ಮೂಢನಂಬಿಕೆಯ ಸುಳಿಯಲ್ಲಿ ಕೌಟುಂಬಿಕ ಸಂದೇಶ ಸಾರ. ರೇಟಿಂಗ್ : 4/5
ಮೂಢನಂಬಿಕೆಯ ಸುಳಿಯಲ್ಲಿ ಕೌಟುಂಬಿಕ ಸಂದೇಶ ಸಾರ.
ರೇಟಿಂಗ್ : 4/5
ಚಿತ್ರ : ರಾಜಯೋಗ
ನಿರ್ದೇಶಕ : ಲಿಂಗರಾಜ ಉಚ್ಚಂಗಿದುರ್ಗ
ನಿರ್ಮಾಪಕ : ಕುಮಾರ ಕಂಠೀರವ
ಸಂಗೀತ : ಅಕ್ಷಯ್ ಎಸ್.
ಛಾಯಾಗ್ರಾಹಕ : ವಿಷ್ಣು ಪ್ರಸಾದ್
ಸಂಕಲನ : ಕೆಂಪರಾಜು
ತಾರಾಗಣ : ಧರ್ಮಣ್ಣ , ನಿರೀಕ್ಷಾ ರಾವ್ , ನಾಗೇಂದ್ರ ಶಾ , ಕೃಷ್ಣಮೂರ್ತಿ ಕವುತಾರ್, ಶ್ರೀನಿವಾಸಗೌಡ್ರು , ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಹಾಗೂ ಮುಂತಾದವರು…
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸಂಪ್ರದಾಯ, ಆಚಾರ , ಪದ್ದತಿ , ಮೂಡನಂಬಿಕೆ ಹೀಗೆ ಹಲವು ವಿಚಾರಗಳ ಸುತ್ತ ಬದುಕು ಕಟ್ಟಿಕೊಂಡು ಸಾಗುವುದು ತಿಳಿದಿರುವ ವಿಚಾರವೇ. ಇಂತಹದ್ದೇ ಒಂದು ಎಳೆಯೊಂದಿಗೆ ಮೂಡ ನಂಬಿಕೆಗೆ ಕಟ್ಟುಬಿದ್ದ ತಂದೆಯು ಮಗನ ಭವಿಷ್ಯಕ್ಕೆ ಮುಳ್ಳಾಗುವ ಪರಿಸ್ಥಿತಿ , ಸಂಬಂಧಿಕರ ಅಪಹಾಸ್ಯ , ದಾಂಪತ್ಯದ ಸರಸ ವಿರಸ , ಜಿಲ್ಲಾಧಿಕಾರಿ ಆಗುವ ಕನಸು ಹೀಗೆ ಒಂದಷ್ಟು ಅಂಶಗಳನ್ನ ಬೆಸೆದುಕೊಂಡು ಜನರಿಗೆ ಒಂದು ಸಂದೇಶ ನೀಡುವ ಕಥಾಹಂದರದ ಮೂಲಕ ಈ ವಾರ ತೆರೆ ಮೇಲೆ ಬಂದಿರುವಂತಹ ಚಿತ್ರ “ರಾಜಯೋಗ”. ಹಳ್ಳಿ ಸೊಗಡಿನ ವಾತಾವರಣದಲ್ಲಿ ಕುಡೂ ಕುಟುಂಬದ ಅಣ್ಣ-ತಮ್ಮಂದಿರ ಬಳಗ. ಜ್ಯೋತಿಷ್ಯ ಮಾತೆ ವೇದವಾಕ್ಯ ಎಂದು ನಂಬುವ ಮನೆಯ ಯಜಮಾನ ( ನಾಗೇಂದ್ರ ಶಾ).
ಕೆಟ್ಟ ಕಾಲದಲ್ಲಿ ಹುಟ್ಟಿದ
ಮಗು ತನ್ನ ತಾಯಿಯನ್ನು ತಿಂದುಕೊಂಡಿದ್ದಾನೆ. ಇನ್ನು ನನಗೆ ಯಾವ ಗ್ರಹಚಾರ ಕಾದಿದೆಯೋ ಎಂಬ ಭಯದಲ್ಲೇ ಮಗನನ್ನ ಬೆಳೆಸುತ್ತಾನೆ. ಕಪಟ ಜ್ಯೋತಿಷಿ (ಕೃಷ್ಣಮೂರ್ತಿ ಕವುತಾರ್) ಹಣದ ಆಸೆಗಾಗಿ ಪೂಜೆ ಪುನಸ್ಕಾರದ ನೆಪದಲ್ಲಿ ಮನೆಯ ಯಜಮಾನನ್ನ ನಂಬಿಸಿ ಅವನ ಪುತ್ರ ಪ್ರಾಣೇಶ್ (ಧರ್ಮಣ್ಣ)ಗೆ ಆಗಾಗ ಪೂಜೆಯ ನೆಪದಲ್ಲಿ ಶಿಕ್ಷೆ ನೀಡುತ್ತಿರುತ್ತಾನೆ. ಇದರ ನಡುವೆಯೂ ತನ್ನ ವಿದ್ಯಾಭ್ಯಾಸದ ನಡುವೆಯೂ ಓದಿನ ಕಡೆ ಹೆಚ್ಚು ಗಮನ ಕೊಟ್ಟು ಮಹಾಪುರುಷರ ತತ್ವ , ಸಿದ್ಧಾಂತಗಳನ್ನು ಓದಿಕೊಂಡು ಕೆ.ಎ.ಎಸ್ ಎಕ್ಸಾಮ್ ಬರೆದು ಜಿಲ್ಲಾಧಿಕಾರಿ ಆಗುವ ಕನಸನ್ನ ಹೊಂದಿರುತ್ತಾನೆ. ದುಡಿಮೆಯ ಬಗ್ಗೆ ಯೋಚಿಸದೆ ಕೆಎಎಸ್ ಆಗುವೆ ಎನ್ನುತ್ತಾ , ಊರಿನ ಸುಧಾರಣೆಯ ಬಗ್ಗೆ ಮಾತನಾಡುತ್ತಾ , ಜನರಲ್ಲಿ ಜಾಗೃತಿಯನ್ನು ಹೇಳುತ್ತಾ ಬದುಕು ನಡೆಸುವ ಪ್ರಾಣೇಶ. ಆದರೆ ತನ್ನ ತಂದೆ , ಕುಟುಂಬಸ್ಥರು ಹಾಗೂ ಊರಿನವರ ಕಣ್ಣಿಗೆ ಇವನು ಒಬ್ಬ ವೇಸ್ಟ್ ಬಾಡಿ ಎನ್ನುವಂತೆ ಕಾಣುತ್ತಾನೆ. ಇವನಿಗೊಂದು ಸಂಸಾರವಾದರೆ ದುಡಿದು ಬದುಕುವ ಆಸೆ ಬರುತ್ತದೆ ಎಂದು ನಿರ್ಧರಿಸಿ ಗಿರಿಜಾ ( ನಿರೀಕ್ಷಾ ರಾವ್) ಳ ಮದುವೆ ಮಾಡುತ್ತಾರೆ. ಆಗಲು ಪತ್ನಿಯೇ ದುಡಿದು ಸಾಕುವ ಪರಿಸ್ಥಿತಿ ಎದುರಾಗುತ್ತದೆ. ಜೂಜಾಡುವ , ಅನೈತಿಕ ಸಂಬಂಧವಿರುವ ಅಸಡ್ಡೆ ಮಾವ , ಕೆಎಎಸ್ ಕನಸು ಕಾಣುತ್ತಾ ದುಡಿಯುವ ಆಸಕ್ತಿ ಇಲ್ಲದ ಗಂಡನ , ಇದರ ನಡುವೆ ಸಂಬಂಧಿಕರ ಅವಮಾನದ ಮಾತು ಗಿರಿಜಾ ಬದುಕಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇದರ ನಡುವೆ ಕುಟುಂಬದಲ್ಲಿ ಒಂದು ದೊಡ್ಡ ಸಮಸ್ಯೆ ಎದುರಾಗುತ್ತದೆ. ಅದು ಇಡೀ ಬದುಕಿಗೆ ಒಂದು ರೋಚಕ ತಿರುವನ್ನ ನೀಡಿ ಕೊನೆಯ ಹಂತವನ್ನು ತಲುಪುತ್ತದೆ.
ಕುಟುಂಬದಲ್ಲಿ ಎದುರಾಗುವ ಸಮಸ್ಯೆ ಏನು…
ಪ್ರಾಣೇಶ್ ಕೆಎಎಸ್ ಅಧಿಕಾರಿ ಆಗ್ತಾನಾ..
ಗಿರಿಜಾ ಬದುಕು ಏನು…
ಕ್ಲೈಮಾಕ್ಸ್ ಸಂದೇಶ ಏನು…
ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಒಮ್ಮೆ ರಾಜಯೋಗ ಚಿತ್ರ ನೋಡಬೇಕು.
