ಕಾಡುವ ಕಥೆ – ವ್ಯಥೆ “ಫೋಟೋ” (ಚಿತ್ರವಿಮರ್ಶೆ-ರೇಟಿಂಗ್-4/5)
ರೇಟಿಂಗ್-4/5
ಚಿತ್ರ : ಫೋಟೋ
ನಿರ್ದೇಶಕ : ಉತ್ಸವ್ ಗೋನವಾರ
ನಿರ್ಮಾಣ : ಮಸಾರಿ ಟಾಕೀಸ್
ಸಂಗೀತ : ರೈ ಹಿರೇಮಠ
ಛಾಯಾಗ್ರಹಕ : ದಿನೇಶ್ ದಿವಾಕರನ್
ಶಬ್ದ ವಿನ್ಯಾಸ : ರವಿ ಹಿರೇಮಠ್
ತಾರಾಗಣ : ವೀರೇಶ್ ಗೊನ್ವಾರ್, ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ ಹಾಗೂ ಮುಂತಾದವರು…
ಇಡೀ ದೇಶವೇ ಬಿಚ್ಚಿಬಿದ್ದಂತ ಪರಿಸ್ಥಿತಿ ಕರೋನಾ ಸಮಯ. ಜನರು ತಮ್ಮ ಜೀವ ಉಳಿಸಿಕೊಳ್ಳುವುದು ಹೇಗೆ ಅನ್ನುವ ಸ್ಥಿತಿಯ ನಡುವೆ ಕೇಂದ್ರ ಸರ್ಕಾರದಿಂದ ಹೊರಡಿಸುವ ಲಾಕ್ ಡೌನ್ ಅಧಿಸೂಚನೆ ಜನರನ್ನ ಕಂಗಾಲಾಗಿಸುತ್ತದೆ. ವಟ್ಟೆ ಪಾಡಿಗಾಗಿ ವಲಸೆ ಬಂದಂತಹ ಜನರು ಊಟವಿಲ್ಲದೆ ಊರು ಸೇರಲು ವಾಹನವಿಲ್ಲದೆ ಪರದಾಡುವ ಸ್ಥಿತಿಗತಿ ಹೇಗೆ ಹಲವಾರು ಸಮಸ್ಯೆಗಳು ಬಹುತೇಕರು ಎದುರಿಸಿದ್ದಾರೆ.
ಅಂತಹದ್ದೇ ಒಂದು ಬಡ ಕುಟುಂಬ ಎದುರಿಸುವ ನೋವು, ಸಂಕಷ್ಟಗಳ ಕಾಡುವ ಕಥೆಯಾಗಿ ಈ ವಾರ ತೆರೆಯ ಮೇಲೆ ಬಂದಿದೆ “ಫೋಟೋ”. ಉತ್ತರ ಕರ್ನಾಟಕದ ಗೋನವಾರ ಎಂಬ ಗ್ರಾಮದ ದುರ್ಗ್ಯ(ವೀರೇಶ್ ಗೋನವಾರ) ನನ್ನ ಗೆಳೆಯರೊಟ್ಟಿಗೆ ಆಟ , ಪಾಠ, ಊಟ ಎಂಬಂತೆ ಇರುತ್ತಾನೆ, ಅವನು ಬೆಂಗಳೂರಿಗೆ ಹೋಗಿ ವಿಧಾನಸೌಧ ಹಾಗೂ ಡಿ ಬಾಸ್ ಜೊತೆ ಫೋಟೋ ತೆಗೆಸಿಕೊಳ್ಳಬೇಕೆಂಬ ಆಸೆ.
ತನ್ನ ತಾಯಿ ಗಂಗಮ್ಮ (ಸಂಧ್ಯಾ ಅರಕೆರೆ) ಬಳಿ ತನ್ನ ತಂದೆ ಗ್ಯನ (ಮಹದೇವ ಹಡಪದ್) ಕೆಲಸ ಮಾಡುವ ಬೆಂಗಳೂರಿಗೆ ತನ್ನನ್ನ ಕಳಿಸು ಎನ್ನುತ್ತಾನೆ. ಈ ವಿಚಾರವಾಗಿ ತನ್ನ ಗೆಳೆಯರೊಂದಿಗೆ ಚಾಲೆಂಜ್ ಕೂಡ ಮಾಡಿರುತ್ತಾನೆ. ಮಗನ ಮಾತು , ವರ್ತನೆ ಗಮನಿಸಿದ ಗಂಗಮ್ಮ ವ್ಯಕ್ತಿ ಒಬ್ಬರ ಮೂಲಕ ತನ್ನ ಗಂಡನ ಬಳಿ ಮಗನನ್ನು ಕಳಿಸುತ್ತಾಳೆ. ಆ ಸಮಯ ಕೊರೋನಾ ಹಾವಳಿ ಆರಂಭದ ಅಂತ.
