ಕರುಳ ಬಳ್ಳಿಯ ಕಥೆ – ವ್ಯಥೆ “ನಿಂಬಿಯಾ ಬನಾದ ಮ್ಯಾಗ (ಪೇಜ್ 1)” : ಚಿತ್ರವಿಮರ್ಶೆ-ರೇಟಿಂಗ್ : 3/5
ರೇಟಿಂಗ್ : 3/5
ಚಿತ್ರ : ನಿಂಬಿಯಾ ಬನಾದ ಮ್ಯಾಗ (ಪೇಜ್ ೧)
ನಿರ್ದೇಶಕ : ಅಶೋಕ್ ಕಡಬ
ನಿರ್ಮಾಪಕ : ವಿ.ಮಾದೇಶ್
ಸಂಗೀತ : ಆರೋನ್ ಕಾರ್ತಿಕ್
ಛಾಯಾಗ್ರಹಣ : ಸಿದ್ದು
ತಾರಾಗಣ : ಷಣ್ಮುಖ ಗೋವಿಂದರಾಜ್ , ತನುಶ್ರೀ ,
ಸುನಾದ್ ರಾಜ್, ಸಂಗೀತ ಅನಿಲ್, ಮೂಗ್ ಸುರೇಶ್, ಪದ್ಮ ವಾಸಂತಿ, ಸಂದೀಪ್ ಮಲಾನಿ, ಹಾಗೂ ಮುಂತಾದವರು…
ಮಲೆನಾಡಿನ ಸುಂದರ ಪರಿಸರದ ತಪ್ಪಲಿನಲ್ಲಿ ಮುದ್ದಾದ ಕುಟುಂಬದ ನಡುವೆ ಎದುರಾಗುವ ಕರುಳ ಬಳ್ಳಿಯ ಕಥೆಯ ಸುತ್ತ ಸಂಬಂಧ, ಪ್ರೀತಿ, ಮಮಕಾರ, ದ್ವೇಷ , ಸಂಚಿನ ಹಿನ್ನೆಲೆಯಲ್ಲಿ ಸಾಗುವ ನಿಗೂಢ ಕೌಟುಂಬಿಕ ಕಥಾನಕವಾಗಿ ಈ ವಾರ ಪರದೆಯ ಮೇಲೆ ಬಂದಿರುವಂತಹ ಚಿತ್ರ “ನಿಂಬಿಯಾ ಬನದ ಮ್ಯಾಗ”.
ಊರಿನ ಯಜಮಾನ ರಾಘು (ಸುನಾದ್ ರಾಜ್) ಸದಾ ಜನರ ಕಷ್ಟಕ್ಕೆ ಮಿಡಿಯುವ ವ್ಯಕ್ತಿಯ ಮುದ್ದಾದ ಮಡದಿ ಲಕ್ಷ್ಮಿ (ಸಂಗೀತ ಅನಿಲ್). ಮಕ್ಕಳಿಲ್ಲದ ಇವರ ಮನೆಗೆ ಬರುವ ರಾಘು ಅಕ್ಕ ಹಾಗೂ ಅಕ್ಕನ ಮಗಳು. ವಂಶದ ಕುಡಿ , ಆಸ್ತಿ ಬೇರೆಯವರ ಪಾಲಾಗದಂತೆ ನೋಡಿಕೊಳ್ಳಲು ಲಕ್ಷ್ಮಿ ಅತ್ತಿಗೆಯ ಮಗಳು ವೆಂಕಟಲಕ್ಷ್ಮಿಯನ್ನ ತನ್ನ ಗಂಡನಿಗೆ ಮದುವೆ ಮಾಡಲು ನಿರ್ಧರಿಸುತ್ತಾಳೆ.
ಇದರ ನಡುವೆ ಲಕ್ಷ್ಮಿ ತಾಯಿ ಆಗುವ ಅದೃಷ್ಟ ಬರುತ್ತದೆ. ಮತ್ತೆ ಎಲ್ಲವೂ ಸರಳ ಎನ್ನುವಷ್ಟರಲ್ಲಿ ರಾಘು ಸಾವಿಗಿಡಾಗುತ್ತಾನೆ. ಇದರ ಹಿಂದೆ ಒಂದಷ್ಟು ಘಟನೆ ನಡೆದ ನಂತರ ಸುಮಾರು 25 ವರ್ಷಗಳ ಕಳೆಯುತ್ತದೆ. ತಾಯಿಯನ್ನು ಕಾಣಲು ಮಲೆನಾಡ ಭಾಗದ ಬೆಂಗಾಡಿಯ ಮೇಲ್ ಬೈಲ್ ದೊಡ್ಡ ಮನೆಗೆ ಅಚ್ಚು (ಷಣ್ಮುಖ ಗೋವಿಂದರಾಜ್ ) ಬರುತ್ತಾನೆ.
ಆ ತಾಯಿ ಲಕ್ಷ್ಮಿ ಇಂದಲ್ಲ ನಾಳೆ ಮಗ ಬಂದೇ ಬರುತ್ತಾನೆ ಎಂಬ ನಂಬಿಕೆ ದೃಢವಾಗುತ್ತದೆ. ಆ ಮನೆಯ ಆಳುಕಾಳುಗಳ ಪ್ರೀತಿ ಗಳಿಸುವ ಆಚ್ಚುಗೆ ಮುದ್ದಾದ ಗೆಳತಿ ವೈಶಾಲಿ (ತನುಶ್ರೀ) ಸ್ನೇಹ ಸಿಗುತ್ತದೆ. ಇದರ ನಡುವೆ ಅವನ ಮನಸ್ಸಲ್ಲಿ ಸದಾ ಒಂದು ವಿಚಾರ ಕಾಡುತ್ತಾ ಹೋಗುತ್ತದೆ. ಅಚ್ಚುಗೆ ಕಾಣುವ ಯಕ್ಷಗಾನದ ಆ ವ್ಯಕ್ತಿಯ ಭಯಪಡಿಸುವುದು ಯಾಕೆ, ಗಾಬರಿಗೋಳ್ಳುವ ಆಚ್ಚು ಅದು ಹೇಳಲಾಗದಂತ ಪರಿಸ್ಥಿತಿಯ ನಡುವೆಯೇ ಎಲ್ಲರ ಜೊತೆ ಬೆರೆತು ಕಷ್ಟ ಸುಖಕ್ಕೆ ಸ್ಪಂದಿಸುತ್ತಾನೆ.
ತನ್ನ ಗೆಳೆಯನ ತಾಯಿಯ ಆರೋಗ್ಯಕ್ಕಾಗಿ ಹಣವನ್ನು ಪಡೆದು ಮನೆಯಿಂದ ಹೊರಡುವ ಅಚ್ಚುಗೆ ತಾಯಿ ಲಕ್ಷ್ಮಿ ಆಶೀರ್ವಾದ ಮಾಡಿ ಕಳಿಸುತ್ತಾಳೆ. ಮರಕ್ಷಣವೇ ಅಮ್ಮ ಎಂದು ಮನೆ ಬಾಗಿಲಿಗೆ ಬರುವ ಮಗ ಕರ್ಣ (ಪಂಕಜ್). ಇಲ್ಲಿಂದ ಇದು ಮುಂದಿನ ಭಾಗಕ್ಕೆ ದಾರಿ ತೋರುತ್ತದೆ. ಅಚ್ಚು ಯಾರು…25 ವರ್ಷದ ಹಿಂದೆ ನಡೆದಿದ್ದು ಏನು… ಮಗು ಯಾರ ಬಳಿ ಬೆಳೆದಿದ್ದು… ಅಚ್ಚುಗೆ ಕಾಡುವ ಯಕ್ಷಗಾನ ಯಾವುದು… ಇದಲ್ಲದಕ್ಕೂ ಉತ್ತರ ಒಮ್ಮೆ ಈ ಚಿತ್ರವನ್ನು ನೋಡಬೇಕು.
ನಿರ್ದೇಶಕ ಅಶೋಕ್ ಕಡಬ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದ್ದು, ತಾಯಿ ಮಗನ ಬಾಂಧವ್ಯದ ನಡುವೆ ಕರುಳ ಬಳ್ಳಿಯ ಕಥೆ ವ್ಯಥೆ ಸುತ್ತಾ ಹೇಗೆಲ್ಲಾ ಸಂಬಂಧದ ಕೊಂಡಿ ಆಟವಾಡಿಸುತ್ತದೆ ಎಂಬುದನ್ನು ಬಹಳ ಅರ್ಥಪೂರ್ಣವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಚಿತ್ರಕಥೆಯ ಓಟ ನಿಧಾನಗತಿಯಾಗಿ ಸಾಗುತ್ತದೆ.
ದೊಡ್ಮನೆ ಕುಡಿಗೆ ಒಂದು ಉತ್ತಮ ಚಿತ್ರ ನೀಡಿರುವ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ.
ಕುಟುಂಬ ಸಮೇತ ನೋಡುವಂತ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ವಿ. ಮಾದೇಶ ರವರ ಸಾಹಸ ಮೆಚ್ಚಲೇಬೇಕು ಜೊತೆಗೆ ನಟಿಸಿರುವುದು ಮತ್ತೊಂದು ವಿಶೇಷ. ಆರೋನ್ ಕಾರ್ತಿಕ್ ಸಂಗೀತ ಇನ್ನು ಉತ್ತಮವಾಗಿ ಮಾಡಬಹುದಿತ್ತು, ಇನ್ನು ಪಳನಿ. ಡಿ. ಸೇನಾಪತಿ ಹಿನ್ನೆಲೆ ಸಂಗೀತ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಛಾಯಾಗ್ರಾಹಕರ ಕೈಚಳಕ ಸೊಗಸಾಗಿದೆ.
ಇನ್ನು ನಾಯಕನಾಗಿ ಬೆಳ್ಳಿ ಪರದೆ ಮೇಲೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿ ನ್ಯಾಯವನ್ನು ಒದಗಿಸಿದ್ದಾರೆ ಷಣ್ಮುಖ ಗೋವಿಂದರಾಜು. ಭಾಷೆಯ ಮೇಲೆ ಹಿಡಿತವಿದ್ದು, ರಾಘವೇಂದ್ರ ರಾಜ್ ಕುಮಾರ್ ಧ್ವನಿ ಕೇಳಿದಂತೆ ಅನಿಸುತ್ತದೆ. ಇನ್ನು ನಾಯಕಿಯ ಪಾತ್ರದಲ್ಲಿ ಮುದ್ದಾಗಿ ಕಾಣುವ ತನುಶ್ರೀ ಎಸ್.ಬಿ. ಜೀವ ತುಂಬಿ ನಟಿಸಿದ್ದಾರೆ.
ಸುಮಾರು 30 ವರ್ಷಗಳ ನಂತರ ಬಣ್ಣ ಹಚ್ಚಿರುವ ಮೇಘಮಾಲೆ ಚಿತ್ರದ ನಟ ಸುನಾದ್ ರಾಜ್ ತಂದೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಗೆಯೇ ತಾಯಿಯ ಪಾತ್ರ ಮಾಡಿರುವ ಸಂಗೀತ ಅನಿಲ್ ಅದ್ಭುತವಾಗಿ ಪಾತ್ರಕ್ಕೆ ಜೀವ ತುಂಬಿ ತಾಯಿ ಮಗನ ಬಾಂಧವ್ಯದ ಮಮಕಾರವನ್ನ ತೋರಿದ್ದಾರೆ.
ಚಟಪಟ ಎಂದ ಮಾತಲ್ಲೇ ನಗಿಸಿದ್ದಾರೆ ನಟ ಸಂದೀಪ್ ಮಲ್ಲಾನಿ. ಇನ್ನು ಪದ್ಮಾವತಿ ಹಾಗೂ ಮಗಳ ಪಾತ್ರ ಮಾಡಿರುವ ಯುವ ಪ್ರತಿಭೆ ಸಿಗರೇಟ್ ಹೊಗೆ ಬಿಡುತ್ತಳೆ ತನ್ನ ಪಾತ್ರವನ್ನು ಖಡಕ್ಕಾಗಿ ನಿರ್ವಹಿಸಿದ್ದಾರೆ. ಇನ್ನು ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಕ್ಲೈಮ್ಯಾಕ್ಸ್ ಕುತೂಹಲವನ್ನು ಮೂಡಿಸಿದ್ದು , ಮುಂದಿನ ಭಾಗ ಏನು ಎಂಬ ಪ್ರಶ್ನೆ ಕಾಡುವಂತಿದೆ. ಇದೆಲ್ಲದರ ಹೊರತಾಗಿ ಒಮ್ಮೆ ಈ ಚಿತ್ರವನ್ನು ನೋಡಬಹುದು.