Cini NewsSandalwood

ಡಾ|| ರಾಜಕುಮಾರ್ ಮೊಮ್ಮಗನ “ನಿಂಬಿಯಾ ಬನಾದ ಮ್ಯಾಗ” ಪೇಜ್ -1 ಟ್ರೇಲರ್ ಬಿಡುಗಡೆ.

ಮೇರು ನಟ ಡಾ||ರಾಜಕುಮಾರ್ ಅವರ ಮೊಮ್ಮಗ(ಮಗಳ ಮಗ) ಷಣ್ಮುಖ ಗೋವಿಂದರಾಜ್ ನಾಯಕನಾಗಿ ನಟಿಸಿರುವ “ನಿಂಬಿಯಾ ಬನಾದ ಮ್ಯಾಗ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಡಾ|ರಾಜಕುಮಾರ್ ಮಗಳು,‌ ಅಳಿಯ ಹಾಗೂ ನಾಯಕ ಷಣ್ಮುಖ ಅವರ ತಾಯಿ – ತಂದೆ ಲಕ್ಷ್ಮೀ ಹಾಗೂ ಗೋವಿಂದರಾಜು ಅವರು ಟ್ರೇಲರ್ ಅನಾವರಣ ಮಾಡಿ ಮಗನ ಚಿತ್ರಕ್ಕೆ ಶುಭ ಕೋರಿದರು‌. ಹಿರಿಯ ನಿರ್ಮಾಪಕ ಎಸ್‌‌ ಎ ಚಿನ್ನೇಗೌಡ, ಡಾ||ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿ.ಮಾದೇಶ್ ನಿರ್ಮಾಣದ, ಅಶೋಕ್ ಕಡಬ ನಿರ್ದೇಶಿಸಿರುವ ಈ ಚಿತ್ರ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ನಿಂಬಿಯಾ ಬನದ‌ ಮ್ಯಾಗ” ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ಎಂದು ಮಾತನಾಡಿದ ನಾಯಕ ಷಣ್ಮುಖ,‌ “ನಿಂಬಿಯಾ ಬನದ ಮ್ಯಾಗ” ಚಿತ್ರ ಮಲೆನಾಡಿನ ಮಡಿಲಲ್ಲಿ ನಡೆಯುವ ಸುಂದರ ದೃಶ್ಯ ಕಾವ್ಯ. ಅಮ್ಮ‌ – ಮಗನ ಬಾಂಧವ್ಯದ ಕಥೆ. ಅಶೋಕ್ ಕಡಬ ನಿರ್ದೇಶನ, ವಿ.ಮಾದೇಶ ಅವರ ನಿರ್ಮಾಣ ಹಾಗೂ ಇಡೀ ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ತಂದೆ, ತಾಯಿ, ದೊಡ್ಡಪ್ಪ,‌ ಚಿಕ್ಕಮ್ಮ‌ ಹಾಗೂ ನನ್ನ ಪತ್ನಿ ಸೇರಿದಂತೆ ಅನೇಕ ಕುಟುಂಬ ಸದಸ್ಯರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ನನ್ನ ಸೋದರಮಾವಂದಿರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್,‌ ಗೀತಾ ಶಿವರಾಜಕುಮಾರ್,‌ ಮಂಗಳಾ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್,‌ ಶ್ರೀಮುರಳಿ ಹೀಗೆ ಕುಟುಂಬ ಸದಸ್ಯರೆಲ್ಲರು ನನ್ನ ಚಿತ್ರಕ್ಕೆ ಶುಭ ಕೋರಿದ್ದಾರೆ. ನಿಮ್ಮೆಲ್ಲರಿಗೂ ಧನ್ಯವಾದ ಎಂದರು.

ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು ( ಅಚ್ಚಣ್ಣ ) ಕಾಣೆಯಾಗಿದೆ. ಆ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ.
ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು ” ನಿಂಬಿಯಾ ಬನಾದ ಮ್ಯಾಗ – ಪೇಜ್ – 1″ ಚಿತ್ರದ ಕಥಾ ಸಾರಾಂಶ . ಭಾಗ 2. ಸಹ ಬರಲಿದೆ. ಷಣ್ಮುಖ ಅವರು ಮೊದಲ ಬಾರಿಗೆ ನಾಯಕನಾಗಿ‌ ನಟಿಸಿದ್ದಾರೆ. ತನುಶ್ರೀ ಈ ಚಿತ್ರದ ನಾಯಕಿ. 25 ವರ್ಷಗಳ ನಂತರ “ಮೇಘಮಾಲೆ” ಖ್ಯಾತಿಯ ಸುನಾದ್ ರಾಜ್ ಸಹ ಇದರಲ್ಲಿ ಅಭಿನಯಿಸಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಏಪ್ರಿಲ್ 4 ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು ನಿರ್ದೇಶಕ ಅಶೋಕ್ ಕಡಬ.‌

ನಿರ್ಮಾಪಕ ವಿ.ಮಾದೇಶ್, ನಾಯಕಿ ತನುಶ್ರೀ, ಚಿತ್ರದಲ್ಲಿ ನಟಿಸಿರುವ “ಮೇಘಮಾಲೆ” ಖ್ಯಾತಿಯ ಸುನಾದ್‌ರಾಜ್, ಸಂದೀಪ್ ಮಲಾನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Nimbiya banada myaga

error: Content is protected !!