ಕಾವೇರಿ ಮಡಿಲಲ್ಲಿ “ನಿರ್ದಿಗಂತ”ದ ಮೊದಲ ವರ್ಷದ ಕಲರವ
ಸುಂದರ ಪರಿಸರದ ನಡುವೆ ಸ್ವಚ್ಛಂದವಾಗಿ ಹಾರಲು ಹಕ್ಕಿಗಳಿಗೆ ಕಟ್ಟಿಕೊಟ್ಟಿರುವ ಗೂಡು “ನಿರ್ದಿಗಂತ”. ಈ ಗೂಡಿನ ಯಜಮಾನ ಭಾರತೀಯ ಚಿತ್ರರಂಗ ಕಂಡಂತಹ ಪ್ರತಿಭಾನ್ವಿತ
ಬಹುಭಾಷಾ ನಟ ಪ್ರಕಾಶ್ ರೈ.ಸಿನಿಮಾ , ರಂಗಭೂಮಿ , ಸಾಮಾಜಿಕ ಸೇವೆ ಸೇರಿದಂತೆ ಹಲವು ವಿಚಾರ , ಮಾತುಕತೆಗೆ ನೇರ ನುಡಿಗಳ ಮೂಲಕ ಧ್ವನಿ ಎತ್ತಲು ಸದಾ ಮುಂದು ಎನ್ನುವಂತಹ ಈ ನಟನ ಮನಸ್ಸಲ್ಲೂ ಒಂದು ಸಾರ್ಥಕತೆ ಭಾವನೆ ಮೂಡಿದಂತಿದೆ. ಅರಮನೆ ನಗರ ಸಮೀಪದಲ್ಲಿರುವ ಶ್ರೀರಂಗಪಟ್ಟಣದ ಬಳಿಯ ಸುಮಾರು ಐದುವರೆ ಎಕರೆಯ ಕಾವೇರಿ ಮಡಿಲಲ್ಲಿ ಹೊಂದಿಕೊಂಡಿರುವ ಹಸಿರು ಪರಿಸರದಲ್ಲಿ ಸುಸರ್ಜಿತವಾದ “ನಿರ್ದಿಗಂತ” ಎಂಬ ರಂಗಶಾಲೆ ಆರಂಭಿಸಿ ಒಂದು ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲು ಮುಂದಾಗಿದೆ.
ಈ ಮೊದಲ ವರ್ಷದ ಸಂಭ್ರಮಾಚರಣೆಗೆ ನಟ ಪ್ರಕಾಶ್ ರೈ ತಮ್ಮ ಗುರುಗಳು, ಹಿತೈಷಿಗಳು ಹಾಗೂ ಮಾಧ್ಯಮದವರನ್ನು ಬರ ಮಾಡಿಕೊಳ್ಳುವ ಮೂಲಕ ನಿರ್ದಿಗಂತದ ನೆಲೆಯಲ್ಲಿ ರಂಗ ಪ್ರತಿಭೆಗಳಿಂದ ರಂಗಗೀತೆಗಳ ಸುರಿಮಳೆಯನ್ನ ಮನ ಸೆಳೆಯುವ ಹಾಗೆ ಪ್ರಸ್ತುತಿ ಪಡಿಸಿದರು. ಇನ್ನು ವಿಶೇಷವಾಗಿ ರಂಗ ವೇದಿಕೆಯ ಮೇಲೆ “ನಿರ್ದಿಗಂತ” ದ ವಾರ್ಷಿಕ ಸಂಚಿಕೆಯನ್ನ ಹಿರಿಯ ಪತ್ರಕರ್ತರು ಡಾ. ವಿಜಯಮ್ಮ ಹಾಗೂ ರವರಿಂದ ಬಿಡುಗಡೆಗೊಳಿಸಿದರು.
ಹಾಗೆ ತಮ್ಮ ಒಡನಾಡಿ , ಸ್ನೇಹಿತರುಗಳಾದ ಕೃಪಾಕರ – ಸೇನಾನಿ, ಕೃಷ್ಣಮೂರ್ತಿ ಹನೂರು, ಬಿ. ಸುರೇಶ್, ಕೆ.ವೈ. ನಾರಾಯಣ ಸ್ವಾಮಿ, ಮಮತಾ ಸಾಗರ, ಜೋಗಿ, ವಿಶುಕುಮಾರ್, ಅಚ್ಯುತ್ ಕುಮಾರ್, ಕಿಶೋರ್, ರವೀಂದ್ರ ಭಟ್ , ಶಶಿಧರ್ ಹಡಪ ಸೇರಿದಂತೆ ಹಲವಾರು ಈ ಒಂದು ಕಾರ್ಯಕ್ರಮದಲ್ಲಿ ಹಾಜರಿದಿದ್ದು ವಿಶೇಷ. ಇಡೀ ದಿನ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದು , ನಾಟಕ , ರಂಗಗೀತೆಗಳು , ಭಿತ್ತಿಪತ್ರ ಪ್ರದರ್ಶನ , ಸಮಾಲೋಚನೆ ನಡೆಸಿದೆ.
ಇದರ ನಡುವೆ ಮಾಧ್ಯಮದವರನ್ನು ತಮ್ಮ ಸುಂದರ ಪರಿಸರದ ನಿರ್ದಿಗಂತಕ್ಕೆ ಬರಮಾಡಿಕೊಂಡ ನಟ ಪ್ರಕಾಶ್ ರೈ ಮಾತನಾಡುತ್ತಾಇದು ರಂಗಶಾಲೆ ಎನ್ನುವುದಕ್ಕಿಂತ ರಂಗಭೂಮಿಯ ಕಲಾವಿದರಿಗೆ ಕಾವುಗೂಡು ಎನ್ನುವುದು ಸೂಕ್ತ ಎನಿಸುತ್ತದೆ. ನಾನು ರಂಗಭೂಮಿಯಿಂದ ಬಂದವನು. ರಂಗಭೂಮಿಗೆ ಏನಾದರೂ ವಾಪಸ್ಸು ಕೊಡಬೇಕು ಎಂಬ ಆಲೋಚನೆಯಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡು ರಂಗತಂಡ ಕಟ್ಟುವುದಾ? ನಾಟಕಗಳಲ್ಲಿ ಪುನಃ ಅಭಿನಯಿಸುವುದಾ? ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಅದೆಲ್ಲಕ್ಕಿಂತ ಹೆಚ್ಚಾಗಿ ಸಮಕಾಲೀನ ಸಾಂಸ್ಖೃತಿಕ ಜಗತ್ತಿನಲ್ಲಿ ಸೃಜನಾತ್ಮಕವಾಗಿ ತೊಡಗಿಕೊಳ್ಳುವ ಹಂಬಲದಿಂದ ಹುಟ್ಟಿಕೊಂಡಿದ್ದು ನಿರ್ದಿಗಂತ. ಇದೊಂದು ರಂಗಭೂಮಿ ಅಥವಾ ನಾಟಕ ಶಾಲೆ ಎನ್ನುವದಕ್ಕಿಂತ ಸಾಹಿತ್ಯ, ಚಿತ್ರಕಲೆ, ನೃತ್ಯ, ಶಿಲ್ಪ ಮೊದಲಾದ ಲಲಿತ ಕಲೆಗಳನ್ನೊಳಗೊಂಡ ಜಾಗ ಎನ್ನಬಹುದು. ಇದಕ್ಕೆ ಏನು ಹೆಸಿರಡಬಹುದು ಎಂದು ಯೋಚಿಸುತ್ತಿದ್ದಾಗ, ಕುವೆಂಪು ಅವರ ಕಾವ್ಯದ ಸಾಲುಗಳಲ್ಲಿ ರೂಪಕವಾಗಿ ಬರುವ ನಿರ್ದಿಗಂತ ಸರಿ ಎನಿಸಿತು ಹಾಗಾಗಿ ಈ ಸ್ಥಳಕ್ಕೆ ಆ ಹೆಸರನ್ನ ಇಟ್ಟಿದ್ದೇವೆ.
