“ರೋಜಿ” ಚಿತ್ರದಲ್ಲಿ ಒರಟ ಪ್ರಶಾಂತ್ ಎಂಟ್ರಿ
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ನಿರೀಕ್ಷೆಯನ್ನು ಮೂಡಿಸುತ್ತಿರುವಂತಹ ಚಿತ್ರ “ರೋಜಿ”. ಇದು ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ. ಈಗಾಗಲೇ ಶ್ರೀನಗರ ಕಿಟ್ಟಿ ಹಾಗೂ ತಮಿಳಿನ “ಲಿಯೋ” ಚಿತ್ರದ ಸ್ಯಾಂಡಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು , ಈಗ ನಟ ಒರಟ ಪ್ರಶಾಂತ್ “ರೋಜಿ” ಚಿತ್ರದಲ್ಲಿ ಸ್ವಾಮಿ ಅಣ್ಣ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು , ಆ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಚಿತ್ರತಂಡದಿಂದ ಬಿಡುಗಡೆಯಾಗಿದೆ.
ಈ “ರೋಜಿ” ಚಿತ್ರದ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದ್ದು , ಈ ಚಿತ್ರದ ನಿರ್ದೇಶಕ ಶೂನ್ಯ ಒಂದು ಪತ್ರಿಕಾಗೋಷ್ಠಿಗೆ ಬರುವಾಗ ಇರಬೇಕಾದ ಮಾಮೂಲಿ ಡ್ರೆಸ್ ಕೋಡ್ ಮರೆತು ಬರ್ಮುಡಾ ಚಡ್ಡಿ ಯಲ್ಲಿ ವೇದಿಕೆ ಮೇಲೆ ಬಂದಾಗ ಈ ರೀತಿ ಬರುವುದು ಸರಿಯೇ ಎಂಬ ಪ್ರಶ್ನೆಗೆ ನಾನು ಹೀಗೆ ಬರುತ್ತೇನೆ ಎಂಬ ಉತ್ತರ ಎಷ್ಟರ ಮಟ್ಟಿಗೆ ಸರಿ ಅನ್ನುವುದನ್ನು ತಿಳಿದುಕೊಳ್ಳಬೇಕು.
ಇದರ ಹೊರತಾಗಿ ಚಿತ್ರದ ಕುರಿತು ಮಾತನಾಡುತ್ತಾ ಇದೊಂದು ಸ್ಟೈಲಿಶ್ ಗ್ಯಾಂಗ್ ಸ್ಟಾರ್ ಚಿತ್ರವಾಗಿದ್ದು , ಬಹಳಷ್ಟು ವಿಭಿನ್ನ ಪಾತ್ರಗಳು ಬರಲಿದೆ. ಅದರಲ್ಲೂ ಈಗ ಬಹಳ ವರ್ಷದ ಗ್ಯಾಪ್ ನಂತರ ಒರಟ ಪ್ರಶಾಂತ್ ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸ್ವಾಮಿ ಅಣ್ಣ ಎನ್ನುವುದು ಅವರ ಪಾತ್ರದ ಹೆಸರು. ಈಗಾಗಲೇ ಸುಮಾರು 70ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಇನ್ನೂ ಕೆಲವು ಪ್ರಮುಖ ಪಾತ್ರಗಳಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡುತ್ತೇನೆ ಎಂದರು.
ಇನ್ನು ಈ ಚಿತ್ರದಲ್ಲಿ ಸ್ವಾಮಿ ಅಣ್ಣ ಪಾತ್ರ ಮಾಡುತ್ತಿರುವ ಒರಟ ಪ್ರಶಾಂತ್ ಮಾತನಾಡುತ್ತಾ ನಾನು ಬಹಳ ಗ್ಯಾಪ್ ನಂತರ ಅಭಿನಯಿಸುತ್ತಿದ್ದೇನೆ. ನನ್ನದು ಒಂದಷ್ಟು ಸಿನಿಮಾ ಕೆಲಸಗಳು ನಡೆಯುತ್ತಿದೆ. ಇದರ ನಡುವೆ ನಿರ್ದೇಶಕರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಬಹಳ ಇಷ್ಟವಾಯಿತು ಜೊತೆಗೆ ನಾನು ಹಾಗೂ ಯೋಗಿ ಬಹಳ ಹಳೆಯ ಗೆಳೆಯರು , ನಾವು ಒಟ್ಟಿಗೆ ಅಭಿನಯಿಸಬೇಕಾಗಿತ್ತು ಆದರೆ ಆ ಸದಾವಕಾಶ ಈ ಚಿತ್ರದ ಮೂಲಕ ಕೂಡಿ ಬಂದಿದೆ. ಅದು ಯೋಗಿ ರವರ ಐವತ್ತನೇ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನನ್ನ ಗೆಟಪ್ ವಿಭಿನ್ನವಾಗಿದೆ. ಶ್ರಮವಹಿಸುವ ನಿರ್ದೇಶಕರಿಗೆ ಉತ್ತಮ ನಿರ್ಮಾಪಕರು ಸಿಕ್ಕಿದ್ದಾರೆ. ಖಂಡಿತ ಈ ಚಿತ್ರ ಯಶಸ್ಸು ಕಾಣುತ್ತದೆ ಎಂದರು.
ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ಗುರುಕಿರಣ್ ಮಾತನಾಡುತ್ತಾ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿರುತ್ತದೆ. ನಾನು ಇತ್ತೀಚಿಗೆ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೊರೋನ ನಂತರ ನಾನು ಒಪ್ಪಿಕೊಂಡಿರುವ ಚಿತ್ರ “ರೋಜಿ”. ಇಡೀ ತಂಡ ಬಹಳ ಆಸಕ್ತಿಯಿಂದ ಕೆಲಸ ಮಾಡುತ್ತಿದೆ ಎನ್ನುತ್ತಾ , ನಾನು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು.
ಈ ಸಮಯದಲ್ಲಿ ನನ್ನ ಉಪೇಂದ್ರ ಚಿತ್ರದ “ಕರಿಮಣಿ ಮಾಲೀಕ” ಹಾಡು ಈಗ ಸಾಕಷ್ಟು ಟ್ರೆಂಡಿಂಗ್ ಆಗುತ್ತಿದೆ. ಇದು ಒಂದು ರೀತಿ ನನಗೆ ಆಶ್ಚರ್ಯವೂ ಆಗುತ್ತಿದೆ ಎನ್ನುತ್ತಾ ಆ ಸಮಯದ ಅನುಭವಗಳನ್ನು ಹಂಚಿಕೊಂಡರು. ಇನ್ನು ಈ ಚಿತ್ರದ ನಿರ್ಮಾಪಕರುಗಳಾದ ಡಿ. ವೈ. ರಾಜೇಶ್, ಡಿ. ವೈ. ವಿನೋದ್, ಛಾಯಾಗ್ರಾಹಕ ಎಸ್ .ಕೆ. ರಾವ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ ಈ ಚಿತ್ರದ ಕುರಿತು ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.