ಆಗಸ್ಟ್ 23ಕ್ಕೆ “ಪೌಡರ್” ಪರಿಮಳ
ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರ ಕೊಟ್ಟರೆ ಕಂಡಿತ ಸಿನಿಮಾ ನೋಡಲು ಬರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಂತಹ ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರವೇ ಸಾಕ್ಷಿಯಾಗಿದೆ. ಈಗ ಅದೇ ಸಾಲಿನಲ್ಲಿ ಒಂದಷ್ಟು ಸೂಕ್ಷ್ಮ ವಿಚಾರಗಳ ಮಧ್ಯೆ ಹಾಸ್ಯ ಮಿಶ್ರಣದೊಂದಿಗೆ ಮನೋರಂಜನೆಯನ್ನು ನೀಡಲು ಬರುತ್ತಿರುವಂತಹ ಚಿತ್ರ “ಪೌಡರ್”.
ನಿರೀಕ್ಷೆಯನ್ನು ಹುಟ್ಟು ಹಾಕಿರುವ ಈ ಚಿತ್ರ ಈಗಾಗಲೇ ಪ್ರಚಾರದ ಕಾರ್ಯವನ್ನು ಅದ್ದೂರಿಯಾಗಿ ನಡೆಸುತ್ತಿದ್ದು , ಈ ವಿಚಾರವಾಗಿ ಮಾಹಿತಿಯನ್ನು ನೀಡಲು ಮಾಧ್ಯಮದವರ ಮುಂದೆ ಹುಷಾರಿಲ್ಲದ ಕಾರಣ ನಿರ್ದೇಶಕರನ್ನ ಹೊರತು ಪಡಿಸಿ ನಿರ್ಮಾಪಕರಾದ ಕಾರ್ತಿಕ್ ಗೌಡ , ಯೋಗಿ. ಜಿ .ರಾಜ್ , ನಟ ದಿಗಂತ್ , ನಟಿಯರಾದ ಧನ್ಯಾ ರಾಮ್‍ಕುಮಾರ್, ಶರ್ಮಿಳಾ ಮಾಂಡ್ರೆ ಮತ್ತು ಅನಿರುದ್ಧ್ ಆಚಾರ್ಯ ಇದ್ದರು.
ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡುತ್ತಾ ನಾವು ಆಗಸ್ಟ್ 15ಕ್ಕೆ ಬರಬೇಕಿತ್ತು. ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಿಕೊಂಡು ಒಂದು ವಾರ ಮುಂದಕ್ಕೆ ಹೋಗಿ ಆಗಸ್ಟ್ 23ಕ್ಕೆ ನಮ್ಮ ಚಿತ್ರವನ್ನು ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಹೊರ ರಾಜ್ಯಗಳಲ್ಲಿ ಚೆನ್ನೈ , ಆಂಧ್ರ , ಬಾಂಬೈ ಸೇರಿದಂತೆ ನಮ್ಮ ಕನ್ನಡ ಆಡಿಯನ್ಸ್ ಇರುವ ಸಮೀಪದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ನಮ್ಮ ಚಿತ್ರ 2 ಗಂಟೆ 11 ನಿಮಿಷ ಇದೆ. ‘ಪೌಡರ್’ ಡ್ರಗ್ಸ್ ಕುರಿತಾದ ಚಿತ್ರ ಎಂದು ಗೊತ್ತಾಗಿರುತ್ತದೆ. ಆದರೆ, ಇದು ಡ್ರಗ್ಸ್ ಕುರಿತು ಸಂದೇಶ ಚಿತ್ರವಲ್ಲದೆ , ಡ್ರಗ್ಸ್ ಪ್ಯಾಕ್ ಮಿಸ್ ಆದಾಗ ಅದರಿಂದಾಗುವ ಎಡವಟ್ಟು ಅವಾಂತರಗಳನ್ನು ಹಾಸ್ಯ ಮೂಲಕ ತಿಳಿಸಲು ಹೊರಟಿದ್ದೇವೆ.