ಇಲ್ಲಿಗೆ ಬರುವ ಶ್ರದ್ದೆಯ , ಆಸಕ್ತಿ , ಗುರಿ ಇರುವ ಹಕ್ಕಿಗಳಿಗೆ ದಾರಿ ತೋರುವ ಜೊತೆಗೆ ಉತ್ತೇಜನವನ್ನು ನೀಡಿ ಭವಿಷ್ಯದಲ್ಲಿ ಬೆಳಕು ಕಾಣುವ ಆದಿ ತೋರಿಸುವ ತನಕ ನಮ್ಮದು. ಆ ನಿಟ್ಟಿನಲ್ಲಿ ನಮ್ಮ ಜೊತೆ ಬಹುತೇಕ ಸಮಾನಮನಸ್ಕರು , ಅನುಭವಿಗಳು ಕೈಜೋಡಿಸಿರುವುದು ವಿಶೇಷ. ಈಗಾಗಲೇ ಆ ನಿಟ್ಟಿನಲ್ಲಿ ನಾಲ್ಕು ತಂಡಗಳನ್ನು ರೂಪಿಸಲಾಗಿದೆ.
ಯುವ ಸಮುಚದಾಯವನ್ನು ತಲುಪುವ ಉದ್ದೇಶದಿಂದ ಕಾಲೇಜು ರಂಗ, ಶಾಲಾ ಮಕ್ಕಳಿಗಾಗಿ ಶಾಲಾರಂಗ, ಮಕ್ಕಳೊಡನೆ ರಂಗಪ್ರಯೋಗ ನಡೆಸಲು ಶಾಲಾ ರಂಗವಿಕಾಸ, ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ರಂಗವಿಕಾಸ ಯೋಜನೆಗಳನ್ನು ರೂಪಿಸಲಾಗಿದೆ. ಇಲ್ಲಿ ನಾಟಕಗಳನ್ನು ಹೇಳಿಕೊಡುವ ಮತ್ತು ನಾಟಕಗಳನ್ನಾಡಿಸುವ ಜೊತೆಗೆ ರಂಗಭೂಮಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಕೆಲಸವನ್ನು ನಿರ್ದಿಗಂತ ಮಾಡುತ್ತದೆ. ನಮ್ಮಲ್ಲಿ ಹಲವು ಕಡೆ ಕಲಿತು ಬಂದಿರುವ ಸಾಕಷ್ಟು ಪ್ರತಿಭಾವಂತರು ಇದ್ದಾರೆ.
ಅವರನ್ನು ಬಳಸಿಕೊಂಡು, ರಾಜ್ಯದ ಮೂಲೆಮೂಲೆಗಳಲ್ಲಿ ರಂಗಭೂಮಿಯನ್ನು ವಿಸ್ತರಿಸುವ ಮತ್ತು ರಂಗಭೂಮಿಯನ್ನು ಪಠ್ಯವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವ ನಿಟ್ಟಿನಲ್ಲಿ ನಿರ್ದಿಗಂತ ಕೆಲಸ ಮಾಡಲಿದೆ. ಈಗಾಗಲೇ ಪಠ್ಯಕ್ರಮಕ್ಕೆ ಬೇಕಾಗುವ ವಿಷಯಗಳನ್ನು ಕ್ರೋಢೀಕರಿಸುತ್ತಿದ್ದು, ಮುಂದಿನ ಮಾರ್ಚ್ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮುಂದಿನ ರೂಪರೇಷೆಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶವನ್ನು ಹೊಂದಿದ್ದೇವೆ.
