ಸರಣಿ ಕೊಲೆಗಳ ಸುಳಿಯಲ್ಲಿ ಶುದ್ಧೀಕರಣದ “ಪರಿಶುದ್ಧಂ” ಅಸ್ತ್ರ (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಪರಿಶುದ್ಧಂ
ನಿರ್ಮಾಪಕ , ಸಂಗೀತ , ನಿರ್ದೇಶಕ : ಆರೋನ್ ಕಾರ್ತಿಕ್.
ನಿರ್ಮಾಪಕ : ಕುಮಾರ್ ರಾಥೋಡ್
ಛಾಯಾಗ್ರಾಹಕ : ಕೃಷ್ಣ ಸಾರಥಿ , ಅಶೋಕ್ ಕಡಬ
ತಾರಾಗಣ : ಸ್ಪರ್ಶ ರೇಖಾ , ದಿಶಾ ಪೂವಯ್ಯ , ರೋಹನ್ , ಅರ್ಚನಾ , ಭಾರ್ಗವ್, ಕೀರ್ತಿ ಕೃಷ್ಣ , ರಾಜ್ ಚರಣ್ , ರಮೇಶ್ ಪಂಡಿತ್, ವಿಕ್ಟರಿ ವಾಸು, ಯತಿರಾಜ್, ಕುರಿಬಾಂಡ್ ರಂಗ , ಮೈಸೂರು ರಮಾನಂದ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿಯಂತಹ ಚಿತ್ರಗಳು ಆರಂಭದಿಂದ ಅಂತ್ಯದವರೆಗೂ ಕುತೂಹಲವನ್ನು ಮೂಡಿಸುತ್ತಾ ರೋಚಕ ತಿರುವುಗಳ ಮೂಲಕ ಕೊನೆಯ ಘಟ್ಟಕ್ಕೆ ತಂದು ನಿಲ್ಲುವಂತೆ ಮಾಡುತ್ತದೆ. ಈ ವಾರ ಅಂತದ್ದೇ ಒಂದು ಸರಣಿ ಕೊಲೆಗಳ ಕಥಾನಕದ ಏರಿಳಿತದಲ್ಲಿ ಹೆಜ್ಜೆ ಹೆಜ್ಜೆಗೂ ಕುತೂಹಲದೊಂದಿಗೆ ಪ್ರೀತಿ , ಮೋಹ , ಕಾಮ , ಕಳ್ಳ ಪೋಲಿಸ್ ಆಟದೊಂದಿಗೆ ಹೆಣ್ಣು ಭೋಗದ ವಸ್ತುವಲ್ಲ , ಆಕೆಯ ಆಸೆ , ಆಕಾಂಕ್ಷೆ , ಮನಸ್ಥಿತಿಯ , ಗಂಡು ಹೆಣ್ಣಿನ ಸಂಬಂಧ ಹೀಗೆ ಹತ್ತು ಹಲವು ವಿಚಾರಗಳೊಂದಿಗೆ ನಿಗೂಢವಾಗಿ ನಡೆಯುತ್ತಿರುವ ಸರಣಿ ಕೊಲೆಗಳ ಸೂತ್ರದಾರಾರು ಯಾರು ಎಂಬುದನ್ನು ಹೇಳುವ ಪ್ರಯತ್ನವಾಗಿ ಹೊರಬಂದಿರುವಂತಹ ಚಿತ್ರ ಪರಿಶುದ್ಧಂ.
ಇಂತಹ ಕ್ರೂರಿ ಕೊಲೆಗಾರರು ಇರುತ್ತಾರಾ ಎನ್ನುವ ಹಾಗೆ ಮುಂಬೈನಲ್ಲಿ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡು ಓಡಾಡುತ್ತಿರುವ ಸೈಕೋ ಶ್ಯಾಮ್. ಕೆಲವು ಪ್ರಭಾವಿಗಳನ್ನು ಸರಣಿ ಕೊಲೆ ಮಾಡುತ್ತಾ ಹೋಗುವ ಸಂದರ್ಭದಲ್ಲಿ ಕರ್ನಾಟಕದ ದಕ್ಷ ಪೊಲೀಸ್ ಅಧಿಕಾರಿ ಇನ್ಸ್ಪೆಕ್ಟರ್ ರಿಯಾ ಕೈಗೆ ಸಿಕ್ಕಿ ಬಿದ್ದು ಜೈಲು ಸೇರುತ್ತಾನೆ. ಇವನು ಹುಚ್ಚಾಟ ಕಂಡ ಪೊಲೀಸರು ಎಡೆಮುರಿ ಕಟ್ಟುತ್ತಾರೆ.
