ಅ.16 ರಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಪ್ರೀತಿ ಅರಸಿ”
ಕರ್ನಾಟಕದ ವೀಕ್ಷಕರ ಮನಗೆದ್ದ ಮೊದಲ ಚಾನಲ್ ಉದಯ ಟಿವಿ ೩ ದಶಕಗಳಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಹಾಗೆ ಇತ್ತೀಚಿಗಷ್ಟೆ ವಿಶಿಷ್ಟ ರೀತಿಯ ಕಥೆಯೊಂದಿಗೆ ಪ್ರಾರಂಭವಾದ ಶಾಂಭವಿ ಈಗಾಗಲೆ ಜನಮನ್ನಣೆ ಪಡೆದುಕೊಂಡಿದೆ. ಕನ್ಯಾದಾನ,ಆನಂದರಾಗ,ಅಣ್ಣ-ತಂಗಿ,ಸೇವಂತಿ,ಜನನಿ,ರಾಧಿಕಾ,ಗೌರಿಪುರದ ಗಯ್ಯಾಳಿಗಳು ಹೊಸ ರೀತಿಯ ಕಥಾಹಂದರದೊಂದಿಗೆ ವೀಕ್ಷಕರ ಪ್ರೀತಿಗೆ ಪಾತ್ರಗಳಾಗಿವೆ. ಈಗ ಇದೇ ಸಾಲಿಗೆ ಆಕ್ಟೋಬರ್ ೧೬ರಿಂದ ಪ್ರತಿದಿನ ರಾತ್ರಿ ೯ಕ್ಕೆ “ಪ್ರೀತಿಯ ಅರಸಿ” ಎಂಬ ಹೊಸ ಧಾರಾವಾಹಿ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.
ಅಪೂರ್ಣ ಮನಸ್ಸುಗಳ ಪರಿಪೂರ್ಣ ಪ್ರೇಮ ಕಥೆ ಪ್ರೀತಿಯ ಅರಸಿ. ಸಾಮಾನ್ಯವಾಗಿ ಗಂಡು ಎಂದರೆ ಹೊರ ಪ್ರಪಂಚದಲ್ಲಿ ದುಡಿಯುವುದು, ಹೆಣ್ಣು ಎಂದರೆ ಮನೆ ನಿಭಾಯಿಸುವ ಜವಾಬ್ದಾರಿ ಹೊತ್ತವಳು ಎನ್ನುವುದು ಲೋಕಾರೂಡಿ. ನಮ್ಮ ಕಥಾನಾಯಕಿ ಅಂಜಲಿ ಮತ್ತು ಕಥಾನಾಯಕ ರಾಕಿ, ಇವರಿಬ್ಬರೂ ಈ ಸಾಮಾನ್ಯ ಜಗತ್ತಿನಲ್ಲಿ ಅಸಾಮಾನ್ಯ ಯೋಚನಾಲಹರಿ ಹೊಂದಿರುವವರು.
ತನ್ನ ಉದ್ಯೋಗದಲ್ಲಿ ಅತ್ತ್ಯುನತ ಮಟ್ಟಕ್ಕೇರುವುದು ಅಂಜಲಿಯ ಕನಸಾದರೆ, ಕುಟುಂಬವೇ ಸರ್ವಸ್ವ, ಮನೆಯೇ ಎಲ್ಲಕ್ಕಿಂತ ಮುಖ್ಯ ಅನ್ನೋದು ರಾಕಿಯ ಧೃಡ ನಿರ್ಧಾರ. ಪ್ರೀತಿಯನ್ನ ಅರಸುತ್ತಿರುವ ಅಂಜಲಿ, ರಾಕಿಯ ಪ್ರೀತಿಯ ಅರಸಿಯಾಗುವಳೇ? ಈ ಅಪೂರ್ಣ ಮನಸ್ಸುಗಳನ್ನು ಬೆಸೆಯುವ ಅಪರೂಪದ ಪ್ರೇಮ ಕಥೆ ಪ್ರೀತಿಯ ಅರಸಿ.
ಶೃತಿ ನಾಯ್ಡು ನಿರ್ಮಿಸಿ, ರಮೇಶ್ ಇಂದ್ರ ನಿರ್ದೇಶಿಸುತ್ತಿರುವ ಈ ಅಪರೂಪದ ಪ್ರೇಮ ಕಥೆಯಲ್ಲಿ ಅಂಜಲಿಯಾಗಿ ರಕ್ಷಾ ನಿಂಬರ್ಗಿ, ರಾಕಿಯಾಗಿ ಪೃಥ್ವಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಇಬ್ಬರನ್ನು ಒಂದು ಮಾಡುವ ಜವಾಬ್ದಾರಿಯನ್ನ ಇವರ ಅಜ್ಜಿಯಂದಿರಾಗಿ ಗಿರಿಜಾ ಲೋಕೇಶ್ ಮತ್ತು ಪದ್ಮಾ ವಾಸಂತಿ ನಿಭಾಯಿಸಿದರೆ, ಅಪ್ಪನಾಗಿ ಜೈಜಗದಿಶ್ ಅಭಿನಯಿಸಿದ್ದಾರೆ. ಇವರೊಂದಿಗೆ ಮಿಥುನ್ ತೇಜಸ್ವಿ, ನಾಗೇಂದ್ರ ಅರಸ್ ಮತ್ತು ರಾಧಾ ಜೈರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಪ್ರೀತಿಯ ಅರಸಿ ಇದೇ ಅಕ್ಟೋಬರ್ 16 ರಿಂದ ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 9 ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