ್ರ ಸರ್ಕಾರದ ನಮೋ ಯೋಜನೆಗಳ ವಿಚಾರವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಾಗುತ್ತಾನೆ. ಇದು ಊರ ಗೌಡ ಹಾಗೂ ಕೆಲವರಿಗೆ ದೊಡ್ಡ ತಲೆನೋವಾಗಿ ಕಾಣಿಸುತ್ತದೆ. ಮುಂದೆ ಎದುರಾಗುವ ಹಲವು ಘಟನೆಗಳು ಸತ್ಯ ಸಂಗತಿಗಳನ್ನು ಹೊರಹಾಕಲು ಮುಂದಾಗುತ್ತದೆ.
ಜನರಿಗೆ ತಿಳಿಯುವ ಸತ್ಯ ಏನು…
ದುರಂತ ಸುದ್ದಿ ಯಾವುದು…
ದೇಶ ಹಾಗೂ ಊರು ರಕ್ಷಣೆ ಆಗುತ್ತಾ…
ಕ್ಲೈಮಾಕ್ಸ್ ಸಂದೇಶ ಏನು…
ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಈ ಸಿನಿಮಾ ನೋಡಲೇಬೇಕು.
ಇನ್ನು ನಿರ್ದೇಶಕ ರಮೇಶ್. ಎಸ್. ಪರವಿನಾಯ್ಕರ್ ಒಂದು
ದೇಶಪ್ರೇಮಿ ಸೈನಿಕನ ಕಥೆಯ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಲವು ಯೋಜನೆಗಳ ಬಗ್ಗೆ ಬೆಳಕು ಚೆಲ್ಲುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ತೆರೆಯ ಮೇಲೆ ತಂದಿದ್ದಾರೆ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿರುವ ರಮೇಶ್ ಚಿತ್ರಕಥೆಯ ಓಟ ಇನ್ನಷ್ಟು ಬಿಗಿ ಮಾಡಬೇಕಿತ್ತು. ಒಂದಷ್ಟು ದೃಶ್ಯಗಳು ಡಾಕ್ಯುಮೆಂಟರಿಯಾಗಿ ಕಾಣುತ್ತದೆ.
ಇದೆಲ್ಲದರ ನಡುವೆ ಜನಸಾಮಾನ್ಯರು ಅರಿಯಬೇಕಾದ ಒಂದಷ್ಟು ವಿಚಾರ ಗಮನ ಸೆಳೆಯುತ್ತದೆ. ಈ ಚಿತ್ರದ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು , ಛಾಯಾಗ್ರಾಹಕರ ಕೈಚಳಕ ಮೆಚ್ಚುವಂತಿದೆ. ತಾಂತ್ರಿಕವಾಗಿ ಒಂದಷ್ಟು ಗಮನ ಸೆಳೆಯುತ್ತದೆ. ಈ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿರುವ ರಮೇಶ್. ಎಸ್. ಪರವಿನಾಯ್ಕರ್ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದು, ನಾಯಕನ ಪಾತ್ರಕ್ಕೆ ಜೀವ ಕೊಟ್ಟು ಸೈನಿಕನಾಗಿ , ಹಳ್ಳಿಯಲ್ಲಿ ಜನರ ಬೆಂಬಲಕ್ಕೆ ನಿಲ್ಲುವ ಹೋರಾಟಗಾರನಾಗಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ.
ಇನ್ನು ಹಳ್ಳಿ ಬೆಡಗಿಯಾಗಿ ಅಭಿನಯಿಸಿರುವ ಸುಷ್ಮಾ ರಾಜ್ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ಕಾಶ್ಮೀರಿಯ ಮುದ್ದಾದ ಬೆಡಗಿಯಾಗಿ ಸೋನಾಲಿ ಪಂಡಿತ್ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಾಯಕನ ತಂದೆಯಾಗಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಹಾಗೂ ತಾಯಿಯಾಗಿ ನಟಿ ಭವ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಊರ ಗೌಡನಾಗಿ ಮೈಕೋ ನಾಗರಾಜ್ ಮಾತಿನ ವರಸೆಯಲ್ಲೇ ಅಬ್ಬರಿಸಿದ್ದಾರೆ. ಹಾಸ್ಯ ನಟ ಬಿರಾದಾರ್ ಕೂಡ ಗಮನ ಸೆಳೆಯುತ್ತಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಈ ಒಂದು ಚಿತ್ರವನ್ನು ವಿತರಕ ವೆಂಕಟ್ ಗೌಡ ರಾಜ್ಯದಾದ್ಯಂತ ಬಿಡುಗಡೆ ಮಾಡಿದ್ದು , ಈ ಚಿತ್ರವನ್ನ ಎಲ್ಲರೂ ಒಮ್ಮೆ ನೋಡುವಂತಿದೆ.