ಇನ್ಸ್ಪೆಕ್ಟರ್ ರಿಯಾ ಅಕ್ಕ ರೇಖಾ ಮನೋವೈದ್ಯೆ , ಈ ಸೈಕೋ ಕಿಲ್ಲರ್ ಟ್ರೀಟ್ಮೆಂಟ್ ಗೆ ಬಂದು ಅವನ ಸ್ಥಿತಿ ಗಮನಿಸಿ ತತಕ್ಷಣ ನಿಮಾನ್ಸ್ ಸೇರಿಸಿ ಚಿಕಿತ್ಸೆ ನೀಡುವುದು ಅಗತ್ಯ ಎನ್ನುತ್ತಾರೆ. ಸೈಕೋ ಶಾಮ್ ಮಾರ್ಗ ಮಧ್ಯೆ ಪೊಲೀಸರಿಗೆ ಯಾಮರಿಸಿ ಎಸ್ಕೇಪ್ ಆಗುತ್ತಾನೆ. ಇದು ಪೊಲೀಸ್ ಡಿಪಾರ್ಟ್ಮೆಂಟ್ ಗೆ ದೊಡ್ಡ ತಲೆನೋವಾಗಿ ಎಲ್ಲಾ ಟಿವಿ ಮಾಧ್ಯಮಗಳಲ್ಲಿ ಇದೇ ಸುದ್ದಿ ಹರಿದಾಡುತ್ತಿರುತ್ತದೆ. ಅವನನ್ನು ಹೇಗಾದರೂ ಮಾಡಿ ಹಿಡಿಯಲು ಪೊಲೀಸರು ಮುಂದಾಗುತ್ತಾರೆ.
ವಿಜಯ್ ರಾಘವೇಂದ್ರ-ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್ ಬಿಡುಗಡೆ
ಇದರ ನಡುವೆ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚಿ ಚಿತ್ರನಟಿ ಆಗಬೇಕೆಂದು ನಿರ್ಧರಿಸಿ ತನ್ನ ಮೈ ಮಾಟ ಮೂಲಕ ಶ್ರೀಮಂತರನ್ನು ಸೆಳೆಯುವುದರಲ್ಲಿ ಮುಂದಾಗಿರುತ್ತಾಳೆ ಬೆಡಗಿ ಅಂಜಲಿ. ಇವಳ ಮಾತಿಗೆ ಮರುಳಾಗಿ ಹಲವು ಪುರುಷರು ತಮ್ಮ ಪತ್ನಿಯರಿಗೆ ಡೈವೋರ್ಸ್ ನೀಡಿ ಇವಳ ಹಿಂದೆ ಬರಲು ಸಿದ್ಧರಾಗಿರುತ್ತಾರೆ.
ಒಂದರ ಹಿಂದೆ ಒಂದಂತೆ ಕೊಲೆಗಳು ನಡೆಯುತ್ತಾ ಹೋಗುತ್ತದೆ. ಯಾವುದೇ ಸುಳಿವು ಸಿಗದ ರೀತಿಯಲ್ಲಿ ಕೊಲೆ ಮಾಡುವ ಈ ವ್ಯಕ್ತಿಯನ್ನು ಹುಡುಕುವುದು ಹೇಗೆ ಎನ್ನುವಷ್ಟರಲ್ಲಿ ಒಂದು ಸುಳಿವು ಸಿಗುತ್ತದೆ. ಅದು ಮಾಡಲಿಂಗ್ ಬೆಡಗಿ ಅಂಜಲಿಯ ಕಡೆ ತಿರುಗುತ್ತದೆ. ಹಲವು ಅನುಮಾನಗಳ ನಡುವೆ ಅಂಜಲಿ ಕೂಡ ಕೊಲೆಯಾಗುತ್ತಾಳೆ. ಮುಂದೆ ಎದುರಾಗುವ ರೋಚಕ ಘಟನೆ ಹಲವು ಸತ್ಯಗಳನ್ನು ಹೊರ ಹಾಕುತ್ತದೆ.
ಸರಣಿ ಕೊಲೆ ಯಾಕೆ…
ಮಾಡಿದವರು ಯಾರು…
ಸತ್ತವರ ಗುಟ್ಟು ಏನು…
ಕ್ಲೈಮಾಕ್ಸ್ ರೋಚಕತೆ ಏನು…
ಈ ಎಲ್ಲಾ ವಿಚಾರ ತಿಳಿದುಕೊಳ್ಳ ಬೇಕಾದರೆ ಒಮ್ಮೆ
ಪರಿಶುದ್ಧಂ ಚಿತ್ರ ನೋಡಬೇಕು.
