ಕೊಲೆಗಳ ಸುಳಿಯಲ್ಲಿ ನಿಗೂಢತೆಯ ‘ರಣಾಕ್ಷ’ (ಚಿತ್ರವಿಮರ್ಶೆ-ರೇಟಿಂಗ್ : 3.5 /5
ರೇಟಿಂಗ್ : 3.5 /5
ಚಿತ್ರ : ರಣಾಕ್ಷ
ನಿರ್ದೇಶಕ : ಕೆ.ರಾಘವ
ನಿರ್ಮಾಪಕ : ರಾಮು
ಸಂಗೀತ : ಆಲಾಪ್
ಛಾಯಾಗ್ರಹಣ : ದೀಪಕ್
ತಾರಾಗಣ : ಸೀರುಂಡೆ ರಘು, ರಕ್ಷಾ ಹನುಮಂತು, ರುಹಿ, ಮುನಿ, ಅಪೂರ್ವ ಶ್ರೀ, ಆನಂದ್ ಹಾಗೂ ಮುಂತಾದವರು…
ಜೀವನದಲ್ಲಿ ನಂಬಿಕೆ , ಮೂಢನಂಬಿಕೆ , ಆಸೆ , ಮೋಸ , ಪ್ರೀತಿ, ಕೋಪ , ಹೊಡೆದಾಟಗಳು ಇದ್ದಿದ್ದೆ. ಇದರ ನಡುವೆ ನಿರೀಕ್ಷೆಗೂ ಮೀರಿದ್ದು ಸಿಗುವಾಗ ಮನುಷ್ಯ ಮಾಡುವ ತಂತ್ರ , ಕುತಂತ್ರಗಳು , ಸಾವು , ನೋವು , ದೇವರು , ದೆವ್ವಗಳ ಸುತ್ತ ಪ್ರೀತಿಯ ತಳಮಳವನ್ನು ಬೆಸೆದುಕೊಂಡು ಕುತೂಹಲಕಾರಿಯಾಗಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ರಣಾಕ್ಷ”.
ದಡ್ಡ ಅರಣ್ಯದ ನಡುವೆ ಒಂದು ಊರು , ಹಗಲೆಲ್ಲ ಓಡುವ ಜನರು ರಾತ್ರಿ ಆದರೆ ಮನೆಯಿಂದ ಹೊರಬರುವಂತಿಲ್ಲ, ಧೈರ್ಯ ಮಾಡಿ ಯಾರೇ ಬಂದರೂ ಅವರ ಸಾವು ಖಚಿತ. ಇದು ಇಡೀ ಊರನ್ನೇ ಕಂಗಾಲಾಗಿಸುತ್ತದೆ. ಇದೇ ಸಮಯಕ್ಕೆ ಬೆಂಗಳೂರಿಂದ ಗ್ರಾಮಕ್ಕೆ ಬರುವ ಪ್ರತಾಪ್ (ಸಿರುಂಡೆ ರಘು). ಗೆಳೆಯನ ಮನೆಯಲ್ಲಿ ಕಾಲ ಕಲಿಯುತ್ತಾನೆ.
ಇನ್ನು ಗ್ರಾಮದ ಜನರು ಊರಿನ ಗೌಡ (ಮುನಿ) ಜೊತೆ ಚರ್ಚಿಸಿ ಪರಿಹಾರಕ್ಕಾಗಿ ಸ್ವಾಮೀಜಿಯನ್ನ ಭೇಟಿ ಮಾಡಲು ನಿರ್ಧರಿಸುತ್ತಾರೆ. ಇದು ದೇವಿಯ ಕೋಪಕ್ಕೆ ಗುರಿಯಾದ ಊರು , ಪರಿಹಾರಕ್ಕಾಗಿ ಹೆಣ್ಣು ಮಗಳೊಬ್ಬಳು ರಾತ್ರಿ ದೀಪಾ ಹಿಡಿದು ಪೂಜೆ ಮಾಡಿದರೆ ಪರಿಹಾರ ಎನ್ನುತ್ತಾರೆ. ಅದರಂತೆ ಗೌಡನ ಪ್ರೇಯಸಿ ಮಧುಮತಿ (ರುಹಿ) ಮುಂದಾಗುತ್ತಾಳೆ.