ಈ ಚಿತ್ರಕ್ಕೆ ಕಥೆ , ಚಿತ್ರಕಥೆ, ಸಂಭಾಷಣೆ, ಸಾಹಿತ್ಯ , ನಿರ್ದೇಶನ ಮಾಡಿರುವ ಯುವ ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ ಹಳ್ಳಿ ಪರಿಸರದಲ್ಲಿ ನಡೆಯುವ ನೈಜ್ಯ ಘಟನೆಗಳು ಕಣ್ಣಿಗೆ ಕಟ್ಟುವ ಹಾಗೆ ಪರದೆಯ ಮೇಲೆ ತಂದಿರುವ ರೀತಿ ಮೆಚ್ಚುವಂಥದ್ದು, ಅಣ್ಣ ತಮ್ಮಂದಿರ ಸಂಬಂಧ , ಗಂಡ ಹೆಂಡತಿಯ ಬದುಕು , ಊರಿನಲ್ಲಿರುವವರ ಮಾತುಕತೆ , ಮೂಢನಂಬಿಕೆಯ ಪರಮಾವಧಿ, ವಿದ್ಯೆಗಿರುವ ಶಕ್ತಿ, ಪ್ರೀತಿ, ವಾತ್ಸಲ್ಯದ ನಡುವೆ ಬದುಕು ಕಟ್ಟಿಕೊಳ್ಳುವ ರೀತಿ ತೆರೆದಿಟ್ಟಿದ್ದಾರೆ. ಆದರೆ ಚಿತ್ರದ ಓಟಕ್ಕೆ ಒಂದಷ್ಟು ವೇಗ ಮಾಡಬೇಕಿತ್ತು. ಇದ್ದಲ್ಲೇ ಕೆಲವು ದೃಶ್ಯಗಳು ಗಿರಿಕಿ ಹೊಡೆದಂತಿದೆ. ಇಂಥ ಒಂದು ಹಳ್ಳಿ ಸೊಗಡಿನ ಚಿತ್ರವನ್ನು ನಿರ್ಮಿಸಿರುವ ಕುಮಾರ ಕಂಠೀರವ , ದೀಕ್ಷಿತ್ ಕೃಷ್ಣ , ಪ್ರಭು ಚಿಕ್ಕನಾಯ್ಕನಹಳ್ಳಿ , ಲಿಂಗರಾಜು .ಕೆ.ಎನ್, ನೀರಜ್ ಗೌಡ ಅಲ್ಲದೆ ಧರ್ಮಣ್ಣ ಕಡೂರು ಸಾಹಸವನ್ನು ಮೆಚ್ಚಲೇಬೇಕು. ಇನ್ನು ಸಂಗೀತ
ಹಾಗೂ ಸಾಹಿತ್ಯದ ಪದಗಳು ಗಮನ ಸೆಳೆಯುವಂತೆ ಮೂಡಿ ಬಂದಿದೆ. ಅದೇ ರೀತಿ ಕ್ಯಾಮೆರಾ ಕೈಚಳಕ ಕೂಡ ಉತ್ತಮವಾಗಿದ್ದು , ಸಂಕಲನದಲ್ಲಿ ಇನ್ನೊಂದಷ್ಟು ಕತ್ತರಿ ಬಿದ್ದಿದ್ದರೆ ಚೆನ್ನಾಗಿರುತ್ತಿತ್ತು.
ಇನ್ನು ಚಿತ್ರದ ಕೇಂದ್ರ ಬಿಂದು ಪಾತ್ರವನ್ನು ನಿರ್ವಹಿಸಿರುವ ಧರ್ಮಣ್ಣ ಬಹಳ ಲೀಲಾ ಲೀಲಾಜಾಲವಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅದ್ಭುತವಾಗಿ ನಟಿಸಿದ್ದಾರೆ. ಅದೇ ರೀತಿ ನಾಯಕಿಯಾಗಿ ಬೆಳ್ಳಿ ಪರದೆ ಮೇಲೆ ಅಭಿನಯಿಸಿರುವ ನಿರೀಕ್ಷಾ ರಾವ್ ಕೂಡ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿ , ಉತ್ತಮ ಭವಿಷ್ಯದ ನಟಿಯಾಗುವ ಲಕ್ಷಣವನ್ನು ತೋರಿಸಿದ್ದಾರೆ. ಇನ್ನು ನಾಯಕನ ಅಸಡ್ಡೆ ತಂದೆಯಾಗಿ ನಾಗೇಂದ್ರ ಶಾ ಪಾತ್ರಕ್ಕೆ ಜೀವ ತುಂಬಿದ್ದಾರೆ , ಜನರನ್ನ ದಿಕ್ಕು ತಪ್ಪಿಸುವ ಜ್ಯೋತಿಷಿಯಾಗಿ ಕೃಷ್ಣಮೂರ್ತಿ ಕವತಾರ್ , ನಾಯಕಿಯ ತಂದೆಯ ಪಾತ್ರಧಾರಿ ಶ್ರೀನಿವಾಸ ಗೌಡ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ. ಹಾಗೆಯೇ ಉಳಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟರೆ ಒಂದು ಇಡೀ ಕುಟುಂಬ ಕುಳಿತು ನೋಡುವಂತಹ ಒಂದು ಸುಂದರ ಸಂಸಾರಿಕ ಸಂದೇಶವಿರುವ ಚಿತ್ರ ಇದಾಗಿದ್ದು , ಎಲ್ಲರೂ ನೋಡುವಂತಿದೆ.