ಇನ್ನು ಈ ಚಿತ್ರಕ್ಕೆ ಕಥೆ , ಚಿತ್ರಕಥೆ , ಸಂಗೀತ , ಸಾಹಿತ್ಯ, ನಿರ್ಮಾಣದ ಜೊತೆಗೆ ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ವಿಭಿನ್ನವಾಗಿದ್ದು , ಸಮಾಜದಲ್ಲಿ ಸಂಬಂಧಗಳಿಗೆ ಅರ್ಥವಿಲ್ಲದಂತ ಬದುಕು ನಡೆಸುತ್ತಿರುವವರ ಒಳ ಮನಸ್ಸಿನ ಮರ್ಮದ ಆಲೋಚನೆ.ಪ್ರೀತಿ , ಮೋಹ , ಕಾಮ , ನಂಬಿಕೆ ದ್ರೋಹ , ದಾಹಕ್ಕಾಗಿ ಏನೆಲ್ಲ ಅವಾಂತರ ಮಾಡಿಕೊಂಡು ಸಂಕಷ್ಟದ ಸುಳಿಯಲ್ಲಿ ಒದ್ದಾಡುವ ಕೆಟ್ಟ ಮನಸ್ಸು. ದುಷ್ಟರನ್ನು ಶಿಕ್ಷಿಸುವ ನಿಟ್ಟಿನಲ್ಲಿ ಪೊಲೀಸರ ಹರಸಾಹಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಕಥೆಗೆ ಪೂರಕವಾದ ಚಿತ್ರಕಥೆಯಲ್ಲಿ ಹಿಡಿತ ಬೇಕಾಗಿತ್ತು.
ಸಂಭಾಷಣೆಗಿಂತ ಹಿನ್ನೆಲೆ ಸಂಗೀತವೇ ಹೆಚ್ಚು ಆವರಿಸಿಕೊಂಡಿದೆ. ಕೆಲವು ಸಂಭಾಷಣೆಗಳು ಕೇಳುವುದಕ್ಕೆ ಕಷ್ಟವಾಗಿದೆ. ಛಾಯಾಗ್ರಾಹಕರ ಕೆಲಸ ಹೇಳಿಕೊಳ್ಳುವಂತಿಲ್ಲ. ಹಾಡುಗಳಲ್ಲಿ ಹೊಸ ಪ್ರಯತ್ನವಿದೆ. ಚಿತ್ರದ ಓಟ ಇನ್ನಷ್ಟು ವೇಗ ಮಾಡಬಹುದಿತ್ತು. ಕೆಲವು ಪಾತ್ರಗಳನ್ನು ಬಿಟ್ಟರೆ ಉಳಿದ ಪಾತ್ರಗಳು ಇನ್ನಷ್ಟು ಉತ್ತಮವಾಗಿಸಹುದಿತ್ತು. ಒಟ್ಟಾರೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವ ನಿರ್ದೇಶಕ ಆರೋನ್ ಕಾರ್ತಿಕ್ ಕೆಲಸ ಮುಂದಿನ ಹೆಜ್ಜೆಗೆ ಉತ್ತಮ ದಾರಿ ಮಾಡಿಕೊಟ್ಟಂತಿದೆ.
ಇನ್ನು ಮನೋವೈದ್ಯ ಪಾತ್ರದಲ್ಲಿ ನಟಿಸಿರುವ ಸ್ಪರ್ಶ ರೇಖಾ ಕೆಲವು ಶೇಡ್ ಗಳ ಪರ್ಫಾರ್ಮೆನ್ಸ್ ಗಮನ ಸೆಳೆಯುತ್ತದೆ. ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಮಿಂಚಿದ್ದಾರೆ. ಇನ್ನು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಿರುವ ದಿಶಾ ಪೂವಯ್ಯ ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಪ್ರಮುಖ ಪಾತ್ರದಾರಿ ಸೈಕೋ ಶಾಮ್ ಪಾತ್ರ ನಿರ್ವಹಿಸಿರುವ ರಾಜ್ ಚರಣ್ ಬ್ರಹ್ಮಾವರ್ ತನ್ನ ನಟನಾ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.
ಅದೇ ರೀತಿ ಅಂಜಲಿ ಯಾಗಿ ಬೋಲ್ಡ್ ಪಾತ್ರದಲ್ಲಿ ಮಿಂಚಿರುವ ಅರ್ಚನಾ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಭಾರ್ಗವ , ರೋಹನ್ , ನೀತು ಶೆಟ್ಟಿ , ಕೀರ್ತಿ ಕೃಷ್ಣ , ರಮೇಶ್ ಪಂಡಿತ್ , ವಿಕ್ಟರಿ ವಾಸು , ಯತಿರಾಜ್ , ಕುರಿ ಬಾಂಡ್ ರಂಗ , ಮೈಸೂರು ರಮಾನಂದ , ದುಬೈ ರಫೀಕ್ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಕೂಡ ಚಿತ್ರದ ಓಟಕ್ಕೆ ಒಂದು ಉತ್ತಮ ಸಾತ್ ನೀಡಿದ್ದಾರೆ. ಒಟ್ಟರೆ ಮರ್ಡರ್ ಮಿಸ್ಟರಿ , ಸಸ್ಪೆನ್ಸ್ , ಥ್ರಿಲ್ಲರ್ ಸಿನಿಪ್ರಿಯರಿಗೆ ಇಷ್ಟವಾಗುವ ಅಂಶ ಒಳಗೊಂಡಿದ್ದು , ಒಮ್ಮೆ ನೋಡಬಹುದು.
#parishuddham, #MovieReview,