ಇದರ ನಡುವೆ ಪ್ರತಾಪ್ ಊರ ಗೌಡನ ಮಗಳು ಸಿಂಚನ (ರಕ್ಷ) ಳನ್ನ ಪ್ರೀತಿಸುತ್ತಾನೆ. ಒಂದಕ್ಕೊಂದು ಕೊಂಡಿಯಂತೆ ಕೌತುಕವಾಗಿ ಸಾಗುತ್ತದೆ. ಸಾವುಗಳ ರಹಸ್ಯ ಏನು… ಇದು ದೇವಿಯ ಮುನಿಸ…
ಯಾರ ಕೈವಾಡ…
ನಿರೀಕ್ಷೆಗೂ ಮೀರಿದ್ದು ಏನು.. ಕ್ಲೈಮ್ಯಾಕ್ಸ್ ಉತ್ತರ..?
ಒಮ್ಮೆ ಚಿತ್ರ ನೋಡಿ ಎಲ್ಲವೂ ತಿಳಿಯುತ್ತೆ.
ಸುಂದರ ಪರಿಸರದ ಊರಿನಲ್ಲಿ ನಡೆಯುವ ಸಾಗುವ ಕೌತುಕ ಕಥಾನಕವನ್ನು ಕಟ್ಟಿಕೊಡುವುದರಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ದುರಾಸೆ ಮನುಷ್ಯನನ್ನ ಯಾವ ಹಂತಕ್ಕೆ ತಂದು ನಿಲ್ಲಿಸುತ್ತದೆ. ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಪ್ರಯತ್ನದ ಜೊತೆಗೆ ಪ್ರೀತಿ, ಸ್ನೇಹ , ಗೆಳೆತನ, ಸಂಬಂಧ, ಮೂಡನಂಬಿಕೆ , ಸ್ವಾಮಿಜಿಗಳ ತಂತ್ರ ಹೀಗೆ ಎಲ್ಲವೂ ಕತೆಗೆ ಪೂರಕವಾಗಿ ಕಟ್ಟಿಕೊಟ್ಟಿದ್ದಾರೆ.
ಚಿತ್ರಕಥೆ , ಸಂಭಾಷಣೆ ಜೊತೆಗೆ ಚಿತ್ರದ ಓಟವು ಇನ್ನಷ್ಟು ಚುರುಕು ಮಾಡಬಹುದಿತ್ತು, ಇಂತಹ ವಿಭಿನ್ನ ನೀಡಿರುವ ನಿರ್ಮಾಪಕರ ಸಾಹಸವನ್ನು ಕೂಡ ಮೆಚ್ಚುವಂಥದ್ದು, ಸಂಗೀತದ ಜೊತೆ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. ಛಾಯಾಗ್ರಹಕರ ಕೈಚಳದ ಉತ್ತಮವಾಗಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ಕಾಣುತ್ತದೆ.
ನಾಯಕನಾಗಿ ಅಭಿನಯಿಸಿರುವ ಸೀರುಂಡೆ ರಘು ಸಿಕ್ಕ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಪರಿಪಕ್ವತೆ ಮಾಡಿಕೊಂಡರೆ ಮುಂದಿನ ಚಿತ್ರಗಳಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಇನ್ನು ನಾಯಕಿಯಾಗಿ ರಕ್ಷಾ ತಕ್ಕ ಮಟ್ಟಕ್ಕೆ ಅಭಿನಯಿಸಿದ್ದಾರೆ. ಮತ್ತೊಬ್ಬ ನಟಿ ರುಹಿ ತನ್ನ ಪಾತ್ರಕ್ಕೆ ಜೀವ ತುಂಬಿ ಗಮನ ಸೆಳೆಯುವಂತೆ ನಟಿಸಿದ್ದಾರೆ.
ಊರ ಗೌಡನ ಪಾತ್ರದಲ್ಲಿ ಮುನಿ ನ್ಯಾಯ ಒದಗಿಸಿದ್ದು, ಅವರ ಪತ್ನಿಯಾಗಿ ಅಪೂರ್ವ ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರಕ್ಕೆ ಸಾತ್ ನೀಡಿದೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಂತ ಅಂಶ ಈ ಚಿತ್ರದಲ್ಲಿ ಮೂಡಿದ್ದು , ಒಮ್ಮೆ ಎಲ್ಲರೂ ನೋಡಬಹುದಾಗಿದೆ.