ಬದುಕಿನ ಜ್ಞಾನಾರ್ಜನೆಯ ಅರಿವು.. ರಾವುತ (ಚಿತ್ರವಿಮರ್ಶೆ)
ಚಿತ್ರ : ರಾವುತ
ನಿರ್ದೇಶಕ : ಸಿದ್ದುವಜ್ರಪ್ಪ
ನಿರ್ಮಾಪಕ : ಈರಣ್ಣ ಶುಭಾಷ್ ಬಡಿಗೇರ್
ಸಂಗೀತ : ಸುಚಿನ್ ಶರ್ಮ
ತಾರಾಗಣ : ರಾಜ್ ಪ್ರವೀಣ್, ಭವಾನಿ ಪುರೋಹಿತ್, ಮರೇಶ್ ಯಾದವ್, ನರಸಿಂಹಮೂರ್ತಿ, ರಾಘವ್ ಹಾಗೂ ಮುಂತಾದವರು…
ಪ್ರತಿಯೊಂದು ಜೀವರಾಶಿಗೂ ಹುಟ್ಟು – ಸಾವು ಇದ್ದಿದ್ದೆ. ಶತಮಾನಗಳಿಂದಲೂ ಶರಣರು , ಕವಿಗಳು , ತತ್ವಜ್ಞಾನಿಗಳು , ಸಿದ್ದಿ ಪುರುಷರು , ಸಾಧು ಸಂತರು ಅಣತಿಯ ಮೇರೆಗೆ ಜೀವನ ನಡೆಸಿರುವ ಅದೆಷ್ಟೋ ಭಕ್ತ ಸಮೂಹದ ಬಗ್ಗೆ ನಾವೆಲ್ಲರೂ ತಿಳಿದೇ ಇದ್ದೇವೆ.
ಜ್ಞಾನದ ಅರಿವು ಮೂಡಿಸಿಕೊಳ್ಳುವ ನಿಟ್ಟಿನಲ್ಲಿ ಪಂಚೇಂದ್ರಿಯ , ಪಂಚಭೂತಗಳ ಸುಳಿಯಲ್ಲೇ ನಾಸ್ತಿಕ ಹಾಗೂ ಆಸ್ತಿಕನ ಆಲೋಚನೆಯ ಸೂಕ್ಷ್ಮ ವಿಚಾರದ ಜೊತೆಗೆ ಬದುಕಿದ್ದವ ತನ್ನ ಸಾವಿನ ನಂತರದಲ್ಲಿ ಕಂಡ ಅನುಭವದ ಸಾರವನ್ನ ಎಳೆ ಎಳೆಯಾಗಿ ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿಯ ದೃಶ್ಯದ ಮೂಲಕ ತೆರೆದಿಡುವ ಪ್ರಯತ್ನವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಾವುತ”.
ತನ್ನ ಗುರು ನಾರಾಯಣ ದಾಸರ ಆಗ್ನೇಯಂತೆ ನಿಷ್ಠೆಯೊಂದಿಗೆ ಪ್ರಾಮಾಣಿಕವಾಗಿ ಬದುಕು ನಡೆಸುವ ಭಕ್ತ ಶಿವ ಬಸಪ್ಪ (ರಾಜ್ ಪ್ರವೀಣ್). ತನ್ನ ಮಡದಿ ಸುರಭಿ (ಭವಾನಿ ಪುರೋಹಿತ್)ಯ ಪ್ರೀತಿ , ಆರೈಕೆಯ ನಡುವೆ ಬದುಕು ನಡೆಸುವ ಶಿವಬಸವ ತನ್ನ ಇಬ್ಬರು ಗೆಳೆಯರಾದ ಕನಕಪ್ಪ ಹಾಗೂ ಕಣ್ಣಪ್ಪನ ಜೊತೆ ದೈವಿ ಪುರುಷರ, ಮಹಾನ್ಮಹಿಮರ ಕಥಾನಕಗಳ ಬಗ್ಗೆ ಅರಿವು ಮೂಡಿಸುತ್ತಾನೆ. ಗುರುಗಳ ಮಾರ್ಗದರ್ಶನದಲ್ಲಿ ಸಾಗುತ್ತಲೇ ದಿನಕ್ಕೊಂದು ವಿಚಾರ ಶಿವ ಬಸವನನ ಕಾಡುತ್ತಾ ಹೋಗುತ್ತದೆ.
ತನ್ನ ಮನಸ್ಸಿನ ಆಲೋಚನೆಯಲ್ಲಿ ಮೂಡಿ ಬರುವ ಪ್ರತಿಯೊಂದು ಪ್ರಶ್ನೆಗೂ ಉತ್ತರ ಹುಡುಕುವ ಹಾದಿಯಲ್ಲಿ ಸಾಗುವಾಗ ಹುಟ್ಟು ಸಾವಿನ ಹಿಂದಿರುವ ಗುಟ್ಟನ್ನ ತನ್ನ ಗುರುಗಳ ಮೂಲಕ ಜ್ಞಾನಾರ್ಜನೆಯ ಅರಿವಿನ ಬೆಳಕು ಮತ್ತೊಂದು ಕಾಲಘಟ್ಟದ ಬದುಕಿನ ಸೂಕ್ಷ್ಮತೆಯನ್ನು ತೆರೆದಿಡುತ್ತಾ ಹೋಗುತ್ತದೆ. ಆತ್ಮರಾವುತನ ಅರಿವಿನ ದಾರಿ ಭೂತ , ಭವಿಷ್ಯ , ವರ್ತಮಾನ ಕಾಲದ ಸತ್ಯ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತಾ ಮಾನವ ಅರಿಯಬೇಕಾದದ್ದು ಏನು… ಹುಟ್ಟು ಸಾವಿನ ಭವಿಷ್ಯ ಏನು.. ಜ್ಞಾನದ ಬೆಳಕು ತೋರುವ ದಾರಿ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಲು ಒಮ್ಮೆ ಈ ಚಿತ್ರವನ್ನು ನೋಡಬೇಕು.
ಇನ್ನು ಈ ಚಿತ್ರದ ನಿರ್ದೇಶಕ ಸಿದ್ದು ವಜ್ರಪ್ಪ ಬದುಕಿನ ಜ್ಞಾನದ ಬೆಳಕನ್ನ ಅರ್ಥ ಪೂರ್ಣವಾಗಿ ಹೇಳುವ ನಿಟ್ಟಿನಲ್ಲಿ ಸಾವಿನ ನಂತರದ ಪಯಣದ ಕುರಿತು ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿ , ಆಚಾರ , ವಿಚಾರ , ಪದ್ಧತಿಯ ಬಗ್ಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಇನ್ನು ಸಂಗೀತ ಉತ್ತಮವಾಗಿದ್ದು, ತಾಂತ್ರಿಕವಾಗಿ ಇನ್ನಷ್ಟು ಶ್ರಮವಹಿಸಬಹುದಿತ್ತು. ಒಂದು ಉತ್ತಮ ಚಿತ್ರವನ್ನು ನೀಡಿರುವ ನಿರ್ಮಾಪಕರ ಆಲೋಚನೆ ಮೆಚ್ಚುವಂಥದ್ದು.
ಇನ್ನು ಪಾತ್ರವರ್ಗದಲ್ಲಿ ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್, ಸೇರಿದಂತೆ ಮಾರೇಶ್ ಯಾದವ್ , ನರಸಿಂಹ ಮೂರ್ತಿ , ರಾಘವ್ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದಾರೆ. ಒಂದು ಉತ್ತಮ ಪ್ರಯತ್ನವಾಗಿ ಹೊರಬಂದಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬೇಕು.