ಕಳ್ಳತನ ಹಾಗೂ ಹನಿ ಟ್ರಾಪ್ ಜಾಲದ ಸುಳಿಯಲ್ಲಿ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ನಿರ್ದೇಶಕ : ಕೇಶವ ಮೂರ್ತಿ
ನಿರ್ಮಾಣ: ಪಿಕ್ಚರ್ ಶಾಪ್
ಸಂಗೀತ : ಪ್ರಸಾದ್.ಕೆ. ಶೆಟ್ಟಿ
ಛಾಯಾಗ್ರಾಹಕ : ಹರ್ಷ ಕುಮಾರ್ ಗೌಡ
ತಾರಾಗಣ : ದಿಲೀಪ್ ರಾಜ್ , ಅಪೂರ್ವ ಭಾರದ್ವಾಜ್ , ಶಿಲ್ಪ ಮಂಜುನಾಥ್ , ಪ್ರಸನ್ನ ಶೆಟ್ಟಿ , ಮಧುಸೂದನ್ , ಹರಿ ಸಮಷ್ಟಿ , ವಂಶಿ ಕೃಷ್ಣ ಹಾಗೂ ಮುಂತಾದವರು…
ಜೀವನದಲ್ಲಿ ಬದುಕು ನಡೆಸಲು ನಾನಾ ವೇಷ , ಕೆಲಸ ನಿರಂತರ. ಇದಲ್ಲದೆ ಕೆಲವರು ತಮ್ಮ ಕಳ್ಳತನದ ಕೈ ಕೈಚಳಕ , ಹಾಗೆಯೇ ಕೆಲವರಿಗೆ ಕದಿಯೋದೇ ಒಂದು ರೋಗ ,
ಮತೊಂದಿಷ್ಟು ಗ್ಯಾಂಗ್ ಗೆ ಹಣವಿದ್ದವರನ್ನು ಟ್ರಾಪ್ ಮಾಡುವ ಪ್ಲಾನ್ ಹೀಗೆ ನಾನಾ ರೀತಿ ದುಡ್ಡು ಮಾಡಿ ಮೋಸ ಮಾಡುವ ಜಾಲದ ಸುತ್ತ ಸೂಕ್ಷ್ಮವಾಗಿ ಕಥಾನಕವನ್ನ ರೂಪಗೊಳಿಸಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು”.
ಅನ್ಯ ಧರ್ಮೀಯ ವಿವಾಹಿತ ಇನಾಯತ್ (ಪ್ರಸನ್ನ ಶೆಟ್ಟಿ) ಜೀವನೋಪಾಯಕ್ಕಾಗಿ ಒಂದು ವಾಟರ್ ಪ್ಯೂರಿಫೈ ಸೇಲ್ಸ್ ಕೆಲಸ ಜೊತೆಗೆ ತನ್ನ ಅದೃಷ್ಟದ ಬೈಕ್. ನೋಡಲು ಮುಗ್ದನಾದರೂ ಬೈಕ್ ಕದಿಯುವುದರಲ್ಲಿ ಚಾಣಾಕ್ಷ , ಪರಿಸ್ಥಿತಿ , ಒತ್ತಡ , ನಂಬಿಕೆ ನಡುವೆಯೇ ಗೊಂದಲಕ್ಕೊಂದು ಒಂದು ಉತ್ತರ.
ಇನ್ನು ಮತ್ತೋರ್ವ ಶ್ರೀಮಂತ ಕುಟುಂಬದ ಹುಡುಗ ರೋಹಿತ್ (ಮಧುಸೂದನ್) ಎಲ್ಲಾ ಅನುಕೂಲ ಇದ್ದರೂ ಕಳ್ಳತನದ ಚಾಲಿ , ಅದೊಂದು ಕಾಯಿಲೆ ಕದ್ದರಷ್ಟೇ ಥ್ರಿಲ್ ಎನ್ನುವ ಇವನಿಗೆ ಸಿಗುವ ಗೆಳತಿ ರತ್ನ (ಅಪೂರ್ವ ಭಾರದ್ವಾಜ್) ಆಕೆಗೂ ಒಂದು ಕಾಯಿಲೆ , ಇವರಿಬ್ಬರ ನಡವಳಿಕೆ , ಬುದ್ಧಿ , ದಾಂಪತ್ಯ ಜೀವನಕ್ಕೆ ತೋರುವ ದಾರಿ ವಿಶೇಷ.
ಇನ್ನು ಮತ್ತೋರ್ವ ವ್ಯಕ್ತಿ ಆಲ್ಬರ್ಟ್ (ದಿಲೀಪ್ ರಾಜ್) ತನ್ನದೇ ಒಂದು ತಂಡದೊಂದಿಗೆ ಶ್ರೀಮಂತರು , ಕಪ್ಪು ಹಣ ಇರುವವರನ್ನು ಟಾರ್ಗೆಟ್ ಮಾಡಿ ತಮ್ಮ ಟ್ರ್ಯಾಪ್ ಗೆ ಸಿಲುಕಿಸಿ ಹಣ ಮಾಡುವುದು ಇವರ ಉದ್ದೇಶವಾದರೂ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಆಲೋಚನೆಯೂ ಮಾಡುತ್ತಾರೆ.
ಈ ತಂಡ ಟ್ರ್ಯಾಪ್ ಮಾಡಲು ಒಬ್ಬ ಶ್ರೀಮಂತ ವ್ಯಕ್ತಿ ಸಂಕೇತ ಪುರೋಹಿತ್ (ಹರಿ ಸಮಷ್ಟಿ) ಕುಟುಂಬ ಹಾಗೂ ಅವನ ಚಲನವಲನ ತಿಳಿಯಲು ಅಳವಡಿಸುವ ಸಿಸಿಟಿವಿ ಕ್ಯಾಮೆರಾಗಳು ಮತ್ತು ಅವನ ವೀಕ್ನೆಸ್ ತಿಳಿದು ಜನಿಫರ್ (ಶಿಲ್ಪ ಮಂಜುನಾಥ್) ಹುಡುಗಿಯ ಮೂಲಕ ಟ್ರ್ಯಾಪ್ ಮಾಡುವ ತಂತ್ರ ಸಕ್ಸಸ್ ಅನ್ನುವಷ್ಟರಲ್ಲಿ ರೋಚಕ ತಿರುವು ಬದುಕಿನ ಪಾಠ ತಿಳಿಸುತ್ತದೆ. ಈ ಮೂರು ಕಥೆ ಹೇಳೋದು ಏನು… ಎಲ್ಲಾ ಪ್ರಶ್ನೆಗೂ ಉತ್ತರ ಇದೆಯೇ… ಎಂಬ ಸೂಕ್ಷವನ್ನ ತಿಳಿಯಬೇಕಾದರೆ ಒಮ್ಮೆ ಎಲ್ಲರೂ ಈ ಚಿತ್ರವನ್ನು ನೋಡಬೇಕು.
ಈ ಕಥೆಗಳನ್ನು ಆಯ್ಕೆ ಮಾಡುವ ಮೂಲಕ ಒಬ್ಬ ಸೂಕ್ಷ್ಮ , ಬುದ್ಧಿವಂತ ನಿರ್ದೇಶಕ ಕೇಶವ ಮೂರ್ತಿ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಪರಿಸ್ಥಿತಿ , ಮನಸ್ಥಿತಿ , ರೋಗ , ರಣತಂತ್ರ ಎಲ್ಲವೂ ದುಡ್ಡಿನ ಸುಳಿಯಲ್ಲೇ ಸುತ್ತುವ ಹಾಗೆ ನಿರ್ದೇಶಕರು ಬೆಸೆದುಕೊಂಡಿರುವ ಕಥೆ ಗಮನ ಸೆಳೆಯುತ್ತದೆ. ಮೊದಲ ಭಾಗದ ಎರಡು ಕಥೆ ವೇಗವಾಗಿ ಸಾಗಿ ಸೆಳೆಯುತ್ತದೆ.
ಎರಡನೇ ಭಾಗ ಕುತೂಹಲ ಮೂಡಿಸಿ ನಿಧಾನ ಗತಿಯಲ್ಲಿ ಸಾಗುತ್ತದೆ. ಮತ್ತೊಂದು ಕಥೆಗೆ ಜಾಗ ಮಾಡಬಹುದಿತ್ತು. ತಾಂತ್ರಿಕವಾಗಿ ಇಡೀ ತಂಡದ ಶ್ರಮ ತೆರೆಯ ಮೇಲೆ ಕಾಣುತ್ತದೆ. ಇಂತಹ ಚಿತ್ರಕ್ಕೆ ನಿರ್ಮಾಪಕರ ತಂಡದ ಸಾತ್ ಮೆಚ್ಚುವಂತಿದೆ. ಇನ್ನು ಕಲಾವಿದ ಪ್ರಸನ್ನ ಶೆಟ್ಟಿ ಬೈಕ್ಗಳನ್ನ ಕದಿಯುವ ಕಳ್ಳನಾಗಿ ಅದ್ಭುತ ಅಭಿನಯ ನೀಡಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಹಾಗೆ ಮಧುಸೂದನ್ ಹಾಗೂ ಅಪೂರ್ವ ಭಾರದ್ವಾಜ್ ಜೋಡಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಇನ್ನು ನಟ ದಿಲೀಪ್ ರಾಜ್ ಸೂಕ್ಷ್ಮ ವ್ಯಕ್ತಿಯಾಗಿ ಜಾಣ್ಮೆಯಿಂದ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಶಿಲ್ಪ ಮಂಜುನಾಥ್ ಮುದ್ದಾಗಿ ಕಾಣುತ್ತಲೇ ಬೋಲ್ಡ್ ಪಾತ್ರವನ್ನು ಸೈ ಎನ್ನುವಂತೆ ನಿಭಾಯಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕೆ ಉತ್ತಮ ಸಾತ್ ನೀಡಿದ್ದಾರೆ. ಈ ಚಿತ್ರ ಬಹಳಷ್ಟು ಸೂಕ್ಷ್ಮ ವಿಚಾರವನ್ನ ತೆರೆಯ ಮೇಲೆ ತಂದಿದ್ದು , ಒಮ್ಮೆ ಎಲ್ಲರೂ ನೋಡುವಂತಿದೆ.