ಇಲ್ಲಿ ಯಾವುದೇ ಲಾಜಿಕ್ ಇಲ್ಲ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ನಮ್ಮ ಇಡೀ ಚಿತ್ರಕ್ಕೆ ನವರಸ ನಾಯಕ ಜಗ್ಗೇಶ್ ರವರ ವಾಯ್ಸ್ ಮೈನ್ ಅಟ್ರಾಕ್ಷನ್. ಇದಲ್ಲದೆ ಒಂದಷ್ಟು ವಿಶೇಷತೆಗಳು ಖಂಡಿತ ಪ್ರೇಕ್ಷಕರನ್ನ ಸೆಳೆಯುತ್ತದೆ. ಈಗಾಗಲೇ ನಮಗೆ ಶಿವಣ್ಣ , ಸುದೀಪ್ , ಯಶ್ , ಧ್ರುವ , ದುನಿಯಾ ವಿಜಯ್ , ಧನಂಜಯ್ ನಮ್ಮ ಚಿತ್ರದ ಪ್ರಚಾರದ ಸಂದರ್ಭಗಳಲ್ಲಿ ತುಂಬಾ ಸಾತ್ ನೀಡಿದ್ದಾರೆ.
ಹಾಗೆಯೇ ಸಿನಿಮಾ ಬಿಜಿನೆಸ್ , ಓ ಟಿ ಟಿ ಸೇರಿದಂತೆ ಪ್ರಸ್ತುತ ಚಿತ್ರಮಂದಿರಗಳ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಾ , ಯಾವುದೇ ಪ್ರೀಮಿಯರ್ ಶೋ ಇಟ್ಟುಕೊಳ್ಳದೆ ಶುಕ್ರವಾರದಂದೆ ಪೌಡರ್ ಚಿತ್ರನ್ನ ಬಿಡುಗಡೆ ಮಾಡುತ್ತಿದ್ದೇವೆ ನಿಮ್ಮೆಲ್ಲರ ಸಹಕಾರ ಪ್ರೀತಿ ನಮ್ಮ ಚಿತ್ರದ ಮೇಲೆ ಇರಲಿ ಎಂದರು. ಇನ್ನು ಈ ಚಿತ್ರದ ಮತ್ತೊಬ್ಬ ನಿರ್ಮಾಪಕ ಯೋಗಿ .ಜಿ . ರಾಜ್ ಮಾತುಕತೆ ಮುನ್ನ ಕಾರ್ಯಕ್ರಮವನ್ನು ಆರಂಭಿಸಿ ನಾವು ನೇರವಾಗಿ ಮಾಧ್ಯಮದವರನ್ನು ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ , ಹಾಗಾಗಿ ಇಂದು ನಿಮ್ಮನ್ನ ಕರೆದಿದ್ದೇವೆ. ನಮ್ಮ ಈ ಪೌಡರ್ ಚಿತ್ರದ ಪ್ರಚಾರದ ಕೆಲಸವು ಜೋರಾಗಿ ನಡೆಯುತ್ತಿದೆ. ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದರು.
ನಾಯಕ ನಟ ದಿಗಂತ್ ಮಾತನಾಡುತ್ತಾ ಈ ಚಿತ್ರದ ಪಾತ್ರ ನನಗೆ ಬಹಳ ತೃಪ್ತಿಯನ್ನು ತಂದು ಕೊಟ್ಟಿದೆ. ಯಾಕೆಂದರೆ ಇದು ವಿಭಿನ್ನ ಚಿತ್ರ ಎನ್ನುವುದಕ್ಕಿಂತ ಇಂಥದ್ದೊಂದು ಪಾತ್ರವನ್ನು ಇದುವರೆಗೂ ಮಾಡಿರಲಿಲ್ಲ. ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ. ಚಿತ್ರದ ಓಟಕ್ಕೆ ಪೂರಕವಾದ ಪಾತ್ರಗಳು, ಎಲ್ಲರಿಗೂ ಅವರದ್ದೇ ಆದ ಕಥೆಗಳಿವೆ. ಈ ಚಿತ್ರಕ್ಕಾಗಿ ತಮ್ಮ ತಂಡ ಬಹಳಷ್ಟು ಶ್ರಮ ಪಟ್ಟು ಕೆಲಸ ಮಾಡಿದೆ.