ಈಗಾಗಲೇ ನಮ್ಮ ತಂಡದಿಂದ ಮಕ್ಕಳ ಶಿಬಿರ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವವುಳ್ಳ ಐದು ಕಲಾವಿದರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಿ, ರಾಜ್ಯದ ಶಾಲೆಗಳಿಗೆ ಅವರನ್ನು ರಂಗಶಿಕ್ಷಕರನ್ನಾಗಿ ಆರು ತಿಂಗಳ ಕಾಲ ನಿಯೋಜನೆ ಮಾಡಲಾಗಿದೆ. ಅವರು ಮಕ್ಕಳಿಗೆ ನಾಟಕ, ಸಂಗೀತ ಮೊದಲ ವಿಷಯವನ್ನು ಹೇಳಿಕೊಡಲಿದ್ದಾರೆ. ಜೊತೆಗೆ, ಐವರು ಯುವ ನಿರ್ದೇಶಕರಿಗೆ ನಿರ್ದಿಗಂತ ವತಿಯಿಂದ ಫೆಲೋಶಿಪ್ ನೀಡಲಾಗಿದ್ದು, ಅವರು ಕಟ್ಟಿದ ಹೊಸ ನಾಟಕಗಳನ್ನು ರಾಜ್ಯದ ಎರಡು ಕಡೆಗಳಲ್ಲಿ ಪ್ರಯೋಗಿಸಲಾಗಿದೆ. ‘ನೇಹದ ನೇಯ್ಗೆ’ ಎಂಬ ಎರಡು ರಂಗೋತ್ಸವಗಳನ್ನು ಸಂಘಟಿಸಲಾಗಿದೆ. ಈ ಉತ್ಸವಗಳಲ್ಲಿ ನಾಡಿನ, ಈ ದೇಶದ ಮತ್ತು ಬೇರೆ ದೇಶಗಳ ಕಲಾ ಪ್ರತಿನಿಧಿಗಳು ಭಾಗವಹಿಸುವುದರ ಜೊತೆಗೆ, ಹೊಸ ರಂಗಭಾಷೆಯ ಹುಡುಕಾಟ ನಡೆದಿದೆ. ಜೊತೆಗೆ ನೃತ್ಯ, ಸಂಗೀತ ಮೊದಲಾದ ಕಾರ್ಯಾಗಾರಗಳು ಇಲ್ಲಿ ನಡೆದಿವೆ ಎಂದರು.
ಒಂದು ಹೊಸ ಆಲೋಚನೆ ವಿಭಿನ್ನ ಹಾದಿಯಲ್ಲಿ ಸಾಗಲು ಮುಂದಾಗಿರುವ ನಿರ್ದಿಗಂತದ ರೂವಾರಿ ಪ್ರಕಾಶ್ ರೈ ಅವರ ಜೊತೆಗೆ ಡಾ. ಶ್ರೀಪಾದ್ ಭಟ್, ಶಾಲೋಮ್ ಸನ್ನುತ, ಮುನ್ನ ಮೈಸೂರು, ಸುಶ್ಮಿತಾ ಚೈತನ್ಯ, ಅನುಷ್ ಶೆಟ್ಟಿ, ಕೃಪಾಕರ ಸೇನಾನಿ ಮುಂತಾದವರು ಕೈಜೋಡಿಸಿದ್ದಾರೆ. ಸದ್ಯಕ್ಕೆ ಎರಡು ವರ್ಷದ ಅವಧಿಗೆ ಒಂದಷ್ಟು ಕಾರ್ಯಕ್ರಮಗಳು, ಯೋಜನೆಯನ್ನು ಹಾಕಿಕೊಂಡಿದ್ದು , ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಿರ್ದಿಗಂತ ಹಾರಲು ಬರುವ ಹಕ್ಕಿಗಳಿಗೆ ದಾರಿ ದೀಪವಾಗಲಿ.