ಜಲ ಕಂಟಕದ ರಕ್ತದೋಕುಳಿಯ ಪೆಪೆ (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಪೆಪೆ
ನಿರ್ದೇಶಕ : ಶ್ರೀಲೇಶ್ .ಎಸ್. ನಾಯರ್
ನಿರ್ಮಾಪಕರು : ಉದಯ್ ಶಂಕರ್.ಎಸ್, ಬಿ.ಎಮ್. ಶ್ರೀರಾಮ್
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ಅಭಿಷೇಕ್ ಕಾಸರಗೋಡು
ತಾರಾಗಣ : ವಿನಯ್ ರಾಜ್ ಕುಮಾರ್, ಕಾಜಲ್ ಕುಂದರ್, ಮಯೂರ್ ಪಟೇಲ್, ಯಶ್ ಶೆಟ್ಟಿ , ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ತಲತಲಾಂತರ ದಿಂದಲೂ ನಡೆದುಕೊಂಡು ಬಂದಿರುವಂತಹ ಒಂದಷ್ಟು ನೀತಿ , ನಿಯಮ ,ಆಚಾರ, ನಂಬಿಕೆ , ಕಟ್ಟುಪಾಡುಗಳ ನಡುವೆ ಜೀವನ ಸಾಗಿಸುತ್ತಾ ಬರೋದು ಸರ್ವೇ ಸಾಮಾನ್ಯವಾಗಿದೆ. ಅದರಲ್ಲೂ ಒಂದಲ್ಲ ಒಂದು ಸಮಸ್ಯೆಗಳು ಕೆಲವಡೆ ಎದುರಾಗುತ್ತಲೇ ಇರುತ್ತದೆ. ಅಂತಹದ್ದೇ ಒಂದು ದ್ವೇಷದ ಹಿನ್ನೆಲೆಯಲ್ಲಿ ಜನ , ಜಲ , ಜೀವನದ ಜೊತೆ ಬೆಸೆದುಕೊಂಡು ಪ್ರೀತಿ , ಮಮಕಾರ , ದ್ವೇಷದ ನಡುವೆ ಕೌರ್ಯ, ಮಚ್ಚು , ರಕ್ತದೋಕುಳಿಯ ತೊರೆಯ ರೂಪಕವಾಗಿ ಕಾಣುವಂತಹ ಚಿತ್ರವಾಗಿ ಈ ವಾರ ತೆರೆಯ ಮೇಲೆ ಬಂದಿದೆ “ಪೆಪೆ”. ಎರಡು ಊರುಗಳ ನಡುವೆ ಹರಿಯುವ ತೊರೆಯ ವಿಚಾರವಾಗಿ ದ್ವೇಷ , ವೈಷಮ್ಯ ತಲತಲಾಂತರದಿಂದಲೂ ರಕ್ತದ ಮಡುವಿನಲ್ಲಿ ಹರಿಯುತ್ತಾ ಹೋಗಿರುತ್ತದೆ.
ಅದಕ್ಕೊಂದು ಹಿನ್ನೆಲೆಯೂ ಇರುತ್ತದೆ. ಬ್ರಾಹ್ಮಣ ಕುಟುಂಬದ ಹೆಣ್ಣುಮಗಳನ್ನು ಪ್ರೀತಿಸಿ ಮದುವೆಯಾಗುವ ರಾಯಪ್ಪನ ಮಗ ಪ್ರದೀಪ್ “ಪೆಪೆ”(ವಿನಯ್ ರಾಜ್ ಕುಮಾರ್). ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುತ್ತಾನೆ. ತಾಯಿ ಟೀಚರ್ ಆಗಿದ್ದು ಮಗನ ಭವಿಷ್ಯಕ್ಕಾಗಿ ಶ್ರಮಿಸುತ್ತಾಳೆ.
ಆದರೆ ಅಣ್ಣ ನನ್ನ ಕೊಂದವರ ಮೇಲೆ ದ್ವೇಷ ಕಾರುವ ಗುಣ (ಮಯೂರ್ ಪಾಟೀಲ್) ಸಮಯಕ್ಕಾಗಿ ಹೊಂಚು ಹಾಕುತ್ತಾ ಪೆಪೆ ಗೆ ಇದರ ಹಿಂದೆ ನಡೆಯುತ್ತಿರುವ ಕರಾಳ ಸತ್ಯವನ್ನು ತೋರಿಸುತ್ತಾ ಬೆಳೆಸುತ್ತಾನೆ. ಇದರ ನಡುವೆ ಸಿಂಧು (ಕಾಜಲ್ ಕುಂದರ್) ಮನೆಯವರ ವಿರುದ್ಧದ ನಡುವೆಯೂ ತನ್ನ ಸೋದರತ್ತೆಯ ಮಗ ಪೆಪೆ ಯನ್ನ ಮದುವೆ ಆಗುವುದೇ ತನ್ನ ನಿರ್ಧಾರ ಎಂದುಕೊಂಡಿರುತ್ತಾಳೆ.
ಇದರ ನಡುವೆ ಎರಡು ಊರುಗಳ ಮಧ್ಯ ಹರಿಯುವ ತೊರೆ ಜನರ ಬದುಕಿಗೆ ಅನಿವಾರ್ಯ ಆದರೂ ರಾಜಕೀಯದ ಬೇಲಿ ಮರಳು ದಂಧೆಗೂ ಕಡಿವಾಣ ಆಗಿರುತ್ತದೆ. ಇದು ಎರಡು ಊರು ನಡುವೆಯ ಕುಟುಂಬಗಳ ದ್ವೇಷವು ತೊರೆಯ ವಿಚಾರವಾಗ ಹಲವಾರು ತಲೆಗಳು ಉರುಳಿರುತ್ತದೆ. ಒಂದಕ್ಕೊಂದು ಕೊಂಡಿಯಂತೆ ದ್ವೇಷ , ಕಿಚ್ಚು , ವೈಶಮ್ಯ , ರಕ್ತದ ಮಡುವಿನಲ್ಲಿ ತೊರೆಯಂತೆ ಹರಿಯುತ್ತ ಹಲವು ಸಾವು ನೋವಿಗೆ ಕಾರಣವಾಗುತ್ತಾ ಸಾಗುತ್ತದೆ.
ತೊರೆಯ ನೀರಿಗೆ ಮುಕ್ತಿ ಸಿಗುತ್ತಾ…
ದ್ವೇಷದ ಕಿಚ್ಚಿಗೆ ಕಾರಣ…
ಪೆಪೆ ಹುಡುಕುವ ದಾರಿ ಏನು..
ಸಿಂಧು ಪ್ರೀತಿ ಸಿಗುತ್ತಾ…
ಕ್ಲೈಮ್ಯಾಕ್ಸ್ ನ ಮತ್ತೊಂದು ದಾರಿ ಏನು…
ಈ ಎಲ್ಲಾ ವಿಚಾರಕ್ಕಾಗಿ ನೀವು ಈ ಪೆಪೆ ಚಿತ್ರವನ್ನು ನೋಡಬೇಕು.
ನಟ ವಿನಯ್ ರಾಜ್ ಕುಮಾರ್ ಈ ಹಿಂದೆ ಮಾಡಿರದಂತಹ ಪಾತ್ರ ಇದಾಗಿದೆ. ಮಾತು ಕಮ್ಮಿಯಾದರೂ ಮೌನದಲ್ಲೇ ಆರ್ಭಟಿಸಿದ್ದಾರೆ. ಪಾತ್ರಕ್ಕೆ ಸೂಕ್ತ ವ್ಯಕ್ತಿ ಎನಿಸಿದರು ರಕ್ತದೊಕುಳಿ ಅತಿ ಆಯಿತು. ಸರಳವಾಗಿ ಪಾತ್ರಕ್ಕೆ ಜೀವ ತುಂಬಿ ಆಕ್ಷನ್ ನಲ್ಲಿ ಆರ್ಭಟಿಸಿದ್ದಾರೆ.
ಆದರೆ ದೊಡ್ಮನೆ ಕುಡಿಗಳು ಕಥೆಯ ಆಯ್ಕೆ ಬಗ್ಗೆ ಯೋಚಿಸಬೇಕಿತ್ತು ಅನಿಸುತ್ತದೆ. ಹಾಗೆಯೇ ಪ್ರಮುಖ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮಗನ ಜೊತೆ ಅಭಿನಯಿಸಿ ಮುಂದಿನ ನಡೆಗೆ ದಾರಿ ತೋರುವಂತ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ನಟಿ ಕಾಜಲ್ ಕುಂದರ್ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ.
ಹೀರೋ ಪಾತ್ರಗಳಲ್ಲಿ ಮಿಂಚಿದ್ದ ಮಯೂರ್ ಪಾಟೀಲ್ ಒಂದು ವಿಭಿನ್ನ ಪಾತ್ರದಲ್ಲಿ ಅಭಿನಯಸಿ ಕಥೆಯ ಓಟಕ್ಕೆ ಪೂರಕವಾಗಿದ್ದಾರೆ. ನಾಯಕನ ತಂದೆಯಾಗಿ ನವೀನ್ .ಡಿ. ಪಡಿಲ್ , ತಾಯಿಯಾಗಿ ಅರುಣಾ ಬಾಲರಾಜ್ , ಬೋಲ್ಡ್ ಪಾತ್ರದಲ್ಲಿ ಮೇದಿನಿ ಕೆಳಮನೆ , ಎಂಎಲ್ಎ ಪಾತ್ರದಲ್ಲಿ ಬಲ ರಾಜ್ ವಾಡಿ, ವಿಲನ್ ಪಾತ್ರದಲ್ಲಿ ಯಶ್ ಶೆಟ್ಟಿ , ಬಿ. ಎಂ ಶ್ರೀರಾಮ್ ಕೋಲಾರ ಸೇರಿದಂತೆ ಹಲವಾರು ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ.
ಇನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಸೂಕ್ಷ್ಮವಾಗಿದ್ದು , ಗಮನ ಸೆಳೆದರೂ ಚಿತ್ರಕಥೆ ಕಸಿವಿಸಿ ಎನ್ನಿಸುವಂತಿದೆ. ಕೆಲವು ಸಂಭಾಷಣೆ , ದೃಶ್ಯಗಳು ಮುಜುಗರವಾಗುವಂತಿದೆ. ಕೆಲವು ಕಡೆ ಮಾತಿಗಿಂತ ಮೌನದಲ್ಲಿ ದೃಶ್ಯಗಳನ್ನ ಕಟ್ಟು ಕೊಡುವುದರಲ್ಲಿ ನಿರ್ದೇಶಕ ಜಾಣ್ಮೆಯನ್ನು ಮೆರೆದಿದ್ದಾರೆ. ಇಬ್ಬರು ನಿರ್ಮಾಪಕರಲ್ಲಿ ಒಬ್ಬರು ಅಭಿನಯಿಸಿದ್ದು , ಇಂತಹ ಚಿತ್ರಕ್ಕೆ ಧೈರ್ಯ ಮಾಡಿ ಹಣ ಹೂಡಿರುವುದನ್ನು ಮೆಚ್ಚಲೇಬೇಕು.
ಇನ್ನು ಬುಡಕಟ್ಟು ಜನರ ಹಾಡು ಗುನುಗುವಂತಿದ್ದು , ಹಿನ್ನೆಲೆ ಸಂಗೀತ ತಕ್ಕಮಟ್ಟಿಗಿದೆ ಎನ್ನುವಂತಿದೆ. ಛಾಯಾಗ್ರಹಕರ ಕೈಚಳಕ ಅದ್ಭುತವಾಗಿದೆ. ಅದೇ ರೀತಿ ಸಾಹಸ ದೃಶ್ಯಗಳು ಭರ್ಜರಿಯಾಗಿದ್ದು, ಸಂಕಲನದ ಕಾರ್ಯವು ಉತ್ತಮವಾಗಿದೆ. ಬಹಳ ತಾಳ್ಮೆಯಿಂದ ನೋಡುವವರಿಗೆ ಇಷ್ಟವಾಗುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.