ಕರಾಳ ದಂಧೆಗಳಿಗೆ ಪ್ರತ್ಯುತ್ತರ : ‘ರಕ್ತಾಕ್ಷ’ ಚಿತ್ರವಿಮರ್ಶೆ -ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ರಕ್ತಾಕ್ಷ
ನಿರ್ದೇಶಕ : ವಾಸುದೇವ
ನಿರ್ಮಾಪಕ : ರೋಹಿತ್
ಸಂಗೀತ : ಡಾಸ್ ಮೊಡ್
ಛಾಯಾಗ್ರಾಹಣ : ಆದರ್ಶ
ತಾರಾಗಣ : ರೋಹಿತ್ ಷಣ್ಮುಖಪ್ಪ , ರೂಪಾ ರಾಯಪ್ಪ , ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಮೋದ್ ಶೆಟ್ಟಿ , ಪ್ರಭು , ವಿಶ್ವ ಹಾಗೂ ಮುಂತಾದವರು…
ಸಮಾಜದಲ್ಲಿ ಅದೆಷ್ಟೋ ದುಷ್ಕೃತ್ಯಗಳು ಕಣ್ಣಿಗೆ ಕಾಣದಂತೆ ತನ್ನ ಕರಾಳ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದ ತಂತ್ರಜ್ಞಾನ ಬೆಳದಂತೆ ಹುಡುಗ ಹುಡುಗಿಯರ ಸಂಪರ್ಕ, ಚಾಟಿಂಗ್, ದಂಧೆ , ಡ್ರಗ್ಸ್ , ಕಿಡ್ನಾಪ್ , ಲಿಂಗ ಪರಿವರ್ತನೆಯ ವೇಶ್ಯಾವಾಟಿಕೆ , ಕಳ್ಳ ಪೊಲೀಸ್ ಆಟ ಹೀಗೆ ಹಲವು ಅಂಶಗಳನ್ನು ಬೆಸೆದುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ರಕ್ತಾಕ್ಷ”.
ರೋಹಿತ್ (ರೋಹಿತ್ ಷಣ್ಮುಖಪ್ಪ) ತನ್ನ ಸುಂದರ ಮೈಕಟ್ಟಿನ ಮೂಲಕ ಹುಡುಗಿಯರನ್ನ ತನ್ನತ್ತ ಸೆಳೆಯುವ ಶಕ್ತಿ ಹೊಂದಿರುತ್ತಾನೆ. ಮುದ್ದಾದ ಚೆಲುವೆಯರು ರಿಯಾ (ರಚನಾ ದಶರಥ) , ಸೈವ್ವದ (ಅರ್ಚನಾ ಕೊಟ್ಟಿಗೆ) , ಶೈನಿ (ರೂಪ ರಾಯಪ್ಪ) ಈ ಮೂವರು ಒಂದೊಂದು ಕಾರಣಗಳಿಂದ ರೋಹಿತ್ ಗೆ ಹತ್ತಿರವಾಗಿ ಅವನನ್ನು ಸೇರಲು ಬಯಸುತ್ತಾರೆ. ಆದರೆ ಆ ಮೂವರು ಕೊಲೆಯಾಗಿರುತ್ತಾರೆ.
ಮತ್ತೊಂದು ಹೆಣ್ಣು ರಶ್ಮಿಕಾ (ನಿವೀಕ್ಷ) ಈ ಕೊಲೆಗಳ ಸುತ್ತ ಓಡಾಟ ನಡೆಸುತ್ತಿರುತ್ತಾಳೆ. ಆಗಾಗ ರೋಹಿತ್ ಮನಸ್ಥಿತಿಯು ವಿಚಲಿತವಾಗಿ ವರ್ತಿಸುತ್ತಿರುತ್ತದೆ. ಇದರ ನಡುವೆ ಪೊಲೀಸ್ ಇನ್ವೆಸ್ಟಿಗೇಷನ್ ಅಧಿಕಾರಿ (ಗುರುದೇವ್ ನಾಗರಾಜ) ಕೊಲೆ ಮಾಡಿದವರ ಜಾಡು ಹಿಡಿಯಲು ಹರಸಾಹಸ ಪಡುತ್ತಾರೆ.
ಇನ್ನೇನು ಸುಳಿವು ಸಿಕ್ಕಿ ಕೊಲೆ ಮಾಡಿದವನನ್ನು ಹಿಡಿಯಲು ಹೋದವರಿಗೆ ಸತ್ತ ವ್ಯಕ್ತಿಯ ಭಾವಚಿತ್ರ ಕಾಣುತ್ತದೆ. ಅದರ ಜಾಡು ಭೇದಿಸಲು ಹೋದಾಗ ಸಿಗುವ ಕಠೋರ ಸತ್ಯ ತೆರೆಯುತ್ತದೆ. ಗಂಡಸರಿಗೆ ಬಲೆ ಬೀಸಿ ಹೆಣ್ಣಾಗಿ ಪರಿವರ್ತಿಸಿ ದಂದೆಗೆ ಬಳಸುವ ಜಾಡು ಸೇರಿದಂತೆ ಡ್ರಗ್ಸ್ ಮಾಫಿಯಾ , ಹೆಣ್ಣು ಮಕ್ಕಳ ಮಾರಾಟ ಜಾಲ ಹೀಗೆ ಹಲವು ದುಷ್ಕೃತ್ಯಗಳ ಕರಾಳ ಸತ್ಯ ಬೆಳಕಿಗೆ ಬರುತ್ತದೆ.
ಈ ದಂಧೆಗೆ ಕಾರಣ ಯಾರು…
ಸುಂದರಿಯರ ಕೊಲೆ ಯಾಕೆ…
ನೊಂದವರು ಯಾರು…
ಕ್ಲೈಮಾಕ್ಸ್ ಉತ್ತರ ಏನು…
ಇದಕ್ಕೆಲ್ಲ ಉತ್ತರ ನೀವು ರಕ್ತಾಕ್ಷ ಚಿತ್ರ ನೋಡಬೇಕು.
ನಿರ್ದೇಶಕ ವಾಸುದೇವ ಎಸ್. ಎನ್. ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಕುತೂಹಲಕಾರಿಯಾಗಿದೆ. ಆಧುನಿಕ ಜಗತ್ತಿನಲ್ಲಿ ದಿನ ಕಳೆದಂತೆ ಬದುಕಿನ ಶೈಲಿ, ವ್ಯಾಮೋಹ , ಮೋಸ , ವಂಚನೆ , ಟ್ರಾಫಿಂಗ್ ಸೇರಿದಂತೆ ದಂಧೆಗೆ ಸಿಲುಕಿಕೊಂಡವರ ಪರಿಸ್ಥಿತಿಯ ನೋವನ್ನ ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಚಿತ್ರಕಥೆಯಲ್ಲಿ ಇನ್ನಷ್ಟು ವೇಗ ಮಾಡಬಹುದಿತ್ತು. ಇನ್ನು ಸಂಗೀತಕ್ಕಿಂತ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಛಾಯಾಗ್ರಹಕರ ಕೆಲಸ ಉತ್ತಮವಾಗಿದೆ.
ನಾಯಕನಾಗಿ ರೋಹಿತ್ ತಮ್ಮ ಪ್ರಥಮ ಪ್ರಯತ್ನದಲ್ಲೇ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಬಹಳಷ್ಟು ಶ್ರಮ ಪಟ್ಟಿದ್ದಾರೆ. ನೋಡಲು ಸುಂದರವಾಗಿ ಕಾಣುವ ಈ ಪ್ರತಿಭೆಗೆ ಮುಂದೆ ಉತ್ತಮ ಭವಿಷ್ಯ ಇದೆ. ಮಾತಿನ ಶೈಲಿ ಸಂಭಾಷಣೆಗೆ ಹೆಚ್ಚು ಗಮನ ಕೊಡಬೇಕಿತ್ತು, ಆದರೂ ಆಕ್ಷನ್ ಗೆ ಸೈ ಎನ್ನುವಂತೆ ಅಬ್ಬರಿಸಿ ನಿರ್ಮಾಣ ಮಾಡಿರುವುದು ಮೆಚ್ಚುವಂತಿದೆ. ಇನ್ನು ನಟಿಯರಾಗಿ ಅಭಿನಯಿಸಿರುವ ರೂಪಾ ರಾಯಪ್ಪ , ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ.
ಇನ್ನು ಇನ್ಸ್ಪೆಕ್ಟರ್ ಪಾತ್ರದಲ್ಲಿ ಗುರುದೇವ ನಾಗರಾಜ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಖಳನಾಯಕನಾಗಿ ಅಭಿನಯಿಸಿರುವ ಪ್ರಮೋದ್ ಶೆಟ್ಟಿ ಕೆಲವೇ ಸಮಯ ಬಂದರು ಖಡಕ್ ಡೈಲಾಗ್ ಮೂಲಕ ಅಬ್ಬರಿಸಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಅಭಿನಯಿಸಿರುವ ಪ್ರಭು, ವಿಶ್ವ, ಭದ್ರಿ ನಾರಾಯಣ, ಬಸವರಾಜ ಆದಾಪುರ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇನ್ನು ಮುಂದುವರೆದ ಭಾಗ – 2 ಕ್ಕೂ ದಾರಿ ಮಾಡಿಕೊಟ್ಟಿರುವ ಈ ರಕ್ತಾಕ್ಷ ಚಿತ್ರದಲ್ಲಿ ನಾಯಕ ದ್ವಿಪಾತ್ರದಲ್ಲಿ ಬರುವ ಸೂಚನೆ ನೀಡಿದ್ದು , ಈ ಮೊದಲ ಭಾಗ ಒಮ್ಮೆ ನೋಡುವಂತಿದೆ