ಚಿನ್ನಾರಿ ಮುತ್ತನ ರಾ ಲುಕ್ “ರಿಪ್ಪನ್ ಸ್ವಾಮಿ”ಯ ಫಸ್ಟ್ ಲುಕ್ ರಿಲೀಸ್.
ಚಂದನವನದಲ್ಲಿ ಆಗಾಗ ವಿಭಿನ್ನ ಬಗೆಯ ಕಥಾನಕ ಚಿತ್ರಗಳು ತಮ್ಮ ಪೋಸ್ಟರ್ , ಫಸ್ಟ್ ಲುಕ್ ಮೂಲಕವೇ ಗಮನ ಸೆಳೆಯುವಂತಹ ಕೆಲಸ ಸಾಗ್ತಿದೆ. ಆ ನಿಟ್ಟಿನಲ್ಲಿ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ನಟನೆಯ ಮಾಸ್ ಕಥೆಯನ್ನ ಒಳಗೊಂಡಿರುವ “ರಿಪ್ಪನ್ ಸ್ವಾಮಿ” ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಜಾಲತಾಣದಲ್ಲಿ ಬಾರಿ ಸದ್ದನ್ನ ಮಾಡುತ್ತಿದೆ.
ಇನ್ನು ಈ ಸಿನಿಮಾ ಪಂಚಾಂನನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರು ಸೇರಿ ನಿರ್ಮಾಣ ಮಾಡುತ್ತಿದ್ದು, ಇದು ಈ ಸಂಸ್ಥೆಯ ಮೊದಲ ಚಿತ್ರವಾಗಿ ಹೊರಬರುತ್ತಿದೆ. ಇನ್ನು ಈ ಚಿತ್ರವನ್ನು ವಿಭಿನ್ನವಾಗಿ ತೆರೆಯ ಮೇಲೆ ತರುವ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ.
ನಟ ವಿಜಯ ರಾಘವೇಂದ್ರ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿರುವ ಈ ರಿಪ್ಪನ್ ಸ್ವಾಮಿ ಚಿತ್ರದ ರಾ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ರೆಡ್ ಫ್ಲಾಗ್ ಎಂಬ ಅಡಿಬರಹ ಗಮನ ಸೆಳೆಯುವಂತೆ ಕಂಡಿದೆ. ಈ ಹಿಂದೆ ಮಾಲ್ಗುಡಿ ಡೇಸ್ ಚಿತ್ರವನ್ನ ನಿರ್ದೇಶನ ಮಾಡಿದ್ದ ಕಿಶೋರ್ ಮೂಡಬಿದ್ರೆ “ರಿಪ್ಪೆನ್ ಸ್ವಾಮಿ “ಮೂಲಕ ಒಂದು ಮಾಸ್ ಕಥೆ ಹೇಳಲು ಹೊರಟಿದ್ದಾರೆ. ಇನ್ನು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು , 48 ದಿನಗಳ ಕಾಲ ಕೊಪ್ಪ , ಕಳಸ , ಬಾಳೆ ಹೊನ್ನೂರು ಸುತ್ತಮುತ್ತ ಚಿತ್ರೀಕರಣವನ್ನು ನಡೆಸಲಾಗಿದೆಯಂತೆ.
ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಜೊತೆ ಅಶ್ವಿನಿ ಚಂದ್ರಶೇಖರ್, ಪ್ರಕಾಶ್ ತುಮ್ಮಿನಾಡು ,ವಜ್ರದೀರ್ ಜೈನ್ , ಯಮುನಾ ಶ್ರೀನಿಧಿ, ಮೋಹನ್ ಶೇಣಿ, ಕೃಷ್ಣಮೂರ್ತಿ ಕವತ್ತಾರ್ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದು, ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುವೆಲ್ ಅಭಿ ಸಂಗೀತವನ್ನು ನೀಡುತ್ತಿದ್ದಾರೆ.
ರಂಗನಾಥ್. ಸಿ .ಎಂ ರವರು ಕ್ಯಾಮರಾ ಹಿಡಿದಿದ್ದಾರೆ. ತನ್ನ ಎಲ್ಲಾ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿತ್ರವಿದ್ದು , ಸದ್ಯದಲ್ಲೇ ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ನೀಡುವುದರ ಜೊತೆಗೆ ಚಿತ್ರವನ್ನ ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ತರಲು ಚಿತ್ರತಂಡ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆಯಂತೆ.