Cini NewsSandalwood

“ಪೆನ್ ಡ್ರೈವ್” ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್.

ಇಡೀ ರಾಜ್ಯಾದ್ಯಂತ ಬೆಚ್ಚಿಬೀಳಿಸಿದಂತಹ ಒಂದು ಘಟನೆಗೆ ಸಾಕ್ಷಿಯಾದ ವಸ್ತುವೇ “ಪೆನ್ ಡ್ರೈವ್”. ಈ ಪೆನ್ ಡ್ರೈವ್ ಯಾರದು… ಎಲ್ಲಿಂದ ಬಂತು… ಏನೆಲ್ಲಾ ಇದೆ… ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿ ಅದು ವಿಚಾರಣೆಯ ಹಂತದಲ್ಲಿ ಸಾಗಿದೆ. ಆದರೆ ಈಗ “ಪೆನ್ ಡ್ರೈವ್” ಹೆಸರಿನಲ್ಲಿ ಚಿತ್ರವೊಂದು ಚಾಲನೆ ಪಡೆದುಕೊಂಡಿದೆ. ಇದು ಕೂಡ ಇನ್ವೆಸ್ಟಿಗೇಷನ್ ಹಾದಿಯಲ್ಲಿ ಆರಂಭಗೊಳ್ಳುವ ಚಿತ್ರವಂತೆ.

ಆದರೆ ಇತ್ತೀಚಿಗೆ ನಡೆದ ಪೆನ್ ಡ್ರೈವ್ ಘಟನೆಗೂ ಈ ಚಿತ್ರಕ್ಕೂ ಸಂಬಂಧವಿದೆಯಾ ಎಂಬುವುದಕ್ಕೆ ಸೂಕ್ತ ಉತ್ತರ ಸಿಗಬೇಕಿದೆ. ಲಯನ್. ಆರ್. ವೆಂಕಟೇಶ್ ಹಾಗೂ ಲಯನ್. ಎಸ್. ವೆಂಕಟೇಶ್ ನಿರ್ಮಾಣದಲ್ಲಿ ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಮೂಲಕ “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯದ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚಿಗೆ ನಡೆಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್. ಎಂ. ಸುರೇಶ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್. ಕೆ. ವಿಶ್ವನಾಥ್ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭ ಕೋರಿದರು. ಇನ್ನು ವಿತರಕ ಜಿ .ವೆಂಕಟೇಶ್ , ಚಿತ್ರ ಪ್ರದರ್ಶಕ ನರಸಿಂಹಲು ಸೇರಿದಂತೆ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು.

ನಂತರ ಚಿತ್ರತಂಡದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾದರು. ಈ ಚಿತ್ರದ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮಾತನಾಡುತ್ತಾ
ಈವರೆಗೂ ಹದಿನೈದು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ. “ಪೆನ್ ಡ್ರೈವ್” ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ “ಪೆನ್ ಡ್ರೈವ್” ಗು ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ.

ಈ ಚಿತ್ರದ ಕಥೆಯೇ ಬೇರೆ. ನಮ್ಮ ಚಿತ್ರದಲ್ಲಿ “ಪೆನ್ ಡ್ರೈವ್” ಮುಖ್ಯಪಾತ್ರ ವಹಿಸುತ್ತದೆ. ಹಾಗಾಗಿ ಆ ಶೀರ್ಷಿಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಲಯನ್ ಎಸ್ ವೆಂಕಟೇಶ್ ಹಾಗೂ ಲಯನ್ ಆರ್ ವೆಂಕಟೇಶ್ ಅವರ ಸಹಕಾರದಿಂದ ಚಿತ್ರವನ್ನು ಬೇಗೆ ತೆರೆಗೆ ತರುವ ಪ್ರಯತ್ನ ಮಾಡುತ್ತೇನೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ.

ತನಿಷಾ ಕುಪ್ಪಂಡ, ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ. ತಾರಾಬಳಗದಲ್ಲಿ ಹೆಚ್ಚಿನವರು ಮಹಿಳೆಯರೆ ಇರುತ್ತಾರೆ. ಡಾ||ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ‌. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡುತ್ತೇನೆ ಎಂದರು.

ಇನ್ನು ನಿರ್ಮಾಪಕರಾದ ಲಯನ್. ಎಸ್. ವೆಂಕಟೇಶ್ ಮಾತನಾಡುತ್ತಾ ನಮ್ಮ ತಂದೆಯವರು ಕೂಡ ಸೆಂಟ್ರಲ್ ಗೋರ್ಮೆಂಟ್ ಕೆಲಸ ಬಿಟ್ಟು ಚಿತ್ರರಂಗದಲ್ಲೇ ಇದ್ದವರು. ನನಗೂ ಕೂಡ ಸಿನಿಮಾ ನೆಂಟು ಮೊದಲಿನಿಂದ ಇತ್ತು. ನಾವು ಚಲನಚಿತ್ರೋತ್ಸವಕ್ಕಾಗಿ ಒಂದು ಚಿತ್ರ ಮಾಡೋಣ ಎಂದುಕೊಂಡು ‘ಬೇಲಿ ಹೂವ’ ಚಿತ್ರ ಮಾಡಿದ್ದೆವು. ಆ ಚಿತ್ರ ದೊಡ್ಡ ಮಟ್ಟಕ್ಕೆ ಸಿದ್ಧವಾಯಿತು. ನಂತರ ಸಂಭಾಷಣೆಕರ ನಾಗೇಶ್ ಮಾರ್ಗದರ್ಶನದಲ್ಲಿ ನಿರ್ದೇಶಕ ಸೆಬಾಸ್ಟಿನ್ ಡೇವಿಡ್ ಮತ್ತೊಂದು ಚಿತ್ರ ಮಾಡೋಣ ಅಂದುಕೊಂಡಾಗ ಆರಂಭವಾಗಿದ್ದೆ.

ಈ ಪೆನ್ ಡ್ರೈವ್ ಕಥೆ ಬಹಳ ವಿಶೇಷವಾಗಿದೆ. ಈ ನಮ್ಮ ಪೆನ್ ಡ್ರೈವ್ ನಲ್ಲಿ ಅದೊಂದೇ ಇರಲ್ಲ, ಆಕ್ಷನ್ , ಲವ್ , ಸೆಂಟಿಮೆಂಟ್ , ಕಾಮಿಡಿ , ಥ್ರಿಲ್ಲರ್ ಹಾಗೂ ಇನ್ವೆಸ್ಟಿಗೇಷನ್ ಎಲ್ಲವೂ ಒಳಗೊಂಡಿದೆ. ನಾವು ಮಾತು ಕಮ್ಮಿ ಮಾಡಿ ಕೆಲಸ ಜಾಸ್ತಿ ಮಾಡಿ ತೋರಿಸೋಣ ಅಂದುಕೊಂಡಿದ್ದೇವೆ. ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ಬಹಳಷ್ಟು ಸಪೋರ್ಟ್ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರ ನಮ್ಮ ಜೊತೆ ಇರಲಿ ಎಂದು ಕೇಳಿಕೊಂಡಿರು.

ಪ್ರಮುಖ ಪಾತ್ರಧಾರಿ ನಟಿ ತನಿಷಾ ಕುಪ್ಪಂಡ ಮಾತನಾಡುತ್ತ ಈ “ಪೆನ್ ಡ್ರೈವ್” ಚಿತ್ರದ ಕಥೆ ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಕೊಳ್ಳುತ್ತಿದ್ದೇನೆ. ಇನ್ನು ಹೆಚ್ಚು ನಾನು ಏನು ಹೇಳುವಂತಿಲ್ಲ ಎಲ್ಲವೂ ಮುಂದಿನ ದಿನಗಳಲ್ಲಿ ತಿಳಿಯುತ್ತೆ ಎಂದರು.

ಡಾ||ವಿ.ನಾಗೇಂದ್ರಪ್ರಸಾದ್ ಮಾತನಾಡುತ್ತಾ ನಿರ್ದೇಶಕರು ನನಗೆ ಬಹಳ ವರ್ಷದ ಸ್ನೇಹಿತರು. ಈ ಚಿತ್ರಕ್ಕಾಗಿ ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ನಾನು ನಾಲ್ಕು ಹಾಡುಗಳನ್ನು ಬರೆಯುವುದರ ಜೊತೆಗೆ ಸಂಗೀತವನ್ನು ಕೂಡ ನೀಡುತ್ತಿದ್ದೇನೆ. ಚಿತ್ರದ ಶೀರ್ಷಿಕೆ ಎಲ್ಲರ ಗಮನ ಸೆಳೆದರೆ 50 ಪರ್ಸೆಂಟ್ ಚಿತ್ರತಂಡ ಸೇಫ್ ಎನ್ನಬಹುದು. ಇನ್ನು ಉಳಿದಿದ್ದು ಚಿತ್ರತಂಡದ ಶ್ರಮದ ಮೇಲೆ ನಿಂತಿರುತ್ತೆ. ಚಿತ್ರ ಉತ್ತಮವಾಗಿ ಮೂಡಿ ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದರು.

ಇನ್ನು ಈ ಚಿತ್ರದಲ್ಲಿ ಯುವ ಪ್ರತಿಭೆಗಳ ಜೊತೆ ಅನುಭವಿ ಕಲಾವಿದರು ಕೂಡ ಅಭಿನ ಯಿಸುತ್ತಿದ್ದಾರಂತೆ. ವೇದಿಕೆ ಮೇಲಿದ್ದ ನಟಿಯರಾದ ರಾಧಿಕಾ ರಾಮ್, ಸಂಜನಾ ನಾಯ್ಡು ಹಾಗೂ ಹಿರಿಯ ಕಲಾವಿದ ಕರಿಸುಬ್ಬು ಮುಂತಾದವರು ತಮ್ಮ ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಭಾಷಣೆ ಬರೆದು ಸಂಕಲನ ಮಾಡುತ್ತಿರುವ ನಾಗೇಶ್ ಕೂಡ ಚಿತ್ರದ ಕುರಿತು ಒಂದಷ್ಟು ಮಾಹಿತಿಯನ್ನು ಹೊರ ಹಾಕಿದ್ದರು. ಬಹಳಷ್ಟು ಕುತೂಹಲವನ್ನು ಮೂಡಿಸಿರುವ ಶೀರ್ಷಿಕೆ ಬಗ್ಗೆ ಚರ್ಚೆ ನಡೆಯುತ್ತಿದ್ದು , ಚಿತ್ರೀಕರಣ ಸದ್ಯದಲ್ಲೇ ಆರಂಭಗೊಳ್ಳಲಿದೆಯಂತೆ.

 

 

error: Content is protected !!