Cini NewsSandalwood

ಪ್ರೀತಿ , ನಂಬಿಕೆ ನಡುವೆ ಜೀವನದ ಪಾಠ – ಔಟ್ ಆಫ್ ಸಿಲಬಸ್ ಚಿತ್ರವಿಮರ್ಶೆ ರೇಟಿಂಗ್ : 3/ 5

ರೇಟಿಂಗ್ : 3/ 5

ಚಿತ್ರ : ಔಟ್ ಆಫ್ ಸಿಲಬಸ್
ನಿರ್ದೇಶಕ : ಪ್ರದೀಪ್ ದೊಡ್ಡಯ್ಯ
ನಿರ್ಮಾಪಕರು : ವಿಜಯಕಲಾ ಸುಧಾಕರ್, ತನುಷ್ . ಎಸ್. ವಿ. ದೇಸಾಯಿ ಗೌಡ
ಛಾಯಾಗ್ರಹಣ : ದೇವ ವಡ್ಡೆ
ತಾರಾಗಣ : ಪ್ರದೀಪ್ ದೊಡ್ಡಯ್ಯ, ಹೃತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಲಕ್ಷ್ಮಣ್, ಜಹಾಂಗೀರ್, ಮಂಜು ಪಾವಗಡ , ಮಹಾಂತೇಶ್ ಹಿರೇಮಠ್ ಹಾಗೂ ಮುಂತಾದವರು…

ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಅದರಂತೆ ಯುವ ಪೀಳಿಗೆಯರ ತುಂಟಾಟ, ತರ್ಲೆ , ಸ್ನೇಹ , ಪ್ರೀತಿ , ಎಮೋಷನ್ ಒಡನಾಟಗಳ ನಡುವೆ ಕ್ಯಾಂಪಸ್ ನ ಕಲ್ಚರಲ್ ಆಕ್ಟಿವಿಟೀಸ್ ಮೂಲಕ ಪ್ರಿನ್ಸಿಪಾಲ್ , ಲೆಕ್ಚರರ್ , ಸ್ಟೂಡೆಂಟ್ಸ್ ನಡುವಿನ ಬಾಂಧವ್ಯದ ಕಥಾಂದರದ ಮೂಲಕ ವಿದ್ಯಾರ್ಥಿಗಳ ಸ್ನೇಹ , ಪ್ರೀತಿ , ಅನುಮಾನಗಳ ನಡುವೆ ಜೀವನ ತಿಳಿಸುವ ಸಿಲಬಸ್ ಏನು ಎಂಬುದನ್ನು ತೆರೆಯ ಮೇಲೆ ತರುವ ಪ್ರಯತ್ನವಾಗಿ ಈ ವಾರ ಬಂದಿರುವಂತಹ ಚಿತ್ರ “ಔಟ್ ಆಫ್ ಸಿಲಬಸ್”.

ಬುದ್ಧಿವಂತ ವಿದ್ಯಾರ್ಥಿ ದೇವ್ (ಪ್ರದೀಪ್ ದೊಡ್ಡಯ್ಯ) ಕಾಲೇಜಿನಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಕೊಡುತ್ತಿದ್ದ ದೇವ್ ಅದೇ ಕಾಲೇಜಿನ ಮುದ್ದಾದ ಬೆಡಗಿ ದಿವ್ಯ (ಹೃತಿಕಾ ಶ್ರೀನಿವಾಸ್) ಸೌಂದರ್ಯಕ್ಕೆ ಮನಸೋತ ಪ್ರೀತಿಸುತ್ತಾನೆ. ಆಕೆಯ ಸ್ನೇಹ , ಪ್ರೀತಿಯನ್ನು ಗಳಿಸುವುದಕ್ಕೆ ಒಂದಷ್ಟು ಹರಸಾಹಸ ಮಾಡುತ್ತಾನೆ. ಇದರ ನಡುವೆ ಸೀನಿಯರ್ , ಜೂನಿಯರ್ ವಿದ್ಯಾರ್ಥಿಗಳ ನಡುವೆ ಅರೆಂಜ್ ಹಾಗೂ ಲವ್ ಮ್ಯಾರೇಜ್ ಬಗ್ಗೆ ಚರ್ಚೆ. ಇನ್ನೊಂದೆಡೆ ಮನೆಯಲ್ಲಿ ದಿವ್ಯ ಗೆ ಮದುವೆ ಮಾಡಲು ಹುಡುಗನೊಬ್ಬನ ಹುಡುಕುತ್ತಾರೆ. ಇದರ ನಡುವೆ ದಿವ್ಯ ಪ್ರೀತಿಗೆ ಸೋಲಬೇಕು ಅಥವಾ ಮನೆಯವರ ಸಂಬಂಧಕ್ಕೆ ಗಂಟು ಬೀಳಬೇಕೋ ಅನ್ನುವಷ್ಟರಲ್ಲಿಬದುಕಿನಲ್ಲಿ ಮತ್ತೊಂದು ತಿರುವು ಎದುರಾಗುತ್ತದೆ.

ಎಲ್ಲವೂ ಸರಿ ಅನ್ನುವಷ್ಟರಲ್ಲಿ ಚಂಚಲದ ಮನಸ್ಸು ಅನುಮಾನದ ಹುತ್ತವನ್ನು ಬೆಳೆಸುತ್ತದೆ. ಪ್ರೀತಿ , ನಂಬಿಕೆ , ಸಂಬಂಧ ಸುಳಿಯಲ್ಲಿ ಆಲೋಚಿಸುವ ಮನಸ್ಸು ಏನೆಲ್ಲಾ ನಿರ್ಧಾರವನ್ನು ಕೈಗೊಳ್ಳುತ್ತದೆ. ಕಾಲೇಜಿನಲ್ಲಿ ಕಲಿಸೋ ಪಾಠಕ್ಕೂ… ಜೀವನದಲ್ಲಿ ಕಲಿಯುವ ಪಾಠಕ್ಕೂ… ಇರುವ ವ್ಯತ್ಯಾಸ ಏನು ಎಂಬ ಸೂಕ್ಷವನ್ನ ತಿಳಿಯಬೇಕಾದರೆ ಒಮ್ಮೆ ಎಲ್ಲರೂ ಈ ಚಿತ್ರವನ್ನು ನೋಡಬೇಕು.

ತನ್ನ ಪ್ರಥಮ ಪ್ರಯತ್ನದಲ್ಲಿ ನಿರ್ದೇಶಕ ಪ್ರದೀಪ್ ದೊಡ್ಡಯ್ಯ ಯೂಥ್ ಕಂಟೆಂಟ್ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಹೋಗುವ ವಿದ್ಯಾರ್ಥಿಗಳ ಬದುಕಿನಲ್ಲಿ ಎದುರಾಗುವ ಆಕರ್ಷಣೆ , ಸ್ನೇಹ , ಪ್ರೀತಿ , ಸಂಬಂಧ , ನೋವು , ಸ್ಪಷ್ಟತೆ ಇಲ್ಲದ ಮನಸ್ಥಿತಿ ಏನೆಲ್ಲಾ ಅವಾಂತರವನ್ನು ಮಾಡುತ್ತದೆ ಎಂಬುದನ್ನು ಸರಳವಾಗಿ ತೆರೆದಿಟ್ಟಿದ್ದಾರೆ.

ಆದರೆ ಚಿತ್ರಕಥೆಯಲ್ಲಿ ಇನ್ನಷ್ಟು ಕುತೂಹಲಕಾರಿ ಸಾಗಬಹುದಿತ್ತು. ಬಹಳಷ್ಟು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕ ನಟನೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಲು ಪ್ರಯತ್ನಪಟ್ಟಿದ್ದಾರೆ. ಜೀವನದ ಪಾಠವನ್ನು ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಇನ್ನು ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ಮುದ್ದಾಗಿ ಕಾಣುವ ಜೊತೆಗೆ ಕಣ್ಣಲ್ಲಿ ಹೆಚ್ಚು ಮಾತನಾಡಿದಂತಿದೆ.

ಲೆಕ್ಚರರಾಗಿ ಬರುವ ಯೋಗರಾಜ್ ಭಟ್ ಮಾತಿನ ಚಾಟಿ ಬೀಸಿದ್ದಾರೆ. ಸಲಹೆ , ಮಾರ್ಗ ನೀಡುವ ಪಾತ್ರದಲ್ಲಿ ಅಚ್ಚುತ್ ಕುಮಾರ್ ಜೀವ ತುಂಬಿದ್ದಾರೆ. ನಾಯಕಿಯ ಅಣ್ಣನ ಪಾತ್ರಧಾರಿ ಹಾಗೂ ಮಂಜು ಪಾವಗಡ ಕಾಂಬಿನೇಷನ್ ಗಮನ ಸೆಳೆಯುತ್ತದೆ. ಉಳಿದಂತೆ ಜಹಾಂಗೀರ್ , ಲಕ್ಷ್ಮಣ್ ತೇಕುಮುಡಿ , ರಾಮಕೃಷ್ಣ , ಚಿತ್ಕಲ ಬಿರಾದಾರ, ಮಂಜು ಪಾವಗಡ , ಮಹಾಂತೇಶ್ ಹಿರೇಮಠ್ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ಛಾಯಾಗ್ರಹಕರ ಕೈಚಳಕ ಅಚ್ಚುಕಟ್ಟಾಗಿದ್ದು , ಸಂಗೀತಕ್ಕೆ ಇನ್ನೂ ಹೆಚ್ಚು ಗಮನ ಕೊಡಬಹುದಿತ್ತು. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ. ಒಟ್ಟಾರೆ, ಯುವ ಜನತೆಯನ್ನು ಕೇಂದ್ರವಾಗಿಟ್ಟು ಮನೋರಂಜನೆ ನೀಡುವ ಉದ್ದೇಶದಿಂದ ಹೊರಬಂದಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.

error: Content is protected !!