ಡೀಲ್ ಆಟದಲ್ಲಿ ವಿಧಿಯ ಪಾಠ : ನಾಟ್ ಔಟ್ ಚಿತ್ರವಿಮರ್ಶೆ (ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ನಾಟ್ ಔಟ್
ನಿರ್ದೇಶಕ : ಅಂಬರೀಶ್ .ಎಂ.
ನಿರ್ಮಾಪಕರು : ವಿ. ರವಿ ಕುಮಾರ್ , ಶಂಶುದ್ದೀನ್. ಎ
ಸಂಗೀತ : ಜ್ಯೂಡಾ ಸ್ಯಾಂಡಿ
ಛಾಯಾಗ್ರಹಣ : ಹಾಲೇಶ್
ತಾರಾಗಣ : ಅಜಯ್ ಪೃಥ್ವಿ , ರಚನಾ ಇಂದರ್, ರವಿಶಂಕರ್, ಗೋವಿಂದೇಗೌಡ , ಕಾಕ್ರೋಚ್ ಸುದಿ , ಸಲ್ಮಾನ್, ಪ್ರಶಾಂತ್ ಸಿದ್ಧಿ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಮುಂತಾದವರು…
ಸಾಮಾನ್ಯವಾಗಿ ಹುಲಿ- ಕುರಿ ಆಟ ನಮಗೆಲ್ಲ ಗೊತ್ತಿದೆ. ಅದು ಒಂದು ರೀತಿಯ ಚದುರಂಗ. ಅಂತಹದ್ದೇ ಒಂದಷ್ಟು ಅಂಶಗಳೊಂದಿಗೆ ಬದುಕು , ಬವಣೆ , ಆಸ್ತಿ , ಆಸೆ , ಬಡ್ಡಿ ವ್ಯವಹಾರ , ಮೋಸ , ಪ್ರೀತಿ, ಸಂಚಿನ ಕಥಾ ಎಳೆಯ ಮೂಲಕ ಜೀವ ಹಾಗೂ ಜೀವದ ಪಾಠವಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ನಾಟ್ ಔಟ್”.
ಇಲ್ಲಿ ಡಿ ಗ್ಯಾಂಗ್ ದೇ ಹವಾ… ಶೆಡ್ ಗೆ ಕರೆದುಕೊಂಡು ಬಂದು ಹಿಗ್ಗಾಮುಗ ರುಬ್ಬುವುದೇ ಇವರ ಕಾಯಕ. ಬಡ್ಡಿ ವ್ಯವಹಾರ ಮಾಡುತ್ತಾ ತನ್ನ ಬಳಿ ಕಷ್ಟ ಎಂದು ಸಾಲ ಕೇಳಿಕೊಂಡು ಬಂದವರಿಗೆ ಹಣವನ್ನ ನೀಡಿ ಸಮಯಕ್ಕೆ ಸರಿಯಾಗಿ ನೀಡಿದಾಗ ತನ್ನ ಗ್ಯಾಂಗ್ ಮೂಲಕ ಬಿಸಿ ಮುಟ್ಟಿಸಿ ಹವಾ ಮೆಂಟೇನ್ ಮಾಡುತ್ತಿರುತ್ತಾನೆ ಒಂಟಿ ಕೊಪ್ಪಲು ದೇವರಾಜ್ (ರವಿಶಂಕರ್).
ಇದರ ನಡುವೆ ಅಜಯ್ ( ಅಜಯ್ ಪೃಥ್ವಿ). ದೇವರಾಜ್ ಬಳಿ ಸಾಲ ಪಡೆದು ಆಂಬುಲೆನ್ಸ್ ಓಡಿಸುತ್ತಾ ತನ್ನ ಗೆಳತಿ ಶ್ರೀದೇವಿ (ರಚನಾ ಇಂದರ್) ಪ್ರೀತಿ ಮಾಡುತ್ತಾನೆ. ಹಾಸ್ಪಿಟಲ್ ನಲ್ಲಿ ನರ್ಸ್ ಕೆಲಸ ಮಾಡುತ್ತಾ ತನ್ನ ಪ್ರಿಯಕರನ ಜೊತೆ ವಿದೇಶಕ್ಕೆ ಹೋಗಿ ಹಣ ಸಂಪಾದನೆ ಮಾಡುವ ಉದ್ದೇಶ ಅವಳದು. ಇದರ ನಡುವೆ ವಿದೇಶದಿಂದ ಶ್ರೀಧರ (ಗೋಪಾಲಕೃಷ್ಣ ದೇಶಪಾಂಡೆ) ತನ್ನ ತಂದೆ ಪೋಸ್ಟ್ ಮಾಸ್ಟರ್ ಆಗಿ ಸಂಪಾದಿಸಿದ ನಾಲ್ಕು ಎಕರೆ ಜಮೀನಿನಲ್ಲಿ ಅಪ್ಪನ ವರ್ಷದ ಕಾರ್ಯ ಮಾಡಲು ಬಂದರು ಬಿಡದ ದೇವರಾಜ್ ಅದು ನನ್ನ ಆಸ್ತಿ ಎನ್ನುತ್ತಾನೆ. ಇದಕ್ಕೆ ಪೊಲೀಸ್, ತಾಲೂಕು ಕಚೇರಿಯ ಕೆಲವರು ಸಾತ್ ಇರುತ್ತಾದೆ.
ತನ್ನ ಜಮೀನು ಹಾಗೂ ತಂದೆ ಸಮಾದಿಗೆ ಪೂಜೆ ಸಲ್ಲಿಸಲಾಗದೆ ದೇವರಾಜ್ ಎದುರು ನಿಲ್ಲಲು ಆಗದೆ ಪರದಾಡುವ , ಸಿನಿಮಾ ನಿರ್ದೇಶನ ಮಾಡುವ ಆಸೆ ಇದ್ದರೂ ಹೋಟೆಲ್ ವೇಟರ್ ಕೆಲಸ ಮಾಡುವ ಮೈಕಲ್ (ಗೋವಿಂದೇಗೌಡ) ರೌಡಿ ಸ್ನೇಕ್ ಸೀನನನ್ನ ಶ್ರೀಧರ್ ಗೆ ಪರಿಚಯ ಮಾಡಿಸುತ್ತಾನೆ. ಇದರ ನಡುವೆ ಸ್ನೇಹಿತ ಸೀನನ ಬಳಿ ಗೆಳೆಯ ಅಜಯ್ ತನ್ನ ಕಷ್ಟ ಹೇಳಿಕೊಂಡಿರುತ್ತಾನೆ. ಶ್ರೀಧರ ಹೇಳಿದ ಡೀಲ್ ಬೇಡ ಎನ್ನುವ ಸ್ನೇಕ್ ಸೀನನನ್ನ ಒಪ್ಪಿಸುವ ಅಜಯ್ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ದೇವರಾಜ್ ನನ್ನ ಕೊಲೆ ಮಾಡಲು ಸಂಚು ರೂಪಿಸುತ್ತಾರೆ. ಅಲ್ಲಿಂದ ಕಥೆ ಬೇರೆದೇ ತಿರುವನ್ನ ಪಡೆದು ಒಂದು ರೋಚಕ ಘಟ್ಟಕ್ಕೆ ಬರುತ್ತದೆ.
ದೇವರಾಜ್ ಕೊಲೆ ಆಗುತ್ತಾ…
ಇಬ್ಬರ ಪ್ಲಾನ್ ಏನು…
ಶ್ರೀದೇವಿ ಆಸೆ ಏನಾಯ್ತು…
ಜೀವ ಹಾಗೂ ಜೀವನದ ಗತಿ..
ಕ್ಲೈಮಾನ್ಸ್ ಉತ್ತರ ಏನು..
ಇದಕ್ಕೆ ಉತ್ತರ… ನೀವು ಚಿತ್ರಮಂದಿರಕ್ಕೆ ಬರಲೇಬೇಕು.
ನಿರ್ದೇಶಕ ಅಂಬರೀಶ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ವಿಭಿನ್ನವಾಗಿದ್ದು , ಜೀವ ಹಾಗೂ ಜೀವನದ ಪಾಠವನ್ನು ಹುಲಿ ಕುರಿ ಆಟಕ್ಕೆ ಬೆಸೆದಿರುವ ರೀತಿ ಉತ್ತಮವಾಗಿದೆ. ಆದರೆ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಮೊದಲ ಭಾಗಕ್ಕಿಂತ ದ್ವಿತೀಯ ಭಾಗ ಗಮನ ಸೆಳೆಯುತ್ತದೆ. ಆದರೆ ಸಂಗೀತ ಹಾಗೂ ಛಾಯಾಗ್ರಹಣ ಕೆಲಸಕ್ಕೆ ಹೆಚ್ಚು ಒತ್ತು ಕೊಡಬಹುದಿತ್ತು. ಈ ಚಿತ್ರಕ್ಕೆ ನಿರ್ಮಾಪಕರು ಅಗತ್ಯಕ್ಕೆ ಏನು ಬೇಕು ಅದನ್ನು ಕೊಟ್ಟಂತಿದೆ.
ಇಡೀ ಚಿತ್ರದ ಹೈ ಲೈಟ್ ರವಿಶಂಕರ್ ಖದರ್ ಲುಕ್. ಮಾತಿನ ಗತ್ತು , ಟೈಮಿಂಗ್ಸ್ , ಹಣೆಯ ಮೇಲಿನ ನಾಲ್ಕು ನಾಮದ ಪವರ್ ಫುಲ್ ಡೈಲಾಗ್ ಡೆಲಿವರಿ. ಹಾಗೆಯೇ ಚಿತ್ರದ ಕೇಂದ್ರ ಬಿಂದುವಾಗಿ ಗೆದ್ದಿದ್ದಾರೆ. ಇನ್ನು ನಾಯಕನಾಗಿ ನಟಿಸಿರುವ ಅಜಯ್ ಪೃಥ್ವಿ ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಒಬ್ಬ ಆಂಬುಲೆನ್ಸ್ ಡ್ರೈವರ್ ಹಾಗೂ ಪ್ರೇಮಿಯಾಗಿ ಗಮನ ಸೆಳೆದಿದ್ದಾರೆ.
ಇನ್ನು ನರ್ಸ್ ಪಾತ್ರಕ್ಕೆ ರಚನಾ ಇಂದರ್ ಜೀವ ತುಂಬಿ ಅಭಿನಯಿಸಿರುವ ಜೊತೆಗೆ ಮುದ್ದು ಮುದ್ದಾಗಿ ಕಾಣುತ್ತಾರೆ. ತನಗಾದ ನೋವನ್ನ ಅನುಭವಿಸುತ್ತಾ ಸುಪಾರಿ ನೀಡುವ ಪಾತ್ರವನ್ನ ಲೀಲಾಜಾಲವಾಗಿ ಗೋಪಾಲಕೃಷ್ಣ ದೇಶಪಾಂಡೆ ನಿಭಾಯಿಸಿದ್ದಾರೆ. ಗೋವಿಂದೇಗೌಡ , ಕಾಕ್ರೋಚ್ ಸುದಿ , ಸಲ್ಮಾನ್ , ಪ್ರಶಾಂತ್ ಸಿದ್ಧಿ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ಕುತೂಹಲಕಾರಿಯಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