ಈಗಾಗಲೇ ಬಹುತೇಕ ಕಾಲೇಜುಗಳಲ್ಲಿ ನಾವು ಪ್ರಚಾರದ ಸಲುವಾಗಿ ತಂಡ ಹೋಗಿದ್ದೇವೆ. ನಿರ್ಮಾಪಕರು ನಮ್ಮನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ಈ ಸಿನಿಮಾ ಗೆದ್ದರೆ, ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವುದಕ್ಕೆ ಧೈರ್ಯ ಬರುತ್ತದೆ. ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಎಂದು ಕೇಳಿಕೊಂಡರು.
ನಟಿ ಧನ್ಯಾ ರಾಮ್‍ಕುಮಾರ್ ಮಾತನಾಡುತ್ತ ಈ ಒಂದು ತಂಡದಲ್ಲಿ ಕೆಲಸ ಮಾಡಿದ್ದು ನನಗೆ ಬಹಳ ಖುಷಿ ಕೊಟ್ಟಿದೆ. ಎಲ್ಲರೂ ತುಂಬು ಸಹಕಾರ ನೀಡಿದ್ದಾರೆ ಎಂದರು. ಮತ್ತೊಬ್ಬ ನಟಿ ಶರ್ಮಿಳಾ ಮಾಂಡ್ರೆ ಮಾತನಾಡುತ್ತ ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ನಮ್ಮ ಟೀಮ್ ಸಪೋರ್ಟ್ ತುಂಬಾ ಚೆನ್ನಾಗಿತ್ತು. ಇದೊಂದು ಎಂಟರ್ಟೈನ್ಮೆಂಟ್ ಚಿತ್ರ ನಿಮ್ಮೆಲ್ಲರ ಸಪೋರ್ಟ್ ಬೇಕು ಎಂದು ಕೇಳಿದರು.
ಇನ್ನು ಮತ್ತೊಬ್ಬ ಪ್ರತಿಭೆ ಅನಿರುದ್ಧ ಆಚಾರ್ಯ ಮಾತನಾಡುತ್ತಾ ನನ್ನ ಪಾತ್ರದ ಬಗ್ಗೆ ಹೆಚ್ಚಾಗಿ ಹೇಳುವುದು ಏನು ಇಲ್ಲ. ನೀವೆಲ್ಲ ನೋಡಿದರೆ ಖಂಡಿತ ಇಷ್ಟಪಡುತ್ತೀರಾ ಎಂದರು. ಇನ್ನುಳಿದಂತೆ ಈ ಚಿತ್ರದಲ್ಲಿ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು , ವಾಸುಕಿ ವೈಭವ ಸಂಗೀತ, ಶಾಂತಿ ಸಾಗರ್ , ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡಿದ್ದಾರೆ.
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರವನ್ನು ಕಾರ್ತಿಕ್ ಗೌಡ , ಯೋಗಿ ಜಿ ರಾಜ್ ಮತ್ತು ವಿಜಯ ಸುಬ್ರಮಣ್ಯಂ, ಅರುಣಾಭ್ ಕುಮಾರ್ ಸೇರಿ ಕೆ ಆರ್ ಜೆ ಸ್ಟುಡಿಯೋಸ್ ಹಾಗೂ ದಿ ವೈರಲ್ ಫೀವರ್ (ಟಿ .ವಿ. ಎಫ್) ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಬಹಳಷ್ಟು ಕುತೂಹಲ ಮೂಡಿಸಿರುವ ಈ ಪೌಡರ್ ಚಿತ್ರ ಪ್ರೇಕ್ಷಕರನ್ನ ರಂಜಿಸಲಿಕ್ಕೆ ಸಿದ್ಧವಾಗಿದೆ.