ಇದೆ ಜೂ.30ರಂದು ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ
ಚಿತ್ರೋದ್ಯಮದ ನಿರ್ಮಾಪಕರ ಬಹುದಿನದ ಕನಸು ನನಸಾಗುವ ಸಮಯ ಕೂಡಿಬಂದಿದೆ. ನಿರ್ಮಾಪಕರನ್ನ ಅನ್ನದಾತ ಎಂದು ಕರೆದ ವರನಟ ಡಾ. ರಾಜ್ ಕುಮಾರ್ ಸಿನಿಮಾ ಮಾಡುವ ನಿರ್ಮಾಪಕರಿಗೆ ಯಶಸ್ಸು , ಲಾಭ ಸಿಗಬೇಕು ಎನ್ನುತ್ತಿದ್ದರಂತೆ. ಅಂತ ನಿರ್ಮಾಪಕರಿಗೆ ಈಗ ಒಂದು ಸ್ವಂತ ಮೇಲೆ ಸಿಕ್ಕಂತಾಗಿದೆ.
ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ನಾಲ್ಕು ಅಂತಸ್ತಿನ ನಿರ್ಮಾಪಕರ ಸಂಘದ ನೂತನ ಕಟ್ಟಡವನ್ನ ಕರ್ನಾಟಕದ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ 30ರಂದು ಉದ್ಘಾಟನೆ ಮಾಡಲಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಚಿತ್ರೋದ್ಯಮದ ಗಣ್ಯರು , ನಟ , ನಟಿಯರು , ತಂತ್ರಜ್ಞರು ಸೇರಿದಂತೆ ದಕ್ಷಿಣ ಭಾರತದ ವಾಣಿಜ್ಯ ಮಂಡಳಿಯ ಪ್ರಮುಖ ಗಣ್ಯರು ಬರ್ಲಿದ್ದಾರಂತೆ.
ಈ ಕಟ್ಟಡ ಉದ್ಘಾಟನೆಯ ಕಾರ್ಯಕ್ರಮದ ಬಗ್ಗೆ ನಿರ್ಮಾಪಕರದ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಉಮೇಶ್ ಬಣಕಾರ್ , ಉಪಾಧ್ಯಕ್ಷ ಎಂ.ಜಿ ರಾಮಮೂರ್ತಿ , ಗೌರವ ಕಾರ್ಯದರ್ಶಿ ಡಿ.ಕೆ .ರಾಮಕೃಷ್ಣ , ಜಂಟಿ ಕಾರ್ಯದರ್ಶಿ ರಮೇಶ್ ಯಾದವ್ , ಖಜಾಂಚಿ ಆರ್. ಎಸ್. ಗೌಡ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷ ಸಾ.ರಾ.ಗೋವಿಂದು ಮಾಹಿತಿ ಹಂಚಿಕೊಂಡರು.
ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿ ಈ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರಾದ ಮಧು ಬಂಗಾರಪ್ಪ, ಕೆ.ಎನ್.ರಾಜಣ್ಣ, ಶಾಸಕ ರಿಜ್ವಾನ್ ಹರ್ಷದ್ ಸೇರಿದಂತೆ ಹಲವು ಗಣ್ಯರು ಭಾಯಾಗಲಿದ್ದಾರೆ. ಅಲ್ಲದೆ ಸೌತ್ ಇಂಡಿಯನ್ ಫಿಲಂ ಚೇಂಬರ್‌ನ ಅಧ್ಯಕ್ಷರಾದ ರವಿ ಕೊಟ್ಟಾರಕರ್ ಕೂಡ ಆಗಮಿಸಲಿದ್ದಾರೆ ಎಂದರು.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಚಿತ್ರರಂಗದ ಎಲ್ಲಾ ವಿಭಾಗಗಳಿಗೂ ಆಹ್ವಾನ ನೀಡುತ್ತಿದ್ದೇವೆ ಎಂದು ನಿರ್ಮಾಪಕ ಪ್ರವೀಣ್ ಕುಮಾರ್ ಹೇಳಿದರು.
ಕಟ್ಟಡ ಸಮಿತಿ ಅಧ್ಯಕ್ಷ ನಿರ್ಮಾಪಕ ಸಾ.ರಾ. ಗೋವಿಂದು ಮಾತನಾಡುತ್ತ ಇಷ್ಟು ವರ್ಷಗಳ ನಂತರ ನಾವೀಗ ಸ್ವಂತ ಕಟ್ಟಡ ಹೊಂದುತ್ತಿದ್ದೇವೆ, ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಾವ ಭಾಷೆಯ ನಿರ್ಮಾಪಕರ ಸಂಘಕ್ಕೂ ಸ್ವಂತ ಕಟ್ಟಡವಿಲ್ಲ, ನಾವು ಮೊದಲ ಬಾರಿಗೆ ಮಾಡಿದ್ದೇವೆ ಎನ್ನುವುದೇ ಖುಷಿಯ ವಿಚಾರ. ಜೂನ್ 30ರ ಬೆ.11ಕ್ಕೆ ಕಟ್ಟಡದ ಉದ್ಘಾಟನೆ ನಡೆಯಲಿದೆ.
