ಜನಪದ ಸೊಗಡಿನ “ರಂಗ ಸಮುದ್ರ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ರಾಘವೇಂದ್ರ ರಾಜಕುಮಾರ್.
ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರುವ ಬಹು ನಿರೀಕ್ಷಿತ “ರಂಗ ಸಮುದ್ರ” ಚಿತ್ರದ ಟ್ರೇಲರ್ ಅನ್ನು ರಾಘವೇಂದ್ರ ರಾಜಕುಮಾರ್ ಅವರು ಬಿಡುಗಡೆ ಮಾಡಿ ಶುಭ ಕೋರಿದರು.
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ರಾಘವೇಂದ್ರ ರಾಜಕುಮಾರ್, ಇಂತಹ ಕಥಾವಸ್ತು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರಿಗೆ ಮೊದಲ ಸೆಲ್ಯೂಟ್. ಇನ್ನು ರಂಗಾಯಣ ರಘು ಅವರ ಅಭಿನಯ ನಿಜಕ್ಕೂ ಅದ್ಭುತ. ಇಂತಹ ಚಿತ್ರದಲ್ಲಿ ನಾನು ಅಭಿನಯಿಸಿರುವುದು ನನ್ನ ಭಾಗ್ಯ. ಈ ಚಿತ್ರ ಯಶಸ್ವಿಯಾಗಲಿ. ನಾನು ಸದಾ ಅವರ ಜೊತೆಗಿರುತ್ತೇನೆ ಎಂದರು.
ರಾಜಕುಮಾರ್ ಅಸ್ಕಿ ಅವರು ಹೇಳಿದ ಕಥೆ ಇಷ್ಟವಾಯಿತು. ತಕ್ಷಣ ಒಪ್ಪಿಕೊಂಡೆ. ಜನಪದ ಸೊಗಡಿನ ಈ ಸಿನಿಮಾ ಚಿತ್ರೀಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರದ ಅದ್ಭುತ ಸ್ಥಳಗಳಲ್ಲಿ ನಡೆದಿದೆ. ಪುನೀತ್ ರಾಜಕುಮಾರ್ ಅವರು ಈ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಆಗಲಿಲ್ಲ. ಈಗ ಅದೇ ಮನೆಯ ರಾಘವೇಂದ್ರ ರಾಜಕುಮಾರ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ 12 ನೇ ತಾರೀಖು ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ ಎಂದು ನಟ ರಂಗಾಯಣ ರಘು ತಿಳಿಸಿದರು.
“ರಂಗ ಸಮುದ್ರ” ಎಂದರೆ ಊರಿನ ಹೆಸರು. ಈ ಕಥೆಯನ್ನು ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಮುಂದೆ ಹೇಳಿದಾಗ ಅವರು, ರಂಗಾಯಣ ರಘು ಅವರು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸದರೆ ಚೆನ್ನಾಗಿರುತ್ತದೆ ಎಂದರು. ನನಗೂ ಅವರ ಬಳಿ ಈ ಪಾತ್ರ ಮಾಡಿಸಬೇಕೆಂಬ ಆಸೆಯಿತ್ತು. ನಮ್ಮ ಆಸೆಯನ್ನು ಅಭಿನಯಿಸಲು ಒಪ್ಪಿಗೆ ನೀಡಿ ನಮ್ಮ ಆಸೆ ಈಡೇರಿಸಿದರು. ಈ ಚಿತ್ರವನ್ನು ಮೊದಲು ನೋಡಿದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಚಿತ್ರವನ್ನು ನೋಡಿ, ಅವರು ಜಿಲ್ಲಾಧಿಕಾರಿ ಪಾತ್ರದಲ್ಲಿ(ಅತಿಥಿ ಪಾತ್ರದಲ್ಲಿ) ನಟಿಸುವುದಾಗಿ ಹೇಳಿದ್ದರು. ಆದರೆ ವಿಧಿಯಾಟದಿಂದ ಅದು ಆಗಲಿಲ್ಲ. ಕಲಾವಿದರ ಹಾಗೂ ತಂತ್ರಜ್ಞರ ಸಹಾಕರದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ರಾಜಕುಮಾರ್ ಅಸ್ಕಿ ಹೇಳಿದರು.
ನಾನು ಹಾಸನ ಜಿಲ್ಲೆಯ ಕೊಣನೂರಿನವನು. ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತ. ಸಿನಿಮಾ ರಂಗ ಹೊಸತು. ರಾಜಕುಮಾರ್ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣಕ್ಕೆ ಮುಂದಾದೆ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಜನವರಿ 12 ರಂದು ಸಂಕ್ರಾಂತಿ ಸಮಯದಲ್ಲಿ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ಬೇರೆ ಭಾಷೆಗಳ ಚಿತ್ರಗಳು ಬರುತ್ತಿದೆ. ಕನ್ನಡದಲ್ಲಿ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ನಮ್ಮ ಚಿತ್ರ ಮಾತ್ರ ಅಂದು ಬಿಡುಗಡೆಯಾಗುತ್ತಿದೆ ಎಂದು ನಿರ್ಮಾಪಕ ಹೊಯ್ಸಳ ಕೊಣನೂರು ತಿಳಿಸಿದರು.
ಚಿತ್ರದಲ್ಲಿ ಐದು ಹಾಡುಗಳಿವೆ. ವಾಗೀಶ್ ಚನ್ನಗಿರಿ ಹಾಡುಗಳನ್ನು ಬರೆದಿದ್ದಾರೆ. ಕೈಲಾಶ್ ಖೇರ್, ವಿಜಯ ಪ್ರಸಾದ್, ಕೀರವಾಣಿ, ಸಂಚಿತ್ ಹೆಗಡೆ ಹಾಗೂ ನಾನು ಹಾಡಿದ್ದೇವೆ ಎಂದು ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ದೇಸಿ ಮೋಹನ್ ಮಾಹಿತಿ ನೀಡಿದರು.
ಗೀತರಚನೆಕಾರ ಹಾಗೂ ಚಿತ್ರದ ಉಸ್ತುವಾರಿ ಹೊತ್ತಿರುವ ವಾಗೀಶ್ ಚನ್ನಗಿರಿ, ನೃತ್ಯ ನಿರ್ದೇಶಕ ಧನು ಮಾಸ್ಟರ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು “ರಂಗ ಸಮುದ್ರ” ದ ಬಗ್ಗೆ ಮಾತನಾಡಿದರು.