ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ನಂಬರ್ ಗೆ ಹೆಜ್ಜೆ ಹಾಕಿದ ರಾಗಿಣಿ
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರ ಪುತ್ರ ರಾಜವರ್ಧನ್ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹೀರೋ ಆಗಿ ಅವರು ಸ್ಯಾಂಡಲ್ವುಡ್ನಲ್ಲಿ ಗುರುಸಿಕೊಂಡಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚುತ್ತಿರುವ ರಾಜವರ್ಧನ್ ಕೈಯಲ್ಲಿ ಹಲವು ಪ್ರಾಜೆಕ್ಟ್ ಗಳಿವೆ. ಅವುಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ‘ಗಜರಾಮ’. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಫಸ್ಟ್ ಲುಕ್ ಮೂಲಕ ಗಮನಸೆಳೆದಿರುವ ಗಜರಾಮನ ಸ್ಪೆಷಲ್ ಹಾಡಿನ ಚಿತ್ರೀಕರಣ ಚಿಕ್ಕಗುಬ್ಬಿಯಲ್ಲಿ ನಡೆದಿದೆ. ಝಗಮಗಿಸುವ ಸೆಟ್ ನಲ್ಲಿ, ಧನು ಮಾಸ್ಟರ್ ಕೊರಿಯೋಗ್ರಫಿಯಲ್ಲಿ ತುಪ್ಪದ ಬೆಡಗಿ ರಾಗಿಣಿ ಜೊತೆ ರಾಜವರ್ಧನ್ ಹೆಜ್ಜೆ ಹಾಕಿದ್ದಾರೆ.
ರಾಗಿಣಿ ಮಾತನಾಡಿ, ಹೊಸ ಹೊಸ ಪ್ರಯತ್ನಗಳು ನಮ್ಮ ಇಂಡಸ್ಟ್ರೀಯಲ್ಲಿ ಆಗಬೇಕು. ಕನ್ನಡ ಸಿನಿಮಾಗಳು ಒಳ್ಳೆ ರೀತಿಯಲ್ಲಿ ಬೆಳೆಯುತ್ತಿವೆ. ಅದನ್ನು ನೋಡಿ ಹೆಮ್ಮೆ ಅನಿಸುತ್ತದೆ. ನಾನು ಎಲ್ಲಿ ಹೋದರು ಕರ್ನಾಟಕ ನನ್ನ ಮನೆ ತರ. ಗಜರಾಮ ಸಿನಿಮಾದಲ್ಲಿ ನನಗಾಗಿ ಮಾಡಿರುವ ಸ್ಪೆಷಲ್ ಸಾಂಗ್ ಇದೆ. ರಾಜ್ ಅದ್ಭುತ ನಟ. ಮನೋಮೂರ್ತಿ ಸರ್ ಮ್ಯೂಸಿಕ್, ಧನು ಕೊರಿಯೋಗ್ರಫಿ ಎಲ್ಲವೂ ಸೇರಿ ಈ ವರ್ಷದ ಹಿಟ್ ಹಾಡುಗಳಲ್ಲಿ ಒಂದಾಗಲಿದೆ. ಇಡೀ ತಂಡಕ್ಕೆ ನಿಮ್ಮ ಬೆಂಬಲ ಇರಲಿ ಎಂದರು.
ರಾಜವರ್ಧನ್ ಮಾತನಾಡಿ, ಇವತ್ತು ಕುಂಬಳಕಾಯಿವರೆಗೂ ಬಂದಿದ್ದೇವೆ. ಈ ಸಿನಿಮಾ ಒಂದು ವರ್ಷದ ಜರ್ನಿ. ಲೈಫ್ ಲೈನ್ ಪಿಕ್ಚರ್ಸ್ ಜೊತೆ ಮಾಡುತ್ತಿರುವ ಮೊದಲ ಚಿತ್ರ ಇದು. ಅದ್ಭುತವಾಗಿ ಸಿನಿಮಾ ಬಂದಿದೆ. ಸುನಿಲ್ ಮುಂದಿನ ದಿನಗಳಲ್ಲಿ ಮಾಸ್ ಡೈರೆಕ್ಟರ್ ಆಗಿ ಚಿತ್ರರಂಗ ಬರ್ತಾರೆ. ರಾಗಿಣಿ ಮೇಡಂ ಕಾಲೇಜ್ ಟೈಮ್ ನಿಂದ ಕ್ರಶ್. ಈಗ ವರ್ಕ್ ಮಾಡುವ ಅವಕಾಶ ಸಿಕ್ಕಿದೆ. ಡ್ರೀಮ್ ಕಂಪ್ಲೀಟ್ ಆಗಿದೆ. ಮನೋ ಸರ್ ಮೆಲೋಡಿ ಕಿಂಗ್..ಈಗ ಮಾಸ್ ಕಿಂಗ್ ಆಗಿದ್ದಾರೆ. ನಮ್ಮ ಕಥೆಗೆ ಹೇಗೆ ಬೇಕೋ ಆಗಿದ್ದಾರೆ ನಮ್ಮ ಹೀರೋಯಿನ್. ರಾಮ್ ನನ್ನ ಪಾತ್ರ. ರಾಮ ರಾವಣ ಎರಡು ನಾನೇ. ತುಂಬಾ ಒಳ್ಳೆ ಆರ್ಟಿಸ್ಟ್ ಚಿತ್ರದಲ್ಲಿದ್ದಾರೆ ಎಂದರು.
ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ಬೆಂಗಳೂರು, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇವತ್ತು ಕೊನೆಯ ದಿನ. ರಾಜವರ್ಧನ್ ಸರ್ ತುಂಬಾ ಡೆಡಿಕೇಷನ್ ಆಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕರು ಬಜೆಟ್ ಕೇಳದೆ ಸಿನಿಮಾ ಮಾಡಿದ್ದಾರೆ. ಮನೋಮೂರ್ತಿ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಸಾಂಗ್ ಕೇಳಿದ ತಕ್ಷಣ ರಾಗಿಣಿ ಮೇಡಂ ಒಪ್ಪಿಕೊಂಡರು ಎಂದರು.
ನಿರ್ಮಾಪಕ ನರಸಿಂಹಮೂರ್ತಿ ಮಾತನಾಡಿ, ಇವತ್ತು ಸಿನಿಮಾಗೆ ಕುಂಬಳಕಾಯಿ..ಮೂಹೂರ್ತ ಆದಾಗ ಎಷ್ಟು ಖುಷಿ ಆಗಿತ್ತು. ಈಗ ಅಷ್ಟೇ ಖುಷಿಯಾಗುತ್ತಿದೆ. ಈ ಸಾಂಗ್ ನ್ನು ವಿವರಣೆ ಪಡೆದು ಬಳಿಕ ಮಾಡುತ್ತೇನೆ. ಅದಕ್ಕಾಗಿ ಕಾಯಬೇಕು ಎಂದರು. ಮನೋ ಸರ್ ಗೆ ತುಂಬಾ ಕಾಟ ಕೊಟ್ಟು ಸಾಂಗ್ ಮಾಡಿಸಿದ್ದೇವೆ. ಧನು ಮಾಸ್ಟರ್ ಈ ಹಾಡನ್ನು ಕೊನೆಯಲಿ ಮಾಡೋಣಾ ಎಂದರು. ಒಳ್ಳೆ ಔಟ್ ಫುಟ್ ಬಂದಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬರುವ ಪ್ರಯತ್ನ ಮಾಡುತ್ತೇವೆ ಎಂದರು. ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಈ ಸಾಂಗ್ ಅದ್ಭುತವಾಗಿ ಮೂಡಿಬಂದಿದೆ. ಈ ತರ ಹಾಡು ಮಾಡದೆ ಬಹಳ ವರ್ಷಗಳೇ ಆಗಿದೆ ಎಂದರು.
ಶಿಷ್ಯ ದೀಪಕ್ ಪೊಲೀಸ್ ಪಾತ್ರದಲ್ಲಿ, ತೆಲುಗಿನ ಖ್ಯಾತ ಖಳನಟ ಕಬೀರ್ ಸಿಂಗ್ ಖಳನಾಯಕನಾಗಿ, ತಪಸ್ವಿನಿ ರಾಜವರ್ಧನ್ ಗೆ ಜೋಡಿಯಾಗಿ ನಟಿಸಿದ್ದಾರೆ. ಕಾಮಿಡಿಕಿಲಾಡಿ ಖ್ಯಾತಿಯ ಸಂತು ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ. ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, ‘ದುನಿಯಾ’ ಸೂರಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್ ಈಗ ‘ಗಜರಾಮ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಆಕ್ಷನ್ ಮಾಸ್ ಎಂಟರ್‌ಟೇನರ್ ಆಗಿರುವ ‘ಗಜರಾಮ’ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಪ್ರಮೋದ್ ಮರವಂತೆ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