ಈ ಕೆಲಸದಲ್ಲಿ ನಮ್ಮ ನಿರ್ಮಾಪಕರ ಕೊಡುಗೆಯೇ ಜಾಸ್ತಿ ಇದೆ, ಹಾಗೂ ದಾನಿಗಳ ಕೊಡುಗೆಯೂ ಬಹಳವಿದೆ. ಸುಮಾರು 15 ರಿಂದ 20 ಕೋಟಿ ವೆಚ್ಚದಲ್ಲಿ ನಾಲ್ಕು ಫ್ಲೋರ್‌ಗಳನ್ನು ಒಳಗೊಂಡ ಕಟ್ಟಡವಿದು, ಸದಸ್ಯರಿಗೆ, ನಿರ್ಮಾಪಕರಿಗೆ ಇದರಿಂದ ತುಂಬಾ ಅನುಕೂಲವಾಗುತ್ತೆ.
ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಆ ದಿನ ಸಿಎಂ ಎದುರು ನಮ್ಮ ಅನೇಕ ಬೇಡಿಕೆಗಳನ್ನು ಮಂಡಿಸುತ್ತಿದ್ದೇವೆ. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಹಲವರು ಕೈ ಜೋಡಿಸಿದ್ದಾರೆ. ನಿರ್ಮಾಪಕ ರಮೇಶ್‌ರೆಡ್ಡಿ ಅವರು ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದಾರಲ್ಲದೆ, ನಾವು ಕೊಟ್ಟಾಗ ಹಣ ತೆಗೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು 50 ಲಕ್ಷ ನೀಡಿದ್ದಾರೆ.
ಆರ್.ಎಸ್. ಗೌಡರ ಪತ್ನಿ ಪದ್ಮಾ ಅವರು 1 ಕೋಟಿ ಅಲ್ಲದೆ ಚಲನಚಿತ್ರ ವಾಣಿಜ್ಯ ಮಂಡಳಿ 1.50ಲಕ್ಷ ಸಹಾಯ ನೀಡಿದೆ. ಇವರಲ್ಲದೆ ಎನ್.ಎಮ್. ಸುರೇಶ್, ಮುನಿರತ್ನ ಸೇರಿದಂತೆ ಹಲವರು ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಾಲ್ಕನೇ ಫ್ಲೋರ್‌ನಲ್ಲಿ ಆಡಿಟೋರಿಯಂ ಜೊತೆಗೆ ಸ್ಕ್ರೀನಿಂಗ್ ವ್ಯವಸ್ಥೆಯೂ ಇದೆ, ಕ್ಯಾಂಟೀನ್ ವ್ಯವಸ್ಥೆ ಕೂಡ ಮಾಡುತ್ತಿದ್ದೇವೆ, ಎಲ್ಲಾ ಮಾಜಿ ಅಧ್ಯಕ್ಷರುಗಳು, ಸಂಘಗಳ ಪದಾಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಿದ್ದೇವೆ, ಇದೇ ಸಂದರ್ಭದಲ್ಲಿ ಚಲನಚಿತ್ರ ನಿರ್ಮಾಪಕರ ಸಂಘದ ಇತಿಹಾಸ ಎಂಬ ಸ್ಮರಣ ಸಂಚಿಕೆಯನ್ನೂ ಹೊರತರುತ್ತಿದ್ದೇವೆ. ಅದರಲ್ಲಿ ಸಂಘದ ಹಿಂದಿನ ಎಲ್ಲಾ ಮಾಹಿತಿಗಳು ಇರುತ್ತವೆ ಎಂದು ಹೇಳಿದರು.
ಇನ್ನು ಸಮಾರಂಭದ ದಿನದ ಕಾರ್ಯಕ್ರಮದ ರೂಪರೇಷೆಗಳು ನಡೆಯುತ್ತಿದ್ದು , ಬಹಳ ಅಚ್ಚುಕಟ್ಟಾಗಿ ನಿರ್ಮಾಪಕರ ಸಂಘದ ಕಟ್ಟಡದ ಉದ್ಘಾಟನೆ ನಡೆಯಲಿದ್ದು , ಚಿತ್ರೋದ್ಯಮದ ಎಲ್ಲಾ ಗಣ್ಯರು ಹಾಗೂ ಅಂಗ ಸಂಸ್ಥೆಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮನವಿಯನ್ನ ಮಾಡಿಕೊಂಡಿದ್ದಾರೆ