ಮನೆ ಕಟ್ಟಡದ ಗಾರೆ ಕೆಲಸ ಮಾಡುವ ಗ್ಯನ ಮಗನಿಗೆ ವಿಧಾನಸೌಧಕ್ಕೆ ಕರೆದುಕೊಂಡು ಹೋಗುವಷ್ಟರಲ್ಲಿ ಲಾಕ್ ಡೌನ್ ಎದುರಾಗುತ್ತದೆ. ಮುಂದೆ ಎದುರಾಗುವ ಹಲವು ಘಟನೆಗಳು ಬದುಕು ಎಷ್ಟು ಕಷ್ಟ , ಗೋರ, ಹೀಗೆಲ್ಲಾ ನಡೀತಾ ಎಂಬ ವಿಚಾರ ಮನಸ್ಸಿಗೆ ಕಾಡುವಂತೆ ಮಾಡುತ್ತದೆ.
ದುರ್ಗ್ಯ ವಿಧಾನಸೌಧ , ಡಿ ಬಾಸ್ ಜೊತೆ ಫೋಟೋ ತೆಗೆಸಿಕೊಂಡನಾ…
ಗ್ಯನ ಎದುರಿಸುವ ಸಂಕಷ್ಟ…
ಗಂಗಮ್ಮನ ಪರಿಸ್ಥಿತಿ…
ಫೋಟೋ ಅಂದರೇನು…
ಈ ಸೂಕ್ಷ್ಮ ವಿಚಾರಗಳಿಗಾಗಿ ಒಮ್ಮೆ ಈ ಸಿನಿಮಾ ನೋಡಲೇಬೇಕು.
ಕೋವಿಡ್‌ನ ಸಂದರ್ಭದಲ್ಲಿ ಘೋಷಿಸಿದ ಲಾಕ್‌ಡೌನ್‌ನ ಪರಿಣಾಮ , ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ “ಫೋಟೋ” ಸಿನಿಮಾ ಪ್ರತಿಯೊಬ್ಬರೂ ನೋಡಬೇಕೆಂಬ ಉದ್ದೇಶದಿಂದ ಈ ಚಿತ್ರವನ್ನು ಪ್ರೆಸೆಂಟ್ ಮಾಡಿ ಯುವ ಪ್ರತಿಭೆಗಳಿಗೆ ಸಾತ್ ನೀಡಿ ಚಿತ್ರದ ಬಿಡುಗಡೆಯ ಜವಾಬ್ದಾರಿ ಹೊತ್ತುಕೊಂಡು ನಾನು ಸದಾ ಇರುತ್ತೇನೆ ಎನ್ನುವ ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರಾಜ್ ಆಲೋಚನೆ ಮೆಚ್ಚುವಂತಿದೆ.
ಇನ್ನು ಯುವ ನಿರ್ದೇಶಕ ಉತ್ಸವ್ “ಫೋಟೋ” ದಂತಹ ಸಾಮಾಜಿಕ ಕಳಕಳಿಯ ಮೂಲಕ ಒಂದು ಘಟನೆಯನ್ನು ಕಟ್ಟಿಕೊಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮನು ಮಟ್ಟುವ ದೃಶ್ಯಗಳ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ಎದುರಿಸಿದ ಕಷ್ಟಗಳನ್ನು ಹಾಡಿನಲ್ಲಿ ಕಟ್ಟಿಕೊಟ್ಟಿರುವ ರೀತಿ ಗಮನ ಸೆಳೆಯುತ್ತದೆ. ಆದರೆ ಚಿತ್ರದ ಓಟ ನಿಧಾನ ಗತಿಯಲ್ಲಿ ಸಾಗಿ ಆಯಾಸವೆನಿಸುತ್ತದೆ. ಇನ್ನು ಚಿತ್ರಕ್ಕೆ ರೈ ಹಿರೇಮಠ ಸಂಗೀತ, ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಶಬ್ದ ವಿನ್ಯಾಸ ಚಿತ್ರಕ್ಕೆ ಪೂರಕವಾಗಿ ಕಂಡಿದೆ.
ಇನ್ನು ಯುವ ಪ್ರತಿಭೆ ವೀರೇಶ್ ಗೊನ್ವಾರ್ ನಡೆ , ನುಡಿ ನೈಜವಾಗಿ ಮೂಡಿಬಂದಿದೆ. ತಂದೆಯಾಗಿ ಮಹಾದೇವ ಹಡಪದ್, ತಾಯಿಯಾಗಿ ಸಂಧ್ಯಾ ಅರಕೆರೆ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ಹಾಗೆಯೇ ಕಾಕನ ಪಾತ್ರದಲ್ಲಿ ಜಹಾಂಗೀರ್ ಗಮನ ಸೆಳೆಯುತ್ತಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಇಂತಹ ನೈಜ್ಯಕೆ ಹತ್ತಿರವಿರುವ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು.