ನಿರ್ದೇಶಕರ ಸಂಘದ ವತಿಯಿಂದ ದಿವಂಗತ ಪುಟ್ಟಣ್ಣ ಕಣಗಾಲ್ ಜಯಂತಿ ಆಚರಣೆ
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಭವನದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಅಯೋಜಿಸಿದ್ದ, ಭಾರತೀಯ ಚಿತ್ರರಂಗದ ದಿಗ್ಗಜರಾದ ದಿವಂಗತ ಪುಟ್ಟಣ್ಣ ಕಣಗಾಲ್ ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಹಿರಿಯನಟಿ ತಾರ ಅನುರಾಧ ಮಾತನಾಡಿ, ಇಲ್ಲಿ ಕೆಟ್ಟ ನಿರ್ದೇಶಕರು, ಒಳ್ಳೆ ನಿರ್ದೇಶಕರು ಇಲ್ಲ.
ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾಠ ಹೇಳಿಕೊಟ್ಟವರೆ. ನನಗೆ ನಿರ್ಮಾಪಕ ಅಪ್ಪನಂತಿದ್ದರೆ, ನಿರ್ದೇಶಕ ನನಗೆ ಅಮ್ಮನಿದ್ದಂತೆ ಎಂದರು. ವಿಶ್ವನಾಥ್ ನೇತ್ರತ್ವದಲ್ಲಿ ನಿರ್ದೇಶಕರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ನಾನು ಎಂದಿಗೂ ಸಂಘದ ಜೊತೆ ಇದ್ದೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸದಸ್ಯರ ಕುಟುಂಬಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೂಡ ಏರ್ಪಡಿಸಲಾಗಿತ್ತು. ಬೆಳಿಗ್ಗೆ ಉಪಹಾರದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಶಿಬಿರಕ್ಕೆ ಹಿರಿಯ ನಿರ್ದೇಶಕರಾದ ಸಾಯಿಪ್ರಕಾಶ್ ಅವರು ಚಾಲನೆ ನೀಡಿದರು.
ಇದೇ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ ವಿ ಚಂದ್ರಶೇಖರ್ ಮಾತನಾಡಿ, ಹಳೆಯ ಪದ್ದತಿಯನ್ನು ಬದಲಾಯಿಸಲು ಹೊಸ ಯುಗದಲ್ಲಿ ಆಗಲ್ಲ. ಇತ್ತೀಚಿನ ದಿನಗಳಲ್ಲಿ ನಿರ್ದೇಶಕರು ನಿರ್ಮಾಪಕರು ಎರಡು ದಿನ ಚಿತ್ರಮಂದಿರಗಳಲ್ಲಿ ಚಿತ್ರ ಓಡಿಸಿ ನಂತರ ದೃಶ್ಯಕ್ಕೆ ಕತ್ತರಿ ಹಾಕಿ ಬರುತ್ತೇವೆ ಅಂತಾರೆ.
ಆಗಲೇ ಚಿತ್ರದ ಬಗ್ಗೆ ಹೊರಗಡೆ ಬಾಯಿಯಿಂದ ಬಾಯಿಗೆ ತಲುಪಿರುತ್ತದೆ. ಅಂತಹ ಕೆಲಸ ನಂತರ ಮಾಡುವ ಬದಲು ಮೊದಲೆ ಒಂದಕ್ಕೆ ಎರಡು ಬಾರಿ ಚಿತ್ರ ನೋಡಿ ಏನು ಎಡಿಟ್ ಮಾಡ್ಬೇಕೋ ಮಾಡಿ ಚಿತ್ರಮಂದಿರಕ್ಕೆ ಚಿತ್ರ ತನ್ನಿ ಎಂದು ನಿರ್ದೇಶಕರಿಗೆ ಸಲಹೆ ನೀಡಿದರು.
ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್, ಹಿರಿಯ ನಟ ನಿರ್ದೇಶಕ , ನಟ ಶ್ರೀನಿವಾಸ್ ಮೂರ್ತಿ, ಹಿರಿಯ ಕಲಾವಿದ ಶಿವಕುಮಾರ್, ನಟಿ ಶ್ರೀ ರಕ್ಷಾ ಶಿವಕುಮಾರ್, ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಬ್ರಹ್ಮಣ್ಯ ಬಾಡೂರು, ಪುಟ್ಟಣ ಕಣಗಾಲ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಂದರೇಶ್, ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ನರಸಿಂಹಲು, ಸಂಕಲನಕಾರರ ಸಂಘದ ಅಧ್ಯಕ್ಷರಾದ ಕೆಂಪರಾಜು, ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾದ ಜೆ ಜಿ ಕೃಷ್ಣ, ನಿರ್ಮಾಪಕರ ಸಂಘದ ಕಾರ್ಯದರ್ಶಿಗಳಾದ ಪ್ರವೀಣ್, ಚಲನಚಿತ್ರ ನಿರ್ದೇಶಕರಾದ ಶಶಿಕಾಂತ್ ಗಟ್ಟಿ, ವೈಧ್ಯಾಧಿಕಾರಿಗಳಾದ ಭುಜಬಲಿ, ಜಯಶೇಖರ್ ಮುಂತಾದವರು ಮಾತಾನಾಡಿ ನಿರ್ದೇಶಕರ ಸಂಘದ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಎಲ್ಲಾ ಗಣ್ಯರು ದೀಪ ಬೆಳಗಿಸಿ ಪುಟ್ಟಣ್ಣನವರ ಬಾವ ಚಿತ್ರಕ್ಕೆ ಪುಷ್ಪ ನಮನ ಮಾಡಿದರು. ನಂತರ ಪುಟ್ಟಣ್ಣ ಕಣಗಾಲ್ ಅವರ ಮಗಳಾದ ಶ್ರೀಮತಿ ರಾಜೇಶ್ವರಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಜೋಸೈಮನ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರೆ, ಸಂಘದ ಕಾರ್ಯದರ್ಶಿಗಳಾದ ಸೆಬಾಸ್ಟಿನ್ ಡೇವಿಡ್ ಸ್ವಾಗತ ಭಾಷಣ, ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರು ಪ್ರಾಸ್ತಾವಿಕ ನುಡಿ ಮತ್ತು ಸಂಘದ ಮತ್ತೊಬ್ಬ ಉಪಾಧ್ಯಕ್ಷರಾದ ಜಗದೀಶ್ ಕೊಪ್ಪರವರು ವಂದನಾರ್ಪಣೆ ಮಾಡಿದರು.
ಸಂಘದ ಖಜಾಂಚಿಗಳಾದ ಆದಿತ್ಯ ಚಿಕ್ಕಣ್ಣನವರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಂಡರೆ ಸಂಘದ ಜಂಟಿ ಕಾರ್ಯದರ್ಶಿಗಳಾದ ಮಳವಳ್ಳಿ ಸಾಯಿಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮರಡಿಹಳ್ಳಿ ನಾಗಚಂದ್ರ, ಟಾಪ್ ಸ್ಟಾರ್ ರೇಣು ಕುಮಾರ್, ಎಸ್ ಆರ್ ಪ್ರಮೋದ್, ಅನುತೇಜಾ ಮತ್ತು ನಟರಾಜ್ ಅವರು ಸಹಕಾರ ನೀಡಿದರು.
ನಂತರ ಭೋಜನ ಮುಗಿಸಿದ ಬಳಿಕ ಪುಟ್ಟಣ್ಣ ನವರ ನೆನಪಿಗಾಗಿ ‘ನಾಗರಹಾವು’ ಚಿತ್ರವನ್ನು ಪ್ರದರ್ಶಿಸಲಾಯಿತು. ಪುಟ್ಟಣ್ಣ ನವರ ಪಟ್ಟಾ ಶಿಷ್ಯರಾದ ಚಂದ್ರಹಾಸ ಆಳ್ವರವರು ಅವರ ಗುರುಗಳ ಸ್ಮರಣೆ ಮಾಡಿ ಕಾರ್ಯಕ್ರಮದ ಮುಕ್ತಾಯ ವನ್ನು ಮಾಡಿದರು.