“ರಾಜು ಜೇಮ್ಸ್ ಬಾಂಡ್” ಪ್ರೀ ರಿಲೀಸ್ ಇವೆಂಟ್ ನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಮೋಹಕ ತಾರೆ ರಮ್ಯ ಭಾಗಿ.
ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 14 ರಂದು ಬಿಡುಗಡೆ.
ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
ಗೃಹ ಸಚಿವರಾದ ಜಿ.ಪರಮೇಶ್ವರ್ ಹಾಗೂ ಮೋಹಕ ತಾರೆ ರಮ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ನಾಯಕಿ ತಪಸ್ವಿನಿ ಶರ್ಮ ಸೇರಿದಂತೆ ಅನೇಕ ಗಣ್ಯರು ಸಮಾರಂಭಕ್ಕೆ ಆಗಮಿಸಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
“ರಾಜು ಜೇಮ್ಸ್ ಬಾಂಡ್” ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ, ಚಿತ್ರ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಇದೆ. ಚಿತ್ರ ಯಶಸ್ಸು ಕಾಣಲಿ ಎಂದು ಗೃಹ ಸಚಿವರು ಶುಭ ಕೋರಿದರು. ಟ್ರೇಲರ್ ಹಾಗೂ ಹಾಡುಗಳು ತುಂಬಾ ಚೆನ್ನಾಗಿದೆ. ಛಾಯಾಗ್ರಹಣವಂತೂ ಸೂಪರ್. ಅಷ್ಟೇ ಚೆನ್ನಾಗಿ ನಾಯಕ ಹಾಗೂ ನಾಯಕಿ ಅಭಿನಯಿಸಿದ್ದಾರೆ. ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ರಮ್ಯ ಹಾರೈಸಿದರು.
ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಬಂದಿರುವ ಸನ್ಮಾನ್ಯ ಸಚಿವರಿಗೆ, ರಮ್ಯ ಅವರಿಗೆ, ಆಗಮಿಸಿರುವ ಅತಿಥಿಗಳಿಗೆ ಹಾಗೂ ವಿಶೇಷವಾಗಿ ನಮ್ಮ ಚಿತ್ರತಂಡಕ್ಕೆ ತುಂಬು ಹೃದಯದ ಧನ್ಯವಾದ. ಈಗ ನಮಗೆ ಹೆರಿಗೆ ನೋವು ಶುರುವಾಗಿದೆ. ಫೆಬ್ರವರಿ 14 ಶುಕ್ರವಾರ ಹೆರಿಗೆ ಆಗಲಿದೆ. ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ತಿಳಿಸಿದರು.
ನಾನು ಸಿನಿಮಾ ಬಗ್ಗೆ ಈಗಾಗಲೇ ಎಲ್ಲಾ ಹೇಳಿ ಆಗಿದೆ. ಇನ್ನು ನಮ್ಮ ಚಿತ್ರವನ್ನು ಜನರ ಮಡಿಲಿಗೆ ಹಾಕುತ್ತಿದ್ದೇವೆ. ಅವರ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ ಎಂದರು ನಿರ್ದೇಶಕ ದೀಪಕ್ ಮಧುವನಹಳ್ಳಿ.
ನಾಯಕ ಗುರುನಂದನ್ ಹಾಗೂ ನಾಯಕಿ ಮೃದುಲ ಸಹ ಶುಕ್ರವಾರ ಬಿಡುಗಡೆಯಾಗುತ್ತಿರುವ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು. ನಾನು ಈ ಚಿತ್ರದಲ್ಲಿ ಟಿ.ಆರ್.ಪಿ ಎಂಬ ಖಾಸಗಿ ವಾಹಿನಿಯ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದೇನೆ ಎಂದು ನಟ ಚಿಕ್ಕಣ್ಣ ಹೇಳಿದರು. ನಟ ತಬಲ ನಾಣಿ, ಛಾಯಾಗ್ರಾಹಕ ಮನೋಹರ್ ಜೋಶಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ “ರಾಜು ಜೇಮ್ಸ್ ಬಾಂಡ್” ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.